ಮಳೆ ಇಲ್ಲದೆ ಬತ್ತಿದ ಅಂತರ್ಜಲ ಮಟ್ಟ; ಫಸಲು ಬಿಡದೇ ಒಣಗಿದ ದ್ರಾಕ್ಷಿ ಬೆಳೆ, ರೈತ ಕಂಗಾಲು
ವಿಜಯಪುರ ಜಿಲ್ಲೆಯ ಪ್ರಮುಖ ಆರ್ಥಿಕ ಹಾಗೂ ತೋಟಗಾರಿಕೆ ಬೆಳೆಯಾದ ದ್ರಾಕ್ಷಿಗೆ ಭೀಕರ ಬರ ಎದುರಾಗಿದೆ. ಒಂದು ವರ್ಷಕ್ಕೆ ಒಂದು ಬಾರಿ ಮಾತ್ರ ಫಸಲು ಬಿಡುವ ದ್ರಾಕ್ಷಿಗೆ ನೀರಿನ ಕೊರತೆ ಉಂಟಾಗಿದೆ. ಮಳೆಯಾಗದ ಕಾರಣ ಬಾವಿ, ಕೊಳವೆ ಬಾವಿ ನೀರನ್ನು ನಂಬಿರುವ ದ್ರಾಕ್ಷಿ ಬೆಳೆಗಾರರಿಗೆ ವಿದ್ಯುತ್ ಕಡಿತವೂ ಶಾಕ್ ನೀಡಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದ್ರಾಕ್ಷಿ ಬೆಳೆದ ರೈತರಿಗೆ ದಾರಿ ಕಾಣದಾಗಿದೆ. ಹೂಬಿಡುವ ಹಂತದಲ್ಲಿರಬೇಕಾದ ದ್ರಾಕ್ಷಿ ಬೆಳೆ ಒಣಗಿ ಹೋಗುತ್ತಿವೆ.
ವಿಜಯಪುರ, ಅ.13: ಮಳೆ ಇಲ್ಲದ ಕಾರಣ ಅಂತರ್ಜಲ ಮಟ್ಟ ಬತ್ತಿದೆ. ಈ ಹಿನ್ನಲೆ ನೀರಿನ ಕೊರತೆಯಿಂದ ದ್ರಾಕ್ಷಿ ಒಣಗಿ ಹೋಗುತ್ತಿದೆ. ಈ ಮಧ್ಯೆ ಕೊಳವೆ ಬಾವಿ ನೀರನ್ನು ಬಳಕೆ ಮಾಡಲು ವಿದ್ಯುತ್ ಸಮಸ್ಯೆ ಎದುರಾಗಿದೆ. ಹೌದು, ದ್ರಾಕ್ಷಿ ತವರು ವಿಜಯಪುರ(Vijayapura) ಜಿಲ್ಲೆಯಲ್ಲಿ ದ್ರಾಕ್ಷಿ(Grapes) ಬೆಳೆಗಾರರ ಪಾಲಿಕೆ ಹುಳಿಯಷ್ಟೇ ಅಲ್ಲ, ಒಂದು ರೀತಿಯಲ್ಲಿ ವಿಷವಾಗಿ ಪರಿಣಮಿಸಿದೆ. ಹೆಚ್ಚು ಖರ್ಚಿನ ಬೆಳೆಯಾದ ದ್ರಾಕ್ಷಿಗೆ ಒಂದು ಎಕರೆಗೆ 2 ರಿಂದ 3 ಲಕ್ಷ ರೂಪಾಯಿ ಖರ್ಚು ಮಾಡಬೇಕಿರುವುದು ಅನಿವಾರ್ಯವಾಗಿದೆ. ಹೆಚ್ಚಾಗಿ ರಾಸಾಯನಿಕ ಔಷಧಿ ಹಾಗೂ ರಸಗೊಬ್ಬರಗಳ ಆಶ್ರಯದಲ್ಲೇ ಬೆಳೆಯೋ ದ್ರಾಕ್ಷಿಗೆ ಸೂಕ್ತ ನೀರಿನ ಸೌಲಭ್ಯವೂ ಅಷ್ಟೇ ಅವಶ್ಯಕ. ಆದರೆ, ಈ ಬಾರಿ ಭೀಕರ ಬರಗಾಲ ದ್ರಾಕ್ಷಿ ಬೆಳೆಗೆ ಕಂಟಕವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ದ್ರಾಕ್ಷಿ ಒಣಗುತ್ತಿದೆ. ಇತ್ತ ಇದ್ದ ಅಲ್ಪಸ್ವಲ್ಪ ನೀರನ್ನು ಬಳಕೆ ಮಾಡಬೇಕೆಂದರೆ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ದ್ರಾಕ್ಷಿ ಒಣಗಿ ಹೋಗಲು ಕಾರಣವಾಗಿದೆ. ಲಕ್ಷಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ದ್ರಾಕ್ಷಿ ಬೆಳೆದವರು ಇದೀಗ ಕಣ್ಣೀರು ಹಾಕುವಂತಾಗಿದೆ.
ಜಿಲ್ಲೆಯಲ್ಲಿ 45 ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ
ಜಿಲ್ಲೆಯಲ್ಲಿ 45,000 ಎಕರೆ ಪ್ರದೇಶದಲ್ಲಿ ದ್ರಾಕ್ಷಿಯನ್ನು ಬೆಳೆಯಲಾಗುತ್ತಿದೆ. ದೇಶದಲ್ಲಷ್ಟೇಯಲ್ಲ ಏಷ್ಯಾ ಖಂಡದಲ್ಲೇ ಉತೃಷ್ಟ ದ್ರಾಕ್ಷಿ ಬೆಳೆಯುವ ಪ್ರದೇಶ ವಿಜಯಪುರ ಜಿಲ್ಲೆಯಾಗಿದೆ. ಇಷ್ಟು ಉತ್ತಮ ಗುಣಮಟ್ಟದ ದ್ರಾಕ್ಷಿ ಬೆಳೆಯುವ ಪ್ರದೇಶದಲ್ಲಿ ಬರ ಎಲ್ಲವನ್ನೂ ಹಾಳು ಮಾಡಿದೆ. ಬಾವಿ, ಕೊಳವೆ ಬಾವಿಗಳಲ್ಲಿಯೂ ನೀರು ಆಧಿಕ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಕ್ಟೋಬರ್ ವೇಳೆಗೆ ಉತ್ತಮ ಮಳೆಯಾಗಿ ದ್ರಾಕ್ಷಿ ಹೂ ಬಿಡುವ ಹಂತಕ್ಕೆ ತಲುಪುತ್ತಿತ್ತು. ಆದರೆ, ಭೀಕರ ಬರ ಎಲ್ಲವನ್ನೂ ಆಪೋಷಣ ತೆಗೆದುಕೊಂಡಿದೆ. ಜಿಲ್ಲೆಯಲ್ಲಿ ಜನವರಿ ಹಾಗೂ ಫೆಬ್ರುವರಿ ತಿಂಗಳಲ್ಲಿ ಮಳೆಯಾಗಿಲ್ಲ. ಸಪ್ಟೆಂಬರ್ ನಲ್ಲಿ 91.0 ಮಿಲಿ ಮೀಟರ್ ಮಾತ್ರ ಮಳೆಯಾಗಿದೆ. ವಾಡಿಕೆಯಂತೆ ಸಪ್ಟೆಂಬರ್ ನಲ್ಲಿ 151.6 ಮಿಲಿ ಮೀಟರ್ ಮಳೆಯಾಗಬೇಕಿತ್ತು.
ಇದನ್ನೂ ಓದಿ:ವಿಜಯಪುರ: ಒಣದ್ರಾಕ್ಷಿ ಬೆಳೆದ ರೈತನಿಗೆ ಬೆಲೆ ಕುಸಿತದ ಬರೆ; ಬೆಂಬಲ ಬೆಲೆ ನಿಗದಿ ಮಾಡಲು ಸರ್ಕಾರಕ್ಕೆ ಮನವಿ
ಇನ್ನು ಜಿಲ್ಲೆಯಲ್ಲಿಯೇ ವಾಡಿಕೆಯಂತೆ ವಾರ್ಷಿಕವಾಗಿ 594.4 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಇಲ್ಲಿಯವರೆಗೆ 306.8 ಮಿಲಿ ಮೀಟರ್ ಮಳೆ ಮಾತ್ರ ಆಗಿದೆ. ಹೀಗಾಗಿ ತೋಟಗಾರಿಕಾ ಬೆಳೆಗಳು ಒಣಗಿ ಹೋಗುವಂತಾಗಿದೆ. ಸದ್ಯ ದ್ರಾಕ್ಷಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ರೈತರು ಕಂಗಾಲಾಗಿ ಹೋಗಿದ್ಧಾರೆ. ಭೀಕರ ಬರ ಮನೆ ಮಾಡಿದ್ದ ಲಕ್ಷಾಂತರ ರೂಪಾಯಿ ಮೈಮೇಲೆ ಬಂದಿದೆ. ಸರ್ಕಾರ ನಮ್ಮ ಸಹಾಯಕ್ಕೆ ಧಾವಿಸಬೇಕೆಂದು ಮನವಿ ಮಾಡಿದ್ದಾರೆ.
ಸದ್ಯ ಮಳೆ ಆಗದೇ ಬರದ ಕಾರಣ ಹಾಗೂ ಅಂತರ್ಜಲ ಮಟ್ಟ ಕುಸಿತ ದ್ರಾಕ್ಷಿ ಬೆಳೆಗೆ ಕಂಟಕವಾಗಿದೆ. ಇದು ಸಾಲದೆಂಬಂತೆ ವಿದ್ಯುತ್ ಲೋಡ್ ಶೆಟ್ಟಿಂಗ್ ಸಹ ಅಲ್ಪಸ್ವಲ್ಪ ನೀರಿರುವ ಬೋರ್ವೆಲ್ ಹಾಗೂ ಬಾವಿಗಳಿರುವ ರೈತರಿಗೆ ಶಾಕ್ ನೀಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ದ್ರಾಕ್ಷಿ ಬೆಳೆಗೆ ವಿಮೆ ಭರ್ತಿ ಮಾಡಿದ್ದು, ವಿಮಾ ಹಣವನ್ನು ಬಿಡುಗಡೆ ಮಾಡಬೇಕು. ಸಮರ್ಪಕ ವಿದ್ಯುತ್ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Fri, 13 October 23