ಲಿಂಬೆ ನಾಡು ಎಂದೇ ಹೆಸರುವಾಸಿಯಾದ ವಿಜಯಪುರದಲ್ಲಿ ನಿಂಬೆಹಣ್ಣಿನ ಕರುಣಾಜನಕ ಕಥೆ!

ಲಿಂಬೆಹಣ್ಣಿನಿಂದ ಹಲವಾರು ರೀತಿಯ ಲಾಭಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಲಿಂಬೆ ಹಣ್ಣಿನ ರಸವನ್ನು ವಿವಿಧ ರೀತಿಯಲ್ಲಿ ಬಳಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಕೆಲವೊಂದು ಸೌಂದರ್ಯವರ್ಧಕಗಳಲ್ಲಿಯೂ ಲಿಂಬೆಹಣ್ಣಿನ ರಸವನ್ನು ಬಳಸುತ್ತಾರೆ. ಫೇಸ್ ಮಾಸ್ಕ್ ಹಾಗೂ ಹೇರ್ ಮಾಸ್ಕ್‌ಗಳಲ್ಲಿ ಲಿಂಬೆಹಣ್ಣಿನ ರಸವನ್ನು ಬಳಸುವುದು ಸಾಮಾನ್ಯವಾಗಿದೆ. ಹೀಗಾಗಿ ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು ಎಂದು ಲಿಂಬೆ ಹಣ್ಣುಗೆ ಕರೆಯುತ್ತಾರೆ. ಆದ್ರೆ, ಲಿಂಬೆ ನಾಡು ಎಂದೇ ಹೆಸರುವಾಸಿಯಾದ ವಿಜಯಪುರದಲ್ಲಿ ನಿಂಬೆಹಣ್ಣಿನ ಸ್ಥಿತಿ ಕರುಣಾಜನಕವಾಗಿದೆ.

ಲಿಂಬೆ ನಾಡು ಎಂದೇ ಹೆಸರುವಾಸಿಯಾದ ವಿಜಯಪುರದಲ್ಲಿ ನಿಂಬೆಹಣ್ಣಿನ ಕರುಣಾಜನಕ ಕಥೆ!
ಲಿಂಬೆ ನಾಡು ಎಂದೇ ಹೆಸರುವಾಸಿಯಾದ ವಿಜಯಪುರದಲ್ಲಿ ನಿಂಬೆಹಣ್ಣಿನ ಕರುಣಾಜನಕ ಕಥೆ!
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: May 21, 2024 | 7:56 PM

ವಿಜಯಪುರ, ಮೇ.21: ಜಿಲ್ಲೆಯಲ್ಲಿ ಲಿಂಬೆ ಬೆಳೆ(Lemon crop) ಯುವ ಪ್ರದೇಶ ಹಾಗೂ ಇಳುವರಿ ಶೇಕಡಾ 75 ಕ್ಕಿಂತ ಹೆಚ್ಚು. ಕಳೆದ ಎರಡು ವರ್ಷಗಳ ಹಿಂದೆ ವಿಜಯಪುರ(Vijayapura) ಜಿಲ್ಲೆಯ ಖಾಗ್ಜಿ ಲಿಂಬೆಗೆ ತಮಿಳುನಾಡಿನ ಚೆನ್ನೈನಲ್ಲಿರುವ ಜಿಯೋಗ್ರಾಫಿಕಲ್ ಇಂಡಿಕೇಶನ್ ರೆಜಿಸ್ಟ್ರೇಷನ್ ಕಚೇರಿಯಿಂದ ಜಿಐ(GI) ನೀಡಲಾಗಿದೆ. ಜಿಐ ಮಾನ್ಯತೆ ಪಡೆದ ಲಿಂಬೆಗೆ ಜಾಗತಿಕ ಮಾರುಕಟ್ಟೆಯೂ ಸಿಕ್ಕಿದ್ದು, ಖುಷಿಯ ವಿಚಾರವೇ ಆಗಿತ್ತು. ಆದರೆ, ಈ ಖುಷಿಯ ವಿಚಾರದ ಜೊತೆಗೆ ಆತಂಕಕಾರಿ ವಿಚಾರವೂ ಲಿಂಬೆಗೆ ಸುತ್ತಿಕೊಂಡಿತ್ತು. ಅದುವೇ 2019 -20 ರಿಂದ ವಿಜಯಪುರ ಜಿಲ್ಲೆಯಲ್ಲಿ ಲಿಂಬೆ ಬೆಳೆಯೋ ಪ್ರದೇಶ ಹಾಗೂ ಇಳುವರಿಯಲ್ಲಿ ಕುಂಠಿತವಾಗಿರೋದು. ಹೌದು, ಲಿಂಬೆ ತವರೂರು ಎಂಬ ಖ್ಯಾತಿಗೆ ಪಾತ್ರವಾದ ವಿಜಯಪುರ ಜಿಲ್ಲೆಯಲ್ಲಿ ಸದ್ದಿಲ್ಲದೇ ಲಿಂಬೆ ಇತಿಹಾಸದ ಪುಟಕ್ಕೆ ಸೇರೋ ಆತಂಕ ಎದುರಾಗಿದೆ.

ತೀವ್ರವಾದ ಬರಗಾಲ, ನೀರಿನ ಕೊರತೆ, ಬಾವಿ ಹಾಗೂ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದು. ಸರಿಯಾದ ಸಮಯಕ್ಕೆ ಮಳೆಯಾಗದೇ ಹೋಗುವುದು ಲಿಂಬೆಗೆ ಕಂಠಕವಾಗುತ್ತಲೇ ಹೋಗಿವೆ. ಪರಿಣಾಮ ಲಿಂಬೆ ನೈಪತ್ಯಕ್ಕೆ ಸೇರುವತ್ತ ದಾಪುಗಾಲು ಇಟ್ಟಿದೆ. ಕಳೆದ 2014 ರಿಂದ 2024 ರ ವರೆಗಿನ ಲಿಂಬೆ ಬೆಳೆಯೋ ಪ್ರದೇಶ ಹಾಗೂ ಇಳುವರಿಯನ್ನು ನಾವು ಗಮನಿಸಿದಾಗ ಲಿಂಬೆ ಕಣ್ಮರೆಯಾಗುತ್ತಿದೆ ಎಂಬುದು ಗೋಚರವಾಗುತ್ತಿದೆ. 2014-15 ರಲ್ಲಿ 7,242 ಹೆಕ್ಟೇರ್ ಪ್ರದೇಶದಿಂದ 18,3550 ಮೆಟ್ರಿಕ್ ಟನ್ ಲಿಂಬೆ ಇಳುವರಿ ಪಡೆದಿದ್ದು, ನಂತರ 2015-16 ರಲ್ಲಿ 6,815 ಹೆಕ್ಟೇರ್ ಲಿಂಬೆ ಪ್ರದೇಶದಿಂದ 17,0375 ಮೆಟ್ರಿಕ್ ಟನ್ ಲಿಂಬೆ ಇಳುವರಿ ಬಂದಿದೆ.

ಇದನ್ನೂ ಓದಿ:ರಾಯಚೂರಿನಲ್ಲಿ ರೈತರ ಬೆಳೆ ಪರಿಹಾರದ ಹಣ ಗೋಲ್ಮಾಲ್! 36 ದುರುಳರಿಂದ 75 ಲಕ್ಷಕ್ಕೂ ಅಧಿಕ ಹಣ ವಂಚನೆ

ಇನ್ನು 2016-17 ರಲ್ಲಿ 6,814 ಹೆಕ್ಟೇರ್​ನಿಂದ 17,0350 ಮೆಟ್ರಿಕ್ ಟನ್ ಲಿಂಬೆ ಫಸಲು ಬಂದಿದ್ದು, 2017-18 ರಲ್ಲಿ 7150 ಹೆಕ್ಟೇರ್ ಪ್ರದೇಶದಿಂದ 178550 ಮೆಟ್ರಿಕ್ ಟನ್ ಫಸಲು ಬಂದಿತ್ತು. ಬಳಿಕ 2018-19 ರಲ್ಲಿ 11,2168 ಹೆಕ್ಟೇರ್ ನಿಂದ 30,4142 ಮೆಟ್ರಿಕ್ ಟನ್ ಲಿಂಬೆ ಫಸಲು ಉತ್ಪಾದನೆಯಾಗಿತ್ತು. 2019-20 ರಲ್ಲಿ ಲಿಂಬೆ ಬೆಳೆಯೋ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಒಟ್ಟು 12,293 ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆ ಬೆಳೆದಿದ್ದು, ಅದರಿಂದ 29,0550 ಮೆಟ್ರಿಕ್ ಟನ್ ಲಿಂಬೆ ಫಸಲು ಕಟಾವು ಮಾಡಲಾಗಿತ್ತು. ಮಾರನೇ ವರ್ಷದಿಂದ ಲಿಂಬೆ ಬೆಳೆ ಕುಂಠಿತವಾಗುತ್ತಾ ಹೋಯಿತು. 2020-21 ರಲ್ಲಿ 10,687 ಹೆಕ್ಟೇರ್ ನಿಂದ 25,3146 ಮೆಟ್ರಿಕ್ ಟನ್, 2021-22 ರಲ್ಲಿ 10,231 ಹೆಕ್ಟೇರ್ ನಿಂದ 25,3134 ಮೆಟ್ರಿಕ್ ಟನ್ , 2022-23 ರಲ್ಲಿ 9393.57 ಹೆಕ್ಟೇರ್ ನಿಂದ 211923 ಮೆಟ್ರಿಕ್ ಟನ್ ಹಾಗೂ 2023-24 ರಲ್ಲಿ 8338.81 ಹೆಕ್ಟೇರ್ ನಿಂದ 183454 ಮೆಟ್ರಿಕ್ ಟನ್ ಲಿಂಬೆ ಇಳುವರಿ ಪಡೆಯಲಾಗಿದೆ.

ಪ್ರಮುಖ ಆರ್ಥಿಕ ತೋಟಗಾರಿಕೆ ಬೆಳೆಯಾದ ಲಿಂಬೆ ರೈತರ ಪಾಲಿನ ಎಟಿಎಂ ಎಂದು ಕರೆಯಿಸಿಕೊಳ್ಳುತ್ತಿತ್ತು. ಕಾರಣ ವರ್ಷ ಪೂರ್ತಿ ಇಳುವರಿ ಕೊಡುವ ಬೆಳೆಯಾಗಿದೆ. ಒಂದು ವಾರಕ್ಕೊಮ್ಮೆ ಲಿಂಬೆ ಹಣ್ಣು ಕಟಾವಿಗೆ ಬರುತ್ತದೆ. ಹಾಗಾಗಿ ಬೆಳೆಗಾರರ ಪಾಲಿಗೆ ವಾರಕ್ಕೊಮ್ಮೆ ಆದಾಯ ಕೊಡುವ ಬೆಳೆ ಲಿಂಬೆಯಾಗಿದೆ. ಅದರೆ, ಇತ್ತೀಚಿನ ವರ್ಷಗಳಲ್ಲಿ ಲಿಂಬೆ ಹುಳಿಯಷ್ಟೇಯಲ್ಲಾ ಕಹಿಯೂ ಆಗಿದೆ. ಲಿಂಬೆ ಬೆಳೆಗಾರರು ಬರಗಾಲ ಹಾಗೂ ಬೇಸಿಗೆ ಕಾಲದಲ್ಲಿ ಲಿಂಬೆ ಬೆಳೆಗೆ ನೀರಿನ ತೇವಾಂಶದ ಕೊರತೆಯಾಗಿ ಬೆಳೆಯನ್ನು ಉಳಿಸಲು ಹರ ಸಾಹಸವನ್ನೇ ಮಾಡುತ್ತಾರೆ. ಟ್ಯಾಂಕರ್​​ಗಳ ಮೂಲಕ ನೀರು ಹಾಕುವುದು ಹೊಸದಾಗಿ ಕೊಳವೆ ಬಾವಿ ತೋಡಿಸುವುದು, ದೂರದಿಂದ ನೀರು ತಂದು ಹಾಕೋದನ್ನಾ ಮಾಡುವ ಮೂಲಕ ಲಿಂಬೆಯನ್ನು ಉಳಿಸಲು ಕಷ್ಟಪಡುತ್ತಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಲಿಂಬೆಗೆ ಸರಿಯಾದ ಬೆಲೆ ಇಲ್ಲವಾಗಿದೆ.

ಇದನ್ನೂ ಓದಿ:ಬೀನ್ಸ್ ಬೆಳೆದು ಲಕ್ಷಾಧಿಪತಿಯಾದ ಯುವರೈತ; ಇಲ್ಲಿದೆ ವಿವರ

ಬೇಸಿಗೆಯಲ್ಲಿ ಇಳುವರಿ ಕಡಿಮೆಯಿದ್ದು, ಹೆಚ್ಚಿನ ದರ ಇರುತ್ತದೆ. ಮಳೆಗಾಲ ಹಾಗೂ ಚಳಗಾಲದಲ್ಲಿ ಲಿಂಬೆಗೆ ಬೆಳೆ ಕಡಿಮೆ ಇರುತ್ತದೆ. ಈ ವೇಳೆಯ ಫಸಲನ್ನು ಸಂಗ್ರಹ ಮಾಡಿಡಲು ಕೋಲ್ಡ್ ಸ್ಟೋರೇಜ್​ಗಳೂ ಇಲ್ಲ. ರೈತರಿಗೆ ಲಿಂಬೆ ಸಂರಕ್ಷಿಸಿಡಲು ಕೋಲ್ಡ್ ಸ್ಟೋರೇಜ್ ಗಳನ್ನು ನಿರ್ಮಾಣ ಮಾಡುವ ಸಾಮರ್ಥ್ಯವಿಲ್ಲಾ. ಹೀಗಾಗಿ ಲಿಂಬೆ ಬೆಳೆಗಾರರಿಗೆ ಸರಿಯಾದ ರೀತಿಯಲ್ಲಿ ಬೆಲೆ ಸಿಗುತ್ತಿಲ್ಲ. ಸರ್ಕಾರ ಲಿಂಬೆಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಬೃಹತ್ ಪ್ರಮಾಣದ ಕೋಲ್ಡ್ ಸ್ಟೋರೇಜ್​ಗಳನ್ನು ನಿರ್ಮಾಣ ಮಾಡಿ ಕೊಡಬೇಕೆಂದು ಲಿಂಬೆ ಬೆಳೆಗಾರರು ಮನವಿ ಮಾಡಿದ್ಧಾರೆ.

ಇದೇ ರೀತಿಯ ವಾತಾವರಣ ಹೀಗೆಯೇ ಮುಂದುವರೆದರೆ ವಿಜಯಪುರ ಜಿಲ್ಲೆಯಲ್ಲಿ ಲಿಂಬೆ ಬೆಳೆ ಕಣ್ಮರೆಯಾಗೋದರಲ್ಲಿ ಯಾವುದೇ ಸಂಶಯವಿಲ್ಲ. ಒಂದು ಎಕರೆ ಲಿಂಬೆ ಬೆಳೆಯಲು ಸುಮಾರು ಒಂದು ಲಕ್ಷ ರೂಪಾಯಿ ಖರ್ಚು ಮಾಡಿದರೂ ಲಾಭಾಂಶ ಸಿಗುತ್ತಿಲ್ಲ. ನಷ್ಟವೇ ಆಗುತ್ತಿದೆ ಎಂಬುದು ಲಿಂಬೆ ಬೆಳೆಗಾರರ ಮಾತಾಗಿದೆ. ಅದರಲ್ಲೂ ಕಳೆದ ವರ್ಷದ ಭೀಕರ ಬರ ಲಿಂಬೆಗೆ ಬರೆಯನ್ನೇ ಹಾಕಿದೆ. ಬರಗಾಲ ಹಾಗೂ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಲಿಂಬೆ ಫಸಲು ಬಿಟ್ಟರೂ ಉತ್ತಮ ಕಾಯಿ ಬಿಟ್ಟಿಲ್ಲ. ಪುಟ್ಟಪುಟ್ಟ ಕಾಯಿಗಳಾಗಿ ನಿಂತಿವೆ. ಇವು ಮಾರುಕಟ್ಟೆಯಲ್ಲಿ ಮಾರಾಟವೂ ಆಗುತ್ತಿಲ್ಲ. ಈ ರೀತಿಯಿಂದ ಲಿಂಬೆ ಬೆಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗತ್ತಿದೆ. ಜಿಲ್ಲೆಯಲ್ಲಿ ಲಿಂಬೆ ಅಭಿವೃದ್ದಿ ಮಂಡಳಿ ಇದ್ದರೂ ಅದಕ್ಕೆ ಯಾವುದೇ ಅನುದಾನ ನೀಡದೇ ಸರ್ಕಾರ ಉದಾಸೀನ ಮಾಡಿದೆ. ಇನ್ನಾದರೂ ಇವೆಲ್ಲ ಸಮಸ್ಯೆಗಳತ್ತ ಸರ್ಕಾರ ಗಮನ ಹರಿಸಿ ಲಿಂಬೆ ಬೆಳೆಗಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ