ಮಳೆ, ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡುವುದಾಗಿ ಸಚಿವ ಪ್ರಭು ಚೌಹಾಣ್ ಘೋಷಣೆ
ರಾಜ್ಯ ಸರ್ಕಾರದಿಂದ ಜಿಲ್ಲಾಧಿಕಾರಿ ಫಂಡ್ನಲ್ಲಿ ಪರಿಹಾರ ನೀಡಲಾಗುತ್ತಿದೆ. ಕಾನೂನು ಚೌಕಟ್ಟಿನಲ್ಲಿ ಪರಿಹಾರ ಹಣ ನೀಡಲಾಗುತ್ತಿದೆ. ದೇಶಿ ಗೋವು ತಳಿ ರಕ್ಷಣೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಚರ್ಚೆ ನಡೆಸುತ್ತಿದ್ದೇನೆ -ಪ್ರಭು ಚೌಹಾಣ್
ವಿಜಯಪುರ: ರಾಜ್ಯದಲ್ಲಿ ಉಂಟಾದ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಜಾನುವಾರುಗಳಿಗೆ NDRF ನಿಯಮದಡಿ ಪರಿಹಾರ ನೀಡುವುದಾಗಿ ವಿಜಯಪುರದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್(Prabhu Chauhan) ಘೋಷಿಸಿದ್ದಾರೆ. ಆಕಳು, ಎತ್ತು ಮೃತಪಟ್ಟಿದ್ದರೆ 30 ಸಾವಿರ ರೂಪಾಯಿ ಪರಿಹಾರ, ಬೇರೆ ಬೇರೆ ಜಾನುವಾರುಗಳಿಗೆ 10 ಸಾವಿರ, 5 ಸಾವಿರದಂತೆ ಪರಿಹಾರ ನೀಡುವುದಾಗಿ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಜಿಲ್ಲಾಧಿಕಾರಿ ಫಂಡ್ನಲ್ಲಿ ಪರಿಹಾರ ನೀಡಲಾಗುತ್ತಿದೆ. ಕಾನೂನು ಚೌಕಟ್ಟಿನಲ್ಲಿ ಪರಿಹಾರ ಹಣ ನೀಡಲಾಗುತ್ತಿದೆ ಎಂದರು. ಇನ್ನು ಇದೇ ವೇಳೆ ದೇಶಿ ಗೋ ರಕ್ಷಣೆ ಕುರಿತು ಮಾತನಾಡಿದ ಸಚಿವ ಪ್ರಭು ಚೌಹಾಣ್, ದೇಶಿ ಗೋವು ತಳಿ ರಕ್ಷಣೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಚರ್ಚೆ ನಡೆಸುತ್ತಿದ್ದೇನೆ. ದೇಶಿ ತಳಿ ರಕ್ಷಣೆಗೆ ನಿರ್ಭರ ಗೋಶಾಲೆ ನಿರ್ಮಿಸುತ್ತಿದ್ದೇವೆ. ಗೋಮಾತಾ ಸಹಕಾರ ಸಂಘ ಆರಂಭಿಸಿದ್ದೇವೆ. ಮುಖ್ಯಮಂತ್ರಿಗಳ ಪುಣ್ಯಕೋಟಿ ಯೋಜನೆ ಆರಂಭಿಸುತ್ತೇವೆ. ಹೀಗೆ ಹಲವಾರು ಯೋಜನೆ ಕೈಗೊಳ್ತಿದ್ದೇನೆ. ಗೋಮಾತೆ ಕಸಾಯಿಖಾನೆಗೆ ಹೋಗಬಾರದು ಅನ್ನೋದು ನಮ್ಮ ಗುರಿ ಎಂದು ವಿಜಯಪುರ ತಾಲೂಕಿನ ಬುರಣಾಪುರ ಗ್ರಾಮದ ಬಳಿ ಸರ್ಕಾರಿ ಗೋಶಾಲಾ ಉದ್ಘಾಟನೆ ಕಾರ್ಯಕ್ರಮದ ಬಳಿಕ ಸಚಿವ ಪ್ರಭು ಚೌಹಾಣ್ ಹೇಳಿದ್ರು.
ಬಕ್ರೀದ್ ವೇಳೆ ಗೋಹತ್ಯೆ ತಡೆದಿದ್ದೇವೆ ಇದೇ ವೇಳೆ ಬುರಣಾಪುರ ಗ್ರಾಮದಲ್ಲಿ ಮಾತನಾಡಿದ ಸಚಿವ ಪ್ರಭು ಚೌಹಾಣ್, ಬಕ್ರೀದ್ ದಿನ ಗೋಹತ್ಯೆ ತಡೆದಿದ್ದೇವೆ ಎಂದರು. ನನ್ನ ಗುರಿ ಒಂದೇ, ಅದು ಗೋವುಗಳ ರಕ್ಷಣೆ. ಶೇಕಡಾ 65 ರಿಂದ 70 ರಷ್ಟು ಹಸು ಕಸಾಯಿಖಾನೆಗೆ ಹೋಗಿಲ್ಲ. ಗೋಹತ್ಯಾ ನಿಷೇಧ ಕಾನೂನು ಜಾರಿಯಾದ ಮೇಲೆ 30 ಸಾವಿರಕ್ಕೂ ಅಧಿಕ ಹಸುಗಳ ರಕ್ಷಣೆ ಮಾಡಿದ್ದೇವೆ. ಅವುಗಳನ್ನ ಗೋಶಾಲೆಗಳಿಗೆ ಶಿಫ್ಟ್ ಮಾಡಿದ್ದೇವೆ. 900ಕ್ಕೂ ಅಧಿಕ ಕೇಸ್ ಬುಕ್ ಮಾಡಲಾಗಿದೆ. ಬಕ್ರೀದ್ ಒಂದೇ ದಿನ 700 ಗೋವು ರಕ್ಷಣೆ ಮಾಡಿದ್ದೇವೆ. 54 FIR ಮಾಡಿಸಿದ್ದೇನೆ, 58 ಅರೆಸ್ಟ್ ಮಾಡಿಸಿದ್ದೀನಿ. ಜಿಲ್ಲಾಡಳಿತ, ಪೋಲಿಸ್ ಇಲಾಖೆ ಸಹಕಾರದಿಂದ ಬಕ್ರೀದ್ ದಿನ ಗೋಹತ್ಯೆ ತಡೆದಿದ್ದೇವೆ ಎಂದರು.