Tipu Vs Savarkar Fight: ಯಾದಗಿರಿಯ ಟಿಪ್ಪು ಸರ್ಕಲ್ನ್ನು ಸಾವರ್ಕರ್ ಸರ್ಕಲ್ ಆಗಿ ಮಾಡಲು ಮುಂದಾದ ನಗರ ಸಭೆ
ಜಿಲ್ಲೆಯಲ್ಲಿ ಈಗಾಗಲೇ ಇರುವ ಟಿಪ್ಪು ಸರ್ಕಲ್ ಬದಲಿಸಿ ಸಾವರ್ಕರ್ ಸರ್ಕಲ್ ಮಾಡಲು ನಗರಸಭೆ ಅಧ್ಯಕ್ಷರು ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ವಿಚಾರವನ್ನು ಕೇಳಿ ಮುಸ್ಲಿಂ ಮುಖಂಡರು ಜೀವ ಹೋದರು ಪರವಾಗಿಲ್ಲ ಟಿಪ್ಪು ಸರ್ಕಲ್ ತೆಗೆಯುವುದಕ್ಕೆ ಬೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಯಾದಗಿರಿ: ಜಿಲ್ಲೆಯಲ್ಲಿರುವ ಟಿಪ್ಪು(Tippu) ಸರ್ಕಲ್ನ್ನು ಸಾವರ್ಕರ್(savarkar) ಸರ್ಕಲ್ ಆಗಿ ಮಾಡಲು ನಗರಸಭೆಯ ಅಧ್ಯಕ್ಷ ಸುರೇಶ್ ಅಂಬಿಗರ ಮುಂದಾಗಿದ್ದು, ಇದರ ವಿರುದ್ಧ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಹತ್ತಿಕುಣಿ ಕ್ರಾಸ್ ಬಳಿ ಮುಸ್ಲಿಂ ಮುಖಂಡರು ಕಳೆದ ಹಲವು ವರ್ಷಗಳಿಂದ ಟಿಪ್ಪು ಸರ್ಕಲ್ ಮಾಡಿಕೊಂಡಿದ್ದಾರೆ. 2010 ರಲ್ಲಿ ಇದೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಟಿಪ್ಪು ಸರ್ಕಲ್ ಮಾಡಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿ, ನಗರಸಭೆಯಲ್ಲಿ ಠರಾವು ಪಾಸ್ ಮಾಡಿದ್ದಾರೆ ಆದರೆ ಸರ್ಕಾರದ ಅನುಮತಿಗಾಗಿ ಅಧಿಕಾರಿಗಳು ಕಳುಹಿಸಿರಲಿಲ್ಲ. ಆದರೂ ಮುಸ್ಲಿಂ ಮುಖಂಡರು ಸರ್ಕಲ್ ಮಾಡಿಕೊಂಡು ಟಿಪ್ಪು ಸುಲ್ತಾನ್ ನಾಮಫಲಕ ಹಾಕಿಕೊಂಡಿದ್ದಾರೆ.
ಇನ್ನು ಪ್ರತಿ ವರ್ಷ ಟಿಪ್ಪು ಜಯಂತಿಯನ್ನು ಇದೆ ಸ್ಥಳದಲ್ಲಿ ಮಾಡುತ್ತಾರೆ. ಆದರೆ ಇಲ್ಲಿಯವರೆಗೆ ಯಾವುದೇ ವಿವಾದ ಕೂಡ ಆಗಿರಲಿಲ್ಲ ಇದೀಗ ಟಿಪ್ಪು ಸರ್ಕಲ್ ಇರುವ ಸ್ಥಳದಲ್ಲಿ ನಗರಸಭೆ ಅಧ್ಯಕ್ಷ ಸುರೇಶ್ ಅಂಬಿಗರ ಸಾವರ್ಕರ್ ಸರ್ಕಲ್ ಎಂದು ನಾಮಕರಣ ಮಾಡಲು ಮುಂದಾಗಿದ್ದಾರೆ. ಇದೆ ಕಾರಣಕ್ಕೆ ಇವತ್ತು ಯಾದಗಿರಿ ನಗರಸಭೆ ಕಚೇರಿ ಮುಂದೆ ಮುಸ್ಲಿಂ ಮುಖಂಡರು ಧರಣಿ ಸತ್ಯಾಗ್ರಹ ನಡೆಸಿ, ಯಾವುದೇ ಕಾರಣಕ್ಕೂ ಇಲ್ಲಿ ಟಿಪ್ಪು ಹೆಸರು ಬದಲಿಸಿ ಸಾವರ್ಕರ್ ಹೆಸರಿಡಲು ನಾವು ಬಿಡಲ್ಲ ಪ್ರಾಣ ಬೇಕಾದರೂ ಕೊಡಲು ಸಿದ್ದರಿದ್ದೇವೆ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಇನ್ನು ಕಳೆದ ಕೆಲ ತಿಂಗಳುಗಳ ಹಿಂದೆ ಕೆಲ ಹಿಂದೂಪರ ಸಂಘಟನೆಯ ಮುಖಂಡರು ನಗರಸಭೆ ಅಧ್ಯಕ್ಷರಿಗೆ ಇಲ್ಲಿ ಸಾವರ್ಕರ್ ಸರ್ಕಲ್ ಮಾಡಲು ಅನುಮತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದರಂತೆ. ಹೀಗಾಗಿ ನಗರಸಭೆ ಅಧ್ಯಕ್ಷರು ನಗರಸಭೆಯ ಸದಸ್ಯರ ತುರ್ತು ಸಾಮಾನ್ಯ ಸಭೆಯನ್ನು ಕರೆದು ಸಾವರ್ಕರ್ ಸರ್ಕಲ್ ಮಾಡಲು ಸರ್ವಾನುಮತದಿಂದ ಒಪ್ಪಿಗೆಯನ್ನು ಪಡೆದಿದ್ದೆನೆ ಎಂದು ಖುದ್ದು ನಗರಸಭೆ ಅಧ್ಯಕ್ಷರೆ ಹೇಳುತ್ತಿದ್ದಾರೆ. ಆದರೆ ಈ ಹೇಳಿಕೆಗೆ ಪಕ್ಷಾತೀತವಾಗಿ ನಗರಸಭೆ ಸದಸ್ಯರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಯಾರ ಒಪ್ಪಿಗೆಯನ್ನು ಪಡೆಯದೆ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದ್ದಾರೆ. ಸರ್ವಾನುಮತದ ಒಪ್ಪಿಗೆ ಪತ್ರಕ್ಕೆ ನಗರಸಭೆ ಆಯುಕ್ತರು ಸಹಿ ಕೂಡ ಮಾಡಿಲ್ಲ. ಬಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ನಗರಸಭೆ ಅಧ್ಯಕ್ಷರಿಗೆ ಬಿಜೆಪಿ ಪಕ್ಷದ ಸದಸ್ಯರೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ಬಗ್ಗೆ ನಗರಸಭೆ ಆಯುಕ್ತರಿಗೆ ದೂರ ಕೂಡ ನೀಡಿದ್ದಾರೆ. ಆದರೆ ಈ ಕುರಿತು ನಗರಸಭೆ ಅಧ್ಯಕ್ಷರಿಗೆ ಕೇಳಿದರೆ ಸದಸ್ಯರ ಒಪ್ಪಿಗೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ಯಾದಗಿರಿ: ಜಿಲ್ಲಾಸ್ಪತ್ರೆಯಲ್ಲೊಂದು ಅಮಾನುಷ ಘಟನೆ: ವೈದ್ಯರ ನಿರ್ಲಕ್ಷ್ಯದಿಂದ ಕಾರಿಡಾರ್ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ
ಒಟ್ಟಿನಲ್ಲಿ ಇಷ್ಟು ದಿನ ಶಾಂತವಾಗಿದ್ದ ಯಾದಗಿರಿ ನಗರ, ಟಿಪ್ಪು ಹಾಗೂ ಸಾವರ್ಕರ್ ಹೆಸರಿನಿಂದ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇನ್ನು ದೂರು ನೀಡಿದ ಬಳಿಕ ಟಿಪ್ಪು ಸರ್ಕಲ್ ಬಳಿ ತೆರಳಿ ಟಿಪ್ಪು ಭಾವ ಚಿತ್ರಕ್ಕೆ ಹಾರ ಹಾಕಿ ಪಟಾಕಿ ಸಿಡಿಸಿ ಯಾವುದೇ ಕಾರಣಕ್ಕೆ ಸಾವರ್ಕರ್ ಸರ್ಕಲ್ ಆಗಲು ಬಿಡುವುದಿಲ್ಲ ಎಂದು ಘೋಷಣೆ ಕೂಗಿದ್ದಾರೆ.
ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ