ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ ದೇವೇಗೌಡ

ಮೇಕೆದಾಟು ಯೋಜನೆ ವಿವಾದವನ್ನು ಶೀಘ್ರದಲ್ಲಿ ಬಗೆಹರಿಸುವಂತೆ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ ದೇವೆಗೌಡ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ ದೇವೇಗೌಡ
ಮಾಜಿ ಪ್ರಧಾನಿ ಹೆಚ್​.ಡಿ ದೇವೆಗೌಡ
Follow us
TV9 Web
| Updated By: ವಿವೇಕ ಬಿರಾದಾರ

Updated on: Dec 09, 2022 | 10:08 PM

ನವದೆಹಲಿ/ಬೆಂಗಳೂರು: ನಮ್ಮ ಭಾಗದಲ್ಲಿ ಮೇಕೆದಾಟು (Mekedatu) ಯೋಜನೆ ಜಾರಿಮಾಡಲಾಗುತ್ತಿದೆ. ಬೇರೆ ರಾಜ್ಯದ ಗಡಿಯಲ್ಲಿ ಮೇಕೆದಾಟು ಯೋಜನೆ ಜಾರಿ ಮಾಡುತ್ತಿಲ್ಲ. ಈ ಯೋಜನೆಯಿಂದ ಹಳೇ ಮೈಸೂರು ಭಾಗಕ್ಕೆ ಕುಡಿಯಲು ನೀರು ಸಿಗಲಿದೆ. ದಯಮಾಡಿ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆ ವಿವಾದ ಬಗೆಹರಿಸಬೇಕು ಎಂದು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Devegowda) ಆಗ್ರಹಿಸಿದ್ದಾರೆ.

ಏನಿದು ಮೇಕೆದಾಟು ಯೋಜನೆ

ಕರ್ನಾಟಕ-ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆಯ ವಿವಾದವು ಇಂದು ನಿನ್ನೆಯದಲ್ಲ. ಚೋಳ ರಾಜರ ಕಾಲದಿಂದಲೂ ಈ ನದಿ ನೀರು ಹಂಚಿಕೆಯ ವಿವಾದ ಇದೆ. ಸ್ವಾತಂತ್ರ್ಯ ಪೂರ್ವದಲ್ಲೂ 2 ರಾಜ್ಯಗಳ ನಡುವೆ ಕಾವೇರಿ ನದಿ ನೀರು ಹಂಚಿಕೆಯ ವಿವಾದ ಇತ್ತು. ಈಗಲೂ ಈ ವಿವಾದ ಮುಂದುವರಿದಿದೆ.

ಕಾವೇರಿ ನದಿ ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟಿ ಕೊಡಗು, ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳ ಮೂಲಕ ತಮಿಳುನಾಡಿಗೆ ಹರಿಯುತ್ತದೆ. ನದಿ ನೀರು ಹಂಚಿಕೆಯ ಕಾನೂನಿನ ಪ್ರಕಾರ, ಕರ್ನಾಟಕ ಮೇಲ್ಬಾಗದ ರಾಜ್ಯ. ಇದನ್ನು ಇಂಗ್ಲಿಷ್​ನಲ್ಲಿ upper Ripparian state ಅಂತ ಕರೆಯುತ್ತಾರೆ. ತಮಿಳುನಾಡು ಲೋವರ್ ರೈಫೇರಿಯನ್ ಸ್ಟೇಟ್ ಅಂದರೆ, ತಮಿಳುನಾಡು ಕೆಳಭಾಗದಲ್ಲಿರುವ ರಾಜ್ಯ.

ಕಾವೇರಿ ನದಿ ನೀರು ಹಂಚಿಕೆಯ ವಿವಾದವೂ ಸ್ವಾತಂತ್ರ್ಯ ಪೂರ್ವದಲ್ಲಿ ಉದ್ಭವವಾದಾಗ, ಎರಡು ರಾಜ್ಯಗಳು ಮಾತುಕತೆ ನಡೆಸಿ ನೀರು ಹಂಚಿಕೆ ಬಗ್ಗೆ ಎರಡು ಒಪ್ಪಂದ ಮಾಡಿಕೊಂಡಿವೆ. 1893 ಹಾಗೂ 1924ರಲ್ಲಿ ಮೈಸೂರು ಸಂಸ್ಥಾನ ಹಾಗೂ ಮದ್ರಾಸ್ ಪ್ರೆಸಿಡೆನ್ಸಿ ನಡುವೆ ಕಾವೇರಿ ನದಿ ನೀರು ಹಂಚಿಕೆಯ ಒಪ್ಪಂದ ಏರ್ಪಟ್ಟಿವೆ. ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ನಂತರ ಈ ಹಳೆಯ ಒಪ್ಪಂದಗಳು ರದ್ದಾಗಬೇಕಾಗಿತ್ತು. ಆದರೆ, ಈ ಒಪ್ಪಂದಗಳು ಇಂದಿಗೂ ರದ್ದಾಗಿಲ್ಲ. ಈ ಒಪ್ಪಂದಗಳೇ ಈಗ ತಮಿಳುನಾಡಿಗೆ ಅಸ್ತ್ರವಾಗಿವೆ. ಈ ಒಪ್ಪಂದಗಳ ಪ್ರಕಾರ, ಮೇಲ್ಭಾಗದ ರಾಜ್ಯವಾದ ಕರ್ನಾಟಕವು ತನ್ನ ನೆಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ಅಣೆಕಟ್ಟು, ಡ್ಯಾಂ ನಿರ್ಮಾಣ ಮಾಡಬೇಕಾದರೂ, ಕೆಳಭಾಗದ ರಾಜ್ಯವಾದ ತಮಿಳುನಾಡಿನ ಒಪ್ಪಿಗೆಯನ್ನು ಪಡೆಯಬೇಕು. ತಮಿಳುನಾಡಿನ ಒಪ್ಪಿಗೆ ಇಲ್ಲದೇ ಕರ್ನಾಟಕವು ಕಾವೇರಿ ನದಿಗೆ ತನ್ನ ರಾಜ್ಯದಲ್ಲಿ ಯಾವುದೇ ಡ್ಯಾಂ ನಿರ್ಮಾಣ ಮಾಡುವಂತಿಲ್ಲ. ಕಾವೇರಿ ನದಿ ನೀರಿನ ಸಹಜ ಹರಿವಿಗೆ ತಡೆಯೊಡ್ಡುವಂತಿಲ್ಲ.

ಇದನ್ನೂ ಓದಿ: ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆಯಲ್ಲಿ ರಾಜ್ಯಗಳಿಗೆ ತಾರತಮ್ಯ ಎಂಬ ಆರೋಪ ಶುದ್ಧ ಸುಳ್ಳು: ಪ್ರಲ್ಹಾದ್ ಜೋಶಿ ಸ್ಪಷ್ಟನೆ

ಈ ಒಪ್ಪಂದಕ್ಕೆ 1893 ಹಾಗೂ 1924ರಲ್ಲಿ ಕೆಲವೊಂದು ಅನಿವಾರ್ಯ ಪರಿಸ್ಥಿತಿಯಲ್ಲಿ ಮೈಸೂರು ಸಂಸ್ಥಾನದ ರಾಜರು ಸಹಿ ಹಾಕಿದ್ದಾರೆ. ಆಗ ಮದ್ರಾಸ್ ಪ್ರೆಸಿಡೆನ್ಸಿ ನೇರವಾಗಿ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. ಮೈಸೂರು ಸಂಸ್ಥಾನವನ್ನು ಮೈಸೂರು ಒಡೆಯರು ಆಳ್ವಿಕೆ ಮಾಡುತ್ತಿದ್ದರು. ಹೀಗಾಗಿ ಬ್ರಿಟಿಷರ ಒತ್ತಡಕ್ಕೆ ಮಣಿದು 1893 ಹಾಗೂ 1924ರ ಒಪ್ಪಂದಗಳಿಗೆ ಮೈಸೂರು ಮಹಾರಾಜರು ಸಹಿ ಹಾಕಿದ್ದಾರೆಯೇ ವಿನಃ ಪೂರ್ಣ ಒಪ್ಪಿಗೆಯಿಂದಲ್ಲ. ಈ ಹಳೆಯ, ಬ್ರಿಟಿಷ್ ಒಪ್ಪಂದಗಳನ್ನೇ ಇಂದಿಗೂ ತಮಿಳುನಾಡು ರಾಜ್ಯವು ಕರ್ನಾಟಕದ ವಿರುದ್ಧ ತನ್ನ ಗುರಾಣಿಯಾಗಿ ಬಳಸುತ್ತಿದೆ. ಈಗಲೂ ತಮಿಳುನಾಡು ರಾಜ್ಯ ಸರ್ಕಾರವು ತನ್ನ ಒಪ್ಪಿಗೆ ಇಲ್ಲದೇ, ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ಅಣೆಕಟ್ಟೆ, ಡ್ಯಾಂ ಕಟ್ಟಬಾರದೆಂದು ಪ್ರತಿಪಾದಿಸುತ್ತಿದೆ. ಕೇಂದ್ರ ಸರ್ಕಾರಕ್ಕೂ ಕರ್ನಾಟಕದ ಸರ್ಕಾರದ ಮೇಕೆದಾಟು ಅಣೆಕಟ್ಟೆ ವಿರುದ್ಧ ತನ್ನ ಆಕ್ಷೇಪವನ್ನು ತಿಳಿಸಿದೆ. ಸುಪ್ರೀಂಕೋರ್ಟ್ ನಲ್ಲೂ ಮೇಕೆದಾಟು ಬಳಿ ಕರ್ನಾಟಕ ಸರ್ಕಾರ ಅಣೆಕಟ್ಟೆ ನಿರ್ಮಿಸುವುದರ ವಿರುದ್ಧ ತಮಿಳುನಾಡು ಕೇಸ್ ದಾಖಲಿಸಿದೆ. ಆ ಕೇಸ್ ಇನ್ನೂ ಅಂತಿಮ ವಿಚಾರಣೆಗೆ ಬಂದಿಲ್ಲ.

ಜಲ ವರ್ಷ ಜೂನ್ ತಿಂಗಳ 1ರಿಂದ ಆರಂಭವಾಗಿ ಮೇ 30ಕ್ಕೆ ಅಂತ್ಯವಾಗುತ್ತದೆ. ಜೂನ್ 1ರಿಂದ ಮೇ 30ರೊಳಗೆ ಕರ್ನಾಟಕವು ತನ್ನ ಕಾವೇರಿ ಕಣಿವೆಯ ನಾಲ್ಕು ಡ್ಯಾಂಗಳಿಂದ ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರನ್ನು ಹರಿಸಬೇಕೆಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಈ ಮೊದಲು ಕಾವೇರಿ ನದಿ ನೀರು ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರಕಾರ, ವಾರ್ಷಿಕ 182 ಟಿಎಂಸಿ ನೀರನ್ನು ಕರ್ನಾಟಕವು ತಮಿಳುನಾಡಿಗೆ ಹರಿಸಬೇಕಾಗಿತ್ತು.

2018ರ ಫೆಬ್ರವರಿ ತಿಂಗಳಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಕರ್ನಾಟಕಕ್ಕೆ 14.75 ಟಿಎಂಸಿ ನೀರುನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಹಂಚಿಕೆಯಾಗಿದ್ದ ನೀರಿನ ಪ್ರಮಾಣವು 270 ಟಿಎಂಸಿಯಿಂದ 284.75 ಟಿಎಂಸಿಗೆ ಏರಿಕೆಯಾಗಿದೆ. ಕಾವೇರಿ ನದಿ ನೀರು ನ್ಯಾಯಾಧಿಕರಣವು ತಮಿಳುನಾಡಿನಲ್ಲಿ ಲಭ್ಯವಿರುವ ಅಂತರ್ಜಲವನ್ನು ತನ್ನ ತೀರ್ಪು ನೀಡುವಾಗ ಪರಿಗಣಿಸಿರಲಿಲ್ಲ. ಇದನ್ನು ಕರ್ನಾಟಕದ ಪರ ವಕೀಲ ಫಾಲಿ ಎಸ್‌. ನಾರಿಮನ್ ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು. ಹೀಗಾಗಿ, ಸುಪ್ರೀಂಕೋರ್ಟ್ ತಮಿಳುನಾಡಿನ ಲಭ್ಯವಿರುವ ಅಂತರ್ಜಲವನ್ನು 10 ಟಿಎಂಸಿ ಎಂದು ಪರಿಗಣಿಸಿ, ಇದನ್ನು ತಮಿಳುನಾಡಿನ ಪಾಲಿನಲ್ಲಿ ಕಡಿತ ಮಾಡಿದೆ. ಜತೆಗೇ ಬೆಂಗಳೂರು ನಗರದ ಕುಡಿಯುವ ನೀರಿನ ಉದ್ದೇಶಕ್ಕಾಗಿ 4.75 ಟಿಎಂಸಿ ನೀರುನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಿದೆ. ಇದರಿಂದಾಗಿ ಕರ್ನಾಟಕಕ್ಕೆ ವಾರ್ಷಿಕ 284 ಟಿಎಂಸಿ ಕಾವೇರಿ ನೀರನ್ನು ಬಳಸಿಕೊಳ್ಳುವ ಹಕ್ಕು ಸಿಕ್ಕಿದೆ. ಈ ಮೊದಲು ಕರ್ನಾಟಕಕ್ಕೆ ವಾರ್ಷಿಕ 270 TMC ನೀರು ಬಳಕೆಗೆ ಮಾತ್ರ ಕಾವೇರಿ ನದಿ ನೀರು ನ್ಯಾಯಾಧೀಕರಣ ಅವಕಾಶ ಕೊಟ್ಟಿತ್ತು.

ಬೆಂಗಳೂರು ಕರ್ನಾಟಕ ರಾಜ್ಯದ ರಾಜಧಾನಿ. ದೇಶದ ಮೆಟ್ರೋಪಾಲಿಟನ್ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ದೇಶದ ಸಿಲಿಕಾನ್ ಸಿಟಿ ಎಂದೇ ಹೆಸರಾಗಿದೆ. ಬೆಂಗಳೂರಿನಲ್ಲಿ ಕನ್ನಡಿಗರು ಮಾತ್ರವಲ್ಲದೇ ಎಲ್ಲ ರಾಜ್ಯದ ಜನರು ವಾಸ ಇದ್ದಾರೆ. ಬೆಂಗಳೂರಿಗೆ ಕುಡಿಯುವ ನೀರುನ್ನು ಕಾವೇರಿ ನದಿಯಿಂದಲೇ ಪೂರೈಸಲಾಗುತ್ತಿದೆ. ಕೆಆರ್​ಎಸ್ ಡ್ಯಾಂನಿಂದ ಪೈಪ್ ಲೈನ್ ಮೂಲಕ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಜಸ್ಟೀಸ್ ಎನ್.ಪಿ. ಸಿಂಗ್ ನೇತೃತ್ವದ ಕಾವೇರಿ ನದಿ ನೀರು ನ್ಯಾಯಾಧೀಕರಣವು ಬೆಂಗಳೂರಿನ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾವೇರಿ ನದಿ ನೀರಿನಲ್ಲಿ ವಾರ್ಷಿಕ 18 ಟಿಎಂಸಿ ನೀರುನ್ನು ಹಂಚಿಕೆ ಮಾಡಿತ್ತು. ಅಂದರೆ, ತಿಂಗಳಿಗೆ ಒಂದೂವರೆ ಟಿಎಂಸಿ ನೀರನ್ನು ಕಾವೇರಿಯಿಂದ ಬೆಂಗಳೂರಿಗೆ ಪೂರೈಸಬಹುದಿತ್ತು.

ಇದನ್ನೂ ಓದಿ: ಕಳೆದ 5 ವರ್ಷದಲ್ಲಿ ಮೋದಿ ವಿದೇಶಿ ಪ್ರವಾಸಕ್ಕಾದ ಖರ್ಚೆಷ್ಟು? ರಾಜ್ಯಸಭೆಗೆ ಕೊಟ್ಟ 36 ವಿದೇಶಿ ಪ್ರವಾಸಗಳ ಖರ್ಚು-ವೆಚ್ಚದ ಲೆಕ್ಕ ಇಲ್ಲಿದೆ

ಸುಪ್ರೀಂಕೋರ್ಟ್​ನ ಸಿಜೆಐ ಆಗಿದ್ದ ಜಸ್ಟೀಸ್ ದೀಪಕ್ ಮಿಶ್ರಾ ಅವರ ಪೀಠವು ಬೆಂಗಳೂರಿಗೆ ಇನ್ನೂ 4.75 ಟಿಎಂಸಿ ನೀರುನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಿದೆ. ಹೀಗಾಗಿ ಈ ಹೆಚ್ಚುವರಿ ನೀರುನ್ನು ಬೆಂಗಳೂರಿಗೆ ಪೂರೈಸಲು ಕರ್ನಾಟಕ ಸರ್ಕಾರ ಯೋಜನೆ ರೂಪಿಸಬೇಕು. ಬೆಂಗಳೂರು ಬೆಳೆಯುತ್ತಿರುವ ಮಹಾನಗರ. ಸುತ್ತಮುತ್ತಲ ಹಳ್ಳಿಗಳನ್ನು ತನ್ನ ಒಡಲಲ್ಲಿ ಹಾಕಿಕೊಂಡು ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಬೆಂಗಳೂರಿನ ವೇಗಕ್ಕೆ ತಕ್ಕಂತೆ ಹೆಚ್ಚಿನ ಟಿಎಂಸಿ ನೀರನ್ನು ಬೆಂಗಳೂರಿಗೆ ಪೂರೈಸಬೇಕಾಗಿದೆ. ಹೀಗಾಗಿಯೇ ಕರ್ನಾಟಕ ಸರ್ಕಾರವು ಕನಕಪುರ ತಾಲ್ಲೂಕಿನ ಮೇಕೆದಾಟು ಬಳಿ ಹೊಸ ಡ್ಯಾಂ ಅನ್ನು ಕಾವೇರಿ ನದಿ ಅಡ್ಡಲಾಗಿ ಕಟ್ಟುವ ತೀರ್ಮಾನ ಕೈಗೊಂಡಿದೆ. ಹೊಸ ಡ್ಯಾಂ ನಿರ್ಮಾಣದ ಡಿಪಿಆರ್ ಸಿದ್ದವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಕರ್ನಾಟಕವು ತಮಿಳುನಾಡಿನ ಪಾಲಿನ ನೀರನ್ನು ಉತ್ತಮ ಮಳೆ ಸುರಿದ ವರ್ಷಗಳಲ್ಲಿ ತಮಿಳುನಾಡಿಗೆ ಹರಿಸುತ್ತಿದೆ. ಆದರೆ, ತಮಿಳುನಾಡಿನ ಮೆಟ್ಟೂರು, ಭವಾನಿ ಸಾಗರ ಡ್ಯಾಂಗಳಲ್ಲಿ ನೀರು ಸಂಗ್ರಹವಾದ ನಂತರ, ತಮಿಳುನಾಡು ಹೆಚ್ಚುವರಿ ನೀರುನ್ನು ಸಮುದ್ರಕ್ಕೆ ಹರಿಸುತ್ತಿದೆ. ಕಾವೇರಿ ನದಿ ನೀರು ತಮಿಳುನಾಡಿನಲ್ಲಿ ಸಮುದ್ರಕ್ಕೆ ಸೇರುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರವು ಕಾವೇರಿ ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುವ ಬದಲು ನಮ್ಮ ರಾಜ್ಯದ ಗಡಿಯಲ್ಲೇ ಮೇಕೆದಾಟು ಬಳಿ ಡ್ಯಾಂ ನಿರ್ಮಾಣ ಮಾಡಿ, ಆ ನೀರುನ್ನು ಸಂಗ್ರಹಿಸುತ್ತೇವೆ. ತಮಿಳುನಾಡಿಗೂ ಅಗತ್ಯ ಇದ್ದಾಗ ಕಾವೇರಿ ನೀರು ಬಿಡುತ್ತೇವೆ. ಮೇಕೆದಾಟು ಬಳಿಯ ಡ್ಯಾಂನಿಂದ ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ನಗರ, ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಲು ಅನುಕೂಲವಾಗುತ್ತೆ ಎಂದು ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸುತ್ತಿದೆ. ಜೊತೆಗೆ ಮೇಕೆದಾಟು ಬಳಿ ಡ್ಯಾಂ ನಿರ್ಮಾಣ ಮಾಡಿ ಜಲವಿದ್ಯುತ್ ಉತ್ಪಾದಿಸುತ್ತೇವೆ. ಇದರಿಂದ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತೆ ಎಂಬುದು ಕರ್ನಾಟಕದ ವಾದ. ಉತ್ತಮ ಮಳೆ ಸುರಿದ ವರ್ಷಗಳಲ್ಲಿ ತಮಿಳುನಾಡಿಗೆ ಹರಿಸಬೇಕಾಗಿರುವ ವಾರ್ಷಿಕ 177 ಟಿಎಂಸಿ ನೀರಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ ಅಂತ ಕರ್ನಾಟಕ ಸರ್ಕಾರ ಹೇಳುತ್ತಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ಸರ್ಕಾರವು ಕಳೆದ 20 ರಿಂದ 30 ವರ್ಷಗಳಲ್ಲಿ ಎಷ್ಟು ವರ್ಷಗಳ ಕಾಲ ತಮಿಳುನಾಡು ಸರ್ಕಾರವು ಕಾವೇರಿ ನದಿ ನೀರನ್ನು ತನ್ನ ಡ್ಯಾಂಗಳಲ್ಲಿ ಸಂಗ್ರಹಿಸಲಾಗದೇ, ಸಮುದ್ರಕ್ಕೆ ಹರಿಸಿದೆ ಎಂಬ ದಾಖಲೆಯನ್ನು ಸಂಗ್ರಹಿಸಿ, ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ. 2020ರಲ್ಲಿ ಕರ್ನಾಟಕದಲ್ಲಿ ಬಾರಿ ಮಳೆ ಸುರಿದು ನವಂಬರ್ ತಿಂಗಳ ಪ್ರಾರಂಭದ ಹೊತ್ತಿಗೆ ತಮಿಳುನಾಡಿಗೆ 159 ಟಿಎಂಸಿ ನೀರು ಹರಿದು ಹೋಗಿತ್ತು. ಆ ವರ್ಷ ತಮಿಳುನಾಡು ಕಾವೇರಿ ನದಿ ನೀರನ್ನು ತನ್ನ ಡ್ಯಾಂಗಳು ತುಂಬಿದ ಬಳಿಕ ಸಮುದ್ರಕ್ಕೆ ಹರಿಸಿದೆ. ಇಂಥ ವರ್ಷಗಳಲ್ಲಿ ಮೇಕೆದಾಟು ಬಳಿ ಮತ್ತೊಂದು ಡ್ಯಾಂ ಇದ್ದರೇ, ಆ ಡ್ಯಾಂನಲ್ಲಿ ನೀರನ್ನು ಸಂಗ್ರಹಿಸಬಹುದು. ನೀರನ್ನು ಕುಡಿಯುವ ನೀರಿನ ಉದ್ದೇಶ, 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬಹುದು, ಬೇಸಿಗೆ ಕಾಲದಲ್ಲಿ ತಮಿಳುನಾಡಿಗೂ ನೀರು ಬಿಡಬಹುದು ಎಂಬುದು ಕರ್ನಾಟಕ ಸರ್ಕಾರದ ವಾದ.

ಮೇಕೆದಾಟು ಬಳಿ ಡ್ಯಾಂ ನಿರ್ಮಾಣದಿಂದ ಎರಡು ರಾಜ್ಯಗಳಿಗೂ ಅನುಕೂಲ. ತಮಿಳುನಾಡಿನ ಪಾಲಿನ ನೀರನ್ನು ಬಿಡುತ್ತೇವೆ. ಬರೀ ಸಮುದ್ರಕ್ಕೆ ಹರಿದು ಹೋಗುವ ಹೆಚ್ಚುವರಿ ನೀರನ್ನು ಮಾತ್ರ ಡ್ಯಾಂನಲ್ಲಿ ಸಂಗ್ರಹಿಸಲಾಗುತ್ತೆ ಎಂದು ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.

ಆದರೇ, ಈ ವಾದವನ್ನು ತಮಿಳುನಾಡು ಒಪ್ಪುತ್ತಿಲ್ಲ. ಕಾವೇರಿ ನದಿ ನೀರಿನ ಸಹಜ ಹರಿವಿಗೆ ಡ್ಯಾಂ ಕಟ್ಟುವ ಮೂಲಕ ಕರ್ನಾಟಕ ತಡೆಯೊಡ್ಡಲು ಹೊರಟಿದೆ, ಹೀಗಾಗಿ ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಅವಕಾಶ ಕೊಡಬೇಡಿ ಎಂದು ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರಕ್ಕೆ ದೂರು ಹೇಳುತ್ತಿದೆ. ಆದರೇ, 1924ರ ಒಪ್ಪಂದದಲ್ಲಿ ಕಾವೇರಿ ನದಿ ನೀರುನ್ನು ಜಲ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಮದ್ರಾಸ್ ಪ್ರೆಸಿಡೆನ್ಸಿ ಒಪ್ಪಿಗೆ ಕೊಟ್ಟಿತ್ತು ಎಂದು ಕರ್ನಾಟಕದ ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಹೇಳಿದ್ದಾರೆ. ಮೇಕೆದಾಟು ಬಳಿ 66 ಟಿಎಂಸಿ ನೀರು ಸಂಗ್ರಹದ ಡ್ಯಾಂ ನಿರ್ಮಿಸುವ ಪ್ಲ್ಯಾನ್ ಅನ್ನು ಕರ್ನಾಟಕ ಸರ್ಕಾರ ಹಾಕಿಕೊಂಡಿದೆ. ಸದ್ಯ ಕೆಆರ್.ಎಸ್. ಡ್ಯಾಂ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯವೇ 49.45 ಟಿಎಂಸಿ. ಒಂದು ವೇಳೆ ಮೇಕೆದಾಟು ಬಳಿ ಡ್ಯಾಂ ನಿರ್ಮಾಣವಾದರೇ, ಅದು ಕೆಆರ್.ಎಸ್.ಗಿಂತ ಹೆಚ್ಚಿನ ನೀರು ಸಂಗ್ರಹಿಸುವ ದೊಡ್ಡ ಡ್ಯಾಂ ಆಗಲಿದೆ. ಸದ್ಯ ಕಾವೇರಿ ಕಣಿವೆಯಲ್ಲಿರುವ ನಾಲ್ಕು ಡ್ಯಾಂಗಳಾದ ಹಾರಂಗಿ, ಹೇಮಾವತಿ, ಕಬಿನಿ, ಕೆಆರ್‌ಎಸ್ ಡ್ಯಾಂಗಳ ಪೈಕಿ ಕೆಆರ್​ಎಸ್ ಡ್ಯಾಂ ಅತಿ ದೊಡ್ಡ ಡ್ಯಾಂ ಆಗಿದೆ.

ಮೇಕೆದಾಟು ಬಳಿ ಹೊಸ ಡ್ಯಾಂ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಡಿಟೈಲ್ ಪ್ರಾಜೆಕ್ಟ್ ರಿಪೋರ್ಟ್(ಡಿ.ಪಿ.ಆರ್‌.) ತಯಾರಿಸಿ 2020ರ ಜನವರಿಯಲ್ಲಿ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದೆ. ಕೇಂದ್ರ ಜಲ ಆಯೋಗವು ನೇರವಾಗಿ ಕೇಂದ್ರದ ಜಲಶಕ್ತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದೆ. ಮೇಕೆದಾಟು ಬಳಿ ಹೊಸ ಡ್ಯಾಂ ನಿರ್ಮಾಣಕ್ಕೆ ಈಗ ಕೇಂದ್ರದ ಜಲಶಕ್ತಿ ಇಲಾಖೆ, ಕೇಂದ್ರದ ಜಲ ಆಯೋಗ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳು ಒಪ್ಪಿಗೆ ನೀಡಬೇಕು. ಜೊತೆಗೆ ಮೇಕೆದಾಟು ಬಳಿ ಡ್ಯಾಂ ನಿರ್ಮಾಣದಿಂದ ಅರಣ್ಯ ಭೂಮಿಯ ಸ್ವಲ್ಪ ಭಾಗ ಮುಳುಗಡೆಯಾಗಲಿದೆ. ಹೀಗಾಗಿ ಕೇಂದ್ರದ ಅರಣ್ಯ, ಪರಿಸರ, ವನ್ಯಜೀವಿ ಇಲಾಖೆಯ ಒಪ್ಪಿಗೆ ಕೂಡ ಬೇಕು. ಇಷ್ಟು ಇಲಾಖೆ, ಸಂಸ್ಥೆಗಳ ಒಪ್ಪಿಗೆ ಸಿಕ್ಕರೇ, ಕರ್ನಾಟಕ ಸರ್ಕಾರವು ಮೇಕೆದಾಟು ಬಳಿ ಡ್ಯಾಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿ ಕಾಮಗಾರಿ ಆರಂಭಿಸಬಹುದು. ಮೇಕೆದಾಟು ಡ್ಯಾಂ ನಿರ್ಮಾಣವು ಅಂದಾಜು 9 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದೆ.

ಆದರೇ, ಡಿಪಿಆರ್ ಸಲ್ಲಿಸಿದರೂ, ಕೇಂದ್ರದ ಜಲ ಆಯೋಗ ಅದನ್ನು ಇನ್ನೂ ಪರಿಗಣಿಸುತ್ತಿಲ್ಲ. ಏಕೆಂದರೇ, ಮೊದಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳ ಒಪ್ಪಿಗೆ ಪಡೆದು ಕರ್ನಾಟಕ ಸಲ್ಲಿಸಿರುವ ಡಿಪಿಆರ್‌ಗೆ ತನ್ನ ಒಪ್ಪಿಗೆ ನೀಡಲಿ, ಆದಾದ ಬಳಿಕ ನಾವು ಕರ್ನಾಟಕ ಸರ್ಕಾರದ ಡಿಪಿಆರ್ ಅನ್ನು ಪರಿಶೀಲನೆ ನಡೆಸುತ್ತೇವೆ ಎಂದು ಕೇಂದ್ರದ ಜಲ ಆಯೋಗದ ಅಧಿಕಾರಿಗಳು ಕಳೆದ ವರ್ಷದ ಆಗಸ್ಟ್ ನಲ್ಲಿ ಹೇಳಿದ್ದಾರೆ.

ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳು ಮೇಕೆದಾಟು ಬಳಿ ಹೊಸ ಡ್ಯಾಂ ನಿರ್ಮಾಣವಾಗಲೇಬೇಕೆಂದು ಒತ್ತಾಯಿಸುತ್ತಿದ್ದರೇ, ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳು ಮೇಕೆದಾಟು ಬಳಿ ಡ್ಯಾಂ ನಿರ್ಮಾಣಕ್ಕೆ ಒಗ್ಗೂಡಿ ವಿರೋಧಿಸುತ್ತಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ