Paras Defence and Space Technologies Listing: ಪರಸ್ ಡಿಫೆನ್ಸ್ ಷೇರು ಶೇ 171ರಷ್ಟು ಪ್ರೀಮಿಯಂನೊಂದಿಗೆ ಲಿಸ್ಟಿಂಗ್
ಪರಸ್ ಡಿಫೆನ್ಸ್ ಅಂಡ್ ಸ್ಪೇಸ್ ಟೆಕ್ನಾಲಜೀಸ್ ಶುಕ್ರವಾರದಂದು ಶೇ 171ರಷ್ಟು ಪ್ರೀಮಿಯಂನೊಂದಿಗೆ ಷೇರುಪೇಟೆಯಲ್ಲಿ ಲಿಸ್ಟಿಂಗ್ ಆಗಿದ್ದು, ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿದೆ.
ಪರಸ್ ಡಿಫೆನ್ಸ್ ಅಂಡ್ ಸ್ಪೇಸ್ ಟೆಕ್ನಾಲಜೀಸ್ (Paras Defence and Space Technologies) ಅಕ್ಟೋಬರ್ 1ನೇ ತಾರೀಕಿನಂದು (ಶುಕ್ರವಾರ) ಷೇರುಪೇಟೆಯಲ್ಲಿ ಬಂಪರ್ ಲಿಸ್ಟಿಂಗ್ ಆಗಿದೆ. ವಿತರಣೆ ದರದ ಶೇ 171ರಷ್ಟು ಪ್ರೀಮಿಯಂನೊಂದಿಗೆ ಷೇರು ಮಾರುಕಟ್ಟೆಗೆ ಬಂದಿದೆ. ಅಂದಹಾಗೆ ಈ ಬೆಳವಣಿಗೆ ನಿರೀಕ್ಷಿತವೇ ಆಗಿತ್ತು. ಒಂದು ಷೇರಿಗೆ 175 ರೂಪಾಯಿಯಂತೆ ವಿತರಿಸಲಾಗಿತ್ತು. ಆ ಸ್ಟಾಕ್ ಬಿಎಸ್ಇಯಲ್ಲಿ ರೂ. 475ಕ್ಕೆ ಹಾಗೂ ಎನ್ಎಸ್ಇಯಲ್ಲಿ 469 ರೂಪಾಯಿಗೆ ಲಿಸ್ಟಿಂಗ್ ಆಯಿತು. ಅದಕ್ಕೂ ಮುನ್ನ ಗ್ರೇ ಮಾರ್ಕೆಟ್ನಲ್ಲಿ ಈ ಷೇರಿಗೆ ಪ್ರೀಮಿಯಂ ಆಗಿ ರೂ. 230ರಿಂದ ರೂ. 235 ಅಥವಾ ಶೇ 131ರಿಂದ ಶೇ 134ರಷ್ಟು ಇತ್ತು. ಅದನ್ನು ಷೇರಿನ ದರಕ್ಕೆ ಬದಲಾಯಿಸಿ ಹೇಳಬೇಕೆಂದರೆ, 175 ರೂಪಾಯಿಗೆ ಸಾರ್ವಜನಿಕ ವಿತರಣೆಗೆ ಬಂದ ಷೇರಿನ ಬೆಲೆ 405ರಿಂದ 410 ರೂಪಾಯಿಗೆ ಲಿಸ್ಟಿಂಗ್ ಆಗಬಹುದು ಎಂಬ ಅಂದಾಜಿತ್ತು.
ರಕ್ಷಣೆ ಮತ್ತು ಬಾಹ್ಯಾಕಾಶ ವಲಯದ ಉತ್ಙನ್ನಗಳು ಮತ್ತು ಸಲ್ಯೂಷನ್ಸ್ ಒದಗಿಸುವ ಕಂಪೆನಿಯಾದ ಪರಸ್ಗೆ ಸಾರ್ವಜನಿಕ ಷೇರು ವಿತರಣೆಗೆ ಮುಂದಾದ ಸಂದರ್ಭದಲ್ಲಿ ಹೂಡಿಕೆದಾರರು ಅದ್ಭುತವಾಗಿ ಸ್ಪಂದಿಸಿದ್ದಾರೆ. ಐಪಿಒ ಗಾತ್ರ 71.40 ಲಕ್ಷ ಷೇರುಗಳಾಗಿದ್ದವು. ಆದರೆ ಒಟ್ಟಾರೆಯಾಗಿ ಬೇಡಿಕೆ ಬಂದಿದ್ದು 304.26 ಪಟ್ಟು ಹೆಚ್ಚು, ಅಂದರೆ 217.26 ಕೋಟಿ ಈಕ್ವಿಟಿ ಷೇರುಗಳಿಗೆ ಬೇಡಿಕೆ ಬಂದಿತ್ತು. 38,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವು ಹರಿದು ಬಂದಿತ್ತು. ಎಲ್ಲ ವರ್ಗದ ಹೂಡಿಕೆದಾರರಿಂದಲೂ ಬೇಡಿಕೆ ಅಭೂತಪೂರ್ವವಾಗಿತ್ತು. ಕ್ವಾಲಿಫೈಡ್ ಇನ್ಸ್ಟಿಟ್ಯೂಷನಲ್ ಬೈಯರ್ಸ್ (QIB)ಗೆ ಮೀಸಲಾಗಿದ್ದಕ್ಕಿಂತ 169.65 ಪಟ್ಟು ಹೆಚ್ಚು ಬೇಡಿಕೆ ಸಲ್ಲಿಸಿದ್ದರು. ಸಾಂಸ್ಥಿಕೇತರ ಹೂಡಿಕೆದಾರರು 927.70 ಪಟ್ಟು ಹೆಚ್ಚು ಬೇಡಿಕೆ ಸಲ್ಲಿಸಿದ್ದರು. ಇನ್ನು ರೀಟೇಲ್ ಹೂಡಿಕೆದಾರರಿಗೆ ನಿಗದಿಯಾಗಿದ್ದಕ್ಕಿಂತ 112.81 ಪಟ್ಟು ಜಾಸ್ತಿ ಷೇರಿಗೆ ಅರ್ಜಿ ಹಾಕಿದ್ದರು.
ಪರಸ್ ಕಂಪೆನಿಯಿಂದ ರೂ. 170.77 ಕೋಟಿ ರೂಪಾಯಿ ಸಂಗ್ರಹಕ್ಕೆ ಮುಂದಾಗಲಾಗಿತ್ತು. ಅದರಲ್ಲಿ ಹೊಸದಾದ ವಿತರಣೆ ರೂ. 140.6 ಕೋಟಿ ರೂಪಾಯಿ ಹಾಗೂ ಆಫರ್ ಫಾರ್ ಸೇಲ್ (ಓಎಫ್ಎಸ್) ಮೂಲಕ ಷೇರುದಾರರ ಪಾಲಿನಿಂದ 30.2 ಕೋಟಿಯಷ್ಟನ್ನು ಸಂಗ್ರಹಿಸಲು ನಿರ್ಧರಿಸಿತ್ತು. ಹೊಸದಾಗಿ ಷೇರು ವಿತರಣೆಯಿಂದ ಬರುವ ಹಣವನ್ನು ಮಶೀನರಿಗಳು ಮತ್ತು ಸಲಕರಣೆಗಳ ಖರೀದಿ, ಕಾರ್ಯ ನಿರ್ವಹಣೆ ಬಂಡವಾಳದ ಹೆಚ್ಚಳದ ಅಗತ್ಯ ಪೂರೈಸಲು ಮತ್ತು ಕೆಲವು ಸಾಲಗಾರರಿಗೆ ಹಣ ಹಿಂತಿರುಗಿಸಲು ಬಳಸಲಾಗುವುದು ಎನ್ನಲಾಗಿದೆ. ಎಲ್ಲ ಬ್ರೋಕರೇಜ್ಗಳು ಈ ಷೇರಿನ ಖರೀದಿಗೆ ಶಿಫಾರಸು ಮಾಡಿದ್ದರು. ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನದಿಂದ ಈ ಕಂಪೆನಿಗೆ ಅನುಕೂಲ ಆಗುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಆರ್ಡರ್ಗಳು ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: IRCTC: ಎರಡು ವರ್ಷದಲ್ಲಿ ಹತ್ತು ಪಟ್ಟಿಗೂ ಹೆಚ್ಚಿನ ರಿಟರ್ನ್ಸ್ ನೀಡಿದ ಸರ್ಕಾರಿ ಸ್ವಾಮ್ಯದ ಈ ಷೇರು
Published On - 11:47 am, Fri, 1 October 21