AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hug Day 2026: ಮಾನಸಿಕ, ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಪ್ಪುಗೆ ಸಖತ್‌ ಪ್ರಯೋಜನಕಾರಿಯಂತೆ

Hugging Benefits: ವ್ಯಾಲೆಂಟೈನ್‌ ವೀಕ್‌ನ ಆರನೇ ದಿನ ಅಂದರೆ ಫೆಬ್ರವರಿ 12 ರಂದು ಹಗ್‌ ಡೇ ಆಚರಿಸಲಾಗುತ್ತದೆ. ಈ ದಿನ ಪ್ರೀತಿ, ವಾತ್ಸಲ್ಯ ಮತ್ತು ಅನ್ಯೋನ್ಯತೆಯನ್ನು ವ್ಯಕ್ತಪಡಿಸಲು ಇರುವಂತಹ ಒಂದು ಸುಂದರ ಸಂದರ್ಭವಾಗಿದ್ದು, ಈ ದಿನ ಸಂಗಾತಿಗಳು ಪರಸ್ಪರ ಅಪ್ಪಿಕೊಳ್ಳುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಈ ಅಪ್ಪುಗೆ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಮಾತ್ರವಲ್ಲ ಸಾಕಷ್ಟು ಪ್ರಯೋಜನಗಳನ್ನೂ ಹೊಂದಿವೆಯಂತೆ. ಅವು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Hug Day 2026: ಮಾನಸಿಕ, ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಪ್ಪುಗೆ ಸಖತ್‌ ಪ್ರಯೋಜನಕಾರಿಯಂತೆ
ಸಾಂದರ್ಭಿಕ ಚಿತ್ರ Image Credit source: Pexels
ಮಾಲಾಶ್ರೀ ಅಂಚನ್​
|

Updated on: Feb 11, 2026 | 5:30 PM

Share

ಪ್ರೇಮಿಗಳ ವಾರವು ಪ್ರೀತಿ ಮತ್ತು ಪ್ರಣಯದಿಂದ ತುಂಬಿದ ವಿಶೇಷ ಸಮಯವಾಗಿದ್ದು, ವ್ಯಾಲೆಂಟೈನ್‌ ವೀಕ್‌ನ  ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಅದರಲ್ಲೂ ಪ್ರೇಮಿಗಳ ವಾರದ ಆರನೇ ದಿನವಾದ ಹಗ್‌ ಡೇ (Hug Day) ಪ್ರೇಮಪಕ್ಷಿಗಳಿಗೆ ತುಂಬಾನೇ ವಿಶೇಷವಾದ ದಿನ.  ಈ ಸಂದರ್ಭದಲ್ಲಿ ಪರಸ್ಪರ ಅಪ್ಪಿಕೊಳ್ಳುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ, ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೆ. ಒಟ್ಟಾರೆಯಾಗಿ ಅಪ್ಪುಗೆ ಎನ್ನುವಂತಹದ್ದು ಪದಗಳಿಲ್ಲದೆ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದ್ದು, ಇದು ಸಂಬಂಧಗಳನ್ನು ಬಲಪಡಿಸುವುದು ಮಾತ್ರವಲ್ಲದೆ ಸಾಕಷ್ಟು ಪ್ರಯೋಜನಗಳನ್ನೂ ಹೊಂದಿವೆಯಂತೆ.  ಒಂದು ಅಪ್ಪುಗೆಯಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಅಪ್ಪುಗೆಯಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ?

ಒತ್ತಡ ಕಡಿಮೆಯಾಗುತ್ತದೆ: ನಾವು ಯಾರನ್ನಾದರೂ ತಬ್ಬಿಕೊಂಡಾಗ, ದೇಹವು ಆಕ್ಸಿಟೋಸಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದನ್ನು ಪ್ರೀತಿಯ ಹಾರ್ಮೋನ್ ಎಂದೂ ಕರೆಯುತ್ತಾರೆ. ಈ ಹಾರ್ಮೋನ್ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಾನಸಿಕ ಆರೋಗ್ಯದಲ್ಲಿ ಸುಧಾರಣೆ: ಅಪ್ಪುಗೆಯು ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇದು ಖಿನ್ನತೆ, ಒಂಟಿತನ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೌದು  ಅಪ್ಪುಗೆಯು ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ. ಇದು ಒಂಟಿತನದ ಭಾವನೆಯನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಕ್ತಿಯನ್ನು ಭಾವನಾತ್ಮಕವಾಗಿ ಬಲಶಾಲಿಯನ್ನಾಗಿ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಅಧ್ಯಯನಗಳ ಪ್ರಕಾರ, ದೈನಂದಿನ ಅಪ್ಪುಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಭಯ ಮತ್ತು ಒಂಟಿತನ ದೂರವಾಗುತ್ತದೆ: ಅಪ್ಪುಗೆಯು ವ್ಯಕ್ತಿಗೆ ಸುರಕ್ಷಿತ ಭಾವನೆಯನ್ನು ನೀಡುತ್ತದೆ. ಯಾರಾದರೂ ಭಯಭೀತರಾಗಿದ್ದರೆ ಅಥವಾ ಒಂಟಿತನ ಅನುಭವಿಸುತ್ತಿದ್ದರೆ, ಪ್ರೀತಿಯ ಅಪ್ಪುಗೆಯು ಅವರ ಧೈರ್ಯವನ್ನು ಹೆಚ್ಚಿಸುತ್ತದೆ ಮತ್ತು ಅವರಿಗೆ ಮಾನಸಿಕ ಬೆಂಬಲವನ್ನು ನೀಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ: ಒಂದು ಅಪ್ಪುಗೆಯು ನಿಮ್ಮ ರೋಗನಿರೋಧಕ ಶಕ್ತಿಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಅಪ್ಪುಗೆಯು ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ, ಅನಾರೋಗ್ಯದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಬಲಪಡಿಸುತ್ತದೆ. ದೇಹವು ಬಾಹ್ಯ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ವ್ಯಾಲೆಂಟೈನ್‌ ವೀಕ್‌ನಲ್ಲಿ ಹಗ್‌ ಡೇ ಆಚರಿಸುವ ಪದ್ಧತಿ ಆರಂಭವಾದದ್ದು ಹೇಗೆ ಗೊತ್ತೇ?

ಸಂಬಂಧಗಳನ್ನು ಬಲಪಡಿಸುತ್ತದೆ: ನಾವು ಯಾರನ್ನಾದರೂ ತಬ್ಬಿಕೊಂಡಾಗ, ನಮ್ಮ ಮೆದುಳು ಡೋಪಮೈನ್ ಮತ್ತು ಸಿರೊಟೋನಿನ್ ಎಂಬ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ನಮಗೆ ಸಂತೋಷ ಮತ್ತು ನಿರಾಳತೆಯನ್ನು ನೀಡುತ್ತದೆ. ಅಲ್ಲದೆ ಇದು  ಪರಸ್ಪರ ನಂಬಿಕೆ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ ದಂಪತಿಗಳ ನಡುವಿನ ಭಾವನಾತ್ಮಕ ಬಂಧಗಳನ್ನು  ಬಲಪಡಿಸುತ್ತದೆ.

ಉತ್ತಮ ನಿದ್ರೆಗೆ ಸಹಕಾರಿ: ಅಪ್ಪುಗೆಯು ಆಕ್ಸಿಟೋಸಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ.

ರಕ್ತ ಪರಿಚಲನೆ ಸುಧಾರಿಸುತ್ತದೆ: ಅಪ್ಪುಗೆಯು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ಆಮ್ಲಜನಕ ಪೂರೈಕೆ ಸುಧಾರಿಸುತ್ತದೆ. ಇದು ನಿಮ್ಮನ್ನು ಚೈತನ್ಯಶೀಲರನ್ನಾಗಿಸುತ್ತದೆ ಮತ್ತು ದೇಹದ ಕಾರ್ಯವನ್ನು ಸುಧಾರಿಸುತ್ತದೆ.

ಕೋಪ ಕಡಿಮೆಯಾಗುತ್ತದೆ: ಸಂಬಂಧಗಳಲ್ಲಿ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಮತ್ತು ಮನಸ್ತಾಪಗಳು ಉಂಟಾಗುವುದು ಸಹಜ. ಅಂತಹ ಸಮಯದಲ್ಲಿ ಒಂದು ಅಪ್ಪುಗೆಯು ಇವೆಲ್ಲವನ್ನು ಶಮನಗೊಳಿಸುತ್ತದೆ. ಹೌದು ಅಪ್ಪುಗೆ ತಪ್ಪು ತಿಳುವಳಿಕೆಗಳನ್ನು ಪರಿಹರಿಸಲು ಮತ್ತು  ಸಂಬಂಧಗಳನ್ನು ಆರೋಗ್ಯಕರ ರೀತಿಯಲ್ಲಿ  ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ