National Stress Awareness Day 2024: ಮಾನಸಿಕ ಒತ್ತಡವನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಒತ್ತಡವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಯಾವುದೇ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಕಷ್ಟವೆನಿಸಿದಾಗ ಕಿರಿಕಿರಿಯ ಭಾವವು ಉಂಟಾಗುತ್ತದೆ. ಈ ಮನಸ್ಥಿತಿಯನ್ನೇ ಒತ್ತಡ ಎನ್ನಬಹುದು. ಒತ್ತಡ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಯೋಗ ಕ್ಷೇಮವನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್ 6 ರಂದು ರಾಷ್ಟ್ರೀಯ ಒತ್ತಡ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ, ಮಹತ್ವ ಹಾಗೂ ಒತ್ತಡವನ್ನು ಹೇಗೆ ನಿಭಾಯಿಸುವುದು? ಎನ್ನುವ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಧುನಿಕ ಜೀವನ ಶೈಲಿಯಿಂದಾಗಿ ಮಾನಸಿಕ ಒತ್ತಡವನ್ನು ಎಲ್ಲರೂ ಅನುಭವಿಸುತ್ತಿದ್ದಾರೆ. ಕೆಲಸದ ಒತ್ತಡ, ಕುಟುಂಬದ ಒತ್ತಡ ಹೀಗೆ ಎಲ್ಲವನ್ನು ನಿಭಾಯಿಸಲಾಗದೇ ಒದ್ದಾಡುತ್ತಿದ್ದಾರೆ. ಇದನ್ನು ಹಾಗೆಯೇ ಬಿಟ್ಟರೆ ಮುಂದೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಆರಂಭದಲ್ಲೇ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಮಾನಸಿಕ ಒತ್ತಡದಿಂದ ಪಾರಾಗಲು ಸಾಧ್ಯ. ಹೀಗಾಗಿ ಈ ಒತ್ತಡದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನವೆಂಬರ್ 6 ರಂದು ರಾಷ್ಟ್ರೀಯ ಒತ್ತಡ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
*ರಾಷ್ಟ್ರೀಯ ಒತ್ತಡ ಜಾಗೃತಿ ದಿನದ ಇತಿಹಾಸ*
1998, ನವೆಂಬರ್ 6 ರಂದು ಇಂಟರ್ನ್ಯಾಷನಲ್ ಸ್ಟೈಸ್ ಮ್ಯಾನೇಜೈಂಟ್ ಅಸೋಸಿಯೇಷನ್ ರಾಷ್ಟ್ರೀಯ ಒತ್ತಡ ಜಾಗೃತಿ ದಿನವನ್ನು ಆಚರಿಸಲು ಮುಂದಾಯಿತು.ಈ ದಿನವು ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಒತ್ತಡದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿತ್ತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 6 ರಂದು ರಾಷ್ಟ್ರೀಯ ಒತ್ತಡ ಜಾಗೃತಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
*ರಾಷ್ಟ್ರೀಯ ಒತ್ತಡ ಜಾಗೃತಿ ದಿನದ ಮಹತ್ವ ಹಾಗೂ ಆಚರಣೆ*
ರಾಷ್ಟ್ರೀಯ ಒತ್ತಡ ಜಾಗೃತಿ ದಿನದಂದು ಒತ್ತಡ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಯೋಗಕ್ಷೇಮವನ್ನು ಉತ್ತೇಜಿಸುವುದಾಗಿದೆ. ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳ ಸ್ವಯಂ-ಆರೈಕೆಗೆ ಆದ್ಯತೆ ನೀಡಿ ಒತ್ತಡದಿಂದ ಮುಕ್ತರಾಗುವಂತೆ ಮಾಡುವ ಸಲುವಾಗಿ ಈ ದಿನದ ಆಚರಣೆಯೂ ಮಹತ್ವ ಪೂರ್ಣದ್ದಾಗಿದೆ. ಆರೋಗ್ಯಕರ ಹಾಗೂ ಒತ್ತಡ-ಮುಕ್ತ ಸಮಾಜವನ್ನು ರಚಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುವ ಉದ್ದೇಶವನ್ನು ಈ ದಿನವು ಹೊಂದಿದೆ. ಹೀಗಾಗಿ ಒತ್ತಡವನ್ನು ಅನುಭವಿಸುವ ವ್ಯಕ್ತಿಯನ್ನು ಗುರುತಿಸಿ, ಆತನ ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಮುದಾಯಗಳು ಕೈಜೋಡಿಸುತ್ತವೆ. ಈ ದಿನದಂದು ಆರೋಗ್ಯ ಸಂಸ್ಥೆಗಳು ಸೇರಿದಂತೆ ಇನ್ನಿತ್ತರ ಸಂಘ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳು ಹಾಗೂ ಅಭಿಯಾನಗಳು ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.
ಇದನ್ನೂ ಓದಿ: ಕಣ್ಣಿನ ಬಣ್ಣದಿಂದ ತಿಳಿಯುತ್ತೆ ಮನುಷ್ಯನ ನಿಗೂಢ ವ್ಯಕ್ತಿತ್ವ
*ಒತ್ತಡವನ್ನು ನಿಭಾಯಿಸಲು ಇಲ್ಲಿದೆ ಸಲಹೆಗಳು*
* ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ವೇಳಾಪಟ್ಟಿಯನ್ನು ರಚಿಸಿ, ಪ್ರಮುಖ ಕೆಲಸಗಳಿಗೆ ಆದ್ಯತೆ ನೀಡಿ.
* ನಿಮ್ಮ ದೇಹ ಮತ್ತು ಮನಸ್ಸು ಒತ್ತಡದಿಂದ ಚೇತರಿಸಿಕೊಳ್ಳುವಂತೆ ಮಾಡಲು ರಾತ್ರಿ 7-9 ಗಂಟೆಗಳ ಕಾಲ ನಿದ್ದೆ ಮಾಡಿ.
* ಧ್ಯಾನ, ಆಳವಾದ ಉಸಿರಾಟ ಮತ್ತು ಯೋಗವು ಮನಸ್ಸನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ.
* ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ. ಬದಲಿಗೆ ನೀರು, ಗಿಡಮೂಲಿಕೆ ಚಹಾ ಸೇರಿದಂತೆ ಆರೋಗ್ಯಕರ ಪಾನೀಯಗಳನ್ನು ಸೇವಿಸಿ.
* ಹಣ್ಣುಗಳು, ತರಕಾರಿಗಳು ಹಾಗೂ ಪ್ರೋಟೀನ್ಯುಕ್ತ ಸಮತೋಲಿತ ಆಹಾರವು ಆರೋಗ್ಯವನ್ನು ಕಾಪಾಡುವುದಲ್ಲದೇ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ