Shantadevi Kanavi Death Anniversary : ಹೇಮಾ ಪಟ್ಟಣಶೆಟ್ಟಿ ಕಂಡ ‘ಗೃಹಸ್ವಾಮಿನಿ ಶಾಂತಾದೇವಿ’

Shantadevi Kanavi Death Anniversary : ಹೇಮಾ ಪಟ್ಟಣಶೆಟ್ಟಿ ಕಂಡ ‘ಗೃಹಸ್ವಾಮಿನಿ ಶಾಂತಾದೇವಿ’
ಲೇಖಕಿಯರಾದ ಶಾಂತಾದೇವಿ ಕಣವಿ ಮತ್ತು ಹೇಮಾ ಪಟ್ಟಣಶೆಟ್ಟಿ

Interview of Shantadevi Kanavi : ಲೇಖಕಿ ಶಾಂತಾದೇವಿ ಕಣವಿ ಅವರನ್ನು ಲೇಖಕಿ ಹೇಮಾ ಪಟ್ಟಣಶೆಟ್ಟಿ 1993 ರಲ್ಲಿ ಧಾರವಾಡದಲ್ಲಿ ಮೊಟ್ಟಮೊದಲ ಬಾರಿಗೆ ಸಂದರ್ಶಿಸಿದ್ದರು. ಅದಿಲ್ಲಿ ನಿಮ್ಮ ಓದಿಗೆ.  

ಶ್ರೀದೇವಿ ಕಳಸದ | Shridevi Kalasad

|

May 22, 2022 | 11:47 AM

ನಿಮ್ಮ ನೆನಪು ಸದಾ | Nimma Nenpu Sada : ಶಾಂತಾದೇವಿ ಕಣವಿ (Shantadevi Kanavi) ಹುಟ್ಟಿದ್ದು 12.1.1933, ವಿಜಾಪುರದಲ್ಲಿ. ತಂದೆ ಪುಸ್ತಕದ ಪೂಜಾರಿಯಾದ ಸಿದ್ಧಬಸಪ್ಪ ಗಿಡ್ನವರ, ತಾಯಿ ಅಪ್ಪಟ ಗೃಹಿಣಿ, ವಾತ್ಸಲ್ಯಮಯಿ ಭಾಗೀರಥಿ. ಶಾಂತಾ ಅಕ್ಷರ ಅರಿತಾಗಿನಿಂದಲೂ ಓದುವ ಹವ್ಯಾಸವನ್ನು ಬೆಳೆಸಿಕೊಂಡಳು. ತಂದೆಯ ಗ್ರಂಥಭಂಡಾರದಲ್ಲಿಯ ಕನ್ನಡ, ಇಂಗ್ಲಿಷ್ ಪುಸ್ತಕಗಳನ್ನು ತುಂಬ ಆಸ್ಥೆಯಿಂದ, ತಲ್ಲೀನಳಾಗಿ ಓದಿದ ಪರಿಣಾಮವಾಗಿ ಅವಳಲ್ಲಿ ಕತೆಗಾರ್ತಿಯೊಬ್ಬಳು ಮೊಳೆತಳು. ಕವಿ ಚೆನ್ನವೀರ ಕಣವಿಯವರನ್ನು ವರಿಸಿದ ನಂತರ ಆ ಕತೆಗಾರ್ತಿ ಚಿಗುರಿ ಸುಪುಷ್ಟವಾಗಿ ಬೆಳೆದಳು. ಸೂರ್ಯಪಾನ ಹೂವಿನಂಥ ದುಂಡು ಮುಖದಲ್ಲಿ ಸದಾ ಮಂದಸ್ಮಿತ ಕಾಂತಿ, ಮಿನುಗುವ ಕಂಗಳು, ಸ್ವಾಭಿಮಾನ, ಆತ್ಮ ನಿರ್ಭರತೆ. ಅವರದು ಹಿತಮಿತ, ಸ್ಪಷ್ಟ ಮೆಲುಮಾತು. ಸೀದಾಸಾದಾ ವೇಷಭೂಷಣಗಳು. ಬೆಳಗಿನಿಂದ ರಾತ್ರಿ ವರೆಗೆ ಸತತ ಮನೆಗೆಲಸ, ಗಂಡ- ಮಕ್ಕಳೈವರ ತುಂಬು ಸಂಸಾರದ ಸೇವಾ-ಜವಾಬ್ದಾರಿ; ಮನೆಯ ಒಪ್ಪ ಓರಣ; ಕಸೂತಿ ಸ್ವೇಟರ್ ಹೆಣಿಕೆಯಂಥ ಕರಕುಶಲ ಹವ್ಯಾಸ; ಅತಿಥಿ-ಅಭ್ಯಾಗತರಿಗೂ ಅಕ್ಷತ ನಲ್ಮೆಯ ಆತಿಥ್ಯ- ಹೀಗೆ ಪ್ರತಿ ಕ್ಷಣವನ್ನೂ ಜೀವಿಸಿದ ಶಾಂತಾದೇವಿಯವರ ಕ್ರಿಯಾಶೀಲತೆ ಅಚ್ಚರಿ ಹುಟ್ಟಿಸುವಂಥದು.

17.2.1993 ರಲ್ಲಿ ಲೇಖಕಿ ಶಾಂತಾದೇವಿ ಕಣವಿ ಅವರನ್ನು ಮೊಟ್ಟಮೊದಲ ಬಾರಿಗೆ ಲೇಖಕಿ ಹೇಮಾ ಪಟ್ಟಣಶೆಟ್ಟಿ ಸಂದರ್ಶಿಸಿದ್ದರು. ಇದು ಸದ್ಯದಲ್ಲೇ ಪ್ರಕಟಗೊಳ್ಳಲಿರುವ ಹೇಮಾ ಅವರ ‘ಅಕ್ಕರದ ಸುಯಿಧಾನ’ ಕೃತಿಯಲ್ಲಿ ಅಡಕವಾಗಿದೆ. 

*

(ಭಾಗ 1)

ಶಾಂತಕ್ಕ, ಕನ್ನಡದ ಕತೆಗಾರ್ತಿಯರಲ್ಲಿ ಮರೆಯಲಾಗದ, ಮರೆಯಬಾರದ ಹೆಸರ ನಿಮ್ಮದು. ನಿಮ್ಮಲ್ಲಿ ಸಾಹಿತ್ಯಾಸಕ್ತಿ ಹುಟ್ಟಿಕೊಂಡದ್ದು ಹೇಗೆ?

ನನ್ನ ತಂದೆ ಸಿದ್ದಬಸಪ್ಪ ಗಿಡ್ನವರ ರೆವೆನ್ಯೂ ಡಿಪಾರ್ಟಮೆಂಟಿನಲ್ಲಿ ಕೆಲಸ ಮಾಡತಿದ್ದರು. ಅವರು ಓದಿದ್ದು ಇಂಗ್ಲಿಷ್ ಬಿ.ಎ. ಸಾಹಿತ್ಯದ ಅಭಿರುಚಿ ಭಾಳ ಇತ್ತು ಅವರಿಗೆ. ಸತತ ಪುಸ್ತಕ ಮತ್ತು ಪತ್ರಿಕೆಗಳನ್ನು ಕೊಳ್ಳುತಿದ್ದರು. ಅವುಗಳಿಗೆ ಕವರ್ ಹಾಕಿ ಕಾಳಜಿಯಿಂದ ಎತ್ತಿ ಇಡುತಿದ್ದರು. ಅದು ಒಂದು ದೊಡ್ಡ ಗ್ರಂಥಭಂಡಾರನಽ ಆಗಿತ್ತು. ನಮ್ಮ ತಾಯಿಗೂ ಓದುವ ಚಟ ಇತ್ತು. ಬರೆ ಮುಲ್ಕಿ ಕಲಿತಿದ್ದರೂ ಅಕಿಗೆ ಮರಾಠಿ, ಹಿಂದಿ, ಇಂಗ್ಲಿಷ್ ಬರತಿದ್ದುವು. ಅಲ್ಲದ ನಮ್ಮ ಮನೆಗೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮರಂಥ ಪ್ರಮುಖ ಸಾಹಿತಿಗಳು ಬರ್ತಿದ್ದರು. ಮನೆಯ ವಾತಾವರಣ ಸಾಹಿತ್ಯಮಯ ಆಗಿದ್ದರಿಂದ ಅಯಾಚಿತವಾಗಿ ನನಗೂ ಸಾಹಿತ್ಯದಲ್ಲಿ ಆಸಕ್ತಿ ಮೂಡಿತು. ಓದುವುದು, ಓದುವುದು… ಹುಚ್ಚು ಹತ್ತಿದಂತೆ ಓದತಿದ್ದೆ. ಹೆಚ್ಚೂ ಕಡಿಮೆ ಅಪ್ಪನ ಗ್ರಂಥಾಲಯದ ಎಲ್ಲ ಪುಸ್ತಕ ಓದಿದೆ. ಇದು ಮುಂದೆ ನನ್ನ ಬರವಣಿಗೆಗೂ ತಳಪಾಯ ಆಯ್ತು. ನನ್ನ ಮ್ಯಾಟ್ರಿಕ್ಯುಲೇಶನ್ ಮುಗೀತು. ಹಿಂದೀ ರಾಷ್ಟ್ರಭಾಷಾ, ಪ್ರವೇಶಿಕಾ ಮಾಡಿಕೊಂಡೆ. ಕನ್ನಡ, ಇಂಗ್ಲಿಷ್ ಜೋಡಿ ಹಿಂದೀ ಸಾಹಿತ್ಯನೂ ಓದಲಿಕ್ಕೆ ಸುರು ಮಾಡಿದೆ. ಓದುವುದರಿಂದ ನನಗ ಸಮಾಧಾನ ಅನಸ್ತಿತ್ತು. ಈಗಲೂ…

ಮತ್ತ ಬರವಣಿಗೆ? ಕತೆ ಬರೆಯುವುದು ಯಾವಾಗ ಸುರು ಮಾಡಿದಿರಿ? ನಿಮ್ಮ ಮೊದಲ ಕತೆ ಯಾವುದು?

ಹೂಂ, ಹಂಗ ಸಣ್ಣಗ ನಾನು ಹೈಸ್ಕೂಲಿನೊಳಗ ಇದ್ದಾಗಽ ಸುರುವಾತು. ನಮ್ಮ ಮನೆಗೆ ದೊಡ್ಡಭಾವೆಪ್ಪ ಮೂಗಿ ಅಂತ ಒಬ್ಬರು ಸಂಶೋಧಕರು ಬರ್‍ತಿದ್ದರು. ಒಮ್ಮೆ ಅವರು ಬಂದಾಗ, ಒಂದು ಐತಿಹಾಸಿಕ ಪ್ರಸಂಗವನ್ನು ಹೇಳಿದರು- ಒಬ್ಬ ಮುಸ್ಲಿಂ ರಾಜ ನರ್ತಕಿಯೊಬ್ಬಳನ್ನು ಪ್ರೀತಿಸಿದ್ದು… ಕೊನೆಗೆ ಅಂವ ರಾಜ್ಯ ತ್ಯಾಗ ಮಾಡ್ತಾನ. ಇದನ್ನ ಕೇಳಿದ ಮ್ಯಾಲೆ ನಾನು ಮತ್ತ ಶಾಂತಕ್ಕ ಇಬ್ಬರೂ ಆ ವಸ್ತು ಇಟಗೊಂಡು ಕತೆ ಬರೀಬೇಕಂತ ನಿರ್ಧಾರ ಮಾಡಿದಿವಿ. ಶಾಂತಕ್ಕ ಅಂದರ, ಮಾಳವಾಡ ಶಾಂತಕ್ಕ… ಅಕೀ, ನಾನೂ ಅಕ್ಕತಂಗಿಯರ ಮಕ್ಕಳು. ಆಗ ನಾನು ಬೈಲಹೊಂಗಲದಲ್ಲಿದ್ದೆ. ಹೈಸ್ಕೂಲ್ 9ನೆತ್ತಾ ಮುಗಿದಿತ್ತು 1948ರೊಳಗ. ಆ ಕತೀಗೆ ರಂಜನಿ ಮಹಲ್ ಅಂತ ಹೆಸರ ಕೊಟ್ಟಿದ್ದೆ.

ಎಲ್ಲಿ ಪ್ರಕಟ ಆತ್ರೀ ಅದು?

ಎಲ್ಲೀದು… ಆಗ ನಾನು ಬರೆದದ್ದನ್ನು ಯಾರಿಗೂ ತೋರಸ್ತಿರಲಿಲ್ಲ. ಸಂಕೋಚದ ಪ್ರಕೃತಿ ನನ್ನದು. ಕಣವಿಯವರನ್ನು ಮದುವೆಯಾಗಿ ಬಂದ ಮೇಲೆ ಸಹಿತ ನಾನು ಬರದದ್ದನ್ನು ಆಗ ಕೂಡಲೆ ಅವರಿಗೆ ತೋರಿಸಲಿಲ್ಲ. ಹೆಂಗ ಪ್ರತಿಕ್ರ್ರಿಯಿಸ್ತಾರೋ ಅಂತ ಆತಂಕ ಇರತಿತ್ತು. ಮೊದಲ ಮಗ ಹುಟ್ಟಿದ ಮೇಲೆ ಒಮ್ಮೆ ತೋರಿಸಿದೆ. ಓದಿ ಅವರು, ಬರೀತಾ ಇರ್ರಿ, ನೀವು ಇನ್ನೂ ಛುಲೋ ಬರೀಬಹುದು. ಅಂದರು. ತಪ್ಪು ತೋರಿಸಲಿಲ್ಲ, ತಿದ್ದಲಿಲ್ಲ…

ಅಂದರ ನಿಮ್ಮ ಕತೆ ಓದಿ ಕಣವಿ ಅವರು ಆ ಬಗ್ಗೆ ನಿಮ್ಮ ಜೋಡಿ ಚರ್ಚೆ ಮಾಡೂದುಲ್ಲಽ? ಸಣ್ಣ ಪುಟ್ಟ ಸಲಹೆ ಇತ್ಯಾದಿ…?

ಭಾಳ ಕಡಿಮಿ. ಹಂಗ ಅವರು ವಿಮರ್ಶೆ ಮಾಡದೆ ಬರವಣಿಗೆಗೆ ಪ್ರೋತ್ಸಾಹ ನೀಡಿದ್ದೇ ಒಳ್ಳೆಯದಾಯ್ತು. ಇಲ್ಲದಿದ್ದರೆ ನಾನು ಮೊದಲಽ ಇಂಟ್ರಾವರ್ಟ್. ಟೀಕೆ ಟಿಪ್ಪಣಿಯಿಂದ ಏನಾಗ್ತಿತ್ತೋ… ಆದರ ನನ್ನ ಕತೆಗಳಿಗೆ ಹೆಸರು, ಶೀರ್ಷಿಕೆ ಕೊಡುವಾಗ ಅವರ ಸಹಕಾರ ಇದ್ದಽ ಇರ್‍ತದ… ನಮ್ಮ ಮಕ್ಕಳಿಗೆ ಚೆಂದನ್ನ ಹೆಸರು ಆರಿಸಿ ಇಟ್ಟಂಗ… (ಸಂತಸ, ಹೆಮ್ಮೆ ಮಿಶ್ರಿತ ನಗು)

ನಿಮ್ಮ ಯಾವ ಕತೆ ಮೊದಲು ಪ್ರಕಟ ಆಯಿತು?

ಮಂಜು ಕರಗಿತು ಅನ್ನುವ ಕತೆ. ಅದನ್ನು ನಾನು 1954ರೊಳಗ ಬರೆದಿದ್ದೆ. 1959ರೊಳಗ ಜಿ. ಬಿ. ಜೋಶಿಯವರ ಮನೋಹರ ಗ್ರಂಥಮಾಲಾದ ಬೆಳ್ಳಿ ಹಬ್ಬದ ಸಂದರ್ಭದೊಳಗ ಕೀರ್ತಿನಾಥ ಕುರ್ತಕೋಟಿಯವರು ನಡೆದು ಬಂದ ದಾರಿ ಸ್ಮರಣ ಸಂಪುಟಕ್ಕೆ ನನ್ನ ಒಂದು ಕತೆ ಕೇಳಿದರು. ನಾನು ಮಂಜು ಕರಗಿತು ಕತೆಯನ್ನು ತಿದ್ದಿ ಬರೆದುಕೊಟ್ಟೆ. ಅದು ನನ್ನ ಫೋಟೋದ ಜೊತೆಗೆ ಪ್ರಕಟ ಆಯಿತು. ಹೆಸರಾಂತ ಸಾಹಿತಿಗಳೊಂದಿಗೆ ನನ್ನ ಕತೆ ಪ್ರಕಟ ಆಗಿದ್ದು ನನಗ ಭಾಳ ಸಂತೋಷ ಆಯಿತು. ಮುಂದೆ ಅದೇ ಕತೆ ಡಾ. ನಾಗಪ್ಪ ಅವರಿಂದ ಹಿಂದಿಗೆ ಅನುವಾದಗೊಂಡು ಕಲಕತ್ತಾ ಪತ್ರಿಕೆಯೊಂದರಲ್ಲಿ ಪ್ರಕಟ ಆಯ್ತು. ಅದನ್ನು ನೋಡಿದ ಲೇಖಕಿಯೊಬ್ಬರು ತಾವು ಕನ್ನಡಕ್ಕೆ ಅನುವಾದಿಸಲು ನನ್ನ ಅನುಮತಿ ಕೇಳಿದ್ದೂ… ಒಂದು ಕತೆನೇ… (ಮೆಲು ನಗು)

ಅದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಿರಬೇಕು. ಅದೆಲ್ಲ ಎಂತಹ ಪ್ರೋತ್ಸಾಹದಾಯಕ ಸಂಗತಿ ಅಲ್ಲರೀ?

ಹೌದು. ಹಂಗ ನನ್ನ ಬರವಣಿಗೆಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದ್ದು ಪತ್ರಿಕೆಗಳಿಂದ. ಸುಧಾ, ಮಯೂರ, ಕರ್ಮವೀರ, ಕಸ್ತೂರಿ, ತರಂಗ, ತುಷಾರ, ಉತ್ಥಾನ… ಅಲ್ಲದೆ ಯುಗಾದಿ, ದೀಪಾವಳಿ ಸಂಚಿಕೆಗಳಲ್ಲೂ ನನ್ನ ಕತೆಗಳು ಬಂದವು. ಆಗ ಪ್ರಕಟ ಆಗತಿದ್ದ ಕನ್ನಡದ ಪತ್ರಿಕೆಗಳ ಸಂಪಾದಕರನ್ನು ನಾನು ಸ್ಮರಿಸಬೇಕು. ಅವರು ಕೇಳಿದರು ಅಂತ ನಾನು ಕತೆ ಬರೆದು ಕಳಿಸಿದೆ. ಅವರ ಕೋರಿಕೆನೇ ನನಗೆ ಒಂದು ದೊಡ್ಡ ಪ್ರೇರಣೆ. ನಾನಾಗಿನೆ ಎಲ್ಲಿಯೂ ಪ್ರಕಟಣೆಗೆ ಕಳಿಸಲೇ ಇಲ್ಲ.

ಇದನ್ನೂ ಓದಿ : Chennaveera Kanavi Death: ಕಣವಿಯವರ ಅಪ್ಪ ಸಕ್ಕರೆಪ್ಪ ಇಷ್ಟಲಿಂಗ ಪೂಜಿಸಿದರೂ, ದೇವಸ್ಥಾನಕ್ಕೆ ಮಾತ್ರ ಹೋಗುತ್ತಿರಲಿಲ್ಲ

ಹಂಗ ಯಾರದೋ ಕೋರಿಕೆಯ ಮೇರೆಗೆ ಕತೆ ಬರಿಯೂದು ಹೆಂಗ ಸಾಧ್ಯ ಶಾಂತಕ್ಕ… ಅದಕ್ಕೆ ಪೂರ್ವ ಸಿದ್ಧತೆ ಬೇಕಾಗ್ತದ. ಆ ತಯಾರಿ ಹೆಂಗ ಮಾಡಿಕೊಂಡಿರಿ ನೀವು?

ನೀವು ಹೇಳೂದೂ ಖರೆ ಅದ… ಮದುವೆ ಆದ ಮೇಲೆ ನಾನು ಧಾರವಾಡಕ್ಕೆ ಬಂದೆ. ಇಲ್ಲಿಯ ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣದೊಳಗ ಖ್ಯಾತ ಸಾಹಿತಿಗಳು, ಸಂಗೀತಗಾರರು, ಕಲಾವಿದರ ನೇರ ಸಂಪರ್ಕ ದೊರೆಯಿತು. ಕಣವಿಯವರು ಕವಿಯಾಗಿ ಹೆಸರು ಮಾಡಿದ್ದರು. ಮನೆ ಒಳಗೂ ಹೊರಗೂ ಸಾಹಿತ್ಯದ್ದಽ ಉಸಿರಾಟ. ಅದರಿಂದ ಓದಿನ ನನ್ನ ಅಭಿರುಚಿಗೆ ಟಾನಿಕ್ ಸಿಕ್ಕಂಗಾತು. ಅದರೊಂದಿಗೆ ನಾನೂ ಬರೀಬೇಕು ಅನ್ನುವ ಹಂಬಲ ಹುಟ್ಟಿಕೊಂಡಿತು. ಅದು ಕತೆಯ ಕಡೆಗೇ ವಾಲಿತು. ನನ್ನ ಸುತ್ತ ಮುತ್ತಲ ನಡೆದ ಘಟನೆಗಳನ್ನು, ವಿದ್ಯಮಾನಗಳನ್ನು ಕಂಡು ನನಗೆ ಅನಿಸಿದ್ದನ್ನು, ಹೊಳೆದದ್ದನ್ನು ಕತೆ ಮಾಡಿ ಬರೆದಿಡತಿದ್ದೆ. ನಂತರ ನಾನು ಕಂಡುಂಡದ್ದಕ್ಕೆ ಕಲ್ಪನೆ ಮೇಳವಿಸಿ ಕತೆ ರೂಪ ನೀಡತೊಡಗಿದೆ. ಕೈ ಪಳಗಿತು, ತಂತ್ರ, ಶೈಲಿ, ಭಾಷೆಗಳ ಕಡೆಗೆ ಗಮನ ಹರಿಸಿದೆ.

ತಂತ್ರ ಅಂದಿರಿ… ನಿಮ್ಮ ಕತೆಗಳಲ್ಲಿ ಕತೆಯ ವಿನ್ಯಾಸದೊಂದಿಗೆ ತಂತ್ರ ಹುಟ್ಟಿಕೊಳ್ಳತದನೋ ಅಥವಾ ಈ ವಸ್ತುವಿಗೆ ಇದೇ ತಂತ್ರ ಬಳಸಬೇಕು ಅಂತ ನೀವು ಮೊದಲೇ ಯೋಜಿಸಿರ್‍ತೀರೋ?

ಇಲ್ಲ, ಆ ಥರಾ ಏನಿಲ್ಲ. ನನಗೆ ವಸ್ತು-ವಿಷಯ ಮುಖ್ಯ. ಅದನ್ನು ಸರಳವಾಗಿ ಚಿತ್ರಿಸುತ್ತ, ನನ್ನ ಆಲೋಚನೆಗಳನ್ನು ಅದರಲ್ಲಿ ಬಿಂಬಿಸುತ್ತ ಹೋಗತೇನೆ. ಆರಂಭದಲ್ಲಿ ಸರಳರೇಖೆಯ ನಿರೂಪಣೆ ಇರ್‍ತಿತ್ತು. ಕ್ರಮೇಣ ಹಿಡಿತ ಸಿಕ್ಕು ಫ್ಲ್ಯಾಶ್‌ಬ್ಯಾಕ್ ನಿರೂಪಣೆಯನ್ನು ತಂತ್ರವಾಗಿ ಬಳಸಿಕೊಂಡೆ. ಬರೀತ ಬರೀತ ನನ್ನದೇ ಒಂದು ಶೈಲಿ ಮೂಡಿ ಬಂತು. ಉತ್ತರ ಕರ್ನಾಟಕದ ಜವಾರಿ ಆಡುಮಾತಿನ ಸಂಭಾಷಣೆ ವಿಶಿಷ್ಟವಾಗಿ ಕತೆಗೆ ಮೆರಗು ಕೊಟ್ಟಿತು. ಅದೂ ಒಂದು ತಂತ್ರದ ಅನುಭವ ನೀಡ್ತದೆ.

ಅದು ಅಲ್ಲದ ಶಾಂತಕ್ಕ, ನನಗ ಅನಸ್ತದ, ಬದುಕಿನ ವೈರುಧ್ಯಗಳನ್ನು ಎತ್ತಿ ತೋರುವುದರ ಕಡೆಗೆ ನಿಮಗೆ ಒಲವು ಅದ. ಹೆಣ್ಣು-ಗಂಡು. ಸತ್ಯ-ಮಿಥ್ಯೆ, ಒಳ್ಳೆಯದು-ಕೆಟ್ಟದ್ದು, ಸಹನೆ-ಅಸಹನೆ, ಪ್ರೀತಿ-ದ್ವೇಷ ಇರಬಹುದು… ಮತ್ತೆ ನೀವು ಎರಡು ವಿಭಿನ್ನ ವರ್ಗಗಳ ಸಂಸಾರಗಳನ್ನೂ ಜಕ್ಸ್ಟಾಪೋಜ್ ಅಂದರೆ, ಎದುರು ಬದುರು ತಂದ ನಿಲ್ಲಸತೀರಿ. ಅದೂ ಒಂದು ಸುಪುಷ್ಟ ತಂತ್ರನಽ ಅನಸ್ತದ.

ಹೌದು ಹೌದು. ನೀವು ಸರಿಯಾಗಿ ಹೇಳಿದಿರಿ.

ಇದನ್ನ ಓದಿ : Chennaveera Kanavi Death: ಲಂಬಾಣಿ ಭಾಷೆ, ಕುಣಿತದ ಮೋಡಿಗೆ ಒಳಗಾಗಿದ್ದ ಕವಿ ಕಣವಿ ಮನಸ್ಸು

ನೀವು ಇಂಟ್ರಾವರ್ಟ್ ಅಂತ ಇದೇ ಈಗ ಹೇಳಿದಿರಿ. ಅದಕ್ಕ ಒಂದು ಪ್ರಶ್ನೆ- ನವ್ಯರು ಅಂತರ್ಮುಖತೆಗೆ ಒತ್ತು ಕೊಟ್ಟು ಪ್ರಜ್ಞಾಪ್ರವಾಹ ತಂತ್ರದಲ್ಲಿ ವ್ಯಕ್ತಿಗತ ನೆಲೆಯನ್ನೆ ಕೇಂದ್ರವಾಗಿಸಿ ಕತೆ ಬರೆದರು. ನೀವು ಆ ಪ್ರಯತ್ನ ಮಾಡಲಿಲ್ಲೇನು?

ಇಡೀ ಕತೆಯನ್ನು ಆತ್ಮತಲ್ಲೀನತೆಯಲ್ಲಿ ಬರೀಬೇಕು ಅಂತ ನನಗ ಅನಸಲಿಲ್ಲ. ಅಲ್ಲಲ್ಲೆ ಪಾತ್ರಗಳ ಅನಿಸಿಕೆ, ಅಭಿಪ್ರಾಯ, ಮಾನಸಿಕ ತೊಳಲಾಟಗಳ ಅಭಿವ್ಯಕ್ತಿಯೊಳಗ ಅಂತರ್ಮುಖತೆ ಬಂದೇ ಬರ್‍ತದ.

ಸಾಮಾನ್ಯವಾಗಿ ಕವಿತೆಯಿಂದ ಬರವಣಿಗೆ ಸುರು ಮಾಡುವುದೇ ಹೆಚ್ಚಾಗಿ ಕಂಡುಬರ್‍ತದೆ. ನೀವು ಕಾವ್ಯ ಪ್ರಕಾರದ ಅಭಿವ್ಯಕ್ತಿಗೆ ಪ್ರಯತ್ನ ಮಾಡಲಿಲ್ಲೇನು?

ಇಲ್ಲ. ನಾನು ಭಾವಜೀವಿ ಅಲ್ಲ. ವಾಸ್ತವವಾದಿ ನಾನು. ನನ್ನ ಸ್ವಭಾವಕ್ಕೆ ಕತೆನೇ ಸೂಕ್ತ ಅನ್ನಿಸಿತು. ನಾನು ಕಾದಂಬರಿ ಪ್ರಕಾರವನ್ನೂ ಪ್ರಯತ್ನಿಸಲಿಲ್ಲ. ಅದಕ್ಕೆ ಬೇಕಾಗುವ ಸಮಯ, ವ್ಯವಧಾನ, ಏಕಾಗ್ರತೆ ನನಗೆ ಸಾಧ್ಯ ಇಲ್ಲ.

ನೀವು ಹರಟೆನೂ ಬರೆದೀರಿ…

ಹೌದು, ಅವನ್ನು ಆಕಾಶವಾಣಿಗಾಗಿ ಬರೆದೆ. ಅವರಿಗೆ ಕತೆ ಅಲ್ಲದೆ ರೂಪಕ, ಚಿಕ್ಕಚಿಕ್ಕ ನಾಟಕ, ಹಾಸ್ಯ ಲೇಖನ, ಹರಟೆಗಳನ್ನೂ ಬರೆದು ಕೊಟ್ಟೆ.

ಕತೆಗೆ ಮೂಲದ್ರವ್ಯ ವಸ್ತು. ಅದನ್ನು ನೀವು ಹೇಗೆ ಆಯ್ಕೆ ಮಾಡಿಕೊಳತೀರಿ?

ನಮ್ಮ ಸುತ್ತ ಮುತ್ತಲಿನ ನೈಜ ಘಟನೆ, ಪ್ರಸಂಗಗಳೇ ನನ್ನ ಕತೆಗೆ ವಸ್ತುವಾಗತಾವ. ಸಣ್ಣ ಪುಟ್ಟ ಸಂಗತಿಗಳನ್ನೂ ನಾನು ಕಣ್ಣು, ಕಿವಿ ತೆರೆದು ನೋಡ್ತೇನೆ. ವ್ಯಕ್ತಿಗಳ ಸ್ವಭಾವದ ಅರಿವಾಗ್ತದ. ಕಪಟ, ಮೋಸಗಳೂ ಕಾಣಸ್ತಾವ. ಮುಖವಾಡಗಳ ಹಿಂದಿನ ವ್ಯಕ್ತಿತ್ವನೂ ಕಣ್ಣಿಗೆ ಬೀಳ್ತಾವ.

(ಭಾಗ 2 ಓದಲು ಇಲ್ಲಿ ಕ್ಲಿಕ್ ಮಾಡಿ)

ಇದನ್ನೂ ಓದಿ

ಪ್ರತಿಕ್ರಿಯೆಗಾಗಿ : tv9kannadadigital@gmail.com 

Follow us on

Most Read Stories

Click on your DTH Provider to Add TV9 Kannada