AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರುಣಾಚಲ ಪ್ರದೇಶದ ಗಡಿಯಲ್ಲಿ ಅಸ್ಸಾಂ ರೈಫಲ್ಸ್ ಮೇಲೆ ಉಗ್ರರ ಹೊಂಚು ದಾಳಿ: ಓರ್ವ ಯೋಧ ಹುತಾತ್ಮ, ನಾಲ್ವರಿಗೆ ಗಾಯ

ಅರುಣಾಚಲ ಪ್ರದೇಶದ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ಶಂಕಿತ ಉಗ್ರರು ಹೊಂಚು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಯೋಧ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. NSCN (K-YA) ಸಂಘಟನೆಯ ಕೈವಾಡ ಶಂಕಿಸಲಾಗಿದೆ. ಗಡಿ ಬೇಲಿ ನಿರ್ಮಾಣ ಕಾರ್ಯವನ್ನು ತಡೆಯುವ ಪ್ರಯತ್ನವಾಗಿ ಈ ಕೃತ್ಯ ನಡೆದಿದೆ. ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಅರುಣಾಚಲ ಪ್ರದೇಶದ ಗಡಿಯಲ್ಲಿ ಅಸ್ಸಾಂ ರೈಫಲ್ಸ್ ಮೇಲೆ ಉಗ್ರರ ಹೊಂಚು ದಾಳಿ: ಓರ್ವ ಯೋಧ ಹುತಾತ್ಮ, ನಾಲ್ವರಿಗೆ ಗಾಯ
ಸೈನಿಕರುImage Credit source: Manipur Daily
ನಯನಾ ರಾಜೀವ್
|

Updated on: Sep 29, 2026 | 3:03 PM

Share

ಇಟಾನಗರ, ಸೆಪ್ಟೆಂಬರ್ 29: ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಭಾರತ-ಮ್ಯಾನ್ಮಾರ್ ಅಂತಾರಾಷ್ಟ್ರೀಯ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಅಸ್ಸಾಂ ರೈಫಲ್ಸ್ ಪಡೆಯ ಮೇಲೆ ಶಂಕಿತ ಉಗ್ರರು ಅನಿರೀಕ್ಷಿತ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಓರ್ವ ಯೋಧ ಹುತಾತ್ಮರಾಗಿದ್ದು, ಇತರ ನಾಲ್ವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಂಗ್ಲಾಂಗ್ ಜಿಲ್ಲೆಯ ನಾಂಪೊಂಗ್ ವೃತ್ತದ ವ್ಯಾಪ್ತಿಯಲ್ಲಿ ಬರುವ ನಾಂಪೊಂಗ್ ನಲ್ಲಾ ಬಳಿ ಮಂಗಳವಾರ ಮುಂಜಾನೆ 6.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಭದ್ರತಾ ಬೇಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸೂಕ್ಷ್ಮ ಪ್ರದೇಶದಲ್ಲಿ 21ನೇ ಅಸ್ಸಾಂ ರೈಫಲ್ಸ್‌ನ ಯೋಧರು ಗಸ್ತು ತಿರುಗುತ್ತಿದ್ದರು.

ಪೊದೆಗಳಲ್ಲಿ ಹೊಂಚು ಹಾಕಿ ಕುಳಿತಿದ್ದ ಉಗ್ರರು ಏಕಾಏಕಿ ಯೋಧರ ತಂಡದ ಮೇಲೆ ಭಾರಿ ಪ್ರಮಾಣದ ಗುಂಡಿನ ಮಳೆಗರೆದರು. ಈ ಹಠಾತ್ ದಾಳಿಯಲ್ಲಿ ಹವಾಲ್ದಾರ್ ಜಂಖೋಕೈ ಕುಕಿ (42) ಅವರು ತೀವ್ರ ಗುಂಡೇಟಿನಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಗಾಯಗೊಂಡ ನಾಲ್ವರು ಯೋಧರಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಿಲಿಟರಿ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ.

ದಾಳಿಯ ಬೆನ್ನಲ್ಲೇ ಭದ್ರತಾ ಪಡೆಗಳು ಇಡೀ ದಟ್ಟ ಅರಣ್ಯ ಪ್ರದೇಶವನ್ನು ಸುತ್ತುವರಿದು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ. ದಾಳಿಯ ಹಿಂದೆ ಪ್ರತ್ಯೇಕತಾವಾದಿ ನಾಗಾ ಬಂಡಾಯ ಸಂಘಟನೆಯಾದ NSCN (K-YA) ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಅರುಣಾಚಲ ಪ್ರದೇಶದ ಚಾಂಗ್ಲಾಂಗ್, ತಿರಾಪ್ ಮತ್ತು ಲಾಂಗ್ಡಿಂಗ್ ಜಿಲ್ಲೆಗಳು ಮ್ಯಾನ್ಮಾರ್ ಗಡಿಯೊಂದಿಗೆ ದಟ್ಟ ಅರಣ್ಯ ಮತ್ತು ಕಡಿದಾದ ಪರ್ವತ ಶ್ರೇಣಿಗಳನ್ನು ಹಂಚಿಕೊಂಡಿವೆ. ಈ ಪ್ರದೇಶವನ್ನು ಈಶಾನ್ಯ ಭಾರತದ ವಿವಿಧ ನಿಷೇಧಿತ ಉಗ್ರ ಸಂಘಟನೆಗಳು ಭಾರತೀಯ ಸೇನೆ ಮೇಲೆ ದಾಳಿ ನಡೆಸಿ ಮ್ಯಾನ್ಮಾರ್‌ನ ಸುರಕ್ಷಿತ ನೆಲೆಗಳಿಗೆ ತಪ್ಪಿಸಿಕೊಳ್ಳುವ ಕಾರಿಡಾರ್ ಆಗಿ ಬಳಸಿಕೊಳ್ಳುತ್ತಿವೆ.

ಭಾರತ-ಮ್ಯಾನ್ಮಾರ್ ಗಡಿ ಬೇಲಿ ಮತ್ತು ಮುಕ್ತ ಸಂಚಾರ ರದ್ದತಿ: ಭಾರತ ಸರ್ಕಾರವು ಮ್ಯಾನ್ಮಾರ್‌ನೊಂದಿಗೆ ಹೊಂದಿರುವ 1,643 ಕಿ.ಮೀ ಗಡಿಗೆ ಸಂಪೂರ್ಣ ಸ್ಮಾರ್ಟ್ ಬೇಲಿ ಹಾಕಲು ನಿರ್ಧರಿಸಿದೆ ಮತ್ತು ಹಿಂದಿನ ‘ಮುಕ್ತ ಸಂಚಾರ ವ್ಯವಸ್ಥೆ’ಯನ್ನು ರದ್ದುಗೊಳಿಸಿದೆ. ಗಡಿ ಬೇಲಿ ನಿರ್ಮಾಣ ಕಾಮಗಾರಿಯನ್ನು ತಡೆಯಲು ಮತ್ತು ಭದ್ರತಾ ಪಡೆಗಳ ನಿಯಂತ್ರಣವನ್ನು ಮುರಿಯಲು ಉಗ್ರ ಗುಂಪುಗಳು ಇಂತಹ ಹತಾಶ ದಾಳಿಗಳನ್ನು ನಡೆಸುತ್ತಿವೆ.

ಮತ್ತಷ್ಟು ಓದಿ:

ಮ್ಯಾನ್ಮಾರ್​ನಲ್ಲಿ ಸೋಲಿನ ಹತಾಶೆಯಲ್ಲಿ ಜನರ ಮೇಲೆ ಮಿಲಿಟರಿ ಬಾಂಬ್ ದಾಳಿ: ಅರಾಕನ್ ಸೈನ್ಯದಿಂದ ತಕ್ಕ ಪ್ರತ್ಯುತ್ತರದ ರಣಕಹಳೆ

ಮ್ಯಾನ್ಮಾರ್​ನಲ್ಲಿ ಜನರ ಮೇಲೆ ಮಿಲಿಟರಿ ಬಾಂಬ್ ದಾಳಿ

ಪಶ್ಚಿಮ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಮಿಲಿಟರಿ ಆಡಳಿತವು ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 49 ಮಂದಿ ನಾಗರಿಕರು ಸಾವನ್ನಪ್ಪಿದ್ದು, 58 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಬಲ ಜನಾಂಗೀಯ ಬಂಡಾಯ ಪಡೆಯಾದ ಅರಾಕನ್ ಸೇನೆಯ ನಿಯಂತ್ರಣದಲ್ಲಿರುವ ಕ್ಯುಕ್ತಾವ್ ಪಟ್ಟಣದ ಪ್ರಮುಖ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ.

ಸೋಮವಾರ ಮಧ್ಯಾಹ್ನ ವ್ಯಾಪಾರ-ವಹಿವಾಟು ನಡೆಯುತ್ತಿದ್ದ ಸಮಯದಲ್ಲಿ ಮಿಲಿಟರಿ ಫೈಟರ್ ಜೆಟ್ ಒಂದು ಸ್ಥಳೀಯ ಸಗಟು ಮಾರುಕಟ್ಟೆ ಪ್ರದೇಶದ ಮೇಲೆ ಎರಡು ಶಕ್ತಿಶಾಲಿ ಬಾಂಬ್‌ಗಳನ್ನು ಬೀಳಿಸಿದೆ. ಈ ದಾಳಿಯಲ್ಲಿ ತರಕಾರಿ, ದಿನಸಿ ಮಾರಾಟಗಾರರು, ಖರೀದಿಗೆ ಬಂದಿದ್ದ ಸಾರ್ವಜನಿಕರು ಮತ್ತು ದಾರಿಹೋಕರು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಗಾಯಗೊಂಡ 58 ಜನರಲ್ಲಿ ಸುಮಾರು 22 ಜನರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕವಿದೆ. ಬಾಂಬ್ ಸ್ಫೋಟದ ರಭಸಕ್ಕೆ ಹತ್ತಿರದ ಕಟ್ಟಡಗಳು ಹೊತ್ತಿ ಉರಿದಿದ್ದು, ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ ಹಾಗೂ ಸಮೀಪದ ಸೇತುವೆಗೂ ಹಾನಿಯಾಗಿದೆ.

ಮಣಿಪುರದಲ್ಲಿ ಯುಕೆಎನ್‌ಎ ವಿರುದ್ಧ ಯಶಸ್ವಿ ಕಾರ್ಯಾಚರಣೆ: ಇದಕ್ಕೂ ಮುನ್ನ ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ಹೆಂಗ್ಲೆಪ್‌ನಲ್ಲಿ ಸೇನೆ ಮತ್ತು ಅಸ್ಸಾಂ ರೈಫಲ್ಸ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಾರ್ಯಾಚರಣೆ ಅಮಾನತು ಒಪ್ಪಂದಕ್ಕೆ ಒಳಗಾಗದ UKNA ಸಂಘಟನೆಯ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಆ ಶಿಬಿರದಿಂದ ಅಪಾರ ಪ್ರಮಾಣದ ಎಕೆ-ಸರಣಿ ರೈಫಲ್‌ಗಳು, ಲ್ಯಾಥೋಡ್ ಗನ್‌ಗಳು, ಗ್ರೆನೇಡ್‌ಗಳು ಮತ್ತು ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More