ನಿತೀಶ್ ಕುಮಾರ್ ಬಿಜೆಪಿ ಜೊತೆ ಸೇರಿದರೆ ಡಿಸಿಎಂ ತೇಜಸ್ವಿ ಯಾದವ್ ಮುಂದಿರುವ ಆಯ್ಕೆಗಳೇನು?
ಬಿಹಾರ ರಾಜಕೀಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಸಿಎಂ ನಿತೀಶ್ ಕುಮಾರ್ ಎನ್‌ಡಿಎಗೆ ಮರಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜೆಡಿಯು, ಬಿಜೆಪಿ ಮತ್ತು ಆರ್‌ಜೆಡಿ ಪಾಳಯಗಳಲ್ಲಿ ಒಂದು ಸುತ್ತಿನ ಸಭೆಗಳು ನಡೆಯುತ್ತಿವೆ. ಹೀಗಿರುವಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎಗೆ ಮರಳಿದರೆ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮುಂದೆ ಯಾವ ಆಯ್ಕೆಗಳು ಉಳಿದಿವೆ ಎಂಬುದು ಪ್ರಶ್ನೆಯಾಗಿದೆ. ಆ ಕುರಿತ ವಿವರ ಇಲ್ಲಿದೆ.
ಪಟ್ನಾ, ಜನವರಿ 27: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish kumar) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮರಳುವ ಸುಳಿವು ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜೆಡಿಯು, ಬಿಜೆಪಿ ಮತ್ತು ಆರ್‌ಜೆಡಿ ಪಾಳಯಗಳಲ್ಲಿ ಸರಣಿ ಸಭೆಗಳು ನಡೆಯುತ್ತಿವೆ. ಶೀಘ್ರವೇ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎನ್ನಲಾಗಿದೆ. ಹೀಗಿರುವಾಗ ನಿತೀಶ್ ಬಿಜೆಪಿ ಜೊತೆ ಹೋದರೆ ಡಿಸಿಎಂ ತೇಜಸ್ವಿ ಯಾದವ್ (Tejashwi yadav) ಅವರ ಗತಿಯೇನು ಎಂಬ ಪ್ರಶ್ನೆ ಎದ್ದಿದೆ. ಜತೆಗೆ, ತೇಜಸ್ವಿ ಯಾದವ್ ಮುಂದೇನು ಮಾಡಬಹುದು? ಸಾಧ್ಯಾಸಾಧ್ಯತೆಗಳೇನು ಎಂಬ ವಿಚಾರವೂ ಚರ್ಚೆಯಲ್ಲಿದೆ.
ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ನಡುವೆ ಎಲ್ಲವೂ ಸರಿಯಾಗಿ ಇದ್ದಂತಿಲ್ಲ. ಶುಕ್ರವಾರ ನಡೆದ ಗಣರಾಜ್ಯೋತ್ಸವದ ಸಮಾರಂಭದಲ್ಲಿಯೂ ಇದಕ್ಕೆ ಉದಾಹರಣೆ ಕಂಡುಬಂದಿತ್ತು. ಇಬ್ಬರ ನಡುವಿನ ಅಂತರ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ಒಂದು ಸೀಟು ಖಾಲಿ ಉಳಿದಿತ್ತು. ಈ ಕಾರ್ಯಕ್ರಮದಲ್ಲಿ ಇಬ್ಬರೂ ಏನೂ ಮಾತನಾಡಿರಲಿಲ್ಲ.
ತೇಜಸ್ವಿ, ವರ್ಚಸ್ವಿ!
ಸದ್ಯದ ಬಿಹಾರದ ಪರಿಸ್ಥಿತಿಯನ್ನು ನೋಡಿದರೆ, ಇಡೀ ರಾಜ್ಯದಲ್ಲಿ ನಿತೀಶ್‌ಗಿಂತ ತೇಜಸ್ವಿ ಅವರ ವರ್ಚಸ್ಸು ಉತ್ತಮವಾಗಿದೆ. 2020 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತೇಜಸ್ವಿ ಅವರು ಬೃಹತ್ ರ‍್ಯಾಲಿಗಳನ್ನು ನಡೆಸಿದ್ದರು. ಲಾಲು ಅನುಪಸ್ಥಿತಿಯಲ್ಲಿ ತೇಜಸ್ವಿ ಅವರ ಆರ್‌ಜೆಡಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಹಾರದ ಜನರ ಮನಸ್ಸಿನಲ್ಲಿ ಯಾರಿದ್ದಾರೆ ಎಂಬುದು ಇದರಿಂದ ಸಾಬೀತಾಗಿತ್ತು. ಪ್ರಮಾಣ ವಚನ ಸ್ವೀಕಾರದಿಂದ ಹಿಡಿದು ಉದ್ಘಾಟನಾ ಸಮಾರಂಭದವರೆಗೂ ತೇಜಸ್ವಿ ನಿತೀಶ್‌ಗೆ ಸಮನಾಗಿ ನಿಂತಿದ್ದರು. ಅವರೇ ಭವಿಷ್ಯದ ಸಿಎಂ ಎಂದು ಬಿಂಬಿಸುವ ಎಲ್ಲ ಯತ್ನಗಳೂ ನಡೆದಿದ್ದವು.
ಸರ್ಕಾರ ರಚನೆಯಾದ ಬಳಿಕವೂ ಭರವಸೆಯನ್ನು ಈಡೇರಿಸುವ ಪ್ರಯತ್ನದಲ್ಲಿ ತೇಜಸ್ವಿ ನಿರತರಾಗಿದ್ದರು. ಭ್ರಷ್ಟಾಚಾರದ ಆರೋಪಗಳಿಂದ ದೂರ ಇದ್ದರು. ಬಿಹಾರದ ಜನ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಇಂದು ಚಾಲ್ತಿಯಲ್ಲಿರುವ ಸನ್ನಿವೇಶಗಳು ತೇಜಸ್ವಿಯವರನ್ನು ಕುರ್ಚಿಯಿಂದ ಕೆಳಗಿಳಿಸಬಹುದು, ಆದರೆ ತೇಜಸ್ವಿಯವರ ವರ್ಚಸ್ಸು ನಿತೀಶ್ಗಿಂತಲೂ ಸಾರ್ವಜನಿಕ ವಲಯದಲ್ಲಿ ಹೆಚ್ಚು ಬಲವಾಗಿದೆ. ಆದರೂ ಸದ್ಯದ ಪರಿಸ್ಥಿತಿ ತೇಜಸ್ವಿ ಯಾದವ್‌ಗೆ ಸಮಸ್ಯೆ ಎದುರಾಗಬುದು. ಅಂತಹ ಪರಿಸ್ಥಿತಿಯಲ್ಲಿ, ಅವರ ಮುಂದಿರುವ ಆಯ್ಕೆಗಳೇನು ಎಂಬುದು ಸದಸ್ಯದ ಪ್ರಶ್ನೆಯಾಗಿದೆ.
ಹೇಗಿದೆ ಬಿಹಾರ ವಿಧಾನಸಭೆ ಬಲಾಬಲ?
ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿವೆ. ಸರ್ಕಾರ ರಚಿಸಲು ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ. 2020ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ 125 ಸ್ಥಾನಗಳನ್ನು ಗೆಲ್ಲುವ ಮೂಲಕ ಈ ಅಂಕಿ ಅಂಶವನ್ನು ಸಾಧಿಸಿತ್ತು. ಎನ್‌ಡಿಎಗೆ ಪ್ರತಿಸ್ಪರ್ಧಿಯಾಗಿದ್ದ ಮಹಾಮೈತ್ರಿಕೂಟ 110 ಸ್ಥಾನಗಳನ್ನು ಪಡೆದು ಹಿಂದೆ ಬಿದ್ದಿತ್ತು. ಆದರೆ, ಜೆಡಿಯು 45 ಸ್ಥಾನಗಳನ್ನು ಹೊಂದಿದೆ ಎಂಬುದು ಗಮನಾರ್ಹ. ತೇಜಸ್ವಿ ಅವರ ಆರ್‌ಜೆಡಿ 79 ಸ್ಥಾನಗಳನ್ನು ಹೊಂದಿದೆ. ಜೆಡಿಯು ಕೈಜೋಡಿಸಿದ್ದರಿಂದ ಆರ್ಜೆಡಿಗೆ ಸರ್ಕಾರ ರಚನೆ ಸುಲಭವಾಯಿತು. ಆದರೆ ಈಗ ಮಹಾಮೈತ್ರಿಕೂಟದಿಂದ ನಿತೀಶ್ ನಿರ್ಗಮಿಸಿದ ನಂತರ ತೇಜಸ್ವಿ ಅವರಿಗೆ ಸರ್ಕಾರ ರಚನೆ ಕಷ್ಟವಾಗಲಿದೆ.
ಪ್ರತಿಪಕ್ಷ ಸ್ಥಾನವೇ ಅನಿವಾರ್ಯ
ಮೇಲ್ನೋಟಕ್ಕೆ, ನಿತೀಶ್ ನಿರ್ಗಮನದ ನಂತರ ತೇಜಸ್ವಿ ಅವರಿಗೆ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ. ಆದರೆ ಅವರು ಪ್ರತಿಪಕ್ಷದ ಪಾತ್ರವನ್ನು ಪ್ರಬಲ ರೀತಿಯಲ್ಲಿ ನಿರ್ವಹಿಸಬಹುದು. ನಿತೀಶ್ ಅವರ ದೌರ್ಬಲ್ಯಗಳು ಮತ್ತು ಸಾಮರ್ಥ್ಯಗಳನ್ನು ಅವರು ಚೆನ್ನಾಗಿ ತಿಳಿದಿದ್ದಾರೆ. ಅದನ್ನು ಅವರು ಪ್ರಬಲವಾಗಿ ಜನರ ಮುಂದಿಡಬಹುದು. ಈ ಮೂಲಕ ನಿತೀಶ್ ಅವರ ಮುಂದಿನ ಚುನಾವಣಾ ಗೆಲುವಿಗೆ ಅಡ್ಡಿಯಾಗಬಹುದು. ಈ ಮಧ್ಯೆ, ಲೋಕಸಭೆ ಚುನಾವಣೆಗೆ ಸಿದ್ಧತೆಗಳು ಕೂಡ ನಡೆಯುತ್ತಿವೆ. ನಿತೀಶ್ ಮತ್ತೆ ಎನ್‌ಡಿಎ ಭಾಗವಾದರೂ ತೇಜಸ್ವಿ ಅವರೊಂದಿಗೆ ನೇರವಾಗಿ ಸ್ಪರ್ಧಿಸುವುದು ಅಷ್ಟು ಸುಲಭವಲ್ಲ ಎಂದೇ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬಿಹಾರ ಸಿಎಂ ನಿವಾಸಕ್ಕೆ ಧಾವಿಸಿದ ಜೆಡಿಯು ನಾಯಕರು; ಬಿಜೆಪಿ ಬೆಂಬಲದೊಂದಿಗೆ ನಾಳೆ ನಿತೀಶ್ ಕುಮಾರ್ ಪ್ರಮಾಣ ವಚನ?
ಚುನಾವಣೆ ನಡೆದರೆ ಏನಾಗಬಹುದು?
ಒಂದು ವೇಳೆ ವಿಧಾನಸಭೆ ವಿಸರ್ಜನೆಯಾಗಿ ಚುನಾವಣೆ ನಡೆದರೆ ಬಿಹಾರದ ಜನರು ತೇಜಸ್ವಿ ಆಯ್ಕೆಯತ್ತ ಮನ ಮಾಡಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಈ ಹಿಂದಿನ ಚುನಾವಣೆಯ ನಂತರ ನಿತೀಶ್ ಅವರು ಎನ್‌ಡಿಎ ಜೊತೆ ಸರ್ಕಾರ ರಚಿಸಿದ್ದು ನಂತರ ಆರ್‌ಜೆಡಿ ಜೊತೆ ಸೇರಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಎನ್‌ಡಿಎ ಸೇರುವ ಚರ್ಚೆ ಹೆಚ್ಚು ಸಕಾರಾತ್ಮಕ ಸಂದೇಶವನ್ನು ನೀಡುತ್ತಿಲ್ಲ. ಒಂದು ವೇಳೆ ನಿತೀಶ್ ಬಿಜೆಪಿಯೊಂದಿಗೆ ಹೋಗಿ, ಎನ್‌ಡಿಎ ಜತೆಗೂಡಿ ವಿಧಾನಸಭೆ ಚುನಾವಣೆ ಎದುರಿಸಿದರೆ ತೇಜಸ್ವಿಯವರಿಗೂ ಸವಾಲಾಗಲಿದೆ. ಆದರೆ, ಇವೆಲ್ಲವನ್ನೂ ಮೀರಿ ನಿಂತು ನಿತೀಶ್ ಹಾದಿಗೆ ತೇಜಸ್ವಿ ದೊಡ್ಡ ಕಂಟಕವಾಗುವುದು ಖಚಿತ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 2020ರ ಅಕ್ಟೋಬರ್ ನವೆಂಬರ್ನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆದಿತ್ತು. ಈ ಆಧಾರದಲ್ಲಿ 2025ರಲ್ಲಿ ಮುಂದಿನ ಚುನಾವಣೆ ನಡೆಯಬೇಕಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Sat, 27 January 24