AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inspirational Story: ‘ಕಲೆಕ್ಟರ್ ದೀದಿ’ಯ ಕತೆ; ಗುಜರಾತ್‌ನ ಬುಡಕಟ್ಟು ಹೆಣ್ಣುಮಕ್ಕಳಲ್ಲಿ ಶಿಕ್ಷಣದ ಕನಸು ತುಂಬಿದ ಐಎಎಸ್ ಅಧಿಕಾರಿ ಗಾರ್ಗಿ ಜೈನ್

ಜಿಲ್ಲಾಧಿಕಾರಿಯ ಕಚೇರಿಯಲ್ಲಿ ದಿನವೂ ನೂರಾರು ಜನರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ, ತಮ್ಮ ಬೇಡಿಕೆಗಳನ್ನು ಸಲ್ಲಿಸಲು ಆಗಮಿಸುತ್ತಾರೆ. ಆದರೆ, ಗುಜರಾತ್​ನ ಜಿಲ್ಲಾಧಿಕಾರಿ ಗಾರ್ಗಿ ಜೈನ್ ಎಂಬುವವರು ತಮ್ಮ ಕಚೇರಿಯನ್ನು ಬಿಟ್ಟು ವಾರಕ್ಕೊಂದು ದಿನ ಬುಡಕಟ್ಟು ಜನರಿರುವ ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ಸಾರುತ್ತಿದ್ದಾರೆ. ಇವರ ಈ ಕ್ರಮದಿಂದಾಗಿ ಆ ಊರಿನ ಸರ್ಕಾರಿ ಶಾಲೆಯಲ್ಲಿ ಅರ್ಧಕ್ಕೆ ಓದು ನಿಲ್ಲಿಸುವವರ ಸಂಖ್ಯೆ ಶೇ. 50ಕ್ಕಿಂತ ಕಡಿಮೆಯಾಗಿದೆ. ಅದರಲ್ಲೂ ಶಾಲೆಯತ್ತ ಬರುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಶಾಲಾ ಮಕ್ಕಳ ಪ್ರೀತಿಯ 'ಕಲೆಕ್ಟರ್ ದೀದಿ'ಯ ಕತೆಯಿದು.

Inspirational Story: 'ಕಲೆಕ್ಟರ್ ದೀದಿ'ಯ ಕತೆ; ಗುಜರಾತ್‌ನ ಬುಡಕಟ್ಟು ಹೆಣ್ಣುಮಕ್ಕಳಲ್ಲಿ ಶಿಕ್ಷಣದ ಕನಸು ತುಂಬಿದ ಐಎಎಸ್ ಅಧಿಕಾರಿ ಗಾರ್ಗಿ ಜೈನ್
Gargi JainImage Credit source: x
ಸುಷ್ಮಾ ಚಕ್ರೆ
|

Updated on: Aug 21, 2026 | 5:23 PM

Share

ನವದೆಹಲಿ, ಆಗಸ್ಟ್ 21: ಅದೊಂದು ಬುಡಕಟ್ಟು ಜನಾಂಗದ ಜನರೇ ಹೆಚ್ಚು ವಾಸಿಸುವ ಹಳ್ಳಿ. ಆ ಹಳ್ಳಿಯಲ್ಲಿನ ಮಕ್ಕಳು ಶಾಲೆಯಿಂದ ದೂರವಾಗಿ ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಹೆಣ್ಣುಮಕ್ಕಳಂತೂ ಶಾಲೆಯತ್ತ ಮುಖ ಮಾಡುವುದೇ ಅಪರೂಪ ಎಂಬಂತಾಗಿತ್ತು. ಸರ್ಕಾರ ಶಾಲಾ ಮಕ್ಕಳಿಗೆ ಎಷ್ಟೇ ಉಚಿತ ಸೌಲಭ್ಯ ಒದಗಿಸಿದರೂ ಮಕ್ಕಳು ಶಿಕ್ಷಣದ ಮಹತ್ವವನ್ನು ಅರ್ಥ ಮಾಡಿಕೊಂಡಿರಲಿಲ್ಲ. ಆದರೀಗ ಆ ಊರು ಮಾತ್ರವಲ್ಲದೆ ಬುಡಕಟ್ಟು ಸಮುದಾಯದ, ಹಿಂದುಳಿದ ವರ್ಗದ ಜನರು ಹೆಚ್ಚು ವಾಸವಾಗಿರುವ ಪ್ರದೇಶಗಳ ಶಾಲಾ ಮಕ್ಕಳ ಕಣ್ಣುಗಳಲ್ಲಿ ಐಎಎಸ್ (IAS) ಅಧಿಕಾರಿಯಾಗುವ ಕನಸು ತುಂಬಿಕೊಂಡಿದೆ. ಇದಕ್ಕೆ ಕಾರಣ ಛೋಟಾ ಉದೇಪುರ ಜಿಲ್ಲೆಯ ಜಿಲ್ಲಾಧಿಕಾರಿ ಗಾರ್ಗಿ ಜೈನ್ (Gargi Jain).

ಜಿಲ್ಲಾಧಿಕಾರಿ ಗಾರ್ಗಿ ಜೈನ್ ಪ್ರತಿ ವಾರ ಸರ್ಕಾರಿ ಶಾಲೆಗೆ ಹೋಗಿ ಮಕ್ಕಳೊಂದಿಗೆ ಸಂವಾದ ನಡೆಸುತ್ತಾರೆ. ಅಲ್ಲಿನ ಮಕ್ಕಳೆಲ್ಲ ಪ್ರೀತಿಯಿಂದ “ಕಲೆಕ್ಟರ್ ದೀದಿ” ಎಂದು ಕರೆಯುತ್ತಾರೆ. ಗುಜರಾತ್ ಕೆಡರ್‌ನ 2015ರ ಬ್ಯಾಚ್‌ ಐಎಎಸ್ ಅಧಿಕಾರಿಯಾಗಿರುವ ಗಾರ್ಗಿ ಜೈನ್ ಫೆಬ್ರವರಿ 2025ರಲ್ಲಿ ರಾಜ್ಯದ ಪ್ರಮುಖ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಲ್ಲಿ ಒಂದಾದ ಛೋಟಾ ಉದೇಪುರದ ಅಧಿಕಾರ ವಹಿಸಿಕೊಂಡರು. ಮುಖ್ಯವಾಗಿ ‘ರಾಥ್ವಾ’ ಸಮುದಾಯದವರು ವಾಸಿಸುವ ಈ ಜಿಲ್ಲೆಯನ್ನು 2013ರಲ್ಲಿ ವಡೋದರಾದಿಂದ ಬೇರ್ಪಡಿಸಿ ರಚಿಸಲಾಯಿತು. ಇಲ್ಲಿನ ಹೆಚ್ಚಿನ ಹೆಣ್ಣುಮಕ್ಕಳು ತಮ್ಮ ಕುಟುಂಬದಲ್ಲೇ ಶಾಲೆಗೆ ಕಾಲಿಟ್ಟ ಮೊದಲ ತಲೆಮಾರಿನವರಾಗಿದ್ದಾರೆ. ಆರ್ಥಿಕ ಸಂಕಷ್ಟ, ಬಾಲ್ಯವಿವಾಹ ಮುಂತಾದ ಸಮಸ್ಯೆಯಿಂದಾಗಿ ಶಿಕ್ಷಣ ಮುಗಿಸುವ ಮುನ್ನವೇ ಶಾಲೆಯಿಂದ ಹೊರಗುಳಿಯುವುದು ಸಾಮಾನ್ಯ ಸಮಸ್ಯೆಯಾಗಿತ್ತು.

ಇದನ್ನೂ ಓದಿ: Inspirational Story: ಸೈಕಲ್ ರಿಕ್ಷಾ ನೂಕುತ್ತಿದ್ದ ಕುಮಾರ್ ಈಗ ಐಐಟಿ, ಐಐಎಂ ಪದವೀಧರರಿಗೆ ಕೆಲಸ ಕೊಡುವ ಉದ್ಯಮಿ

ಇಡೀ ಗುಜರಾತ್‌ನ ಬುಡಕಟ್ಟು ಪ್ರದೇಶಗಳಲ್ಲಿ ಬಡತನ ಮತ್ತು ಬಾಲ್ಯವಿವಾಹಗಳಿಂದ ಶಾಲಾ ಶಿಕ್ಷಣ ಅರ್ಧದಲ್ಲೇ ನಿಂತುಹೋಗುತ್ತಿತ್ತು. ಹೀಗಾಗಿ, ಮೂಲಸೌಕರ್ಯ ಹಾಗೂ ವಿದ್ಯಾರ್ಥಿವೇತನ ನೀಡುವ ಜೊತೆಗೆ, ವಿದ್ಯಾರ್ಥಿಗಳಲ್ಲಿ ನಂಬಿಕೆ ಮೂಡಿಸುವ ನಿರಂತರ ಸಂಪರ್ಕದ ಅಗತ್ಯವಿತ್ತು. ಇದೇ ಕಾರಣದಿಂದ ಗಾರ್ಗಿ ಜೈನ್ “ಕಲೆಕ್ಟರ್ ಇನ್ ಕ್ಲಾಸ್‌ರೂಮ್” ಎಂಬ ಪರಿಕಲ್ಪನೆಯನ್ನು ಆರಂಭಿಸಿದರು.

ಕಳೆದ ಒಂದು ವರ್ಷದಿಂದ ಅವರು ಪ್ರತಿ ವಾರ ಜಿಲ್ಲೆಯ ವಿವಿಧ ಬುಡಕಟ್ಟು ಭಾಗಗಳ ಹೆಣ್ಣುಮಕ್ಕಳ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅವರು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ, ಜೀವನ ಕೌಶಲ್ಯ, ಸಂವಹನ, ಆತ್ಮವಿಶ್ವಾಸ ಮತ್ತು ಕಾನೂನು ಹಕ್ಕುಗಳ ಬಗ್ಗೆಯೂ ತಿಳಿಸಿಕೊಡುತ್ತಾರೆ. ಯುಪಿಎಸ್‌ಸಿ ಪರೀಕ್ಷೆಗಳಿಂದ ಹಿಡಿದು ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಪೊಲೀಸ್ ಸೇವೆಗಳವರೆಗಿನ ಪ್ರಶ್ನೆಗಳಿಗೆ ಸಹನೆಯಿಂದ ಉತ್ತರಿಸುತ್ತಾರೆ ಎಂದು ದಿ ಬೆಟರ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Inspirational Story: 61ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸ್; 650ಕ್ಕೆ 500 ಅಂಕ ಪಡೆದ ಮಹಿಳೆ

2025ರಲ್ಲಿ ಛೋಟಾ ಉದೇಪುರ ಜಿಲ್ಲೆಯಾದ್ಯಂತ ಸುಮಾರು 9,000 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು. ಆದರೆ, ಗಾರ್ಗಿ ಜೈನ್ ಅವರ ಪ್ರಯತ್ನದಿಂದಾಗಿ 2026ರ ವೇಳೆಗೆ ಈ ಸಂಖ್ಯೆ 5,500ಕ್ಕೆ ಕುಸಿದಿದ್ದು, ಸುಮಾರು 4,500 ವಿದ್ಯಾರ್ಥಿಗಳು ಮರಳಿ ಶಾಲೆಗೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಒಟ್ಟಾರೆ ಡ್ರಾಪ್‌ಔಟ್ ಪ್ರಮಾಣದಲ್ಲಿ ಶೇ. 39ರಷ್ಟು ಇಳಿಕೆಯಾಗಿದೆ. ಅದರಲ್ಲೂ ಹೆಣ್ಣುಮಕ್ಕಳ ಶಾಲೆಯಿಂದ ಹೊರಗುಳಿಯುವ ಪ್ರಮಾಣದಲ್ಲಿ ಕೇವಲ ಒಂದೇ ವರ್ಷದಲ್ಲಿ ಶೇ. 60ರಷ್ಟು ಇಳಿಕೆ ಕಂಡುಬಂದಿದೆ.

“ಛೋಟಾ ಉದೇಪುರದ ಕನಿಷ್ಠ 5 ಗಿರಿಜನ ಹೆಣ್ಣುಮಕ್ಕಳು ಐಎಎಸ್ ಅಧಿಕಾರಿಗಳಾಗುವವರೆಗೂ ನಾನು ನನ್ನ ಪ್ರಯತ್ನ ನಿಲ್ಲಿಸುವುದಿಲ್ಲ” ಎಂದು ಹೇಳುವ ಗಾರ್ಗಿ ಜೈನ್ ಅವರಂತಹ ಜಿಲ್ಲಾಧಿಕಾರಿಗಳು ಬಹಳ ಅಪರೂಪ. ಅವರ ಈ ಕಾರ್ಯವೈಖರಿ ಮತ್ತು ಬದ್ಧತೆ ಎಲ್ಲ ಅಧಿಕಾರಿಗಳಿಗೂ ಮಾದರಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us