ಮುಸ್ಲಿಮ್ ಮಹಿಳೆಯರಿಗೆ ವರವಾದ ಸಿಆರ್ಪಿಸಿ ಸೆಕ್ಷನ್ 125 ಏನಿದು? ಶಹಬಾನೋ ಪ್ರಕರಣದಲ್ಲೂ ಈ ಕಾಯ್ದೆ ಬಳಕೆಯಾಗಿತ್ತು…
Know what is section 125 of CrPC: ಸಿಆರ್ಪಿಸಿ ಸೆಕ್ಷನ್ 125 ಕಾನೂನು ಪ್ರಕಾರ ವಿಚ್ಛೇದಿತ ಮುಸ್ಲಿಮ್ ಮಹಿಳೆಗೆ ಜೀವನಾಂಶ ಕೊಡುವಂತೆ ಆಕೆಯ ಪತಿಗೆ ಕೋರ್ಟ್ ಆದೇಶ ನೀಡಿದೆ. ಫ್ಯಾಮಿಲಿ ಕೋರ್ಟ್ ತೀರ್ಪನ್ನು ತೆಲಂಗಾಣ ಹೈಕೋರ್ಟ್ ಎತ್ತಿಹಿಡಿದಿತ್ತು. ಈಗ ಸುಪ್ರೀಂ ಕೋರ್ಟ್ ಕೂಡ ಆ ತೀರ್ಪಿಗೆ ಬೆಂಬಲ ನೀಡಿದೆ. ಸಿಆರ್ಪಿಸಿ ಸೆಕ್ಷನ್ 125ಗೆ ಮುಸ್ಲಿಮ್ ಕಾನೂನು ಅಡ್ಡಿ ಮಾಡುವುದಿಲ್ಲ ಎನ್ನುವ ಮಹತ್ವದ ಅಭಿಪ್ರಾಯವನ್ನು ಸರ್ವೋಚ್ಚ ನ್ಯಾಯಪೀಠ ವ್ಯಕ್ತಪಡಿಸಿದೆ.
ನವದೆಹಲಿ, ಜುಲೈ 11: ಮುಸ್ಲಿಮ್ ಮಹಿಳೆಯೊಬ್ಬರ ಡಿವೋರ್ಸ್ ಪ್ರಕರಣದಲ್ಲಿ ಸಿಆರ್ಪಿಸಿ ಸೆಕ್ಷನ್ 125 ಸದ್ದು ಮಾಡುತ್ತಿದೆ. ಮೊಹಮ್ಮದ್ ಅಬ್ದುಲ್ ಸಮದ್ ಎಂಬಾತ ತನ್ನ ವಿಚ್ಛೇದಿತ ಪತ್ನಿಗೆ ತಾತ್ಕಾಲಿಕ ಜೀವನಾಂಶ ಕೊಡುವ ಅಗತ್ಯ ಇಲ್ಲ ಎಂದು ಮಾಡಿದ್ದ ವಾದವನ್ನು ಸುಪ್ರೀಂಕೋರ್ಟ್ ನ್ಯಾಯಪೀಠ ತಿರಸ್ಕರಿಸಿದೆ. ಸಿಆರ್ಪಿಸಿ ಸೆಕ್ಷನ್ 125 ಮುಸ್ಲಿಮರನ್ನೂ ಒಳಗೊಂಡಂತೆ ಈ ದೇಶದ ಪ್ರತಿಯೊಬ್ಬ ಮಹಿಳೆಯರಿಗೂ ಅನ್ವಯ ಆಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆಗಸ್ಟೈನ್ ಜಾರ್ಜ್ ಮಾಸಿಹ್ ಅವರಿಬ್ಬರಿದ್ದ ನ್ಯಾಯಪೀಠ, ಅರ್ಜಿದಾರ ಮೊಹಮ್ಮದ್ ಅಬ್ದುಲ್ ಸಮದ್ ಅವರಿಗೆ ವಿಚ್ಛೇದಿತ ಪತ್ನಿಗೆ ಮಾಸಿಕವಾಗಿ 10,000 ರೂ ಜೀವನಾಂಶ ಕೊಡಬೇಕು ಎಂದು ಆದೇಶಿಸಿತು.
2017ರ ಡಿವೋರ್ಸ್ ಪ್ರಕರಣ….
ಮೊಹಮ್ಮದ್ ಅಬ್ದುಲ್ ಸಮದ್ ತನ್ನ ಪತ್ನಿಗೆ ವಿಚ್ಛೇದನ ಕೊಟ್ಟಿರುತ್ತಾರೆ. ಈ ಸಂಬಂಧ ಕೌಟುಂಬಿಕ ನ್ಯಾಯಾಲಯವೊಂದು ಆಕೆಗೆ ಮಾಸಿಕವಾಗಿ 10,000 ರೂ ಜೀವನಾಂಶ ಕೊಡುವಂತೆ ಆದೇಶಿಸುತ್ತದೆ. ಇದನ್ನು ಪ್ರಶ್ನಿಸಿ ಸಮದ್ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರುತ್ತಾರೆ. ಉಚ್ಚ ನ್ಯಾಯಾಲಯ ಕೂಡ ಫ್ಯಾಮಿಲಿ ಕೋರ್ಟ್ ಆದೇಶವನ್ನು ರದ್ದುಗೊಳಿಸಲು ನಿರಾಕರಿಸುತ್ತದೆ. ಇದಾದ ಬಳಿಕ ಆತ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಹಾಕಿರುತ್ತಾನೆ. ಇಲ್ಲಿಯೂ ಕೂಡ ಫ್ಯಾಮಿಲಿ ಕೋರ್ಟ್ ತೀರ್ಪಿಗೇ ಬೆಂಬಲ ಸಿಗುತ್ತದೆ.
ಮುಸ್ಲಿಂ ಮಹಿಳಾ ಕಾಯ್ದೆ ಉಲ್ಲೇಖಿಸಿದ ಅರ್ಜಿದಾರ
ವಿಚ್ಛೇದಿತ ಮಹಿಳೆಗೆ ಸಿಆರ್ಪಿಸಿ ಸೆಕ್ಷನ್ 125ರ ಅಡಿಯಲ್ಲಿ ನ್ಯಾಯ ಸಿಗಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು 1986ರ ಮುಸ್ಲಿಮ್ ಮಹಿಳಾ (ವಿಚ್ಛೇದನೆ ಹಕ್ಕು ರಕ್ಷಣೆ) ಕಾಯ್ದೆಯನ್ನು ಉಲ್ಲೇಖಿಸಿ, ಎರಡೂ ಕಾಯ್ದೆ ಪರಸ್ಪರ ವಿರೋಧವಾಗಿವೆ ಎಂದು ವಾದಿಸಿದ್ದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಬಹಳ ಸ್ಪಷ್ಟ ತೀರ್ಪು ಕೊಟ್ಟಿದ್ದು, ಸಿಆರ್ಪಿಸಿ ಸೆಕ್ಷನ್ 125ಗೆ 1986ರ ಮುಸ್ಲಿಮ್ ಮಹಿಳಾ ಕಾಯ್ದೆ ಅಡ್ಡಿ ಪಡಿಸುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕೋಯಿಕ್ಕೋಡ್ ನಗರ ಈಗ UNESCO ಸಾಹಿತ್ಯ ನಗರ, ಆಶ್ಚರ್ಯವೆಂದರೆ ಕರ್ನಾಟಕದ ಯಾವುದೇ ನಗರಕ್ಕೆ ಇನ್ನೂ ಆ ಸ್ಥಾನಮಾನವಿಲ್ಲ!
ಸಿಆರ್ಪಿಸಿ ಸೆಕ್ಷನ್ 125 ಏನು ಹೇಳುತ್ತೆ?
ತಮ್ಮನ್ನು ತಾವು ಪೋಷಿಸಿಕೊಳ್ಳಲು ಪತ್ನಿ ಅಥವಾ ಮಗುವಿಗೆ ಆಗುತ್ತಿಲ್ಲವಾದರೆ, ಮತ್ತು ಅವರನ್ನು ಪೋಷಿಸಲು ಮಹಿಳೆಯ ಪತಿ ಅಥವಾ ಮಗುವಿನ ತಂದೆಗೆ ಸೂಕ್ತ ವರಮಾನ ಇದ್ದರೆ ಆತ ಅವರನ್ನು ಪೋಷಿಸಬೇಕು. ಹಾಗೊಂದು ವೇಳೆ ನಿರಾಕರಿಸಿದರೆ ಸಿಆರ್ಪಿಸಿ ಸೆಕ್ಷನ್ 125 ಅನ್ವಯ ಆಗುತ್ತದೆ. ಆ ವ್ಯಕ್ತಿ ತನ್ನ ಪತ್ನಿ ಅಥವಾ ಮಗುವಿಗೆ ಮಾಸಿಕವಾಗಿ ಜೀವನಾಂಶ ಕೊಡುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆದೇಶಿಸಬಹುದು ಎಂದು ಈ ಸೆಕ್ಷನ್ ನಿರ್ದಿಷ್ಟಪಡಿಸುತ್ತದೆ.
ಇಲ್ಲಿ ಪತ್ನಿ ಎಂಬ ಪದ ವಿಚ್ಛೇದಿತ ಮಹಿಳೆಯನ್ನೂ ಒಳಗೊಂಡಿರುತ್ತದೆ. ಡಿವೋರ್ಸ್ ಆಗಿ ಇನ್ನೂ ಮರುಮದುವೆ ಆಗದೇ ಇರುವವರು ಸೆಕ್ಷನ್ 125 ವ್ಯಾಪ್ತಿಗೆ ಬರುತ್ತಾರೆ.
ಸುಪ್ರೀಂ ನ್ಯಾಯಪೀಠ ಸಿಆರ್ಪಿಸಿ ಸೆಕ್ಷನ್ 125 ಬಗ್ಗೆ ಕೊಟ್ಟ ಸ್ಪಷ್ಟತೆಗಳಿವು…
ಸಿಆರ್ಪಿಸಿ ಸೆಕ್ಷನ್ 125 ಎಂಬುದು ಮುಸ್ಲಿಮರನ್ನೂ ಒಳಗೊಂಡಂತೆ ಎಲ್ಲಾ ವಿವಾಹಿತ ಮಹಿಳೆಯರಿಗೂ ಅನ್ವಯ ಆಗುತ್ತದೆ. ಎಲ್ಲಾ ಮುಸ್ಲಿಮೇತರ ಮಹಿಳೆಯರಿಗೆ ಅನ್ವಯ ಆಗುತ್ತದೆ. ಹಾಗೆಯೇ, 1986ರ ಮುಸ್ಲಿಮ್ ಮಹಿಳಾ ಕಾಯ್ದೆಯು ಸಿಆರ್ಪಿಸಿ ಸೆಕ್ಷನ್ 125ಗೆ ಅಡ್ಡಿ ಆಗುವುದಿಲ್ಲ. ಟ್ರಿಪಲ್ ತಲಾಖ್ನಂತಹ ಅಕ್ರಮ ಮಾರ್ಗಗಳಿಂದ ವಿಚ್ಛೇದಿತರಾದ ಮಹಿಳೆಯರೂ ಸೆಕ್ಷನ್ 125ನ ಸಹಾಯ ಪಡೆಯಬಹುದು ಎಂಬುದು ಸುಪ್ರೀಂಕೋರ್ಟ್ ತೀರ್ಪಿನ ಪ್ರಮುಖ ಅಂಶಗಳಾಗಿವೆ.
ಆದರೆ, ವಿಚ್ಛೇದಿತ ಮುಸ್ಲಿಮ್ ಮಹಿಳೆಯರಿಗೆ ಕಾನೂನು ತುಸು ಭಿನ್ನವಾಗಿ ಅನ್ವಯ ಆಗುತ್ತದೆ. ಆ ಬಗ್ಗೆ ಈ ಕೆಳಗೆ ವಿವರಣೆಗಳಿವೆ ಓದಿ:
- ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್ ಅಥವಾ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಮದುವೆಯಾದ ಮತ್ತು ವಿಚ್ಛೇದನ ಪಡೆದ ಮುಸ್ಲಿಮ್ ಮಹಿಳೆಯರಿಗೆ ಆ ಕಾಯ್ದೆ ಜೊತೆಗೆ ಸಿಆರ್ಪಿಸಿ ಸೆಕ್ಷನ್ 125 ಕೂಡ ಅನ್ವಯ ಆಗುತ್ತದೆ. ಎರಡರ ಲಾಭ ಪಡೆಯಬಹುದು.
- ಒಂದು ವೇಳೆ ಮುಸ್ಲಿಮ್ ಮಹಿಳೆಯರು ಮುಸ್ಲಿಮ್ ಕಾನೂನು ಅಡಿಯಲ್ಲಿ ಮದುವೆಯಾಗಿ ಡಿವೋರ್ಸ್ ಪಡೆದಿದ್ದರೆ 1986ರ ಮುಸ್ಲಿಮ್ ಮಹಿಳಾ ಕಾಯ್ದೆ ಮತ್ತು ಸಿಆರ್ಪಿಸಿ ಸೆಕ್ಷನ್ 125 ಈ ಎರಡೂ ಕೂಡ ಅನ್ವಯ ಆಗುತ್ತದೆ.
- ಇನ್ನು, ಮುಸ್ಲಿಮ್ ವೈಯಕ್ತಿಕ ಕಾನೂನು ಅಡಿಯಲ್ಲಿ ವಿಚ್ಛೇದಿತ ಮಹಿಳೆಗೆ ಈಗಾಗಲೇ ಜೀವನಾಂಶ ಸಿಗುತ್ತಿದ್ದು, ಅದು ಸರಿಯಾದುದಲ್ಲ ಎನಿಸಿದಲ್ಲಿ ಸಿಆರ್ಪಿಸಿ ಸೆಕ್ಷನ್ 125 ನೆರವನ್ನು ಪಡೆಯಬಹುದು. ಆಗ ಸೆಕ್ಷನ್ 127(3)(ಬಿ) ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಜೀವನಾಂಶ ಮೊತ್ತವನ್ನು ಬದಲಿಸಲು ಸಾಧ್ಯ.
ಶಹಬಾನೋ ಪ್ರಕರಣದಲ್ಲಿ ಆಗಿದ್ದೇನು?
ಎಂಬತ್ತರ ದಶಕದ ಶಹಬಾನೋ ಪ್ರಕರಣದ ಬಗ್ಗೆ ನೀವು ಕೇಳಿರಬಹುದು. ಅಲ್ಲಿಯೂ ಕೂಡ ಸಿಆರ್ಪಿಸಿ ಸೆಕ್ಷನ್ 125 ವಿಚಾರ ಮುನ್ನೆಲೆಗೆ ಬಂದಿತ್ತು. ಆ ಪ್ರಕರಣದಲ್ಲಿ ಮೊಹಮ್ಮದ್ ಅಹ್ಮದ್ ಖಾನ್ ಎಂಬಾತ ತನ್ನ ಪತ್ನಿ ಶಹಬಾನೋಗೆ ಟ್ರಿಪಲ್ ತಲಾಖ್ ಮೂಲಕ ವಿಚ್ಛೇದನ ನೀಡಿದ್ದರು. ತನಗೆ ಹಾಗೂ ಐವರು ಮಕ್ಕಳಿಗೆ ಪತಿಯಿಂದ ಜೀವನಾಂಶ ಕೊಡಿಸಬೇಕೆಂದು ಶಹಬಾನೋ ಅರ್ಜಿ ಹಾಕಿದ್ದರು. ಮಧ್ಯಪ್ರದೇಶ ಹೈಕೋರ್ಟ್ 1980ರಲ್ಲಿ ಆಕೆಯ ಪರವಾಗಿ ತೀರ್ಪು ಕೊಟ್ಟಿತು. ಸುಪ್ರೀಂಕೋರ್ಟ್ ಕೂಡ ಈ ತೀರ್ಪನ್ನೇ ಎತ್ತಿಹಿಡಿದಿತ್ತು. ಶರಿಯತ್ ಕಾನೂನನ್ನು ಪರಿಗಣಿಸಬೇಕೆಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾಡಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು.
ಇದನ್ನೂ ಓದಿ: ಕಾರು, ಮನೆ, ಕಚೇರಿ ಬೇಕು ಎಂದು ಬೇಡಿಕೆ ಇಟ್ಟಿದ್ದ ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಯಾರು?
ಇದಾದ ಬಳಿಕ 1986ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಮುಸ್ಲಿಂ ಮಹಿಳಾ (ಡಿವೋರ್ಸ್ ಹಕ್ಕು ರಕ್ಷಣೆ) ಕಾಯ್ದೆಯನ್ನು ಹೊರಡಿಸಿತು. ಆ ಕಾಯ್ದೆ ಪ್ರಕಾರ ವಿಚ್ಛೇದಿತ ಪತ್ನಿಗೆ ಇದ್ಧತ್ ಅವಧಿಯಲ್ಲಿ (ಮರು ಮದುವೆ ಆಗುವವರೆಗಿನ ಕಾಲ) ಜೀವನಾಂಶ ಕೊಡುವ ಜವಾಬ್ದಾರಿ ಆಕೆಯ ಮಕ್ಕಳು ಅಥವಾ ಸಂಬಂಧಿಕರಿಗೆ ಇರುತ್ತದೆ. ಅವರು ಯಾರೂ ಇಲ್ಲವಾದರೆ ಆಗ ವಕ್ಫ್ ಮಂಡಳಿ ಆಕೆಗೆ ಜೀವನಾಂಶ ಕೊಡಬೇಕು ಎಂದು ಆ ಕಾಯ್ದೆ ಹೇಳಿತ್ತು. ಇದರೊಂದಿಗೆ, ಶಹಬಾನೋ ಪತಿ ತನ್ನ ವಿಚ್ಛೇದಿತ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ಕೊಡುವುದರಿಂದ ಬಚಾವಾಗಿದ್ದರು.
ಸಿಆರ್ಪಿಸಿ ಬದಲಿಗೆ ಬಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ ಈ ಸೆಕ್ಷನ್ ಬಗ್ಗೆ ಎನಿದೆ ವಿವರಣೆ?
ಕೇಂದ್ರ ಸರ್ಕಾರ ಸಿಅರ್ಪಿಸಿ ಸೆಕ್ಷನ್ ಬದಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯನ್ನು ರೂಪಿಸಿದೆ. ಸಿಆರ್ಪಿಸಿಯಲ್ಲಿದ್ದ ಕೆಲ ಸೆಕ್ಷನ್ಗಳನ್ನು ಬದಲಿಸಲಾಗಿದೆ. ಸಿಆರ್ಪಿಸಿ ಸೆಕ್ಷನ್ 125 ಬದಲು ಬಿಎನ್ಎಸ್ಎಸ್ ಸೆಕ್ಷನ್ 144 ತರಲಾಗಿದೆ. ಸಿಆರ್ಪಿಸಿ ಸೆಕ್ಷನ್ 125ರಲ್ಲಿರುವ ಬಹುತೇಕ ಎಲ್ಲಾ ಅಂಶಗಳು ಬಿಎನ್ಎಸ್ಎಸ್ನಲ್ಲಿ ಇವೆ. ಒಂದೇ ಮಾರ್ಪಾಡು ಎಂದರೆ ಮೈನರ್ ಅಥವಾ ಅಪ್ರಾಪ್ತ ಎಂಬ ಪದ ಬದಲು ಮಗು ಎಂದು ಸೇರಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ