ಕೃಷಿ ತಿದ್ದುಪಡಿ ಕಾಯ್ದೆ ವಾಪಸ್, ಸರ್ಕಾರದ ನಿರ್ಧಾರಕ್ಕೇನು ಕಾರಣ?; ಬಿಜೆಪಿಗೆ ಇದು ಲಾಭದಾಯಕವೇ? ವಿಶ್ಲೇಷಣೆ ಇಲ್ಲಿದೆ

TV9 Digital Desk

| Edited By: shivaprasad.hs

Updated on: Nov 19, 2021 | 12:58 PM

Narendra Modi: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಹಳ ಆಸ್ಥೆಯಿಂದ ಜಾರಿಗೆ ತಂದಿದ್ದ ಕೃಷಿ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಲು ಕಾರಣವಾದ ಅಂಶಗಳಾವುವು? ಅದನ್ನು ಇಂದೇ ಹಿಂಪಡೆದಿದ್ದೇಕೆ? ಪ್ರಧಾನಿ ಭಾಷಣದಲ್ಲಿ ಸೂಕ್ಷ್ಮವಾಗಿ ಪ್ರಸ್ತಾಪಿಸಿದ ವಿಚಾರಗಳಾವುವು? ಇಲ್ಲಿದೆ ಮಾಹಿತಿ.

ಕೃಷಿ ತಿದ್ದುಪಡಿ ಕಾಯ್ದೆ ವಾಪಸ್, ಸರ್ಕಾರದ ನಿರ್ಧಾರಕ್ಕೇನು ಕಾರಣ?; ಬಿಜೆಪಿಗೆ ಇದು ಲಾಭದಾಯಕವೇ? ವಿಶ್ಲೇಷಣೆ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾ, ಕೃಷಿ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯುವುದಾಗಿ (Farm Bills Repeal) ಘೋಷಿಸಿದ್ದಾರೆ. ಅಲ್ಲದೇ ರೈತರಿಗೆ ಪ್ರತಿಭಟನೆ ಕೊನೆಗೊಳಿಸಿ ಮನೆಗೆ ತೆರಳುವಂತೆ ಮನವಿ ಮಾಡಿದ್ದಾರೆ. ಈ ಕಾಯ್ದೆಗಳ ವಿರುದ್ಧ ಕಳೆದ ಒಂದು ವರ್ಷದಿಂದ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ನಂತರವೂ ರೈತ ನಾಯಕ ರಾಕೇಶ್ ಟಿಕಾಯತ್ ಪ್ರತಿಭಟನೆಯನ್ನು ತಕ್ಷಣ ಹಿಂತೆಗೆದುಕೊಳ್ಳುವುದಿಲ್ಲ, ಸಂಸತ್​ನಲ್ಲಿ ಕೃಷಿ ಕಾನೂನು ರದ್ದಾದ ನಂತರವೇ ಹೋರಾಟಕ್ಕೆ ತೆರೆ ಬೀಳಲಿದೆ ಎಂದಿದ್ದಾರೆ. ಇತ್ತ ಸರ್ಕಾರ ಸಂಸತ್​ನ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಯನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದ್ದು, ಅಲ್ಲಿಯವರೆಗೆ ಹೋರಾಟ ಮುಂದುವರೆಯಲಿದೆ. ಈ ಹೋರಾಟದಲ್ಲಿ ಇದುವರೆಗೆ ಸುಮಾರು 700ಕ್ಕೂ ಅಧಿಕ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಪಕ್ಷಗಳು ಈಗಾಗಲೇ ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದು, ಆ ಜೀವಗಳಿಗೆ ಹೊಣೆ ಯಾರು ಎಂದು ಪ್ರಶ್ನಿಸಿವೆ. ಇದೇ ವೇಳೆ ಒಂದು ವರ್ಷದಲ್ಲಿ ರೈತರ ತೀವ್ರ ಹೋರಾಟಕ್ಕೆ ಮಣಿಯದಿದ್ದ ಸರ್ಕಾರ, ಏಕಾಏಕಿ ಕಾಯ್ದೆ ಹಿಂಪಡೆಯುವುದಾಗಿ ಘೋಷಿಸಿದ್ದು ಏಕೆ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ.

ಈ ಕುರಿತಂತೆ ವಿರೋಧ ಪಕ್ಷಗಳು ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿವೆ ಎಂದು ಟೀಕಿಸಿವೆ. ರಾಜ್ಯಸಭಾ ಸದಸ್ಯ, ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಮ್ ಈ ಕುರಿತು ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಹೋರಾಟದಿಂದ ಹುಟ್ಟುವ ಭಯಕ್ಕಿಂತ, ಚುನಾವಣೆಯ ಸೋಲಿನ ಭಯ ದೊಡ್ಡದು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ನಿರ್ಧಾರ ಈ ಕೈಗೊಂಡಿವೆ ಎಂದು ಪ್ರತಿಕ್ರಿಯೆ ನೀಡಿವೆ.

ವಾಸ್ತವವಾಗಿ ಸರ್ಕಾರದ ಕೃಷಿ ಕಾಯ್ದೆ ವಾಪಸ್ ನಿರ್ಧಾರ ಮುಂಬರುವ ಪಂಜಾಬ್ ಹಾಗೂ ಉತ್ತರ ಪ್ರದೇಶ ಚುನಾವಣೆಗೆ ಮಾಸ್ಟರ್ ಸ್ಟ್ರೋಕ್ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಕಾರಣ, ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಋಣಾತ್ಮಕ ಪರಿಣಾಮ ಬೀರಬಹುದಾಗಿದ್ದ ವಿಚಾರವೆಂದರೆ, ಕೃಷಿ ಕಾಯ್ದೆಗೆ ವಿರೋಧ ಹಾಗೂ ರೈತರ ಪ್ರತಿಭಟನೆ. ಅದರಲ್ಲೂ ಪಂಜಾಬ್​ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಕೃಷಿ ಕಾಯ್ದೆ ಹಿಂಪಡೆದರೆ ಮಾತ್ರ ಮೈತ್ರಿ ಎಂದು ಖಡಾಖಂಡಿತವಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಈ ನಿರ್ಧಾರ ವರದಾನವಾಗಲಿದೆ. ಇಂದು ಅಮರಿಂದರ್ ಸಿಂಗ್ ಪ್ರತಿಕ್ರಿಯಿಸಿ, ಸರ್ಕಾರದ ನಡೆಯನ್ನು ಸ್ವಾಗತಿಸಿದ್ದು, ಪಂಜಾಬ್​ನಲ್ಲಿ ಬಿಜೆಪಿ ಹಾಗೂ ಅಮರಿಂದರ್ ಸಿಂಗ್ ಮೈತ್ರಿಯ ಬಾಗಿಲು ಬಹುತೇಕ ತೆರೆದಂತಾಗಿದೆ.

ಉತ್ತರ ಪ್ರದೇಶದಲ್ಲೂ ಬಿಜೆಪಿಗೆ ಸಮಾಜವಾದಿ ಪಕ್ಷ ಹಾಗೂ ಜಯಂತ್ ಚೌಧರಿಯವರ ಆರ್​ಎಲ್​ಡಿ ಪಕ್ಷಗಳು ರೈತರನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದವು. ಅಲ್ಲದೇ ಬಿಜೆಪಿ ಹೊರತುಪಡಿಸಿ ಬಹುತೇಕ ಪಕ್ಷಗಳು ಕೃಷಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ, ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಅದು ಪ್ರಮುಖ ಅಸ್ತ್ರವಾಗಿ ಬಳಕೆಯಾಗುವ ವಿಚಾರವಾಗಿತ್ತು. ಇದೀಗ ಕೃಷಿ ಕಾಯ್ದೆಯನ್ನು ಹಿಂಪಡೆಯುವುದರ ಮೂಲಕ ಬಿಜೆಪಿ ಈ ಅಡೆತಡೆಗಳನ್ನು ನಿವಾರಿಸಿಕೊಂಡಿದೆ.

ಕೃಷಿ ಕಾಯ್ದೆ ಹಿಂಪಡೆಯುವಾಗ ಸರ್ಕಾರ ರೈತರ ಕೋಪ ಶಮನಕ್ಕೆ ಮುಂದಾಗಿದೆ. ಇಂದು ಗುರು ನಾನಕ್ ಜಯಂತಿ. ಪ್ರತಿಭಟನೆಯಲ್ಲಿ ಭಾಗವಹಿಸಿರುವ ಬಹುತೇಕ ರೈತರು ಸಿಖ್ ಸಮುದಾಯದವರು. ಆದ್ದರಿಂದಲೇ ಇಂದು ಪ್ರಧಾನಿ ಮೋದಿ ಭಾಷಣ ಮಾಡುತ್ತಾ, ಗುರು ನಾನಕ್ ಜಯಂತಿಯ ಶುಭಾಶಯಗಳನ್ನು ತಿಳಿಸಿ, ಸೇವಾ ಮನೋಭಾವದ ಕುರಿತು ಪ್ರಸ್ತಾಪಿಸಿದ್ದರು. ನಂತರ ರೈತರು, ಅವರ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದರು. ಕೃಷಿ ಕಾಯ್ದೆಗೆ ಕೇವಲ ಸಣ್ಣ ಪ್ರಮಾಣದಲ್ಲಿ ರೈತರ ವಿರೋಧವಿದೆ ಎಂದು ಹೇಳಿದ್ದ ಅವರು, ಎಲ್ಲರ ಹಿತದೃಷ್ಟಿ, ರಾಷ್ಟ್ರೀಯ ಹಿತಾಕ್ತಿಯಿಂದ ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಘೋಷಿಸಿದರು. ಈ ಮೂಲಕ ಗುರು ನಾನಕ್ ಜಯಂತಿಯಂದು ಕಾಯ್ದೆ ವಾಪಸ್ ಪಡೆದು, ಪ್ರತಿಭಟನೆ ಕೊನೆಗೊಳಿಸುವಂತೆ ಮನವಿ ಮಾಡಿದರು.

ಸರ್ಕಾರ ಸಿಖ್ ಸಮುದಾಯದ ಭಾವನೆಗಳನ್ನು ಗೌರವಿಸಿ, ಆ ಮೂಲಕ ಅವರನ್ನು ಸಮಾಧಾನ ಪಡಿಸುವ ಯತ್ನ ನಡೆಸಿದೆ. ಇಂದು ಪ್ರಧಾನಿ ಭಾಷಣದಲ್ಲಿ ಪ್ರಾರಂಭದಲ್ಲಿಯೇ ಕರ್ತಾರ್​ಪುರ್ ಕಾರಿಡಾರ್ ಒಂದೂವರೆ ವರ್ಷದ ನಂತರ ಮತ್ತೆ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದರು. ಜೊತೆಗೆ ಬಿಜೆಪಿ ಮೂಲಗಳು ಪ್ರಧಾನಿ ಸಿಖ್ ಸಮುದಾಯದ ಹಿತಾಸಕ್ತಿಯನ್ನು ಈ ಹಿಂದೆಯೂ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದರು ಎಂದು ತಿಳಿಸಿವೆ. ರೈತರ ಪ್ರತಿಭಟನೆಯನ್ನು ದೇಶ ವಿರೋಧಿ ಶಕ್ತಿಗಳು ಬಳಸಿಕೊಳ್ಳುತ್ತಿವೆ. ಆದ್ದರಿಂದ ಕೃಷಿ ಕಾಯ್ದೆ ಹಿಂಪಡೆಯಲಾಗಿದೆ ಎಂದು ಬಿಜೆಪಿ ಕಾಯ್ದೆ ಹಿಂಪಡೆದಿದ್ದನ್ನು ಸಮರ್ಥಿಸಿಕೊಂಡಿವೆ. ಈ ಎಲ್ಲಾ ಕಾರಣಗಳು ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಕಾರಣವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಇದನ್ನೂ ಓದಿ:

Farmers Laws ಕೃಷಿ ಮಸೂದೆ 2020: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ಸಾಧಕ ಬಾಧಕಗಳೇನು?

ಕೃಷಿ ತಿದ್ದುಪಡಿ ಕಾಯ್ದೆ ವಾಪಸ್; ಹೋರಾಟದಲ್ಲಿ ಮೃತಪಟ್ಟ 700ಕ್ಕೂ ಅಧಿಕ ರೈತರ ಜೀವಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಪ್ರತಿಪಕ್ಷಗಳು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada