AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಕಲಿಕಾ ಅಂತರ: ASER, FLN, ಮತ್ತು ಪೋಷಕರ ಪಾತ್ರ; ಪ್ರಾಥಮಿಕ ಶಿಕ್ಷಣದ ಸುಧಾರಣೆ

Santosh Nair's article in 'Your India' series: ASER ವರದಿ ಪ್ರಕಾರ, ದೇಶಾದ್ಯಂತ 'ಕಲಿಕಾ ಬಡತನ' ಹೆಚ್ಚಾಗಿದ್ದು, ಅನೇಕ ಮಕ್ಕಳಿಗೆ ಓದಲು ಮತ್ತು ಮೂಲಭೂತ ಗಣಿತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಅಂತರವನ್ನು ನಿವಾರಿಸಲು 'ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ (FLN)' ಯೋಜನೆ ಮಹತ್ವದ್ದಾಗಿದೆ. ಪೋಷಕರು ವರದಿ ಕಾರ್ಡ್ ಮೀರಿ ಮಕ್ಕಳ ನಿಜವಾದ ಕಲಿಕಾ ಪ್ರಗತಿಯನ್ನು ಗಮನಿಸಬೇಕು.

ಭಾರತದ ಕಲಿಕಾ ಅಂತರ: ASER, FLN, ಮತ್ತು ಪೋಷಕರ ಪಾತ್ರ; ಪ್ರಾಥಮಿಕ ಶಿಕ್ಷಣದ ಸುಧಾರಣೆ
ಶಾಲಾ ಮಕ್ಕಳ ಸಾಂದರ್ಭಿಕ ಚಿತ್ರImage Credit source: PTI
Santosh Nair
| Edited By: |

Updated on:Nov 02, 2026 | 1:13 PM

Share

ತನ್ನ ಮೊಮ್ಮಗ 5ನೇ ತರಗತಿ ಉತ್ತೀರ್ಣನಾಗಿರುವ ರಿಪೋರ್ಟ್ ಕಾರ್ಡ್ ಅನ್ನು ತಂದು ತೋರಿಸಿದಾಗ ಅಜ್ಜಿಗೆ ಹೆಮ್ಮೆಯಾಗಿ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಐದು ವರ್ಷ ಶಾಲೆಯಲ್ಲಿ ಓದಿರುವ ತನ್ನ ಮೊಮ್ಮಗ ಆತ್ಮವಿಶ್ವಾಸದಿಂದ ಓದುತ್ತಾನೆ, ಪ್ರಾಥಮಿಕ ಗಣಿತವನ್ನು ಕಲಿತಿದ್ದಾನೆ ಎಂದು ಆ ಅಜ್ಜಿ ಭಾವಿಸಿದ್ದಾರೆ. ಆದರೆ ದೇಶಾದ್ಯಂತ ಹೆಚ್ಚಿನ ಕುಟುಂಬಗಳ ಈ ನಿರೀಕ್ಷೆ ತಪ್ಪಾಗಿರುತ್ತದೆ. ಈ ನಿರೀಕ್ಷೆಗೂ, ವಾಸ್ತವಕ್ಕೂ ಇರುವ ಅಂತರಕ್ಕೆ ಶಿಕ್ಷಣ ಸಂಶೋಧಕರು ಒಂದು ಹೆಸರಿಟ್ಟಿದ್ದಾರೆ: ಅದು ‘ಕಲಿಕಾ ಬಡತನ’ (learning poverty).

ಎಎಎಸ್‌ಇಆರ್ (ASER – Annual Status of Education Report) ಎಂದು ಕರೆಯಲ್ಪಡುವ ವಾರ್ಷಿಕ ಶಿಕ್ಷಣ ಸ್ಥಿತಿ ವರದಿಯು, ಗ್ರಾಮೀಣ ಭಾರತದ ಮಕ್ಕಳು ಯಾವ ತರಗತಿಯಲ್ಲಿ ಓದುತ್ತಿದ್ದಾರೆ ಎಂಬುದಕ್ಕಿಂತ ವಾಸ್ತವವಾಗಿ ಏನು ಮಾಡಬಲ್ಲರು ಎಂಬುದನ್ನು ಅಳೆಯುವ ದೇಶದ ಅತಿ ದೊಡ್ಡ ಗೃಹಮಟ್ಟದ ಸಮೀಕ್ಷೆಯಾಗಿದೆ. ಇದರ ಇತ್ತೀಚಿನ ಸಂಶೋಧನೆಗಳು ಬಹಳ ನಿರ್ದಿಷ್ಟವಾದ ರೀತಿಯಲ್ಲಿ ಕಣ್ಣು ತೆರೆಸುವಂತಿವೆ. ಸುಮಾರು ಶೇ. 70ರಷ್ಟು 5ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ತರಗತಿ ಮಟ್ಟಕ್ಕೆ ತಕ್ಕಂತೆ ಇರಬೇಕಾದ ಸರಳ ಅಂಕಗಣಿತದ ಲೆಕ್ಕಗಳನ್ನು ಮಾಡಲು ಬರುವುದಿಲ್ಲ. ಇನ್ನು 3ನೇ ತರಗತಿಯ ವಿದ್ಯಾರ್ಥಿಗಳಲ್ಲಿ, ಶೇ. 76.6ರಷ್ಟು ಮಕ್ಕಳಿಗೆ 2ನೇ ತರಗತಿ ಮಟ್ಟದ ಪಠ್ಯವನ್ನು ನಿರರ್ಗಳವಾಗಿ ಓದಲು ಬರುವುದಿಲ್ಲ. ವಾಸ್ತವವಾಗಿ ಇದು ಎರಡು ವರ್ಷಗಳ ಹಿಂದೆಯೇ ಕರಗತ ಮಾಡಿಕೊಳ್ಳಬೇಕಿದ್ದ ಮೂಲಭೂತ ಕೌಶಲ್ಯವಾಗಿದೆ. ಮೂರನೇ ತರಗತಿಯ ಪ್ರತಿ ಮೂವರು ಮಕ್ಕಳಲ್ಲಿ ಇಬ್ಬರಿಗೆ ಸರಳ ವ್ಯವಕಲನ (Substraction) ಮಾಡಲು ಬರುವುದಿಲ್ಲ.

ಇದು ಮಕ್ಕಳು ಸೋಮಾರಿಗಳೋ ಅಥವಾ ಬುದ್ಧಿವಂತರಲ್ಲವೋ ಎನ್ನುವ ಕಥೆಯಲ್ಲ. ಬದಲಿಗೆ, ಬೆಳವಣಿಗೆಯ ಹಾದಿಯಲ್ಲಿ ಕಲಿಕೆಯ ಮೂಲಭೂತ ಕೌಶಲ್ಯಗಳು ನಿಜಕ್ಕೂ ರೂಪುಗೊಂಡಿವೆಯೇ ಎಂಬುದನ್ನು ಲೆಕ್ಕಿಸದೆ, ವಯಸ್ಸು ಮತ್ತು ಶೈಕ್ಷಣಿಕ ಕ್ಯಾಲೆಂಡರ್‌ನ ಆಧಾರದ ಮೇಲೆ ಮಾತ್ರ ಮಕ್ಕಳನ್ನು ವರ್ಷದಿಂದ ವರ್ಷಕ್ಕೆ ಮೇಲಿನ ತರಗತಿಗೆ ಬಡ್ತಿ ನೀಡುತ್ತಾ ಬಂದಿರುವ ವ್ಯವಸ್ಥೆಯೊಂದರ ಕಥೆಯಾಗಿದೆ. 2ನೇ ತರಗತಿಯಲ್ಲಿ ನಿರರ್ಗಳವಾಗಿ ಓದಲು ಬಾರದ ಮಗುವನ್ನು ಹೇಗಾದರೂ ಮಾಡಿ 3ನೇ ತರಗತಿಗೆ, ನಂತರ 4ನೇ ತರಗತಿಗೆ ಹಾಗೂ 5ನೇ ತರಗತಿಗೆ ಕಳುಹಿಸಲಾಗುತ್ತದೆ. ಅಲ್ಲಿ ಪ್ರತಿ ವರ್ಷದ ಪಠ್ಯಕ್ರಮವು ಒಂದು ನಿರ್ದಿಷ್ಟ ಕೌಶಲ್ಯಗಳನ್ನು ಗಣನೆಯಲ್ಲಿಟ್ಟುಕೊಂಡು ರೂಪಿಸಲಾಗಿರುತ್ತದೆ. ಆದರೆ, ಮಕ್ಕಳಿಗೆ ಆ ಕೌಶಲ್ಯವು ಪ್ರಬಲವಾಗಿರುವುದಿಲ್ಲ. ಯಾರಾದರೂ ಇದನ್ನು ಗಮನಿಸುವಷ್ಟರಲ್ಲಿ, ಅಂತರವು ತಿಂಗಳುಗಳಲ್ಲ, ಬದಲಿಗೆ ವರ್ಷಗಳ ಗ್ಯಾಪ್ ಆಗಿ ಬೆಳೆದಿರುತ್ತದೆ.

ಇದನ್ನೂ ಓದಿ:ಶೂನ್ಯ ಎಫ್‌ಐಆರ್ ಮತ್ತು ಕಡ್ಡಾಯ ದಾಖಲಾತಿ: ಪೊಲೀಸ್ ದೂರಿನಲ್ಲಿ ನಿಮ್ಮ ಹಕ್ಕುಗಳು

ಹಾಗಿದ್ದರೂ, ಇದೇ ದತ್ತಾಂಶದ ಒಳಗೆ ಆಶಾವಾದಕ್ಕೆ ನಿಜವಾದ ಕಾರಣಗಳೂ ಅಡಗಿವೆ. 2022ರ ಸಮೀಕ್ಷೆಯನ್ನು ಇತ್ತೀಚಿನ ಸಮೀಕ್ಷೆಯೊಂದಿಗೆ ಹೋಲಿಸಿದರೆ, ಸರ್ಕಾರಿ ಶಾಲೆಗಳಲ್ಲಿ 2ನೇ ತರಗತಿ ಮಟ್ಟದ ಪಠ್ಯವನ್ನು ಓದಬಲ್ಲ 3ನೇ ತರಗತಿಯ ವಿದ್ಯಾರ್ಥಿಗಳ ಪ್ರಮಾಣವು ಶೇ. 16.3ರಿಂದ ಶೇ. 23.4ಕ್ಕೆ ಏರಿಕೆಯಾಗಿದೆ. ಇದು ಕೇವಲ ಎರಡೇ ವರ್ಷಗಳಲ್ಲಿ ಶೇ. 7ರಷ್ಟು ನಿಜವಾದ ಹೆಚ್ಚಳವಾಗಿದ್ದು, ಅನೇಕ ರಾಜ್ಯಗಳಲ್ಲಿ ಸಾಂಕ್ರಾಮಿಕದ ನಂತರದ ಚೇತರಿಕೆಯ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಗುಜರಾತ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳು ಶೇ. 10 ಅಥವಾ ಅದಕ್ಕಿಂತ ಹೆಚ್ಚಿನ ಸುಧಾರಣೆಯನ್ನು ದಾಖಲಿಸಿವೆ. ಇದಕ್ಕೆ ವಿರುದ್ಧವಾಗಿ ಹಿಮಾಚಲ ಪ್ರದೇಶ ಮತ್ತು ಬಿಹಾರದಲ್ಲಿ ಅದೇ ಅವಧಿಯಲ್ಲಿ ಶೇ. 4 ರಿಂದ 5ರಷ್ಟು ಮಾತ್ರ ಬೆಳವಣಿಗೆ ಕಂಡುಬಂದಿದೆ. ಇದು ಚೇತರಿಕೆಯು ನಿಜವಾಗಿಯೂ ನಡೆದಿದೆ ಎಂಬುದನ್ನು ತೋರಿಸುತ್ತದೆ. ಆದರೂ ದೇಶದಾದ್ಯಂತ ಚೇತರಿಕೆ ಅಸಮಾನವಾಗಿರುವುದನ್ನೂ ತೋರಿಸುತ್ತದೆ.

ಒಬ್ಬ ನಿರ್ದಿಷ್ಟ ಮಗುವಿನ ವಿಷಯದಲ್ಲಿ ಏನಿರಬಹುದು? ಗ್ರಾಮದ ಶಾಲೆಯೊಂದಕ್ಕೆ ಬಾಲಕನೊಬ್ಬ 1ನೇ ತರಗತಿಗೆ ಸೇರುತ್ತಾನೆ. ಆತನ ಪೋಷಕರು ಇಬ್ಬರೂ ಶಾಲೆ ಕಲಿತವರಲ್ಲ. ಮಗು ನಿಯಮಿತವಾಗಿ ಶಾಲೆಗೆ ಹೋಗುತ್ತಿದೆ ಮತ್ತು ಪ್ರತಿ ವರ್ಷ ಪರೀಕ್ಷೆಗಳಲ್ಲಿ ಪಾಸ್ ಆಗುತ್ತಿದೆ ಎಂದರೆ ಆ ಮಗು ಅಗತ್ಯವಾಗಿರುವುದನ್ನು ಕಲಿಯುತ್ತಿದ್ದಾನೆ ಎಂದು ಅವರು ನಂಬುತ್ತಾರೆ. ಆ ಮಗು ಚುರುಕಾಗಿದ್ದಾನೆ, ಗಮನವಿಟ್ಟು ಕೇಳಿಸಿಕೊಳ್ಳುತ್ತಾನೆ ಮತ್ತು ಉತ್ತಮ ನಡತೆ ಹೊಂದಿದ್ದಾನೆ. ವೈಯಕ್ತಿಕ ಗಮನ ನೀಡಲು ಸೀಮಿತ ಅವಕಾಶವಿರುವ ನಲವತ್ತು ಮಕ್ಕಳ ತರಗತಿಯಲ್ಲಿ ಶಿಕ್ಷಕರು ಹೊಗಳುವ ಎಲ್ಲ ಗುಣಗಳೂ ಆತನಲ್ಲಿವೆ. ಆದರೆ 2ನೇ ತರಗತಿಯ ಸುಮಾರಿಗೆ ಓದುವ ನಿರರ್ಗಳತೆಯು ಸದ್ದಿಲ್ಲದೆ ತಪ್ಪಿಹೋಗುತ್ತದೆ. ಮಗು ಬರೀ ಪಾಸ್ ಆಗುತ್ತಿದ್ದಾನೆಯೇ ಹೊರತು, ಆತನಿಗೆ ನಿಜಕ್ಕೂ ಓದಲು ಬರುತ್ತದೆಯಾ ಎಂಬುದನ್ನು ಪ್ರತ್ಯೇಕವಾಗಿ ನಿಂತು ಪರೀಕ್ಷಿಸುವ ಯಾವುದೇ ನಿರ್ದಿಷ್ಟ ವ್ಯವಸ್ಥೆ ಇಲ್ಲದಿರುವುದರಿಂದ ಇದು ಗಮನಕ್ಕೆ ಬರುವುದಿಲ್ಲ.

ಇದೇ ಆಲೋಚನೆಯು ಭಾರತದ ಇತ್ತೀಚಿನ ಶಿಕ್ಷಣ ನೀತಿ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ಇದನ್ನು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ (foundational literacy and numeracy – FLN) ಎಂದು ಕರೆಯಲಾಗುತ್ತದೆ. ಮಗುವನ್ನು ಮುಂದಿನ ತರಗತಿಗೆ ಕಳುಹಿಸುವ ಮೊದಲು, ಅಂದರೆ 3ನೇ ತರಗತಿ ಮುಗಿಯುವಷ್ಟರಲ್ಲಿ ಪ್ರತಿಯೊಬ್ಬ ಮಗುವಿಗೂ ಅರ್ಥೈಸಿಕೊಂಡು ಓದಲು ಮತ್ತು ಪ್ರಾಥಮಿಕ ಅಂಕಗಣಿತವನ್ನು ನಿಭಾಯಿಸಲು ಸಾಧ್ಯವಾಗುವಂತೆ ಮಾಡುವ ಸ್ಪಷ್ಟ ರಾಷ್ಟ್ರೀಯ ಅಭಿಯಾನ ಇದಾಗಿದೆ. ಸುಧಾರಿಸುತ್ತಿರುವ ASER ಅಂಕಿಅಂಶಗಳು ಈ ಗಮನವು ಗಂಭೀರವಾಗಿ ಜಾರಿಗೆ ಬಂದಿರುವ ಕಡೆಗಳಲ್ಲಿ ಯಶಸ್ವಿಯಾಗುತ್ತಿರುವುದನ್ನು ಸೂಚಿಸುತ್ತವೆ. ಹಾಗೆಯೇ ಇದು ಜಾರಿಗೆ ಬಾರದ ಕಡೆಗಳಲ್ಲಿ ಇನ್ನೂ ಸಾಕಷ್ಟು ದೂರ ಸಾಗಬೇಕಿದೆ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ: ಆನ್‌ಲೈನ್‌ನಲ್ಲಿ ವಂಚನೆ? ಸಾಮಾನ್ಯ ಜನರ ನೆರವಿಗೆ ಬರುತ್ತವೆ ಗ್ರಾಹಕ ರಕ್ಷಣಾ ಕಾಯ್ದೆ 2019 & CCPA

ಪೋಷಕರಿಗೆ ಇದರಿಂದ ಸಿಗುವ ಪ್ರಾಯೋಗಿಕ ಸಂದೇಶವೆಂದರೆ, ಪಾಸ್ ಮಾರ್ಕ್‌ಗಳಿಂದ ತುಂಬಿರುವ ವರದಿ ಕಾರ್ಡ್ ಕಂಡು ಗಾಬರಿಯಾಗುವುದಲ್ಲ, ಬದಲಿಗೆ ಅದರ ಆಚೆಗೆ ನೋಡುವುದು. ಮಗುವಿಗೆ ತನ್ನ ತರಗತಿಗಿಂತ ಎರಡು ತರಗತಿ ಕೆಳಗಿನ ಪುಸ್ತಕದಿಂದ ಒಂದು ಸಣ್ಣ ಭಾಗವನ್ನು ಜೋರಾಗಿ ಓದಲು ಹೇಳುವುದು ಅಥವಾ ಯಾವುದೇ ಸಹಾಯವಿಲ್ಲದೆ ಸರಳ ವ್ಯವಕಲನ ಲೆಕ್ಕವನ್ನು ಬಿಡಿಸಲು ಹೇಳುವಂತಹ ಸರಳವಾದ ಪರೀಕ್ಷೆಯು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಶಾಲೆ ನೀಡುವ ಔಪಚಾರಿಕ ವರದಿ ಕಾರ್ಡ್ ಹೇಳದ ಸತ್ಯವನ್ನು ಇದು ಪೋಷಕರಿಗೆ ತಿಳಿಸುತ್ತದೆ. ಮಗು ಕಷ್ಟಪಡುತ್ತಿದ್ದರೆ, ಅದನ್ನು ದೂರುವಿನಂತೆ ಅಲ್ಲದೆ, ಕೊರತೆ ಎಲ್ಲಿದೆ ಮತ್ತು ಅದನ್ನು ಸರಿಪಡಿಸಲು ಯಾವ ಯೋಜನೆ ಇದೆ ಎಂಬ ನಿರ್ದಿಷ್ಟ ಹಾಗೂ ಉತ್ತರಿಸಬಹುದಾದ ಪ್ರಶ್ನೆಯಾಗಿ ನೇರವಾಗಿ ಶಾಲೆಯ ಗಮನಕ್ಕೆ ತರಬೇಕು.

ಭಾರತದ ತರಗತಿಗಳು ವಾಸ್ತವಿಕವಾಗಿ ಒಮ್ಮೆಗೆ ಎರಡು ವಿಭಿನ್ನ ಯಶಸ್ಸಿನ ಮಾಪನಗಳನ್ನು ಸದ್ದಿಲ್ಲದೆ ನಡೆಸುತ್ತಿವೆ. ಒಂದು ಹಾಜರಾತಿ ಮತ್ತು ಪರೀಕ್ಷೆಯ ಅಂಕಗಳಿಂದ ಟ್ರ್ಯಾಕ್ ಮಾಡಲ್ಪಡುತ್ತದೆ, ಮತ್ತೊಂದು ಮಗುವಿಗೆ ತಂದಿಟ್ಟ ಪುಸ್ತಕವನ್ನು ನಿಜವಾಗಿಯೂ ಓದಲು ಬರುತ್ತದೆಯೇ ಎಂಬುದರ ಮೂಲಕ ಅಳೆಯಲ್ಪಡುತ್ತದೆ. ಮುಂದಿನ ಬಾರಿ ವರದಿ ಕಾರ್ಡ್ ಮನೆಗೆ ಬಂದಾಗ, ಈ ಎರಡು ಅಳತೆಗೋಲುಗಳಲ್ಲಿ ನಿಮ್ಮ ಮಗುವಿನ ಅಂಕಗಳು ಯಾವುದನ್ನು ಪ್ರತಿಬಿಂಬಿಸುತ್ತಿವೆ ಎಂದು ಕೇಳುವುದು ಸೂಕ್ತವಾಗಿದೆ.

(ಆಧಾರಗಳು: ವಾರ್ಷಿಕ ಶಿಕ್ಷಣ ಸ್ಥಿತಿ ವರದಿ (ASER), ಪ್ರಥಮ್ ಎಜ್ಯುಕೇಶನ್ ಫೌಂಡೇಶನ್, 3 ಮತ್ತು 5ನೇ ತರಗತಿ ವಿದ್ಯಾರ್ಥಿಗಳ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಇತ್ತೀಚಿನ ಸಮೀಕ್ಷೆ ದತ್ತಾಂಶ, ರಾಜ್ಯವಾರು ಮತ್ತು ವರ್ಷದಿಂದ ವರ್ಷಕ್ಕೆ ಹೋಲಿಕೆಗಳು; ಭಾರತ ಸರ್ಕಾರ, ನಿಪುಣ್ ಭಾರತ್ (NIPUN Bharat) ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಮಿಷನ್ ಚೌಕಟ್ಟು.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:10 pm, Mon, 2 November 26

Follow Us
Santosh Nair
Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
ಅರುಣ್ ಸಾಳುಂಕೆ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗಳು
ಅರುಣ್ ಸಾಳುಂಕೆ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗಳು
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
ಶಕ್ತಿದೇವತೆ ಹಾಸನಾಂಬೆಯನ್ನು ನೋಡಲು ಕಿಕ್ಕಿರಿದ ಭಕ್ತರ ದಂಡು!
ಶಕ್ತಿದೇವತೆ ಹಾಸನಾಂಬೆಯನ್ನು ನೋಡಲು ಕಿಕ್ಕಿರಿದ ಭಕ್ತರ ದಂಡು!
ಕೃಷ್ಣಾ ನದಿ ನೀರು ವಿವಾದ, ಮಹಾರಾಷ್ಟ್ರದ ವಿರುದ್ಧ ಎಂಬಿ ಪಾಟೀಲ್ ವಾಗ್ದಾಳಿ
ಕೃಷ್ಣಾ ನದಿ ನೀರು ವಿವಾದ, ಮಹಾರಾಷ್ಟ್ರದ ವಿರುದ್ಧ ಎಂಬಿ ಪಾಟೀಲ್ ವಾಗ್ದಾಳಿ
ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ₹5 ಹೆಚ್ಚಳ
ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ₹5 ಹೆಚ್ಚಳ
‘ಧಮ್ ಇದ್ರೆ ಬಿಚ್ಚಿಡು’; ಗಾನವಿ-ಆಸಿಯಾ ಮಧ್ಯೆ ನಡೆಯಿತು ದೊಡ್ಡ ವಾಕ್ಸಮರ
‘ಧಮ್ ಇದ್ರೆ ಬಿಚ್ಚಿಡು’; ಗಾನವಿ-ಆಸಿಯಾ ಮಧ್ಯೆ ನಡೆಯಿತು ದೊಡ್ಡ ವಾಕ್ಸಮರ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸತ್ತ ನಾಲ್ವರ ಮೃತದೇಹ ಬೆಂಗಳೂರಿಗೆ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸತ್ತ ನಾಲ್ವರ ಮೃತದೇಹ ಬೆಂಗಳೂರಿಗೆ
ಶಿವಲಿಂಗೇಗೌಡ ಕಬಡ್ಡಿ ಅಖಾಡಕ್ಕಿಳಿದು ರೈಡ್ ಮಾಡಿದ ಸ್ಟೈಲ್ ನೋಡಿ
ಶಿವಲಿಂಗೇಗೌಡ ಕಬಡ್ಡಿ ಅಖಾಡಕ್ಕಿಳಿದು ರೈಡ್ ಮಾಡಿದ ಸ್ಟೈಲ್ ನೋಡಿ
ಇಂದು ಕಾಲಾಷ್ಟಮಿ; ಕಾಲಭೈರವನ ಆರಾಧನೆಗೆ ಸೂಕ್ತ ದಿನ
ಇಂದು ಕಾಲಾಷ್ಟಮಿ; ಕಾಲಭೈರವನ ಆರಾಧನೆಗೆ ಸೂಕ್ತ ದಿನ