ಕಾರ್ಯಗತವಾದ ಕೊಚ್ಚಿ-ಮಂಗಳೂರು ಅನಿಲ ಪೈಪ್ ಲೈನ್.. ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ
ನೈಸರ್ಗಿಕ ಅನಿಲ ಕೊಳವೆಯು, ಪರಿಸರ ಸ್ನೇಹಿ ಹಾಗೂ ಕೈಗೆಟಕುವ ದರದ ಇಂಧನವನ್ನು ಸರಬರಾಜು ಮಾಡಲಿದೆ. ಅನಿಲವು, ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ತಂತ್ರಜ್ಞಾನದ ಮೂಲಕ ಗೃಹಬಳಕೆಗೆ ಹಾಗೂ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ಮೂಲಕ ಸಾರಿಗೆ ವಿಭಾಗಕ್ಕೆ ಲಭ್ಯವಾಗಲಿದೆ.
ದೆಹಲಿ: ಕೆಲವು ವರ್ಷಗಳಿಂದ ದೇಶವು ಅಭಿವೃದ್ಧಿಯ ವೇಗ ಹೆಚ್ಚಿಸಿಕೊಂಡಿದೆ. ಅಭಿವೃದ್ಧಿಯ ಅವಕಾಶ ಹಾಗೂ ವಿಸ್ತಾರವನ್ನೂ ಬೆಳೆಸಿಕೊಂಡಿದೆ. 450 ಕಿ.ಮೀ. ಉದ್ದದ ನೈಸರ್ಗಿಕ ಅನಿಲ ಪೈಪ್ ಲೈನ್ನ್ನು ದೇಶಕ್ಕೆ ಅರ್ಪಿಸಲು ಹೆಮ್ಮೆಯಾಗುತ್ತಿದೆ. ಇದು ಭಾರತಕ್ಕೆ ಮತ್ತು ಕರ್ನಾಟಕ-ಕೇರಳ ಜನತೆಗೆ ಬಹು ಮುಖ್ಯ ದಿನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ನರೇಂದ್ರ ಮೋದಿ ಇಂದು (ಜ.5) ಬೆಳಗ್ಗೆ 11 ಗಂಟೆಗೆ, ಮಂಗಳೂರು-ಕೊಚ್ಚಿ ಅನಿಲ ಪೈಪ್ ಲೈನ್ನ್ನು ಉದ್ಘಾಟಿಸಿ ಮಾತನಾಡಿದರು. ಕೇರಳದ ಕೊಚ್ಚಿ ಹಾಗೂ ಕರ್ನಾಟಕದ ಮಂಗಳೂರು ನಡುವಿನ ಅನಿಲ ಕೊಳವೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ದೇಶಕ್ಕೆ ಅರ್ಪಿಸಿದರು.
ಈ ಬಗ್ಗೆ ಸೋಮವಾರ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಇದು ಭವಿಷ್ಯದ ಯೋಜನೆಯಾಗಿದೆ. ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಕೊಳವೆಯಿಂದ ಹಲವು ಜನರಿಗೆ ಧನಾತ್ಮಕ ಪರಿಣಾಮವಾಗಲಿದೆ. ಯೋಜನೆಯು #UrjaAatmanirbhartaಕ್ಕೆ ಮೈಲುಗಲ್ಲಾಗಲಿದೆ ಎಂದು ಹೇಳಿದ್ದರು. ಈ ಕಾರ್ಯವು, ‘ಒಂದು ದೇಶ ಒಂದು ಗ್ಯಾಸ್ ಗ್ರಿಡ್’ ಎಂಬ ಘೋಷ ವಾಕ್ಯಕ್ಕೆ ಮೈಲುಗಲ್ಲಾಗಲಿದೆ ಎಂದು ಪ್ರಧಾನಿ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.
ನೈಸರ್ಗಿಕ ಅನಿಲ ಪೈಪ್ ಲೈನ್ ವಿವರಗಳು 450 ಕಿಲೋ ಮೀಟರ್ ಉದ್ದದ ನೈಸರ್ಗಿಕ ಅನಿಲ ಕೊಳವೆಯನ್ನು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ಸಂಸ್ಥೆ ನಿರ್ಮಿಸಿದೆ. ಈ ಕೊಳವೆಯು, ಪ್ರತಿನಿತ್ಯ 12 ದಶಲಕ್ಷ ಮೆಟ್ರಿಕ್ ಸ್ಟಾಂಡರ್ಡ್ ಕ್ಯೂಬಿಕ್ ಮೀಟರ್ ಅನಿಲವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಪೈಪ್ ಲೈನ್ ಮೂಲಕ ದ್ರವರೂಪದ ನೈಸರ್ಗಿಕ ಅನಿಲ (LNG) ಸರಬರಾಜು ಆಗಲಿದೆ. ಕೊಚ್ಚಿಯ ರಿಗ್ಯಾಸಿಫಿಕೇಷನ್ ಟರ್ಮಿನಲ್ನಿಂದ ಮಂಗಳೂರಿಗೆ, ಎರ್ನಾಕುಲಮ್, ತ್ರಿಶ್ಶೂರ್, ಪಾಲಕ್ಕಾಡ್, ಮಲಪ್ಪುರಂ, ಕಲ್ಲಿಕೋಟೆ, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಯ ಮೂಲಕ ಅನಿಲ ಕೊಳವೆ ಹಾದುಹೋಗಲಿದೆ.
ಒಟ್ಟು ಅಂದಾಜು 3,000 ಕೋಟಿ ರೂಪಾಯಿಯ ಯೋಜನೆ ಇದಾಗಿದೆ. ಅನಿಲ ಕೊಳವೆಯು ನೂರಾರು ನದಿ, ತೊರೆಗಳನ್ನು ದಾಟಿಕೊಂಡು ಹೋಗಿದೆ. ಹಾಗಾಗಿ, ಪೈಪ್ ಲೈನ್ ಅಳವಡಿಕೆಯ ಈ ಯೋಜನೆಯು ಇಂಜಿನಿಯರಿಂಗ್ ಕ್ಷೇತ್ರದ ಸವಾಲಾಗಿತ್ತು. ಅದಕ್ಕಾಗಿ, ಹಾರಿಜಾಂಟಲ್ ಡೈರೆಕ್ಷನಲ್ ಡ್ರಿಲ್ಲಿಂಗ್ ಎಂಬ ತಂತ್ರಜ್ಞಾನ ಬಳಸಿ ಪೈಪ್ ಲೈನ್ ಅಳವಡಿಸಲಾಯಿತು ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ನೈಸರ್ಗಿಕ ಅನಿಲ ಕೊಳವೆಯಿಂದ ಏನು ಉಪಯೋಗ? ನೈಸರ್ಗಿಕ ಅನಿಲ ಕೊಳವೆಯು, ಪರಿಸರ ಸ್ನೇಹಿ ಹಾಗೂ ಕೈಗೆಟಕುವ ದರದ ಇಂಧನವನ್ನು ಸರಬರಾಜು ಮಾಡಲಿದೆ. ಅನಿಲವು, ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ತಂತ್ರಜ್ಞಾನದ ಮೂಲಕ ಗೃಹಬಳಕೆಗೆ ಲಭ್ಯವಾಗಲಿದೆ. ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ಮೂಲಕ ಸಾರಿಗೆ ವಿಭಾಗಕ್ಕೆ ಲಭ್ಯವಾಗಲಿದೆ. ಈ ಯೋಜನೆಯಿಂದ ನೈಸರ್ಗಿಕ ಅನಿಲವು ವಾಣಿಜ್ಯ ಹಾಗೂ ಕೈಗಾರಿಕಾ ವಿಭಾಗಕ್ಕೂ ಸಿಗುವಂತಾಗಲಿದೆ. ಪೈಪ್ ಲೈನ್ ಹಾದುಹೋಗುವ ಜಿಲ್ಲೆಗಳಲ್ಲಿ, ಕೊಳವೆಯ ಮೂಲಕ ಅನಿಲ ಸರಬರಾಜು ಆಗಲಿದೆ ಎಂದು ತಿಳಿಸಲಾಗಿದೆ. ಇದರಿಂದ, ವಾಯುಮಾಲಿನ್ಯ ಕಡಿಮೆಯಾಗಿ, ವಾಯುಗುಣಮಟ್ಟ ಹೆಚ್ಚಲಿದೆ.
ನೈಸರ್ಗಿಕ ಅನಿಲ ಪೈಪ್ ಲೈನ್ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಹಾಗೂ ಕೇರಳದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಪೆಟ್ರೋಲಿಯಂ ಮತ್ತು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಉಪಸ್ಥಿತರಿದ್ದರು.
Prime Minister Narendra Modi attends the inauguration event of the Kochi-Mangaluru natural gas pipeline, via video conferencing.
Governors and Chief Ministers of Karnataka and Kerala, along with Union Minister for Petroleum and Natural Gas present. pic.twitter.com/tutKTOuqx5
— ANI (@ANI) January 5, 2021
ಮಂಗಳೂರು-ಬೆಂಗಳೂರು ಶಿರಾಡಿ ಸುರಂಗ ಮಾರ್ಗಕ್ಕೆ ಯೋಜನೆ ಸಿದ್ಧ: ನಿತಿನ್ ಗಡ್ಕರಿ
Published On - 12:29 pm, Tue, 5 January 21