ಜುಲೈ 6ರಿಂದ 3 ದೇಶಗಳಿಗೆ ಮೋದಿ ಪ್ರವಾಸ; 4 ದಶಕದ ಬಳಿಕ ನ್ಯೂಜಿಲೆಂಡ್‌ಗೆ ಭಾರತದ ಪ್ರಧಾನಿ ಭೇಟಿ
ಪ್ರಧಾನಿ ಮೋದಿ ಅವರು 6 ದಿನಗಳ ಭೇಟಿಗಾಗಿ ಭಾರತದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆ, ವ್ಯಾಪಾರ ಸಂಬಂಧಗಳು ಮತ್ತು ಭಾರತೀಯ ವಲಸಿಗರೊಂದಿಗೆ ಮುಖಾಮುಖಿ ಸಭೆಗಳನ್ನು ನಡೆಸುವ ಗುರಿಯನ್ನು ಹೊಂದಿದ್ದಾರೆ. ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರಧಾನ ಮಂತ್ರಿಗಳ ಆಹ್ವಾನದ ಮೇರೆಗೆ ನಡೆಯುತ್ತಿರುವ ಈ ಭೇಟಿಯ ಸಮಯದಲ್ಲಿ, ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮೋದಿ ಆಯಾ ದೇಶಗಳೊಂದಿಗೆ ಪ್ರಮುಖ ಚರ್ಚೆಗಳನ್ನು ನಡೆಸಲಿದ್ದಾರೆ.

ನವದೆಹಲಿ, ಜುಲೈ 3: ಏಷ್ಯಾ-ಪೆಸಿಫಿಕ್ ವಲಯದಲ್ಲಿ ರಾಜತಾಂತ್ರಿಕ ಬಾಂಧವ್ಯವನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಜುಲೈ 6ರಿಂದ ಜುಲೈ 11ರವರೆಗೆ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳ 6 ದಿನಗಳ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಕಳೆದ 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ಪ್ರವಾಸವು ಉಭಯ ದೇಶಗಳ ಮುಕ್ತ ವ್ಯಾಪಾರ ಒಪ್ಪಂದದ (FTA) ನಂತರ ನಡೆಯುತ್ತಿದೆ.
ರಕ್ಷಣೆ, ಮುಕ್ತ ವ್ಯಾಪಾರ, ಜಾಗತಿಕ ಭದ್ರತೆ, ತಂತ್ರಜ್ಞಾನ ಮತ್ತು ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡುವುದು ಈ ಪ್ರವಾಸದ ಪ್ರಮುಖ ಉದ್ದೇಶಗಳಾಗಿವೆ.
ಇಂಡೋನೇಷ್ಯಾ ಭೇಟಿ:
ಪ್ರಧಾನಿ ಮೋದಿ ಅವರ ಪ್ರವಾಸವು ಜುಲೈ 6 ರಂದು ಇಂಡೋನೇಷ್ಯಾದಿಂದ ಆರಂಭವಾಗಲಿದೆ. ಜಕಾರ್ತದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಅವರು 2025ರ ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಯೋಗ್ಯಕರ್ತಾ ನಗರದಲ್ಲಿರುವ ಯುನೆಸ್ಕೋ ಪಾರಂಪರಿಕ ತಾಣವಾದ ಪ್ರಸಿದ್ಧ ‘ಪರಂಬನನ್ ಶಿವ ದೇವಾಲಯ’ ಸಂಕೀರ್ಣಕ್ಕೆ ಭೇಟಿ ನೀಡಲಿದ್ದಾರೆ. ಈ ಐತಿಹಾಸಿಕ ದೇವಾಲಯದ ಸಂರಕ್ಷಣೆಯಲ್ಲಿ ಭಾರತ ಮತ್ತು ಇಂಡೋನೇಷ್ಯಾ ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.
ಇದನ್ನೂ ಓದಿ: ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ: ರಾಷ್ಟ್ರಪತಿ ಭವನದಲ್ಲಿ ಮೋದಿ-ತಕೈಚಿ ಅವರಿಂದ ಸಚಿವರು, ಗಣ್ಯರ ಪರಸ್ಪರ ಪರಿಚಯ
ಆಸ್ಟ್ರೇಲಿಯಾ ಭೇಟಿ:
ಜುಲೈ 8ರಂದು ಮೆಲ್ಬೋರ್ನ್‌ಗೆ ತಲುಪಲಿರುವ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ 3ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಕ್ವಾಡ್ ಒಕ್ಕೂಟದ ಸದಸ್ಯ ರಾಷ್ಟ್ರಗಳಾಗಿರುವ ಭಾರತ ಮತ್ತು ಆಸ್ಟ್ರೇಲಿಯಾಗಳು ಸೈಬರ್ ಭದ್ರತೆ, ನಿರ್ಣಾಯಕ ಖನಿಜಗಳು ಮತ್ತು ಹಿಂದೂ ಮಹಾಸಾಗರ ವಲಯದ ರಕ್ಷಣಾ ಸಹಕಾರದ ಕುರಿತು ಚರ್ಚಿಸಲಿವೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ (MCG) ಭೇಟಿ ನೀಡಲಿರುವ ಪ್ರಧಾನಿ, ಅಲ್ಲಿನ ಪ್ರಮುಖ ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ.
ನ್ಯೂಜಿಲೆಂಡ್ ಭೇಟಿ:
ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ಮೋದಿ ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. ಪ್ರಧಾನಿ ಮೋದಿ ಅವರು ಜುಲೈ 10-11ರಂದು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರ ಆಹ್ವಾನದ ಮೇರೆಗೆ ಆಕ್ಲೆಂಡ್‌ಗೆ ಭೇಟಿ ನೀಡಲಿದ್ದಾರೆ. 4 ದಶಕಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಕಳೆದ ಏಪ್ರಿಲ್‌ನಲ್ಲಿ ಉಭಯ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಈ ಭೇಟಿಯು ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಕ್ರೀಡಾ ವಲಯದಲ್ಲಿ ಹೊಸ ಮೈಲಿಗಲ್ಲಾಗಲಿದೆ.
ಇದನ್ನೂ ಓದಿ: ನಾಳೆ ಭಾರತಕ್ಕೆ ಜಪಾನ್ ಪ್ರಧಾನಿ ಟಕೈಚಿ ಭೇಟಿ; ಮೋದಿ ಜೊತೆ ಮಹತ್ವದ ಮಾತುಕತೆ
ಭಾರತೀಯರೊಂದಿಗೆ ಸಂವಾದ:
ಮೂರೂ ದೇಶಗಳಲ್ಲಿ ಬೃಹತ್ ಸಂಖ್ಯೆಯಲ್ಲಿರುವ ಭಾರತೀಯ ಸಮುದಾಯದವರನ್ನು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ. ಇಂಡೋನೇಷ್ಯಾದಲ್ಲಿ ಸುಮಾರು 1.4 ಲಕ್ಷ ಭಾರತೀಯರಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಅಂದರೆ ಸರಿಸುಮಾರು 9.7 ಲಕ್ಷ ಭಾರತೀಯರಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಸುಮಾರು 3 ಲಕ್ಷ ಭಾರತೀಯ ಮೂಲದ ಜನರಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




