ಸಮಯ ವ್ಯರ್ಥ ಮಾಡದೆ ಕೋವಿಡ್ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಿ: ರಾಜ್ಯಗಳಿಗೆ ಸುಪ್ರೀಂ ನಿರ್ದೇಶನ
ನ್ಯಾಯಮೂರ್ತಿ ಎಂಆರ್ ಶಾ ಮತ್ತು ಬಿ.ವಿ. ನಾಗರತ್ನ ಅವರ ನ್ಯಾಯಪೀಠವು ಯಾವುದೇ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಲಭಿಸದೇ ಇದ್ದರೆ ಅಥವಾ ಪರಿಹಾರ ನಿರಾಕರಿಸಿದ್ದರೆ ಅವರು ಸಂಬಂಧಪಟ್ಟ ಕುಂದುಕೊರತೆ ಪರಿಹಾರ ಸಮಿತಿ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ದೆಹಲಿ: ಸಮಯ ವ್ಯರ್ಥ ಮಾಡದೆ ಕೋವಿಡ್ (Covid 19) ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಪರಿಹಾರ (Compensation) ನೀಡಿ ಎಂದು ಸುಪ್ರೀಂಕೋರ್ಟ್ (Supreme Court) ಸೋಮವಾರ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ. ನ್ಯಾಯಮೂರ್ತಿ ಎಂಆರ್ ಶಾ ಮತ್ತು ಬಿ.ವಿ. ನಾಗರತ್ನ ಅವರ ನ್ಯಾಯಪೀಠವು ಯಾವುದೇ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಲಭಿಸದೇ ಇದ್ದರೆ ಅಥವಾ ಪರಿಹಾರ ನಿರಾಕರಿಸಿದ್ದರೆ ಅವರು ಸಂಬಂಧಪಟ್ಟ ಕುಂದುಕೊರತೆ ಪರಿಹಾರ ಸಮಿತಿ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. ಕುಂದುಕೊರತೆ ಪರಿಹಾರ ಸಮಿತಿಯು ಹಕ್ಕುದಾರರ ಅರ್ಜಿಯನ್ನು ಪರಿಶೀಲಿಸಿ ನಾಲ್ಕು ವಾರಗಳೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಆಂಧ್ರಪ್ರದೇಶ ಸರ್ಕಾರವು ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ವೈಯಕ್ತಿಕ ಠೇವಣಿ ಖಾತೆಗೆ ಹಣ ವರ್ಗಾಯಿಸಿದೆ ಎಂಬ ಆರೋಪದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎರಡು ದಿನಗಳೊಳಗೆ ಹಣವನ್ನು ಎಸ್ ಡಿಆರ್ ಎಫ್ ಖಾತೆಗೆ ವರ್ಗಾಯಿಸಬೇಕು ಎಂದು ಹೇಳಿದೆ. ನಾವು ಈ ವಿಚಾರಣೆಯನ್ನು ಮುಕ್ತಾಯಗೊಳಿಸುತ್ತಿದ್ದೇವೆ. ಅದೇ ವೇಳೆ ಸಮಯ ವ್ಯರ್ಥ ಮಾಡದೆ ಅರ್ಹ ವ್ಯಕ್ತಿಗಳಿಗೆ ಪರಿಹಾರವನ್ನು ಆದಷ್ಟು ಬೇಗನೆ ನೀಡಬೇಕು ಎಂದು ಎಲ್ಲ ರಾಜ್ಯಗಳಿಗೆ ನಿರ್ದೇಶಿಸುತ್ತೇವೆ. ಯಾವುದೇ ಹಕ್ಕುದಾರರಿಗೆ ಕುಂದುಕೊರತೆ ಇದ್ದರೆ ಅವರು ಕುಂದುಕೊರತೆ ಪರಿಹಾರ ಸಮಿತಿಯನ್ನು ಸಂಪರ್ಕಿಸಬಹುದು ಎಂದು ನ್ಯಾಯಪೀಠ ಹೇಳಿದೆ.
ಆಂಧ್ರಪ್ರದೇಶ ಸರ್ಕಾರವು ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ವೈಯಕ್ತಿಕ ಠೇವಣಿ ಖಾತೆಗೆ ಹಣ ವರ್ಗಾಯಿಸಿದೆ ಎಂಬ ಅರ್ಜಿ ವಿಚಾರಣೆಯನ್ನು ಈ ಹಿಂದೆ ನಡೆಸಿದಾಗ ಇದಕ್ಕೆ ಪ್ರತಿಕ್ರಿಯಿಸುವಂತೆ ಆಂಧ್ರ ಸರ್ಕಾರಕ್ಕೆ ಕೊನೆ ಅವಕಾಶ ನೀಡಿತ್ತು. ರಾಜ್ಯ ಸರ್ಕಾರಗಳು ನಿಧಿಯನ್ನು ಬೇರೆಡೆಗೆ ವರ್ಗಾಯಿಸುವಂತಿಲ್ಲ ಎಂದು ಹೇಳಿದ್ದ ನ್ಯಾಯಾಲಯ ಈ ಬಗ್ಗೆ ಆಂಧ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು.
ಆಂಧ್ರಪ್ರದೇಶ ಸರ್ಕಾರ ಎಸ್ಡಿಆರ್ಎಫ್ನಿಂದ ವೈಯಕ್ತಿಕ ಠೇವಣಿ ಖಾತೆಗೆ ಫಂಡ್ ವರ್ಗಾಯಿಸಿದೆ ಎಂದು ಅರ್ಜಿದಾರ ಪಲ್ಲ ಶ್ರೀನಿವಾಸ ರಾವ್ ಆರೋಪಿಸಿದ್ದು ಅರ್ಜಿದಾರರ ಪರ ವಕೀಲ ಗೌರವ್ ಬನ್ಸಾಲ್ ಹಾಜರಾಗಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಈ ರೀತಿ ಮಾಡಲು ಅನುಮತಿ ಇಲ್ಲ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 46 (2)ರಲ್ಲಿ ನಿರ್ದಿಷ್ಟ ಪಡಿಸಿದ ಉದ್ದೇಶಗಳ ಹೊರತಾಗಿ ರಾಜ್ಯ ಸರ್ಕಾರವು ಎಸ್ಡಿಆರ್ಎಫ್ನಿಂದ ಕಾನೂನುಬಾಹಿರವಾಗಿ ಹಣವನ್ನು ಬಳಸುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.