AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವಿಜಯ್ ಕನಸು ಭಗ್ನ; ಶಾಕ್ ಕೊಟ್ಟ ರಾಜ್ಯಪಾಲರು

ತಮಿಳುನಾಡಿನಲ್ಲಿ ಸರ್ಕಾರ ರಚಿಸುವಂತೆ ಟಿವಿಕೆ ಮುಖ್ಯಸ್ಥ ವಿಜಯ್ ರಾಜ್ಯಪಾಲರಿಗೆ ಹಕ್ಕು ಮಂಡನೆ ಮಾಡಿದ್ದಾರೆ. ನಾಳೆ (ಗುರುವಾರ) ತಮಿಳುನಾಡಿನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕರಿಸಬೇಕಿತ್ತು. ಆದರೆ, ಬಹುಮತ ಸಾಬೀತುಪಡಿಸಲು ವಿಜಯ್ ನೀಡಿರುವ ನಂಬರ್​​ ಬಗ್ಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ತೃಪ್ತರಾಗಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿವೆ. ಹೀಗಾಗಿ, 'ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ' ಎಂಬಂತೆ ವಿಜಯ್ ಪಾಲಿಗೆ ನಾಳೆಗಂತೂ ಮುಖ್ಯಮಂತ್ರಿಯಾಗುವ ಯೋಗವಿಲ್ಲ ಎನ್ನಲಾಗುತ್ತಿದೆ.

ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವಿಜಯ್ ಕನಸು ಭಗ್ನ; ಶಾಕ್ ಕೊಟ್ಟ ರಾಜ್ಯಪಾಲರು
Vijay With Tamil Nadu GovernorImage Credit source: PTI
ಸುಷ್ಮಾ ಚಕ್ರೆ
|

Updated on:May 06, 2026 | 6:50 PM

Share

ಚೆನ್ನೈ, ಮೇ 6: ಹೊಸ ಪಕ್ಷವಾದ ಟಿವಿಕೆ ಕಟ್ಟಿ, ಮೊದಲ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಸ್ಪರ್ಧಿಸಿದ್ದ ನಟ ಜೋಸೆಫ್ ವಿಜಯ್ (Vijay) ಯಾರೂ ನಿರೀಕ್ಷೆಯೂ ಮಾಡಿರದ ರೀತಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ತಮಿಳುನಾಡಿನ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಟಿವಿಕೆಗೆ ಸರ್ಕಾರ ರಚನೆಗೆ ಬೇಕಾದ ಬಹುಮತವಾದ 118 ಸ್ಥಾನಗಳು ಸಿಕ್ಕಿರಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ವಿಜಯ್ ಬೇರೆ ಪಕ್ಷಗಳ ಬೆಂಬಲ ಕೋರಿದ್ದರು. ಕಾಂಗ್ರೆಸ್​​ನ ಬೆಂಬಲದಿಂದ ವಿಜಯ್ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದರು. ಆದರೆ, ತಮಿಳುನಾಡಿನ ರಾಜ್ಯಪಾಲರು ವಿಜಯ್ ನೀಡಿದ ಬಹುಮತದ ಲೆಕ್ಕಾಚಾರದಿಂದ ತೃಪ್ತರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಕಾರಣದಿಂದ ವಿಜಯ್ ನಾಳೆ ಪ್ರಮಾಣವಚನ ಸ್ವೀಕರಿಸುವುದು ಅನುಮಾನ ಎನ್ನಲಾಗುತ್ತಿದೆ.

ತಮಿಳುನಾಡಿನಲ್ಲಿ ಸರ್ಕಾರ ರಚನೆಯಾಗಲು 118 ಸ್ಥಾನಗಳ ಬಹುಮತ ಬೇಕಾಗಿದೆ. ಆದರೆ, ಟಿವಿಕೆ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಹೊಂದಿದೆ. ಹೀಗಾಗಿ, ಸರ್ಕಾರ ರಚಿಸಲು ಇನ್ನೂ 10 ಸ್ಥಾನಗಳು ಬೇಕಾಗಿದ್ದರಿಂದ ವಿಜಯ್ ಬೇರೆ ಪಕ್ಷಗಳ ಬೆಂಬಲ ಕೋರಿದ್ದರು. ಡಿಎಂಕೆ ಜೊತೆಗಿನ 55 ವರ್ಷಗಳ ಮೈತ್ರಿಯನ್ನು ಮುರಿದುಕೊಂಡಿದ್ದ ಕಾಂಗ್ರೆಸ್ ಟಿವಿಕೆಗೆ ಬೆಂಬಲ ನೀಡಲು ಒಪ್ಪಿಗೆ ನೀಡಿತ್ತು. ಆದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಗೆದ್ದಿರುವ ಸ್ಥಾನಗಳು ಕೇವಲ 5. ಈ ಮೂಲಕ ಟಿವಿಕೆಯ ಸ್ಥಾನಗಳು 113ಕ್ಕೆ ಏರಿಕೆಯಾದರೂ ಇನ್ನೂ 5 ಸೀಟುಗಳ ಬೆಂಬಲದ ಅಗತ್ಯವಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಡೇಟ್ ಮೇಲೆ ‘ಜನ ನಾಯಗನ್’ ಕಣ್ಣು? ಅಪರೂಪದ ಘಟನೆಗೆ ಸಾಕ್ಷಿಯಾಗಲಿದೆ ತಮಿಳುನಾಡು

ಇದುವರೆಗೂ ಕಾಂಗ್ರೆಸ್ ಮಾತ್ರ ಟಿವಿಕೆಗೆ ಬಹಿರಂಗವಾಗಿ ಬೆಂಬಲ ಘೋಷಿಸಿದೆ. ಡಿಎಂಕೆ ಮೈತ್ರಿಕೂಟದಲ್ಲಿದ್ದ ಸಿಪಿಐ (2 ಸ್ಥಾನ), ಸಿಪಿಎಂ (2 ಸ್ಥಾನ) ಮತ್ತು ವಿಸಿಕೆ (2 ಸ್ಥಾನ) ಟಿವಿಕೆಗೆ ಬೆಂಬಲ ನೀಡಲಿವೆ ಎನ್ನಲಾಗುತ್ತಿದೆ. ಆದರೆ, ರಾಜ್ಯಪಾಲರಿಗೆ ವಿಜಯ್ ನೀಡಿದ ಹಕ್ಕು ಮಂಡನೆ ಪತ್ರದಲ್ಲಿ ಈ ಪಕ್ಷಗಳ ಬೆಂಬಲದ ಕುರಿತು ಸ್ಪಷ್ಟತೆಯಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಬಹುಮತ ಸಾಬೀತುಪಡಿಸದೆ ವಿಜಯ್ ಅವರಿಗೆ ಸರ್ಕಾರ ರಚಿಸಲು ಅನುಮತಿ ನೀಡಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕೆಲಸ ಮಾಡಿತು ದಳಪತಿ ವಿಜಯ್ ಮಾಡಿದ ಆ ಸೀಕ್ರೆಟ್ ಪ್ಲ್ಯಾನ್; ಭರ್ಜರಿ ಗೆಲುವಿಗೆ ಇದೇ ಕಾರಣ

ವರದಿಗಳ ಪ್ರಕಾರ ವಿಜಯ್ ಅವರು ಪ್ರಸ್ತುತ 118 ಜನರ ಬೆಂಬಲವನ್ನು ಹೊಂದಿದ್ದಾರೆಂದು ಮೌಖಿಕವಾಗಿ ಮಾತ್ರ ಹೇಳಿದ್ದಾರೆಯೇ ವಿನಃ ಆ ಪಕ್ಷಗಳ ಬೆಂಬಲ ಪತ್ರವನ್ನು ನೀಡಿಲ್ಲ. ಹೀಗಾಗಿ, ರಾಜ್ಯಪಾಲರು ಕಾನೂನು ಸಹಾಯ ಪಡೆಯಲು ನಿರ್ಧರಿಸಿದ್ದಾರೆ. ಇದರಿಂದಾಗಿ ನಾಳೆಗೆ ನಿಗದಿಯಾಗಿದ್ದ ವಿಜಯ್ ಪಟ್ಟಾಭಿಷೇಕ ಸಮಾರಂಭ ಮುಂದೂಡಲ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಈ ಕಾರಣದಿಂದ ನಟ, ರಾಜಕಾರಣಿ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಗುರುವಾರ (ಮೇ 7) ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿಲ್ಲ. ರಾಜ್ಯ ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 118 ಶಾಸಕರ ಬೆಂಬಲವನ್ನು ಸಾಬೀತುಪಡಿಸುವ ಪತ್ರವನ್ನು ಸ್ವೀಕರಿಸಿದ ನಂತರವೇ ಮುಂದುವರಿಯುವುದು ಹೆಚ್ಚು ಸೂಕ್ತ ಎಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಟಿವಿಕೆ ನಾಯಕರಿಗೆ ಹೇಳಿ ವಾಪಾಸ್ ಕಳುಹಿಸಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Wed, 6 May 26

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More