Electoral Bonds: ಚುನಾವಣಾ ಬಾಂಡ್ ಎಂದರೇನು? ಅದರ ವಿರುದ್ಧ ಸುಪ್ರೀಂಕೋರ್ಟ್ನಲ್ಲಿರುವ ವಾದವೇನು ಇಲ್ಲಿದೆ ಮಾಹಿತಿ
ಚುನಾವಣಾ ಬಾಂಡ್ ಯೋಜನೆ ಕುರಿತು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ. ಚುನಾವಣಾ ಬಾಂಡ್ ಯೋಜನೆಯ ಕಾನೂನು ಮಾನ್ಯತೆಯನ್ನು ಪ್ರಶ್ನಿಸುವ ಅರ್ಜಿಗಳ ಮೇಲೆ ನ್ಯಾಯಾಲಯದ ಈ ನಿರ್ಧಾರವಾಗಿದೆ. ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಕಳೆದ ವರ್ಷ ನವೆಂಬರ್ 2 ರಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು. ಚುನಾವಣಾ ಬಾಂಡ್ ಎಂದರೇನು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಲೋಕಸಭಾ ಚುನಾವಣೆ(Lok Sabha Election) ಘೋಷಣೆಗೂ ಮುನ್ನ ಚುನಾವಣಾ ಬಾಂಡ್‌ಗಳ(Electoral Bonds) ಸಿಂಧುತ್ವದ ಕುರಿತು ಸುಪ್ರೀಂಕೋರ್ಟ್(Supreme Court) ಇಂದು ತನ್ನ ತೀರ್ಪು ಪ್ರಕಟಿಸಲಿದೆ. ಲೋಕಸಭೆ ಚುನಾವಣೆಗೂ ಮುನ್ನ ಈ ನಿರ್ಧಾರ ಬಹುಮುಖ್ಯವಾಗಿದೆ. ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠವು ಕಳೆದ ವರ್ಷ ಅಕ್ಟೋಬರ್ 31ರಿಂದ ಈ ವಿಷಯದ ಕುರಿತು ವಿಚಾರಣೆಯನ್ನು ಆರಂಭಿಸಿತ್ತು. ಈ ಅವಧಿಯಲ್ಲಿ ನ್ಯಾಯಾಲಯವು ಸತತ ಮೂರು ದಿನಗಳ ಕಾಲ ಈ ಪ್ರಕರಣದ ವಿಚಾರಣೆ ನಡೆಸಿತು.
ಈ ಸಾಂವಿಧಾನಿಕ ಪೀಠದಲ್ಲಿ ಸಿಜೆಐ ಜತೆಗೆ ನ್ಯಾ. ಸಂಜೀವ್ ಖನ್ನಾ, ನ್ಯಾ. ಬಿಆರ್ ಗವಾಯಿ, ನ್ಯಾ. ಜೆಬಿ ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಇದ್ದರು. ವಿಚಾರಣೆ ವೇಳೆ ಅರ್ಜಿದಾರರ ಹಾಗೂ ಪ್ರತಿಪಕ್ಷಗಳೆರೆಡರಿಂದಲೂ ವಾದ ಮಂಡಿಸಲಾಯಿತು. ಅಕ್ಟೋಬರ್ 31ರಿಂದ ನವೆಂಬರ್ 2ರವರೆಗೆ ಎಲ್ಲಾ ಕಕ್ಷಿದಾರರ ವಾದವನ್ನು ಗಂಭೀರವಾಗಿ ಆಲಿಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ಚುನಾವಣಾ ಬಾಂಡ್ ಎಂದರೇನು? ಇದು ಜನಸಾಮಾನ್ಯರು, ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ಒಂದು ವಿಧದ ದೇಣಿಗೆ ಕ್ರಮ. 1,000 ರೂ, 10,000 ರೂ, 1 ಲಕ್ಷ ರೂ, 10 ಲಕ್ಷ ರೂ, 1 ಕೋಟಿ ರೂ ಇತ್ಯಾದಿ ಮುಖಬೆಲೆಗಳಲ್ಲಿ ಬಾಂಡ್ಗಳನ್ನು ಖರೀದಿಸಬಹುದು. ಈ ಬಾಂಡ್‌ಗಳು ಅನಾಮಧೇಯವಾಗಿರುತ್ತವೆ. ಅಂದರೆ, ಇದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಬಹಿರಂಗ ಇರುವುದಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಲಾಗಿದೆ ಆ ಪಕ್ಷ ಹೆಸರೂ ಬಹಿರಂಗ ಇರುವುದಿಲ್ಲ.
ಮತ್ತಷ್ಟು ಓದಿ: Electoral Bonds: ಜನವರಿ 2ರಿಂದ 11ರವರೆಗೆ ಎಸ್ಬಿಐನ ಈ 29 ಕಚೇರಿಗಳಲ್ಲಿ ಸಿಗಲಿದೆ ಎಲೆಕ್ಟೋರಲ್ ಬಾಂಡ್; ಏನಿದು ಬಾಂಡ್
ಇತ್ತೀಚಿನ ಚುನಾವಣೆಯಲ್ಲಿ ಶೇ. 1ಕ್ಕೂ ಹೆಚ್ಚು ಮತಗಳನ್ನು ಪಡೆದ ಯಾವುದೇ ರಾಜಕೀಯ ಪಕ್ಷವೂ ಎಲೆಕ್ಟ್ರೋರಲ್ ಬಾಂಡ್ ಅಕೌಂಟ್ ತೆರೆಯಲು ಅವಕಾಶ ಹೊಂದಿರುತ್ತದೆ. ಎಲೆಕ್ಟೋರಲ್ ಬಾಂಡ್ ಖರೀದಿಸಿದ ಬಳಿಕ ರಾಜಕೀಯ ಪಕ್ಷವು 15 ದಿನದೊಳಗೆ ಆ ಹಣವನ್ನು ಎನ್ಕ್ಯಾಷ್ ಮಾಡಿಕೊಳ್ಳಬೇಕು. ಅದು ತಪ್ಪಿದಲ್ಲಿ ಬಾಂಡ್ ಹಣವು ಪಿಎಂ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂಎನ್ಆರ್ಎಫ್) ವರ್ಗಾವಣೆ ಆಗುತ್ತದೆ.
ಎಲೆಕ್ಟೋರಲ್ ಬಾಂಡ್ ಖರೀದಿಸಿದರೆ ಆ ಹಣಕ್ಕೆ ತೆರಿಗೆ ವಿನಾಯಿತಿ ಸಿಕ್ಕುತ್ತದೆ. ರಾಜಕೀಯ ಪಕ್ಷಗಳು ಆದಾಯ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಆದರೆ, ಎಲೆಕ್ಟೋರಲ್ ಬಾಂಡ್ ವಿತರಣೆ ಮಾಡುವ ಎಸ್ಬಿಐ, ಇದಕ್ಕೆ ಸರ್ಕಾರದಿಂದ ನಿರ್ದಿಷ್ಟ ಶುಲ್ಕ ಪಡೆಯುತ್ತದೆ.
ಮತ್ತಷ್ಟು ಓದಿ: ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ಸಂದಾಯವಾದ ಮೊತ್ತ ಬರೋಬ್ಬರಿ 1,300 ಕೋಟಿ ರೂ.
ಚುನಾವಣಾ ಬಾಂಡ್ಗಳನ್ನು ಏಕೆ ನೀಡಲಾಯಿತು? ಚುನಾವಣಾ ನಿಧಿ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರವು 2018ರಲ್ಲಿ ಚುನಾವಣಾ ಬಾಂಡ್ ಅನ್ನು ಪ್ರಾರಂಭಿಸಿತು. ಜನವರಿ 2 2018ರಂದು ಅಂದಿನ ಮೋದಿ ಸರ್ಕಾರವು ಚುನಾವಣಾ ಬಾಂಡ್ ಯೋಜನೆಗೆ ಅಧಿಸೂಚನೆ ಹೊರಡಿಸಿತ್ತು. ಚುನಾವಣಾ ಬಾಂಡ್ಗಳನ್ನು ಹಣಕಾಸು ಕಾಯ್ದೆ 2017ರ ಮೂಲಕ ತರಲಾಗಿದೆ. ಈ ಬಾಂಡ್ಗಳನ್ನು ವರ್ಷಕ್ಕೆ ನಾಲ್ಕು ಬಾರಿ ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ನಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ಖರೀದಿಸಬಹುದು.
ಚುನಾವಣಾ ಬಾಂಡ್ ವಿಶೇಷತೆ ಏನು? ಯಾವುದೇ ದಾನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 1 ಕೋಟಿ ರೂ.ವರೆಗಿನ ಚುನಾವಣಾ ಬಾಂಡ್ಗಳನ್ನು ಖರೀದಿಸಬಹುದು ಮತ್ತು ತನ್ನ ಗುರುತನ್ನು ಮರೆಮಾಚುವ ಮೂಲಕಅವರ ಆಯ್ಕೆಯ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಬಹುದು. ಈ ವ್ಯವಸ್ಥೆಯ ದಾನಿಗಳ ಗುರುತನ್ನು ಬಹಿರಂಗಪಡಿಸುವುದಿಲ್ಲ ಮತ್ತು ತೆರಿಗೆ ವಿನಾಯಿತಿ ಪಡೆದಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಕನಿಷ್ಠ ಶೇ. 1 ರಷ್ಟು ಮತಗಳನ್ನು ಪಡೆಯುವ ರಾಜಕೀಯ ಪಕ್ಷವು ಮಾತ್ರ ಈ ಬಾಂಡ್ನಿಂದ ದೇಣಿಗೆ ಪಡೆಯಬಹುದಾಗಿದೆ.
ಕೆವೈಸಿ ಮಾನದಂಡ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಆಧಾರ್ ಹಾಗೂ ಖಾತೆ ವಿವರಗಳು ಲಭ್ಯವಿರಲಿದೆ. ರಾಜಕೀಯ ನಿಧಿಯಲ್ಲಿ ಪಾರದರ್ಶಕತೆ ಹೆಚ್ಚಿಸಿ ಶುದ್ಧ ಹಣ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಬಾಂಡ್ ಆರಂಭಿಸಿತ್ತು. ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಜನವರಿ 2018ರಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದರು.
ಮತ್ತಷ್ಟು ಓದಿ: ಚುನಾವಣಾ ಬಾಂಡ್‌ಗಳ ಮೂಲಕ ಯಾವ ಯಾವ ಪಕ್ಷಗಳಲ್ಲಿ ಎಷ್ಟು ಹಣ ಸಂದಾಯವಾಗಿದೆ? ಇಲ್ಲಿದೆ ಮಾಹಿತಿ
ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಚುನಾವಣಾ ಬಾಂಡ್‌ಗಳ ಸಿಂಧುತ್ವವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಮತ್ತು ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸೇರಿದಂತೆ ಒಟ್ಟು ನಾಲ್ಕು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದರು.ಚುನಾವಣಾ ಬಾಂಡ್‌ಗಳು ನೀಡಿದ ಅನಾಮಧೇಯತೆಯು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮತದಾರರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ