AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಹಿಳೆಯ ವಿರುದ್ಧವೂ ಸಾಮೂಹಿಕ ಅತ್ಯಾಚಾರದ ಆರೋಪ ಹೊರಿಸಬಹುದು’; ದೆಹಲಿ ಹೈಕೋರ್ಟ್ ಮಹತ್ವದ ಆದೇಶ

ದೈಹಿಕವಾಗಿ ಅತ್ಯಾಚಾರವೆಸಗಲು ಸಾಧ್ಯವಿಲ್ಲದಿದ್ದರೂ ಸಹ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376ಡಿ ಅಡಿಯಲ್ಲಿ ಮಹಿಳೆಯೊಬ್ಬಳನ್ನು ಸಾಮೂಹಿಕ ಅತ್ಯಾಚಾರದ ಅಪರಾಧದಡಿ ಆರೋಪಿಯಾಗಿಸಬಹುದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನು ಚೌಕಟ್ಟು ದೈಹಿಕವಾಗಿ ಕೃತ್ಯ ಎಸಗುವುದಕ್ಕಿಂತ ಹೆಚ್ಚಾಗಿ 'ಸಾಮಾನ್ಯ ಉದ್ದೇಶ' ಮತ್ತು 'ಸಕ್ರಿಯ ಸಹಕಾರ'ವನ್ನು ಆಧರಿಸಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಸಾಮೂಹಿಕ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಮಹಿಳಾ ಸಹಚರರ ಪಾತ್ರದ ಕುರಿತಾಗಿ ಇದ್ದ ದೀರ್ಘಕಾಲದ ಕಾನೂನು ಅಸ್ಪಷ್ಟತೆಯನ್ನು ಈ ಐತಿಹಾಸಿಕ ತೀರ್ಪು ಸರಿಪಡಿಸಿದೆ.

'ಮಹಿಳೆಯ ವಿರುದ್ಧವೂ ಸಾಮೂಹಿಕ ಅತ್ಯಾಚಾರದ ಆರೋಪ ಹೊರಿಸಬಹುದು'; ದೆಹಲಿ ಹೈಕೋರ್ಟ್ ಮಹತ್ವದ ಆದೇಶ
ದೆಹಲಿ ಹೈಕೋರ್ಟ್Image Credit source: PTI
ಸುಷ್ಮಾ ಚಕ್ರೆ
|

Updated on:Oct 15, 2026 | 7:33 PM

Share

ನವದೆಹಲಿ, ಅಕ್ಟೋಬರ್ 15: ದೈಹಿಕವಾಗಿ ಅತ್ಯಾಚಾರವೆಸಗಲು ಸಾಧ್ಯವಿಲ್ಲದಿದ್ದರೂ ಸಹ, ಮಹಿಳೆಯ ವಿರುದ್ಧವೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376ಡಿ ಹಾಗೂ ಭಾರತೀಯ ನ್ಯಾಯ ಸಂಹಿತೆಯ (ಬಿಎನ್​ಎಸ್​) ಸೆಕ್ಷನ್ 70ರ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪವನ್ನು ಹೊರಿಸಬಹುದು ಎಂದು ದೆಹಲಿ ಹೈಕೋರ್ಟ್ ಐತಿಹಾಸಿಕ ಹಾಗೂ ಮಹತ್ವದ ತೀರ್ಪು ನೀಡಿದೆ. ಅತ್ಯಾಚಾರ ಎಂಬುದು ಪುರುಷರ ಮೇಲೆ ಮಾತ್ರ ಹೊರಿಸಬಹುದಾದ ಆರೋಪವಲ್ಲ. ವ್ಯಕ್ತಿಗಳು ಎಂದರೆ ಅದರಲ್ಲಿ ಮಹಿಳೆ ಕೂಡ ಸೇರುತ್ತಾಳೆ ಎಂದು ಕೋರ್ಟ್ ಹೇಳಿದೆ.

ಇಂದು ದೆಹಲಿ ಹೈಕೋರ್ಟ್​ನ ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಅವರ ಪೀಠವು ಈ ಮಹತ್ವದ ಆದೇಶವನ್ನು ನೀಡಿದ್ದು, ವಿಚಾರಣಾ ನ್ಯಾಯಾಲಯವು ಮಹಿಳಾ ಆರೋಪಿಯ ವಿರುದ್ಧ ಗ್ಯಾಂಗ್‌ರೇಪ್ ಆರೋಪ ಹೊರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಇದನ್ನೂ ಓದಿ: ಗುಜರಾತ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ; ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ, ನಗ್ನ ಫೋಟೋ ತೆಗೆದ ತಾಯಿ

‘ವ್ಯಕ್ತಿಗಳು’ ಎಂಬ ಶಬ್ದ ಕೇವಲ ಪುರುಷರಿಗಷ್ಟೇ ಸೀಮಿತವಲ್ಲ ಎಂದಿರುವ ಹೈಕೋರ್ಟ್, ಕಾಯಿದೆಯಲ್ಲಿ “ಗುಂಪನ್ನು ರೂಪಿಸುವ ಒಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳು” ಎಂಬ ಸಾಲಿನಲ್ಲಿರುವ ‘ವ್ಯಕ್ತಿಗಳು’ ಎಂಬ ಪದವನ್ನು ಕೇವಲ ಪುರುಷರ ಗುಂಪಿಗಷ್ಟೇ ಸೀಮಿತಗೊಳಿಸಲು ಯಾವುದೇ ತಾರ್ಕಿಕ ಆಧಾರಗಳಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸಾಮೂಹಿಕ ಅತ್ಯಾಚಾರದ ಅಪರಾಧಕ್ಕಾಗಿ, ಆ ಕೃತ್ಯವನ್ನು ಸಕ್ರಿಯವಾಗಿ ಎಸಗುವ ಅಥವಾ ಸಹಾಯ ಮಾಡುವ ‘ಸಾಮಾನ್ಯ ಉದ್ದೇಶ’ವನ್ನು ಹಂಚಿಕೊಂಡಿದ್ದರೆ ಸಾಕು. ದೈಹಿಕವಾಗಿ ಲೈಂಗಿಕ ದೌರ್ಜನ್ಯ ಎಸಗುವ ಗುಂಪಿನಲ್ಲಿ ಮಹಿಳೆ ಇಲ್ಲದಿರಬಹುದು, ಆದರೆ ಆ ಅಪರಾಧ ನಡೆಯಲು ಆಕೆ ಸಕ್ರಿಯವಾಗಿ ಸಹಕರಿಸಿದ್ದರೆ ಅಥವಾ ಅವರೊಂದಿಗೆ ಭಾಗಿಯಾಗಿದ್ದರೆ, ಆಕೆಯೂ ಸಾಮೂಹಿಕ ಅತ್ಯಾಚಾರಕ್ಕೆ ಹೊಣೆಗಾರ್ತಿಯಾಗುತ್ತಾಳೆ ಎಂದಿರುವ ದೆಹಲಿ ಹೈಕೋರ್ಟ್, ಈ ಸಂದರ್ಭದಲ್ಲಿ ಪ್ರಮುಖ ಸ್ಪಷ್ಟನೆಯನ್ನು ನೀಡಿದೆ. ಯಾವುದೇ ಒಂಟಿ ಮಹಿಳೆ ಆಕೆಯಾಗಿಯೇ ಪ್ರತ್ಯೇಕವಾಗಿ ಸಾಮೂಹಿಕ ಅತ್ಯಾಚಾರದ ಅಪರಾಧ ಎಸಗಲು ಸಾಧ್ಯವಿಲ್ಲ. ಆದರೆ, ಕೃತ್ಯ ಎಸಗುವ ಗುಂಪಿನ ಭಾಗವಾಗಿ ಅಥವಾ ಅವರಿಗೆ ಬೆಂಬಲ ನೀಡುವವಳಾಗಿದ್ದಾಗ ಮಾತ್ರ ಈ ಸೆಕ್ಷನ್ ಅನ್ವಯವಾಗುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಜನ್ಮದಿನ ಕರಾಳ ದಿನವಾಯ್ತು; ದೇವಸ್ಥಾನದಿಂದ ಬರುವಾಗ ಕುತ್ತಿಗೆಗೆ ಚಾಕು ಹಿಡಿದು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!

ವಿಚಾರಣಾ ನ್ಯಾಯಾಲಯವು 2025ರ ಜನವರಿ 17ರಂದು ನೀಡಿರುವ ಆದೇಶವನ್ನು ಎತ್ತಿಹಿಡಿದಿರುವ ದೆಹಲಿ ಹೈಕೋರ್ಟ್, ಪೊಕ್ಸೋ ಕಾಯಿದೆಯ ಸೆಕ್ಷನ್ 6ರ ಅಡಿಯೂ ಆರೋಪಗಳನ್ನು ಖಾಯಂಗೊಳಿಸಿದೆ. ಪೋಕ್ಸೋ ಕಾಯಿದೆಯ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನವು ‘ಲಿಂಗ-ತಟಸ್ಥ’ವಾಗಿದೆ ಎಂದು ನ್ಯಾಯಾಲಯ ಪುನರುಚ್ಚರಿಸಿದೆ. ಈ ತೀರ್ಪು, ಸಾಮೂಹಿಕ ಅಪರಾಧಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಕರಿಸುವ ಮತ್ತು ಪಿತೂರಿ ನಡೆಸುವ ಸಹಚರರು ತಾಂತ್ರಿಕ ಕಾನೂನು ಲೋಪದೋಷಗಳನ್ನು ಬಳಸಿಕೊಂಡು ಭಾರಿ ಅಪರಾಧಗಳಿಂದ ನುಣುಚಿಕೊಳ್ಳುವುದನ್ನು ತಡೆಯಲಿದೆ.

ಏನಿದು ಪ್ರಕರಣ?:

ಒಂದಷ್ಟು ಪುರುಷರು ಎಸಗಿದ ಲೈಂಗಿಕ ದೌರ್ಜನ್ಯಕ್ಕೆ ಸಕ್ರಿಯವಾಗಿ ಸಹಾಯ ಮಾಡಿದ್ದ ಮಹಿಳಾ ಆರೋಪಿಯೊಬ್ಬಳ ವಿರುದ್ಧ ಆರೋಪ ನಿಗದಿಪಡಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಈ ತೀರ್ಪು ಹೊರಬಿದ್ದಿದೆ. ಭಾರತೀಯ ಕಾನೂನಿನ ಪ್ರಕಾರ ಅತ್ಯಾಚಾರದ ವ್ಯಾಖ್ಯಾನವು ಪುರುಷ ಅಪರಾಧಿಗಳನ್ನು ನಿರ್ದಿಷ್ಟಪಡಿಸುವುದರಿಂದ, ಮಹಿಳೆಯೊಬ್ಬಳನ್ನು ಸೆಕ್ಷನ್ 376ಡಿ ಅಡಿಯಲ್ಲಿ ಗ್ಯಾಂಗ್‌ರೇಪ್‌ಗೆ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಆ ಮಹಿಳೆಯ ಪರ ವಕೀಲರು ವಾದಿಸಿದ್ದರು. ಈ ವಾದವನ್ನು ತಳ್ಳಿಹಾಕಿದ ಹೈಕೋರ್ಟ್, ಕಾಯಿದೆಯಲ್ಲಿ ಅಡಕವಾಗಿರುವ ಸಾಮೂಹಿಕ ಜವಾಬ್ದಾರಿಯ ಕಾನೂನು ತತ್ವವನ್ನು ಒತ್ತಿಹೇಳಿತು. ಸೆಕ್ಷನ್ 376ಡಿ ಯು “ಸಾಮಾನ್ಯ ಉದ್ದೇಶವನ್ನು ಈಡೇರಿಸಲು ಕಾರ್ಯನಿರ್ವಹಿಸುವ ಒಂದು ಅಥವಾ ಹೆಚ್ಚಿನ ವ್ಯಕ್ತಿಗಳು” ಎಂಬ ಪದಗಳನ್ನು ಬಳಸುತ್ತದೆ. ಇದು ಲಿಂಗ ಅಥವಾ ಭೌತಿಕ ಸಾಮರ್ಥ್ಯವನ್ನು ಲೆಕ್ಕಿಸದೆ, ಕೃತ್ಯವನ್ನು ಸುಲಭಗೊಳಿಸುವ, ಸಹಾಯ ಮಾಡುವ ಅಥವಾ ಸಕ್ರಿಯಗೊಳಿಸುವ ಪ್ರತಿಯೊಬ್ಬರನ್ನು ಒಳಗೊಳ್ಳುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Thu, 15 October 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More