ಹೆಂಡತಿ ಮೇಲೆ ರೇಪ್ ಮಾಡುವ ಗಂಡನಿಗೆ ನೀಡಬಾರದು ವಿನಾಯ್ತಿ ಎಂದ ಹೈಕೋರ್ಟ್ ತೀರ್ಪಿನ ಬಗ್ಗೆ ನಡೆಯಬೇಕಿದೆ ಚಿಂತನೆ -ಚರ್ಚೆ!
Justice M Nagaprasanna: ಗಂಡನು ಪತ್ನಿಯ ಇಚ್ಚೆಗೆ ವಿರುದ್ಧವಾಗಿ ಸಂಭೋಗಿಸಿದರೆ ಅದು ಅತ್ಯಾಚಾರವೇ. ನಮ್ಮ ನೆಲದಲ್ಲಿ ಕಾನೂನು ರೂಪಿಸಿರುವ ಅಂದ್ರೆ ಭಾರತದಲ್ಲಿ ಗಂಡನಿಗೆ ವೈವಾಹಿಕ ಅತ್ಯಾಚಾರದಿಂದ ಶ್ರೀರಕ್ಷೆ ನೀಡಿರುವ ಇಂಗ್ಲೆಂಡ್ ತನ್ನ ನೆಲದಲ್ಲಿ ಪತಿಗಿರುವ ಈ ವಿನಾಯಿತಿಯನ್ನು ತೆಗೆದುಹಾಕಿದೆ! ರೇಪ್ ವಿಚಾರದಲ್ಲಿ ಮಹಿಳೆ ಮತ್ತು ಪತ್ನಿಯ ನಡುವೆ ತಾರತಮ್ಯ ಸರಿಯಲ್ಲ. ವಿವಾಹ ಬಂಧನ ಎಂಬುದು ಪತ್ನಿಯ ಮೇಲೆ ದೌರ್ಜನ್ಯವೆಸಗಲು ನೀಡುವ ಅನುಮತಿಯಲ್ಲ ಎಂದು ನ್ಯಾ. ನಾಗಪ್ರಸನ್ನ ಅವರ ನ್ಯಾಯ ಪೀಠ ಈ ಷರಾ ಬರೆದಿದೆ.
ಗಂಡನಿಂದಲೇ ರೇಪ್ ಆದಾಗ ಅಂತಹ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗೆ ವಿನಾಯ್ತಿ ನೀಡಬಾರದು. ಆದರೆ ಸದ್ಯದ ಕಾನೂನಿನಲ್ಲಿ ಪತಿಗೆ ಆ ಒಂದು ರಕ್ಷಣೆ ನೀಡಲಾಗಿದೆ. ಇದರ ಬಗ್ಗೆ ಶಾಸಕಾಂಗ ಚಿಂತನೆ ನಡೆಸಲಿ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ (Justice M Nagaprasanna, Karnataka High Court) ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಬೆಂಗಳೂರಿನಲ್ಲಿ ನಡೆದಿದ್ದ ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಸಿ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅದರಂತೆ ಗಂಡನ (Husband) ವಿರುದ್ಧವೇ ಹೆಂಡತಿ (Wife) ಅತ್ಯಾಚಾರ ಕೇಸ್ (Marital Rape) ದಾಖಲಿಸಿದ್ದಾರೆ. ಹಾಗಾಗಿ ಸದ್ಯದ ಕಾನೂನಿನಲ್ಲಿ (immunity under Section 375) ಪತಿಗೆ ವಿನಾಯಿತಿ ಇದ್ದರೂ ಆತನ ವಿರುದ್ಧದ ಅತ್ಯಾಚಾರ ಆರೋಪ ರದ್ದುಪಡಿಸಲು ನ್ಯಾಯಪೀಠ ನಿರಾಕರಿಸಿದೆ. ಇದು ವೈವಾಹಿಕ ಅತ್ಯಾಚಾರದ (marital rape) ವಿರುದ್ಧ ಎರಡು ದಿನಗಳ ಹಿಂದೆ ಹೊರಬಿದ್ದ ತೀರ್ಪು. ಈ ತೀರ್ಪಿನ ಸಮ್ಮುಖದಲ್ಲಿ ನೊಂದ ಅಸಂಖ್ಯಾತ ಹೆಣ್ಣುಮಕ್ಕಳು ಸೇರಿದಂತೆ ಎಲ್ಲರೂ ತೀರ್ಪನ್ನು ಸ್ವಾಗತಿಸಿದ್ದು, ಇದರ ಬಗ್ಗೆ ಚರ್ಚೆಗಳು ನಡೆಯಲಿ, ಪತಿಗೆ ಈಗಿರುವ ಕಾನೂನು ರಕ್ಷಣೆ ಕಳಚಲಿ ಎಂದು ಬಯಸಿದ್ದಾರೆ.
ಪ್ರಸ್ತುತ ಭಾರತದಲ್ಲಿ ಶಿಕ್ಷಾರ್ಹ ಅಪರಾಧವಾದ ರೇಪ್ ಅಂದರೆ ಸಂಭೋಗವಾಗಿರುವುದು ಎಂಬ ವ್ಯಾಖ್ಯಾನವಿದೆ. ಶಾಸಕಾಂಗ ಇದಕ್ಕೆ ನೀರೆರೆಯುತ್ತಾ, ಗಂಡ ಹೆಂಡತಿ ಮಧ್ಯೆ ನಡೆಯುವ ಸಂಭೋಗ ರೇಪ್ ಅಂತಾಗುವುದಿಲ್ಲ ಎಂದು ಗಂಡನಿಗೆ ರೇಪ್ ಅಪರಾಧದಿಂದ ಮುಕ್ತಿ ನೀಡಿದೆ. ಆದರೆ ಮೊನ್ನೆಯ ಕೋರ್ಟ್ ತೀರ್ಪಿನ ಬಳಿಕ ಅದು ಚರ್ಚೆಗೆ ಗ್ರಾಸ ಒದಗಿಸಿದೆ. ಈ ಮಧ್ಯೆ,ಕಾನೂನು ರೂಪಿಸುವುದು ಶಾಸಕಾಂಗವೋ, ನ್ಯಾಯಾಂಗವೋ ಎಂಬ ಪ್ರಶ್ನೆಯೂ ಎದ್ದಿದೆ.
ಪುರುಷ ಪುರುಷನೇ ಸರಿ. ಅತ್ಯಾಚಾರ ಎಂಬ ಕ್ರಿಯೆ ಅತ್ಯಾಚರವೇ ಸರಿ. ಅದು ಗಂಡನೆಂಬ ಪುರುಷನಿಂದಲಾದರೂ ಆಗಿರಬಹುದು ಎಂಬುದು ಸದ್ಯಕ್ಕೆ ಕೋರ್ಟ್ ತರ್ಕ. ಆದರೆ ಶಾಸಕಾಂಗವು ಹೆಂಡತಿಯ ಮೇಲೆ ಬಲಾತ್ಕಾರದಿಂದ ಸಂಭೋಗ ನಡೆಸುವ ಗಂಡನನ್ನು ವಿಚಾರಣೆಗೆ ಒಳಪಡಿಸುವುದಕ್ಕೆ ಒಪ್ಪುವುದಿಲ್ಲ. ಅದು ಗಂಡ ಎಂಬ ಪುರುಷನಿಗೆ, ಆತ ಗಂಡ ಎಂಬ ಏಕೈಕ ಕಾರಣದಿಂದ ರಕ್ಷಣೆ ನೀಡಲು ಬಯಸುತ್ತದೆ. ಆದರೆ ಗಂಡ ತನ್ನ ಹೆಂಡತಿಯನ್ನು ಲೈಂಗಿಕವಾಗಿ ಬಳಸಿಕೊಂಡರೆ ಅದು ಸಂಭೋಗವೇ ಆಗುತ್ತದೆ. ಅಂದರೆ ಸಂಭೋಗವೆನ್ನುವುದು ರೇಪ್ ಅರ್ಥ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಬಲವಂತದ ಸಂಭೋಗವನ್ನು ರೇಪ್ ಎಂದು ಪರಿಗಣಿಸಿ, ರೇಪ್ ಮಾಡುವುದು ಅಪರಾಧವೆಂದು ಪರಿಗಣಿಸಿದಾಗ ಅದು ಶಿಕ್ಷಾರ್ಹವಾಗುತ್ತದೆ ಎಂಬ ಕೋರ್ಟ್ ವ್ಯಾಖ್ಯಾನಕ್ಕೆ ಈಗ ಹೆಚ್ಚಿನ ಬಲ ಬಂದಿದೆ.
ಅಂದಹಾಗೆ, ಭಾರತೀಯ ದಂಡ ಸಂಹಿತೆಯನ್ನು (Indian Penal Code-1860) ದೇಶದಲ್ಲಿ 1861ರಲ್ಲಿ ಅನ್ವಯಗೊಳಿಸಲಾಯಿತು. ಆರಂಭದಿಂದಲೇ ಗಂಡನಿಂದ ನಡೆಯುವ ರೇಪ್ಗೆ ರಕ್ಷಣೆ ಕಲ್ಪಿಸಲಾಗಿದೆ. ಬ್ರಿಟಿಷರು ಈ ವಿನಾಯ್ತಿ ಕಲ್ಪಿಸಿದರು. ಆದರೆ ಕಾಲಾಂತರದಲ್ಲಿ ಸ್ವತಂತ್ರ ಭಾರತದ ಸಂಸತ್ತು ಸಹ ಈ ಶ್ರೀರಕ್ಷೆಗೆ ಅಂಕಿತವಾಗಿದ್ದು, ಅದನ್ನು ಪೋಷಿಸಿಕೊಂಡು ಬಂದಿದೆ. ಹೆಂಡತಿ 18 ವರ್ಷಕ್ಕಿಂತ ದೊಡ್ಡವಳಾಗಿದ್ದರೆ, ಮತ್ತು ಹೆಂಡತಿಯ ಒಪ್ಪಿಗೆ, ಸಮ್ಮತಿ ಇಲ್ಲದೆಯೂ ಗಂಡ ಆಕೆಯ ಮೇಲೆ ಸಂಭೋಗ ನಡೆಸಿದರೆ ಅಂತಹ ಗಂಡನನ್ನು ಶಿಕ್ಷೆಗೆ ಗುರಿಪಡಿಸುವಂತಿಲ್ಲ – ಇದು ಚಾಲ್ತಿಯಲ್ಲಿರುವ ಈ ನೆಲದ ಕಾನೂನು. ಇದನ್ನೆ marital rape exception ಅನ್ನುವುದು.
ಆದರೆ ಮೊನ್ನೆ ರಾಜ್ಯ ಹೈಕೋರ್ಟ್ ಪೀಠ ಇದರ ವಿರುದ್ಧವೇ ಪ್ರಶ್ನೆ ಎತ್ತಿರುವುದು. ಈ ವಿನಾಯಿತಿಯಡಿ ಗಂಡನಿಗೆ ರಕ್ಷಣೆ ಕಲ್ಪಿಸಿದರೆ ಅದು ನಿಜಕ್ಕೂ ಆ ಹೆಣ್ಣುಮಗಳಿಗೆ ಮಾಡಿದ ಅನ್ಯಾಯ ಎಂದಾಗುತ್ತದೆ. ಪ್ರಸ್ತುತ ರೇಪ್ ಶಿಕ್ಷೆ(Indian Penal Code Section 375) ಅನುಸಾರ ಗಂಡನನ್ನು ಈ ಶಿಕ್ಷೆಯಿಂದ ಮುಕ್ತವಾಗಿಟ್ಟರೆ ಅದು ಕಾನೂನಿನಲ್ಲಿ ಅಸಮಾನತೆ ಎಂಬುದು ನುಸುಳಿದಂತಾಗುತ್ತದೆ. ಇದರಿಂದ ಸಂವಿಧಾನದ 14ನೇ ಪರಿಚ್ಛೇದಕ್ಕೆ (Article 14 of the Constitution) ಕಂಟಕವಾಗುತ್ತದೆ. ಆದರೆ ಸಂವಿಧಾನದಡಿ ಎಲ್ಲ ನಾಗರಿಕರೂ ಸಮಾನರು ಅಲ್ಲವಾ? ಇಲ್ಲಿ ಮಹಿಳೆಗೆ ಸಮಾನತೆ ಸಾಧಿಸಲು ಅವಕಾಶವೆಲ್ಲಿದೆ?
ಇದೇ ಸಂವಿಧಾನದಲ್ಲಿ ಮಹಿಳೆ ಮತ್ತು ಪುರುಷ ಸಮಾನರು ಎಂದು ಸಾರುತ್ತಿರುವಾಗ IPC Section 375 ಶಿಕ್ಷೆಗೆ ನಿಯಮ 2 ಅಡಿ ವಿನಾಯಿತಿ ನೀಡಿದರೆ ಅದು ಅಸಮಾನತೆಯನ್ನು ಪೋಷಿಸಿದಂತಾಗುವುದಿಲ್ಲವೇ? ಎಂಬುದು ಮೊನ್ನೆ ಹೈಕೋರ್ಟ್ ನ್ಯಾಯಪೀಠ ಎತ್ತಿರುವ ಪ್ರಶ್ನೆ. ಕಾನೂನಿನಡಿ ಇಂತಹ ಅಸಾಮಾನ್ಯ ಸಂರಕ್ಷಣೆ ಕಲ್ಪಿಸಿರುವುದರ ಬಗ್ಗೆ ಶಾಸಕಾಂಗ ಪುನರ್ ವ್ಯಾಖ್ಯಾನಿಸಿಬೇಕಿದೆ ಎಂದೇ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಹೈಕೋರ್ಟ್ ಪೀಠ ಕಿವಿಮಾತು ಹೇಳಿರುವುದು. ಪುರಾತನ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಈ ಶೋಷಣೆ ಮತ್ತು ಹೆಂಡತಿಯ ಮೇಲೆ ದೈಹಿಕವಾಗಿ, ಮಾನಸಿಕವಾಗಿ ಗಂಡನಿಗೆ ಸರ್ವ ಹಕ್ಕು ಇದೆ ಎಂದು ಪೂಜಿಸಿಕೊಂಡು ಬಂದಿರುವುದು ಇನ್ನಾದರೂ ಬದಲಾಗಬೇಕಿದೆ ಎಂದೇ ಹೈಕೋರ್ಟ್ ಪೀಠ ಬಯಸಿರುವುದು. ಇಂತಹ ಅಪರಾಧಗಳನ್ನು ಪೋಷಿಸುತ್ತಿರುವುದರಿಂದ ಮಹಿಳೆಯ ಮೇಲಿನ ದೌರ್ಜನ್ಯ ಮುಂದವರಿದುಕೊಂಡು, ಅಧಿಕವಾಗುತ್ತಲೂ ಇದೆ ಎಂದಿದೆ ಕೋರ್ಟ್.
ನಮ್ಮ ನೆಲದಲ್ಲಿ ಈ ಕರಾಳ ಕಾನೂನು ರೂಪಿಸಿ, ಬಿಟ್ಟು ಹೋಗಿದೆ ಇಂಗ್ಲೆಂಡ್ ಆದರೆ ತನ್ನ ನೆಲದಲ್ಲಿ ಪತಿಗಿರುವ ಈ ವಿನಾಯಿತಿಯನ್ನು ತೆಗೆದುಹಾಕಿದೆ! ಈಗಿನ ಪ್ರಕರಣದಲ್ಲಿ ಹೈಕೋರ್ಟ್ ಏಕಸದಸ್ಯ ಪೀಠವು ಪತಿಯ ವಿರುದ್ಧವೂ ಅತ್ಯಾಚಾರ ಪ್ರಕರಣ ಪರಿಗಣಿಸಬೇಕು. ಪತಿಯ ಕೃತ್ಯದಿಂದ ಪತ್ನಿಯ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಪರಿಣಾಮ ಬೀರುತ್ತದೆ. ಪತ್ನಿಯ ಒಡಲಾಳದಲ್ಲಿ ಅಳಿಸಲಾಗದ ಕಲೆ ಉಳಿದುಬಿಡುತ್ತದೆ. ಈ ತೊಳಲಾಟಗಳ ಸಮ್ಮುಖದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗೆ ಈಗಿರುವ ವಿನಾಯ್ತಿಯನ್ನು ರದ್ದು ಮಾಡುವುದೇ ಸೂಕ್ತವಾದೀತು. ಶಾಸಕಾಂಗ ಈ ಬಗ್ಗೆ ಚಿಂತನೆ ನಡೆಸಲಿ ಎಂದು ಕೋರ್ಟ್ ಹೇಳಿರುವುದು.
ಗಂಡನು ಪತ್ನಿಯ ಇಚ್ಚೆಗೆ ವಿರುದ್ಧವಾಗಿ ಸಂಭೋಗಿಸಿದರೆ ಅದು ಅತ್ಯಾಚಾರವೇ. ನಮ್ಮ ನೆಲದಲ್ಲಿ ಕಾನೂನು ರೂಪಿಸಿರುವ ಅಂದ್ರೆ ಭಾರತದಲ್ಲಿ ಗಂಡನಿಗೆ ವೈವಾಹಿಕ ಅತ್ಯಾಚಾರದಿಂದ ಶ್ರೀರಕ್ಷೆ ನೀಡಿರುವ ಇಂಗ್ಲೆಂಡ್ ತನ್ನ ನೆಲದಲ್ಲಿ ಪತಿಗಿರುವ ಈ ವಿನಾಯಿತಿಯನ್ನು ತೆಗೆದುಹಾಕಿದೆ! ರೇಪ್ ವಿಚಾರದಲ್ಲಿ ಮಹಿಳೆ ಮತ್ತು ಪತ್ನಿಯ ನಡುವೆ ತಾರತಮ್ಯ ಸರಿಯಲ್ಲ. ವಿವಾಹ ಪತ್ನಿಯ ಮೇಲೆ ದೌರ್ಜನ್ಯವೆಸಗಲು ನೀಡುವ ಅನುಮತಿಯಲ್ಲ ಎಂದೂ ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ರೇಪ್ ವಿಚಾರದಲ್ಲಿ ಮಹಿಳೆ, ಪತ್ನಿಯ ನಡುವೆ ತಾರತಮ್ಯ ಸರಿಯಲ್ಲ. ವಿವಾಹ ಬಂಧನ ಎಂಬುದು ಪತ್ನಿಯ ಮೇಲೆ ದೌರ್ಜನ್ಯವೆಸಗಲು ನೀಡುವ ಅನುಮತಿಯಲ್ಲ ಎಂದು ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಷರಾ ಬರೆದಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಈ ನಿಲುವು, ಬದ್ಧತೆ ಮುಂದಿನ ದಿನಗಳಲ್ಲಿ ಹೆಂಡತಿಯನ್ನು ಶೋಷಣೆಯಿಂದ ಪಾರು ಮಾಡಬಲ್ಲುದೇ? ಎಂಬುದು ಸದ್ಯದ ಪ್ರಶ್ನೆ.
ಇದನ್ನೂ ಓದಿ: ಕಾಶ್ಮೀರ ಫೈಲ್ಸ್ನ್ನು ಹೊಗಳಿದ ಮಧ್ಯಪ್ರದೇಶ ಸಿಎಂ; ನರಮೇಧ ನೆನಪಿಸುವ ಮ್ಯೂಸಿಯಂ ನಿರ್ಮಿಸಲು ಜಾಗ ನೀಡುತ್ತೇವೆ ಎಂದ ಚೌಹಾಣ್
Published On - 9:39 pm, Fri, 25 March 22