IPL 2024: RCB ತಂಡದ ಸರ್ವಶ್ರೇಷ್ಠ ದಾಖಲೆಯನ್ನು 3 ಬಾರಿ ಮುರಿದ SRH
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಮೂರು ಬಾರಿ 250+ ಸ್ಕೋರ್ ಕಲೆಹಾಕಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಒಂದೇ ಸೀಸನ್ನಲ್ಲಿ 3 ಬಾರಿ ಮುರಿದಿರುವುದು ವಿಶೇಷ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...
Updated on: Apr 21, 2024 | 8:05 AM

2023 ತನಕ ಒಂದು ಲೆಕ್ಕ... ಇನ್ಮುಂದೆ ಒಂದು ಲೆಕ್ಕ... ಪ್ರಸ್ತುತ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಪ್ರದರ್ಶನ ನೋಡಿದ್ರೆ ಈ ಡೈಲಾಗ್ ನೆನಪಿಗೆ ಬರುತ್ತೆ. ಏಕೆಂದರೆ ಕಳೆದ ಒಂದು ದಶಕದಿಂದ ಐಪಿಎಲ್ನ ಸರ್ವಶೇಷ್ಠ ದಾಖಲೆಯಾಗಿ ಗುರುತಿಸಿಕೊಂಡಿದ್ದ ಒಂದು ರೆಕಾರ್ಡ್ ಅನ್ನು ಎಸ್ಆರ್ಹೆಚ್ ತಂಡವು ಬ್ಯಾಕ್ ಟು ಬ್ಯಾಕ್ ಮೂರು ಬಾರಿ ಮುರಿದಿದೆ.

ಹೌದು, 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡವು ಕ್ರಿಸ್ ಗೇಲ್ (175) ಅವರ ಶತಕದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 263 ರನ್ ಬಾರಿಸಿ ದಾಖಲೆ ಬರೆದಿತ್ತು. ಈ ಸರ್ವಶ್ರೇಷ್ಠ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎನ್ನಲಾಗಿತ್ತು. ಅದರಂತೆ ಕಳೆದ 10 ವರ್ಷಗಳಲ್ಲಿ ಈ ದಾಖಲೆಯ ಸಮೀಪಕ್ಕೂ ತಲುಪಲು ಯಾವುದೇ ತಂಡಕ್ಕೆ ಸಾಧ್ಯವಾಗಿರಲಿಲ್ಲ.

ಆದರೆ ಈ ಬಾರಿ ಸನ್ರೈಸರ್ಸ್ ಹೈದರಾಬಾದ್ ತಂಡ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಒಂದೇ ಸೀಸನ್ನಲ್ಲಿ ಮೂರು ಬಾರಿ ಆರ್ಸಿಬಿ ತಂಡದ ಹೆಸರಿನಲ್ಲಿದ್ದ ಸರ್ವಶ್ರೇಷ್ಠ ದಾಖಲೆಯನ್ನು ಮುರಿದಿದೆ. ಈ ಮೂಲಕ ಆರ್ಸಿಬಿ ತಂಡದ ದಾಖಲೆಯನ್ನು ಐದನೇ ಸ್ಥಾನಕ್ಕೆ ತಳ್ಳಿದೆ.

ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 272 ರನ್ ಬಾರಿಸಿ ಮಿಂಚಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡವು, ಆ ಬಳಿಕ ಬಳಿಕ ಆರ್ಸಿಬಿ ವಿರುದ್ಧ 287 ರನ್ ಸಿಡಿಸಿ ಹೊಸ ಇತಿಹಾಸವನ್ನು ನಿರ್ಮಿಸಿತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 266 ರನ್ ಸಿಡಿಸಿ ಮತ್ತೊಮ್ಮೆ ಅಬ್ಬರಿಸಿದ್ದಾರೆ.

ಈ ಮೂಲಕ ಒಂದೇ ಸೀಸನ್ನಲ್ಲಿ ಮೂರು ಬಾರಿ 263+ ಸ್ಕೋರ್ಗಳಿಸಿ ಆರ್ಸಿಬಿ ತಂಡದ ಸರ್ವಶ್ರೇಷ್ಠ ದಾಖಲೆಯನ್ನು ಮೂರು ಬಾರಿ ಮುರಿದಿದೆ. ಅಲ್ಲದೆ ಐಪಿಎಲ್ನಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ತಂಡಗಳ ಪಟ್ಟಿಯಲ್ಲಿ ಎಸ್ಆರ್ಹೆಚ್ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದೆ.

ಇನ್ನು ಮೂರನೇ ಸ್ಥಾನದಲ್ಲಿ ಕೆಕೆಆರ್ (272 ಸ್ಕೋರ್) ಇದ್ದರೆ, ನಾಲ್ಕನೇ ಸ್ಥಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ ಇದೆ. ಹಾಗೆಯೇ ಇದೀಗ ಆರ್ಸಿಬಿ ತಂಡದ 263 ರನ್ಗಳ ಸ್ಕೋರ್ ದಾಖಲೆ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

TV9 Kannada
Read More




