- TV9 Kannada Photo gallery Cricket photos IPL History: Top 5 Unbreakable Records Even After 2026 Season – Legends Dominate
IPL 2026: ಈ ಐಪಿಎಲ್ನಲ್ಲೂ ಈ 5 ದಾಖಲೆಗಳನ್ನು ಮುರಿಯಲಾಗಲಿಲ್ಲ..!
5 Historic Unbroken Records: 2026ರ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಸೀಸನ್‌ನಲ್ಲೂ ಕ್ರಿಸ್ ಗೇಲ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ (175 ರನ್), ವಿರಾಟ್ ಕೊಹ್ಲಿ ಅವರ ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ (973 ರನ್) ಸೇರಿದಂತೆ ಐಪಿಎಲ್ ಇತಿಹಾಸದ 5 ಪ್ರಮುಖ ದಾಖಲೆಗಳನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ವೈಭವ್ ಸೂರ್ಯವಂಶಿ, ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದರೂ, ಗೇಲ್, ಕೊಹ್ಲಿ, ಪಟೇಲ್, ಬ್ರಾವೋ ಅವರ ದಾಖಲೆಗಳು ಅಚಲವಾಗಿ ಉಳಿದವು.
Updated on: Jun 03, 2026 | 6:29 PM

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದೊಂದಿಗೆ 2026 ರ ಐಪಿಎಲ್ಗೂ ತೆರೆ ಬಿದ್ದಿತು. ಫೈನಲ್‌ನಲ್ಲಿ ರಜತ್ ಪಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು. ಪ್ರತಿ ಬಾರಿಯಂತೆ ಈ ಬಾರಿಯೂ ಹಲವು ದಾಖಲೆಗಳು ಸೃಷ್ಟಿಯಾದವು. ಆದಾಗ್ಯೂ ಈ 5 ದಾಖಲೆಗಳನ್ನು ಮಾತ್ರ ಯಾರಿಗೂ ಮುರಿಯಲು ಸಾಧ್ಯವಾಗಲಿಲ್ಲ (PC- PTI).

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದೆ. 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗೇಲ್ ಕೇವಲ 66 ಎಸೆತಗಳಲ್ಲಿ 175 ರನ್ ಬಾರಿಸಿದ್ದರು. ಈ ದಾಖಲೆಯನ್ನು ಇದುವರೆಗೂ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ. ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಆಟಗಾರ ಕೆಎಲ್ ರಾಹುಲ್ 152 ರನ್ ಬಾರಿಸಿದರಾದರೂ ಗೇಲ್ ದಾಖಲೆಯನ್ನು ಮುರಿಯಲಾಗಲಿಲ್ಲ (PC- PTI).

ಐಪಿಎಲ್‌ನ ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ರನ್ ಮೆಷಿನ್ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016 ರ ಐಪಿಎಲ್ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕೊಹ್ಲಿ 973 ರನ್ ಕಲೆಹಾಕಿದ್ದರು. ಈ ಸೀಸನ್‌ನಲ್ಲಿ ವೈಭವ್ ಸೂರ್ಯವಂಶಿ, ಶುಭ್‌ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರಂತಹ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಫಾರ್ಮ್‌ನಲ್ಲಿದ್ದರಾದರೂ ಕೊಹ್ಲಿಯ ದಾಖಲೆಯನ್ನು ಮೀರಿಸಲು ಸಾಧ್ಯವಾಗಲಿಲ್ಲ (PC- PTI).

ಐಪಿಎಲ್‌ನಲ್ಲಿ ಅತ್ಯಂತ ವೇಗದ ಶತಕದ ದಾಖಲೆಯೂ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದೆ. ಅವರು ಕೇವಲ 30 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ದಾಖಲೆಯನ್ನು ಐಪಿಎಲ್ 2026 ರಲ್ಲಿ ಬಹುತೇಕ ಮುರಿಯುವ ಅವಕಾಶಗಳಿದ್ದವು. ರಾಜಸ್ಥಾನ್ ರಾಯಲ್ಸ್‌ನ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 97 ರನ್ ಗಳಿಸುವ ಮೂಲಕ ಗೇಲ್ ಅವರ ದಾಖಲೆಯನ್ನು ಮುರಿಯಲು ಪ್ರಯತ್ನಿಸಿದರಾದರೂ 97 ರನ್ಗೆ ಔಟಾಗುವ ಮೂಲಕ ದಾಖಲೆ ಮುರಿಯುವುದರಲ್ಲಿ ವಿಫಲರಾದರು (PC- PTI).

ಐಪಿಎಲ್‌ನಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹರ್ಷಲ್ ಪಟೇಲ್ ಮತ್ತು ಡ್ವೇನ್ ಬ್ರಾವೋ ಅವರ ಹೆಸರಿನಲ್ಲಿದೆ. 2021 ರಲ್ಲಿ ಆರ್‌ಸಿಬಿ ಪರ ಹರ್ಷಲ್ ಪಟೇಲ್ ತಲಾ 32 ವಿಕೆಟ್‌ಗಳನ್ನು ಮತ್ತು 2013 ರಲ್ಲಿ ಸಿಎಸ್‌ಕೆ ಪರ ಬ್ರಾವೋ ತಲಾ 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರಿಬ್ಬರ ದಾಖಲೆ ಕೂಡ ಹಾಗೆಯೇ ಉಳಿಯಿತು (PC- PTI).

ಒಂದು ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್ ಹೆಸರಿನಲ್ಲಿದೆ. ಕೊಹ್ಲಿ 2016 ರಲ್ಲಿ 4 ಶತಕಗಳನ್ನು ಬಾರಿಸಿದರೆ, ಬಟ್ಲರ್ 2022 ರಲ್ಲಿ 4 ಶತಕಗಳನ್ನು ಬಾರಿಸಿದ್ದರು. ಆದಾಗ್ಯೂ, ಐಪಿಎಲ್ 2026 ರಲ್ಲಿ ಯಾವುದೇ ಬ್ಯಾಟ್ಸ್ಮನ್ಗೂ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ (PC- PTI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



