ಹಿಂದೂ ಸಂಪ್ರದಾಯದಲ್ಲಿ ಹೊಸ್ತಿಲು ಪೂಜೆಯ ಮಹತ್ವ ತಿಳಿಯಿರಿ, ಕರಾವಳಿಯಲ್ಲಿ ಅಜ್ಜಿ ಶಾಸ್ತ್ರದ ವಿಶೇಷತೆ ಏನು?
Threshold or Hostilu puja: ಮನೆಯ ಮುತ್ತೈದೆಯರೆಲ್ಲರೂ ಹೊಸ್ತಿಲಿನಲ್ಲಿ ಲಕ್ಷ್ಮೀಯನ್ನು ಪೂಜಿಸಬೇಕು. ಹೊಸ್ತಿಲು ಮತ್ತು ತುಳಸೀ ವೃಂದಾವನ ಪೂಜೆಯನ್ನು ಕನ್ಯೆಯರೂ ಕಡ್ಡಾಯವಾಗಿ ಮಾಡತಕ್ಕದ್ದು. ಸ್ನಾನದ ನಂತರ ಶುಚಿತ್ವದಿಂದ ಹೊಸ್ತಿಲು ಬಳಿದು, ಸ್ವಸ್ತಿಕೆ ಬರೆದು, ಅಲಂಕರಿಸಿ ಪೂಜಿಸಬೇಕು.
ಸ್ತ್ರೀಯರಿಗೆ ಲಕ್ಷ್ಮಿದೇವಿಯ ಆರಾಧನೆಗೆ ಹಲವು ಪ್ರತೀಕಗಳಿವೆ. ಅವುಗಳಲ್ಲಿ ಹೊಸ್ತಿಲು ಮತ್ತು ತುಳಸೀ ವೃಂದಾವನ ಪೂಜೆ ಪ್ರಮುಖವಾದವು. ಮನೆಯ ಮುತ್ತೈದೆಯರೆಲ್ಲರೂ ಹೊಸ್ತಿಲಿನಲ್ಲಿ ಲಕ್ಷ್ಮೀಯನ್ನು ಪೂಜಿಸಬೇಕು. ಹೊಸ್ತಿಲು ಮತ್ತು ತುಳಸೀ ವೃಂದಾವನ ಪೂಜೆಯನ್ನು ಕನ್ಯೆಯರೂ ಕಡ್ಡಾಯವಾಗಿ ಮಾಡತಕ್ಕದ್ದು. ಸ್ನಾನದ ನಂತರ ಶುಚಿತ್ವದಿಂದ ಹೊಸ್ತಿಲು ಬಳಿದು, ಸ್ವಸ್ತಿಕೆ ಬರೆದು, ಅಲಂಕರಿಸಿ ಪೂಜಿಸಬೇಕು. ಕೆಲವೆಡೆ ಸ್ನಾನಕ್ಕೆ ಮೊದಲೇ ಹೊಸ್ತಿಲು ಬಳಿದು, ಸ್ವಸ್ತಿಕೆ ಬರೆದು, ಅಲಂಕರಿಸಿ ಸ್ನಾನಾನಂತರ ಪೂಜಿಸುವ ಸಂಪ್ರದಾಯವಿದೆ. ಶಾಸ್ತ್ರರೀತ್ಯಾ ಸ್ನಾನಾನಂತರದ ಹೊಸ್ತಿಲಪೂಜೆ ಉತ್ತಮ.
ಶುದ್ಧ ಜಲಪೂರ್ಣವಾದ ತಂಬಿಗೆಯನ್ನು ಹೊಸ್ತಿಲ ಮಧ್ಯದಲ್ಲಿಟ್ಟು ಮಂಗಳದ್ರವ್ಯಗಳಿಂದ ಪೂಜಿಸಿ, ಹೊಸ್ತಿಲ ನಮಸ್ಕಾರಕ್ಕೆ ಹೇಳುವ ಶ್ಲೋಕ:
ಹ್ರೀಂಕಾರರೂಪಿಣೀ ದೇವಿ ವೀಣಾ ಪುಸ್ತಕಧಾರಿಣೀ | ವೇದಮಾತರ್ನಮಸ್ತುಭ್ಯಂ ಮಾಂಗಲ್ಯಂ ದೇಹಿ ಮೇ ಸದಾ ||
ಮಾಂಗಲ್ಯಾಭರಣೈರ್ಯುಕ್ತೇ ಮಂಗಳೇ ಸರ್ವಮಂಗಳೇ | ಗೃಹಲಕ್ಷ್ಮಿರ್ಧಾನ್ಯಲಕ್ಷ್ಮಿರ್ದ್ವಾರಲಕ್ಷ್ಮಿರ್ನಮೋಽಸ್ತುತೇ ||
ಎಂಬ ಶ್ಲೋಕದಿಂದ ನಮಸ್ಕರಿಸಿ, ಹೊಸ್ತಿಲಿಗೆ ಅರ್ಪಿಸಿದ್ದ ಒಂದು ಹೂವನ್ನು ಮುಡಿದುಕೊಂಡು, ಕೈತೊಳೆದು, ತಂಬಿಗೆಯನ್ನು ಕೆಳಗಿಳಿಸಬೇಕು. ಹೊಸ್ತಿಲು ಪೂಜೆ ಮುಗಿಯುವ ತನಕ ಯಾರೂ ಹೊಸ್ತಿಲು ದಾಟಬಾರದು.
ಹೊಸ್ತಿಲು ಪೂಜೆ ವೇಳೆ ಈ ಮಂತ್ರವನ್ನು ಕೂಡ ಹೇಳಬಹುದು : ದ್ವಾರಾದೇವಿ ನಮಸ್ತುಭ್ಯಮ್ ದ್ವಾರಕೇಶ್ವರ ಭಾಮಿನಿ , ಪತಿ ದ್ವಾರ ಹರಿ ಗುರು ಭಕ್ತಿಮ್ ಪುತ್ರಸ್ತ ದೇಹಿಮೇ
ದೇವರ ಕೋಣೆಯ ಹೊಸ್ತಿಲಿಗೆ ಮಾತ್ರ ಹೊರಗಿನಿಂದ ಪೂಜಿಸಬೇಕು:
ಗೃಹದ ಪ್ರಧಾನ ದ್ವಾರವನ್ನು ಹೊಸ್ತಿಲು ಪೂಜೆಗಾಗಿ ಆರಿಸಿಕೊಳ್ಳಬೇಕು. ಅನುಕೂಲತೆ ಹಾಗೂ ಶುದ್ಧಿಯ ಕಾರಣಗಳಿಂದ ದೇವರ ಕೋಣೆಯ ದ್ವಾರವನ್ನು ಪೂಜಿಸಿದರೂ, ಪ್ರಧಾನ ದ್ವಾರದಲ್ಲೂ ರಂಗೊಲಿ ಇರಬೇಕು. ಅಶೂನ್ಯಾ ದೇಹಲೀ ಕಾರ್ಯಾ… ಎಂಬಂತೆ ಹೊಸ್ತಿಲು ಬೋಳಾಗಿರಕೂಡದು. ಕಸ ಕಡ್ಡಿಗಳಿಂದ ತುಂಬಿರ ಕೂಡದು. ಗೃಹ ವಸ್ತುಗಳನ್ನು ಹೊಸ್ತಿಲಲ್ಲಿಡಕೂಡದು. ಕೆಲವೆಡೆ ಮನೆಯೊಳಗಿದ್ದೇ ಹೊಸ್ತಿಲ ಪೂಜೆಯನ್ನು ಮಾಡುತ್ತಾರೆ. ಕೆಲವೆಡೆ , ಹೊಸ್ತಿಲ ಹೊರಗೆ ನಿಂತು ಮಹಾಲಕ್ಷ್ಮಿಯನ್ನು ಆಹ್ವಾನಿಸುವ ಮತ್ತು ಆವಾಹಿಸುವ ಪೂಜಿಸುವ ಸಂಪ್ರದಾಯವು ಕೆಲವೆಡೆ ಪ್ರಚಲಿತವಾಗಿರುತ್ತದೆ. ದೇವರ ಕೋಣೆಯ ಹೊಸ್ತಿಲಿಗೆ ಮಾತ್ರ ಹೊರಗಿನಿಂದ ಪೂಜಿಸಬೇಕು.
ಸೋಣೆ ತಿಂಗಳಲ್ಲಿ ಹೊಸ್ತಿಲು ಪೂಜೆ ಮತ್ತು ಅಜ್ಜಿ ಶಾಸ್ತ್ರ:
ಕರಾವಳಿಯಲ್ಲಿ ಹಬ್ಬ ಹರಿದಿನಗಳಿಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ಇಲ್ಲಿ ಆಚರಿಸಲಾಗುವ ಪ್ರತಿಯೊಂದು ಹಬ್ಬಗಳಿಗೂ ಅದರದ್ದೇ ಆದ ಹಿನ್ನೆಲೆಯಿದೆ. ನಾಗಮಂಡಲ, ಭೂತಾರಾಧನೆ, ಜಕ್ಣಿ, ಹೊಸ್ತು, ತುಳಸಿ ಪೂಜೆ, ಹೊಸ್ತಿಲ್ ಪೂಜೆ (ಅಜ್ಜಿ ಶಾಸ್ತ್ರ) ಹೀಗೆ ಹಲವಾರು ಆಚರಣೆಗಳು ಉಡುಪಿ ಕುಂದಾಪುರ ಭಾಗದಲ್ಲಿ ಹಾಸು ಹೊಕ್ಕಾಗಿದೆ. ಆಯಾಯ ತಿಂಗಳಿಗನುಸಾರವಾಗಿ ಅವವರವರ ಸಂಪ್ರದಾಯಕ್ಕನುಗುಣವಾಗಿ ನಡೆಯುತ್ತಿರುತ್ತವೆ.
ಆಗಸ್ಟ್ ಅಂದರೆ ಸೋಣೆ ತಿಂಗಳ ಕಾಲ. ದೇವಸ್ಥಾನಗಳಲ್ಲಿ ಸೋಣೆ ಆರತಿ, ಹೂವಿನ ಪೂಜೆ ಮುಂತಾದ ಶುಭ ಕಾರ್ಯಗಳು ನಡೆಯುವುದು ಈಗ ಸಾಮಾನ್ಯ. ಅಲ್ಲದೇ ಪ್ರತಿ ಮನೆಯಲ್ಲೂ ಸಂಪ್ರದಾಯಬದ್ದವಾಗಿ ಹೊಸ್ತಿಲು ಪೂಜೆ ಮಾಡುವುದು ಪುರಾತನ ಕ್ರಮ.
ಹೊಸ್ತಿಲು ಪೂಜೆ : ಅಂತೆಯೇ ಈ ಕಾಲದಲ್ಲಿ ಗದ್ದೆಯ ಬದುಗಳಲ್ಲಿ ಸೋಣೆ ಹೂ ಬೆಳೆಯುತ್ತದೆ. ಅದನ್ನು ಕಿತ್ತು ತರುವ ಮನೆಯ ಗ್ರಹಿಣಿ ಅಥವಾ ಯಜಮಾನ್ತಿ ಮೊದಲು ಹೊಸ್ತಿಲನ್ನು ಶುಭ್ರವಾಗಿ ತೊಳೆದು ಶೇಡಿಯಿಂದ ಹೊಸ್ತಿಲಿಗೆ ಗೆರೆ ಬರೆದು ನಂತರ ಸೋಣೆ ಹೂ ಮುಂತಾದವುಗಳನ್ನು ಇಟ್ಟು ಹೊಸ್ತಿಲಿಗೆ ಕೈ ಮುಗಿದು ವಂದಿಸುತ್ತಾರೆ. ಪ್ರತಿ ಸೋಣೆ ತಿಂಗಳು ಆರಂಭವಾಗುವ ಸಂಕ್ರಮಣದಿಂದ ಮೊದಲುಗೊಂಡು ಒಂದು ತಿಂಗಳ ಕಾಲ ಆಚರಣೆ ಪ್ರತಿನಿತ್ಯ ನಡೆಸಲಾಗುತ್ತದೆ.
ಅಜ್ಜಿ ಶಾಸ್ತ್ರ: ಕುಂದಾಪುರ ಭಾಗದಲ್ಲಿ ಅಜ್ಜಿ ಶಾಸ್ತ್ರ ಅಥವಾ ಅಜ್ಜಿ ಪೂಜೆ ಎಂಬ ಹಬ್ಬವನ್ನು ಆಚರಿಸಲಾಗುತ್ತದೆ. ಸೋಣೆ ತಿಂಗಳಿನಲ್ಲಿ ಪ್ರತಿನಿತ್ಯ ಹೊಸ್ತಿಲಿಗೆ ಪೂಜೆ ಸಲ್ಲಿಸುವುದರೊಂದಿಗೆ ಹೊಸ್ತಿಲ ಪೂಜೆ ಆಚರಣೆಯ ಮುಕ್ತಾಯ ಹಂತದಲ್ಲಿ ಅಜ್ಜಿ ಎನ್ನುವ ಹೆಸರಿನಲ್ಲಿ ವಿಭಿನ್ನ ಸಂಪ್ರದಾಯ ನಡೆಸಲಾಗುತ್ತದೆ. ಸಂಪ್ರದಾಯದಂತೆ ಅಜ್ಜಿ ಆಚರಣೆಯಂದು ರಾತ್ರಿ ಹೊಸ್ತಿಲಿಗೆ ಧೂಪದಾರತಿಯೊಂದಿಗೆ ವಿಶೇಷ ಪೂಜೆ ಮಾಡುತ್ತಾರೆ.
ಅಲ್ಲದೇ ದೋಸೆ ಮತ್ತು ಸಾರು ಮುಂತಾದ ಖಾದ್ಯಗಳನ್ನು ನೈವೇದ್ಯ ರೂಪದಲ್ಲಿ ಅಗಲಿದ ಪಿತೃಗಳಿಗೆ ಅರ್ಪಿಸುವ ಶಾಸ್ತ್ರ ಇದಾಗಿದೆ. ಹಿಂದಿನ ಕಾಲದ ನಂಬಿಕೆಯಂತೆ ಮರಣ ಹೊಂದಿದ ಹಿರಿಯರಿಗೆ ನೈವೇದ್ಯ ಅರ್ಪಿಸುತ್ತಾರೆ. ಅಜ್ಜಿ ಶಾಸ್ತ್ರದ ಮುಂದಿನ ದಿನದಿಂದ ಬೆಳಿಗ್ಗಿನ ಹೊಸ್ತಿಲು ಪೂಜೆ ಮಾಡುವ ಸಂಪ್ರದಾಯವಿಲ್ಲ. ಅಜ್ಜಿ ಶಾಸ್ತ್ರದ ದಿನವೇ ಹೊಸ್ತಿಲು ಪೂಜೆಯ ಕೊನೆ ದಿನವೆನ್ನುವುದು ಕೆಲವರ ನಂಬಿಕೆ. ಒಟ್ಟಿನಲ್ಲಿ ಅನಾದಿ ಕಾಲದ ನಂಬಿಕೆಯನ್ನು ಇಂದಿಗೂ ಆಚರಿಸಿಕೊಂಡು ಬಂದಿರುವ ಜನರು ಆಚರಣೆಯ ಹೆಸರಿನಲ್ಲಿ ನೆಂಟರಿಷ್ಟರೊಂದಿಗೆ ಬೆರೆಯುವ ಸದಾವಕಾಶವನ್ನು ಅನುಭವಿಸುವ ಕ್ಷಣವನ್ನು ಪಡೆಯುವುದರಲ್ಲಿ ಎರಡು ಮಾತಿಲ್ಲ. (ಸದ್ವಿಚಾರ ಸಂಗ್ರಹ)
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)