CSK vs LSG: 6,6,6,6,6,6.. ಸಿಎಸ್ಕೆ ವಿರುದ್ಧ ಅಬ್ಬರಿಸಿದ ಜೋಶ್ ಇಂಗ್ಲಿಸ್
LSG vs CSK: ಐಪಿಎಲ್ 2026 ರ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ, ಲಕ್ನೋ ಆರಂಭಿಕ ಜೋಶ್ ಇಂಗ್ಲಿಸ್ ಕೇವಲ 17 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. 33 ಎಸೆತಗಳಲ್ಲಿ 85 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಈ ಮೂಲಕ ಲಕ್ನೋ ಕೇವಲ 3.4 ಓವರ್‌ಗಳಲ್ಲಿ 50 ರನ್ ಗಳಿಸಿ, ತನ್ನದೇ ಆದ ಹಳೆಯ ದಾಖಲೆಯನ್ನು ಸರಿಗಟ್ಟಿತು.

ಐಪಿಎಲ್ 2026 (IPL 2026) ರ 53ನೇ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (LSG vs CSK) ನಡುವೆ ನಡೆಯಿತು. ಈ ಪಂದ್ಯ ಪ್ಲೇಆಫ್ ದೃಷ್ಟಿಯಿಂದ ಸಿಎಸ್‌ಕೆಗೆ ಬಹುಮುಖ್ಯವಾಗಿದ್ದರೆ, ಲಕ್ನೋ ತಂಡಕ್ಕೆ ಕೇವಲ ಔಪಚಾರಿಕವಾಗಿತ್ತು. ಏಕೆಂದರೆ ಲಕ್ನೋ ತಂಡ ಪ್ಲೇಆಫ್ ತಲುಪುವುದು ಅಸಾಧ್ಯವೆಂದು ಹೇಳಲಾಗುತ್ತಿದೆ. ಇದರ ನಡುವೆಯೂ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡದ ಆರಂಭಿಕ ಆಟಗಾರ ಜೋಶ್ ಇಂಗ್ಲಿಸ್ (Josh Inglis), ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದರು.
ಮೇ 10 ರಂದು ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಮೊದಲು ಬ್ಯಾಟಿಂಗ್ ಮಾಡಿತು. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಜೋಶ್ ಇಂಗ್ಲಿಸ್ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಸಿ ಕೇವಲ 17 ಎಸೆತಗಳಲ್ಲಿ, ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಅಂದರೆ ಇಂಗ್ಲಿಸ್ ಕೇವಲ ಬೌಂಡರಿ ಹಾಗೂ ಸಿಕ್ಸರ್ಗಳಿಂದಲೇ 48 ರನ್ ಕಲೆಹಾಕಿದರು.
ಶತಕದಂಚಿನಲ್ಲಿ ಎಡವಿದ ಇಂಗ್ಲಿಸ್
ಇಂಗ್ಲಿಸ್ ಸ್ಫೋಟಕ ಬ್ಯಾಟಿಂಗ್ ಮಾಡುವುದರ ಜೊತೆಗೆ ಮಿಚೆಲ್ ಮಾರ್ಷ್ ಅವರೊಂದಿಗೆ 77 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಅದರಲ್ಲಿ ಇಂಗ್ಲಿಸ್ ಒಬ್ಬರೇ 66 ರನ್‌ಗಳ ಕೊಡುಗೆ ನೀಡಿದರು. ಆದಾಗ್ಯೂ, ಶತಕದಂಚಿನಲ್ಲಿ ಎಡವಿದ ಇಂಗ್ಲಿಸ್ ಕೇವಲ 33 ಎಸೆತಗಳಲ್ಲಿ 85 ರನ್ ಬಾರಿಸಿ ಔಟಾದರು. ಇಂಗ್ಲಿಸ್ ಅವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳು ಮತ್ತು 6 ಸಿಕ್ಸರ್‌ಗಳು ಸೇರಿದ್ದವು.
ಐಪಿಎಲ್‌ನಲ್ಲಿ ಎಷ್ಟು ಶತಕಗಳು ಸಿಡಿದಿವೆ? ಯಾವ ದೇಶದ ಆಟಗಾರರು ಹೆಚ್ಚು ಶತಕ ಬಾರಿಸಿದ್ದಾರೆ?
3 ವರ್ಷಗಳ ನಂತರ ಸಿಎಸ್‌ಕೆಗೆ ಆಘಾತ
ಇಂಗ್ಲಿಸ್ ಅವರ ಸ್ಫೋಟಕ ಆರಂಭದ ಪರಿಣಾಮವಾಗಿ ಲಕ್ನೋ ತಂಡವು ಕೇವಲ 3.4 ಓವರ್‌ಗಳಲ್ಲಿ 50 ರನ್‌ಗಳ ಗಡಿ ತಲುಪಿತು. ಈ ಮೂಲಕ ಲಕ್ನೋ ತಂಡ ಅತಿ ವೇಗವಾಗಿ 50 ರನ್ ಗಳಿಸಿದ ತನ್ನದೇ ಆದ ದಾಖಲೆಯನ್ನು ಸರಿಗಟ್ಟಿತು. ಪ್ರಾಸಂಗಿಕವಾಗಿ, ತಂಡದ ಹಿಂದಿನ ದಾಖಲೆಯು ಮೂರು ವರ್ಷಗಳ ಹಿಂದೆ ಅಂದರೆ 2023 ರಲ್ಲಿ ಇದೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೃಷ್ಟಿಯಾಗಿತ್ತು. ಆ ಪಂದ್ಯದಲ್ಲಿಯೂ ಸಹ, ತಂಡವು ಕೇವಲ 3.4 ಓವರ್‌ಗಳಲ್ಲಿ 50 ರನ್‌ಗಳ ಗಡಿ ದಾಟಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:41 pm, Sun, 10 May 26




