PBKS vs KKR: ದುಃಖ ದುಮ್ಮಾನ… ಎಲ್ಲವೂ ನಂದೇ ತಪ್ಪು: ಅಜಿಂಕ್ಯ ರಹಾನೆ ಬೇಸರದ ನುಡಿ
IPL 2025 PBKS vs KKR: ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು 111 ರನ್ಗಳಿಸಿ ಆಲೌಟ್ ಆಯಿತು. ಈ ಸುಲಭ ಗುರಿ ಬೆನ್ನತ್ತಿದ ಅಜಿಂಕ್ಯ ರಹಾನೆ ಮುಂದಾಳತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕೇವಲ 95 ರನ್ಗಳಿಗೆ ಆಲೌಟ್ ಆಗಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ಕಡಿಮೆ ಸ್ಕೋರ್ ಡಿಫೆಂಡ್ ಮಾಡಿದ ದಾಖಲೆಯೊಂದನ್ನು ಪಂಜಾಬ್ ಕಿಂಗ್ಸ್ (PBKS) ತಂಡ ಬರೆದಿದೆ. ಅದು ಸಹ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಎಂಬುದು ವಿಶೇಷ. ಮುಲ್ಲನ್ಪುರ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಅನುಭವಿ ಬೌಲರ್ಗಳ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪಂಜಾಬ್ ಕಿಂಗ್ಸ್ ಬ್ಯಾಟರ್ಗಳು ಪರದಾಡಿದರು. ಪರಿಣಾಮ 15.3 ಓವರ್ಗಳಲ್ಲಿ 111 ರನ್ಗಳಿಸಿ ಪಂಜಾಬ್ ಕಿಂಗ್ಸ್ ತಂಡವು ಆಲೌಟ್ ಆಯಿತು.
112 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕಥೆ ಕೂಡ ಭಿನ್ನವಾಗಿರಲಿಲ್ಲ. ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದ ಕೆಕೆಆರ್ ಬ್ಯಾಟರ್ಗಳು 15.1 ಓವರ್ಗಳಲ್ಲಿ 95 ರನ್ಗಳಿಗೆ ಆಲೌಟ್ ಆಗಿ 16 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಶನ್ನಲ್ಲಿ ಕಾಣಿಸಿಕೊಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ, ದುಃಖ ದುಮ್ಮಾನದೊಂದಿಗೆ ಮಾತನಾಡಲು ತಡಬಡಿಸಿದರು. ಸೋಲಿನ ಬಗ್ಗೆ ಕೇಳಿದಾಗ, ರಹಾನೆಗೆ ಕೆಲ ಕ್ಷಣಗಳ ಕಾಲ ಮಾತೇ ಬರಲಿಲ್ಲ.
ಆ ಬಳಿಕ ಮಾತು ಶುರು ಮಾಡಿದ ರಹಾನೆ, ವಿವರಿಸಲು ಏನೂ ಇಲ್ಲ, ಏನಾಯಿತು ಎಂದು ನಾವೆಲ್ಲರೂ ನೋಡಿದ್ದೇವೆ. ತಂಡದ ಪ್ರದರ್ಶನದಿಂದ ನಿಜಕ್ಕೂ ತುಂಬಾ ನಿರಾಶೆಯಾಗಿದೆ. ನಾನು ಕೆಟ್ಟ ಆಡವಾಡಿದ್ದೇನೆ. ಹೀಗಾಗಿ ಸೋಲಿನ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ ಎಂದರು.
ಏಕೆಂದರೆ ನಾನು ವಿಕೆಟ್ ಕಳೆದುಕೊಂಡ ಬಳಿಕ ಕೆಕೆಆರ್ ತಂಡದ ಪತನ ಶುರುವಾಗಿತ್ತು. ಎಲ್ಬಿಡಬ್ಲ್ಯೂ ಆಗಿದ್ದರೂ, ನಾನು ರಿವ್ಯೂ ತೆಗೆದುಕೊಂಡಿರಲಿಲ್ಲ. ಆ ಸಮಯದಲ್ಲಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ನಾನು ಬಯಸಲಿಲ್ಲ. ಅಲ್ಲದೆ ನನಗೂ ಖಚಿತತೆವಿರಲಿಲ್ಲ, ಆದ್ದರಿಂದ ವಿಮರ್ಶೆಯನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದೆ ಎಂದು ತಿಳಿಸಿದರು.
ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಅವರನ್ನು ಯುಜ್ವೇಂದ್ರ ಚಾಹಲ್ ಎಲ್ಬಿಡಬ್ಲ್ಯೂ ಮಾಡಿದ್ದರು. ಆದರೆ ಫೀಲ್ಡ್ ಅಂಪೈರ್ ತೀರ್ಪಿನ ವಿರುದ್ಧ ರಿವ್ಯೂ ತೆಗೆದುಕೊಳ್ಳದೇ ರಹಾನೆ ಹೊರ ನಡೆದಿದ್ದರು. ಆ ಬಳಿಕ ತೋರಿಸಿದ ರೀಪ್ಲೆನಲ್ಲಿ ಚೆಂಡು ಆಫ್ ಸ್ಟಂಪ್‌ನ ಹೊರಗೆ ಹೋಗುತ್ತಿರುವುದು ಕಂಡುಬಂದಿತು.
ಚೆಂಡು ವಿಕೆಟ್ ಹೊರಗೆ ಹೋಗುತ್ತದೆಯೇ ಎಂಬುದು ತನಗೆ ಯಾವುದೇ ಖಚಿತತೆ ಇರಲಿಲ್ಲ. ಹೀಗಾಗಿ ರಿವ್ಯೂ ತೆಗೆದುಕೊಳ್ಳದೇ ಹೊರ ನಡೆದೆ. ನಾನು ಔಟಾದ ಬಳಿಕ ಕೆಕೆಆರ್ ಸತತವಾಗಿ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಈ ಸೋಲಿನ ಸಂಪೂರ್ಣ ಹೊಣೆಯನ್ನು ನಾನು ಹೊರುವುದಾಗಿ ರಹಾನೆ ತಿಳಿಸಿದ್ದಾರೆ.
ಇನ್ನು ಸುಲಭ ಗುರಿಯಾಗಿದ್ದರೂ, ನಮ್ಮ ಸೋಲಿಗೆ ಕಳಪೆ ಬ್ಯಾಟಿಂಗ್ ಕಾರಣ. ಪಿಚ್ ಸುಲಭವಾಗಿರಲಿಲ್ಲ ನಿಜ. ಇದಾಗ್ಯೂ ನಾವು 111 ರನ್‌ಗಳ ಗುರಿಯನ್ನು ಸುಲಭವಾಗಿ ಚೇಸ್ ಮಾಡಬಹುದಿತ್ತು. ನಮ್ಮ ಬ್ಯಾಟರ್ಗಳು ತುಂಬಾ ಕಳಪೆ ಪ್ರದರ್ಶನ ನೀಡಿದ್ದಾರೆ. ಪಂಜಾಬ್‌ನಂತಹ ಬಲಿಷ್ಠ ಬ್ಯಾಟಿಂಗ್ ಘಟಕದ ವಿರುದ್ಧ ನಮ್ಮ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು.
ಇದನ್ನೂ ಓದಿ: ರಣರೋಚಕ ಪಂದ್ಯದಲ್ಲಿ ರೋಚಕ ಜಯ: ಇತಿಹಾಸ ನಿರ್ಮಿಸಿದ ಪಂಜಾಬ್ ಕಿಂಗ್ಸ್
ನಾವು ಬ್ಯಾಟಿಂಗ್‌ನಲ್ಲಿ ನಿರ್ಲಕ್ಷ್ಯ ತೋರಿದ್ದೇವೆ. ಇದರಿಂದಾಗಿ 111 ರನ್‌ಗಳ ಗುರಿ ಕೂಡ ಬೆನ್ನಟ್ಟಲು ಸಾಧ್ಯವಾಗಿಲ್ಲ. ಹೀಗಾಗಿ ಬ್ಯಾಟ್ಸ್ಮನ್ಗಳ ಕಳಪೆಯಾಟದಿಂದಾಗಿಯೇ ನಾವು ಸೋತಿದ್ದೇವೆ ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.