ಭಾರತ-ಅಫ್ಘನ್ ಟಿ20 ಸರಣಿ ವೇಳಾಪಟ್ಟಿ ಬದಲಾವಣೆಗೆ ದೆಹಲಿ ಪೊಲೀಸರ ಮನವಿ
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ T20 ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 13 ರಂದು ದೆಹಲಿಯಲ್ಲಿ ನಡೆಯಲಿದೆ. BRICS ಶೃಂಗಸಭೆಯ ಭದ್ರತಾ ಕಾಳಜಿ ಮತ್ತು ಸಂಚಾರ ದಟ್ಟಣೆಯನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಪಂದ್ಯವನ್ನು ಮುಂದೂಡುವಂತೆ ಮನವಿ ಮಾಡಿದ್ದರು. ಆದಾಗ್ಯೂ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ (DDCA) ಪಂದ್ಯವು ನಿಗದಿಯಂತೆ ನಡೆಯಲಿದೆ ಎಂದು ದೃಢಪಡಿಸಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಸೆಪ್ಟೆಂಬರ್ 13 ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಯ ಮೂರೂ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಆದಾಗ್ಯೂ, ಸರಣಿಯ ಮೊದಲ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತ್ತಿದೆ. ಭದ್ರತೆ ಮತ್ತು ಸಂಚಾರ ನಿರ್ವಹಣಾ ಕಾಳಜಿಯನ್ನು ಉಲ್ಲೇಖಿಸಿ, ದೆಹಲಿ ಸಂಚಾರ ಪೊಲೀಸರು ಪಂದ್ಯವನ್ನು ಮುಂದೂಡಬೇಕೆಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘವನ್ನು (ಡಿಡಿಸಿಎ) ವಿನಂತಿಸಿದ್ದಾರೆ ಎಂದಿದ್ದಾರೆ. ಆದಾಗ್ಯೂ, ಡಿಡಿಸಿಎ ಪಂದ್ಯವನ್ನು ನಿಗದಿತ ದಿನಾಂಕದಂದು ನಡೆಸಲು ನಿರ್ಧರಿಸಿದೆ ಎಂತಲೂ ಹೇಳಲಾಗುತ್ತಿದೆ.
ವೇಳಾಪಟ್ಟಿ ಬದಲಾವಣೆಗೆ ಒತ್ತಾಯ
ವಾಸ್ತವವಾಗಿ, ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಸೆಪ್ಟೆಂಬರ್ 9 ರಂದು ಡಿಡಿಸಿಎ ಕಾರ್ಯದರ್ಶಿಗೆ ಪತ್ರ ಕಳುಹಿಸಿದ್ದಾರೆ. ವಿಶೇಷ ಪೊಲೀಸ್ ಆಯುಕ್ತರ ಅನುಮೋದನೆಯ ನಂತರ ಈ ಪತ್ರವನ್ನು ನೀಡಲಾಗಿದೆ. ಪತ್ರದ ಪ್ರಕಾರ, ಬ್ರಿಕ್ಸ್ ಶೃಂಗಸಭೆ ಸೆಪ್ಟೆಂಬರ್ 11 ರಿಂದ 13 ರವರೆಗೆ ದೆಹಲಿಯಲ್ಲಿ ನಡೆಯಲಿದೆ. ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರಗಳ ಮುಖ್ಯಸ್ಥರು, ವಿದೇಶಿ ನಿಯೋಗಗಳು, ರಾಜತಾಂತ್ರಿಕರು ಮತ್ತು ಉನ್ನತ ವಿವಿಐಪಿಗಳು ಭಾಗವಹಿಸಲಿದ್ದಾರೆ.
ಆದ್ದರಿಂದ, ಒಂದೇ ದಿನ ಎರಡು ಪ್ರಮುಖ ಕಾರ್ಯಕ್ರಮಗಳಿಗೆ ಭದ್ರತಾ ಪಡೆಗಳನ್ನು ಒದಗಿಸುವುದು ಪೊಲೀಸ್ ಆಡಳಿತಕ್ಕೆ ಸಾಕಷ್ಟು ಸವಾಲಿನ ಕೆಲಸವಾಗಿದೆ. ಭಾರತ-ಅಫ್ಘಾನಿಸ್ತಾನ ಪಂದ್ಯದ ಸಮಯದಲ್ಲಿ ಸುಮಾರು 25,000 ರಿಂದ 35,000 ಅಭಿಮಾನಿಗಳು ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಸಂಚಾರ ಪೊಲೀಸರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಇದು ಸುತ್ತಮುತ್ತಲಿನ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆಗೆ ಕಾರಣವಾಗಬಹುದು.
ಈ ಸಮಸ್ಯೆಗಳ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಅತಿಥಿಗಳ ಸುರಕ್ಷತೆ ಮತ್ತು ಸಾಮಾನ್ಯ ನಾಗರಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಬ್ರಿಕ್ಸ್ ಶೃಂಗಸಭೆ ಮುಗಿದ ನಂತರ ಪಂದ್ಯವನ್ನು ಬೇರೆ ದಿನಾಂಕಕ್ಕೆ ನಿಗದಿಪಡಿಸುವಂತೆ ದೆಹಲಿ ಪೊಲೀಸರು ಡಿಡಿಸಿಎಗೆ ವಿನಂತಿಸಿದ್ದಾರೆ ಎಂದು ವರದಿಯಾಗಿದೆ.
ಭಾರತ ಮತ್ತು ಜಪಾನ್ ನಡುವೆ ಐತಿಹಾಸಿಕ ಟಿ20 ಪಂದ್ಯ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಪಂದ್ಯ ನಿಗದಿತ ದಿನಾಂಕದಂದು ನಡೆಯಲಿದೆ
ಈ ವಿಷಯದ ಬಗ್ಗೆ ಡಿಡಿಸಿಎ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಸೆಪ್ಟೆಂಬರ್ 13 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಭಾರತ-ಅಫ್ಘಾನಿಸ್ತಾನ ಮೊದಲ ಟಿ20 ಪಂದ್ಯ ನಿಗದಿಯಂತೆ ನಡೆಯಲಿದೆ. ದೆಹಲಿ ಸಂಚಾರ ಪೊಲೀಸರೊಂದಿಗಿನ ಸಭೆಯ ನಂತರ, ಡಿಡಿಸಿಎಗೆ ಅಗತ್ಯವಿರುವ ಎಲ್ಲಾ ಬೆಂಬಲ ಮತ್ತು ವ್ಯವಸ್ಥೆಗಳ ಬಗ್ಗೆ ಭರವಸೆ ನೀಡಲಾಗಿದೆ. ಆದ್ದರಿಂದ ಪಂದ್ಯವನ್ನು ಮುಂದೂಡಲಾಗುವುದಿಲ್ಲ’ ಎಂದು ತಿಳಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 pm, Thu, 10 September 26




