ಕ್ಯಾಚ್ ಕೈಚೆಲ್ಲುವುದೇ ಭಾರತದ ದೊಡ್ಡ ಸಮಸ್ಯೆ; ಆಕ್ಲೆಂಡ್‌ನಲ್ಲಿ 4 ತಂಡಗಳಾಗಿ ಅಭ್ಯಾಸ
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುನ್ನ, ಭಾರತ ತಂಡ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಫೀಲ್ಡಿಂಗ್ ಅಭ್ಯಾಸ ನಡೆಸಿತು. ಕ್ರೀಡಾಂಗಣದ ವಿಶಿಷ್ಟ ಸವಾಲುಗಳನ್ನು ಎದುರಿಸಲು ವಿಶೇಷ ತರಬೇತಿ ನೀಡಲಾಯಿತು. ಇತ್ತೀಚೆಗೆ ಭಾರತದ ಕ್ಯಾಚಿಂಗ್ ಸಾಮರ್ಥ್ಯ ಕಳಪೆಯಾಗಿದ್ದು, ತಂಡ ಈ ವಿಭಾಗದಲ್ಲಿ ಸುಧಾರಣೆ ಕಂಡುಕೊಳ್ಳುವತ್ತ ಗಮನಹರಿಸಿದೆ. ಕಠಿಣ ತರಬೇತಿಯ ಮೂಲಕ ಫೀಲ್ಡರ್‌ಗಳು ತಮ್ಮ ಪ್ರದರ್ಶನವನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ವಿಶೇಷವಾಗಿ ಫೀಲ್ಡಿಂಗ್ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ತಂಡದ ಕೋಚಿಂಗ್ ಸಿಬ್ಬಂದಿ ಆಟಗಾರರಿಗೆ ವಿಭಿನ್ನ ರೀತಿಯ ತರಬೇತಿ ನೀಡಿದ್ದಾರೆ. ಅಭ್ಯಾಸದ ವೇಳೆ ಆಟಗಾರರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಮೈದಾನದ ಎರಡು ಮೂಲೆಗಳ ನಡುವೆ ಸಮಾನ ಅಂತರದಲ್ಲಿ ಓಡುವಂತೆ ಸೂಚಿಸಲಾಗಿತ್ತು. ಈ ವೇಳೆ ಫೀಲ್ಡಿಂಗ್ ಕೋಚ್ ಶುಭದೀಪ್ ಘೋಷ್ ಸೇರಿದಂತೆ ಸಹಾಯಕ ಸಿಬ್ಬಂದಿ ವಿವಿಧ ದಿಕ್ಕುಗಳಿಂದ ಚೆಂಡುಗಳನ್ನು ಎಸೆಯುತ್ತಿದ್ದರು. ಆಟಗಾರರು ಚೆಂಡು ಸಮೀಪಿಸುತ್ತಿದ್ದಂತೆ ಜೋರಾಗಿ ಕೂಗಿ, ಅದನ್ನು ತಲುಪಿದ ಮೊದಲ ಆಟಗಾರ ಚೆಂಡನ್ನು ಸಿಬ್ಬಂದಿಗೆ ಹಿಂತಿರುಗಿಸಬೇಕಿತ್ತು.
ಸುಮಾರು 30 ನಿಮಿಷಗಳ ಕಾಲ ಈ ಅಭ್ಯಾಸ ನಡೆಯಿತು. ಚೆಂಡು ಯಾವುದೇ ದಿಕ್ಕಿನಿಂದ ಬಂದರೂ ಆಟಗಾರರು ನೇರ ರೇಖೆಯಲ್ಲಿ ಓಡಿ ಅದನ್ನು ತಲುಪುವಂತೆ ತರಬೇತಿ ನೀಡಲಾಯಿತು. ಈಡನ್ ಪಾರ್ಕ್ ಮೈದಾನದ ವಿಭಿನ್ನ ಆಯಾಮಗಳಿಗೆ ಆಟಗಾರರು ಹೊಂದಿಕೊಳ್ಳುವುದು ಈ ಅಭ್ಯಾಸದ ಪ್ರಮುಖ ಉದ್ದೇಶವಾಗಿತ್ತು.
ಆಕ್ಲೆಂಡ್ ಮೈದಾನದಲ್ಲಿ ಫೀಲ್ಡಿಂಗ್ ಸವಾಲು
ಆಕ್ಲೆಂಡ್‌ನ ಈಡನ್ ಪಾರ್ಕ್ ಕ್ರೀಡಾಂಗಣ ತನ್ನ ವಿಶಿಷ್ಟ ವಿನ್ಯಾಸದಿಂದಾಗಿ ಫೀಲ್ಡರ್‌ಗಳಿಗೆ ಸವಾಲೊಡ್ಡುತ್ತದೆ. ಇಲ್ಲಿನ ಫ್ಲಡ್‌ಲೈಟ್‌ಗಳ ವ್ಯವಸ್ಥೆ ಮತ್ತು ಮೈದಾನದ ಆಕಾರ ಸಾಮಾನ್ಯ ಕ್ರೀಡಾಂಗಣಗಳಿಗಿಂತ ಭಿನ್ನವಾಗಿದೆ. ಅದರಲ್ಲೂ ಬೌಂಡರಿ ಸಮೀಪದ ಫೀಲ್ಡಿಂಗ್ ವೇಳೆ ಚೆಂಡಿನ ವೇಗ ಹಾಗೂ ಮೈದಾನದ ಆಯಾಮಗಳನ್ನು ಸರಿಯಾಗಿ ಅಂದಾಜಿಸುವುದು ಬಹಳ ಮುಖ್ಯ. ಈ ಮೈದಾನದಲ್ಲಿ ಎರಡು ರನ್‌ಗಳನ್ನು ತಡೆಯುವುದು ಕೂಡ ಸುಲಭದ ಕೆಲಸವಲ್ಲ.
ಇದಲ್ಲದೆ ಆಕ್ಲೆಂಡ್‌ನ ಗಾಳಿ, ಚಳಿ ಹಾಗೂ ಪಂದ್ಯ ಆರಂಭವಾಗುವ ಸಮಯ ಕೂಡ ಫೀಲ್ಡಿಂಗ್ ಮೇಲೆ ಪರಿಣಾಮ ಬೀರಬಹುದು. ನ್ಯೂಜಿಲೆಂಡ್ ಪ್ರವಾಸದಲ್ಲಿ ಈಗಾಗಲೇ ಸಾಕಷ್ಟು ಪ್ರಯಾಣ ಮಾಡಿರುವ ಭಾರತ ತಂಡ ಈ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕಿದೆ. ಬುಧವಾರದ ಪಂದ್ಯಕ್ಕೂ ಮುನ್ನ ಲಭ್ಯವಿರುವ ಅಭ್ಯಾಸದ ಸಮಯ ಕಡಿಮೆ ಇರುವುದರಿಂದ ಮೈದಾನದ ಪರಿಸ್ಥಿತಿಗೆ ಬೇಗನೆ ಒಗ್ಗಿಕೊಳ್ಳುವುದು ತಂಡಕ್ಕೆ ಅನಿವಾರ್ಯವಾಗಿದೆ.
ಭಾರತದ ಕ್ಯಾಚಿಂಗ್ ಸಾಮರ್ಥ್ಯ ಕಳಪೆ
ಇತ್ತೀಚಿನ ದಿನಗಳಲ್ಲಿ ಭಾರತದ ಫೀಲ್ಡಿಂಗ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಫೀಲ್ಡಿಂಗ್ ಸಾಮರ್ಥ್ಯ ಟಿ20 ಮತ್ತು ಟೆಸ್ಟ್‌ಗಳಿಗೆ ಹೋಲಿಸಿದರೆ ಉತ್ತಮವಾಗಿದ್ದರೂ, ಇತ್ತೀಚಿನ ಪಂದ್ಯಗಳಲ್ಲಿ ಕ್ಯಾಚ್‌ಗಳನ್ನು ಕೈಚೆಲ್ಲುತ್ತಿರುವುದು ತಂಡದ ಚಿಂತೆಗೆ ಕಾರಣವಾಗಿದೆ. ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದಿಂದ ಆರಂಭಿಸಿ, ನಾಯಕತ್ವ ಬದಲಾವಣೆಯ ನಂತರ ಆಡಿರುವ 18 ಏಕದಿನ ಪಂದ್ಯಗಳಲ್ಲಿ ಭಾರತ ಒಟ್ಟು 27 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ತಂಡದ ಕ್ಯಾಚಿಂಗ್ ಯಶಸ್ಸಿನ ಪ್ರಮಾಣ ಶೇ.77.5ರಷ್ಟಿದ್ದು, ಇದು ಸರಾಸರಿಗಿಂತ ಕಡಿಮೆಯಾಗಿದೆ.
ಭಾರತ- ನ್ಯೂಜಿಲೆಂಡ್ ನಡುವೆ 5 ಪಂದ್ಯಗಳ ಏಕದಿನ ಸರಣಿ; ಪೂರ್ಣ ವಿವರ ಇಲ್ಲಿದೆ
ಭಾರತದ ಪರ ಕುಲ್ದೀಪ್ ಯಾದವ್ 11 ಪಂದ್ಯಗಳಲ್ಲಿ ಐದು ಕ್ಯಾಚ್‌ಗಳನ್ನು ಕೈಬಿಟ್ಟಿದ್ದು, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ 16 ಪಂದ್ಯಗಳಲ್ಲಿ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟು ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಅನುಭವಿ ಆಟಗಾರ ರೋಹಿತ್ ಶರ್ಮಾ ಮಾತ್ರ ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ 18 ಪಂದ್ಯಗಳಲ್ಲಿ ಅವರು ಒಟ್ಟು 15 ಕ್ಯಾಚ್‌ಗಳನ್ನು ಹಿಡಿದಿದ್ದು, ಕೇವಲ ಎರಡು ಕ್ಯಾಚ್‌ಗಳನ್ನು ಮಾತ್ರ ಕೈಬಿಟ್ಟಿದ್ದಾರೆ.




