IPL 2027: ಐಪಿಎಲ್ಗೆ ಆಸ್ಟ್ರೇಲಿಯಾ ಆಟಗಾರರು ಡೌಟ್!
IPL 2027: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-20 ಮಾರ್ಚ್ 10 ರಿಂದ ಶುರುವಾಗಲಿದೆ. ಅಂದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಐಪಿಎಲ್ ಆರಂಭವಾಗಲಿದೆ. ಆದರೆ, ಅತ್ತ ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿ ಮುಗಿಯುತ್ತಿದ್ದಂತೆಯೇ ಆಸ್ಟ್ರೇಲಿಯಾ ಆಟಗಾರರು ಆ್ಯಶಸ್ ಸರಣಿಗೆ ಸಿದ್ಧತೆಗಳನ್ನು ಆರಂಭಿಸಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಆರಂಭಕ್ಕೂ ಮುನ್ನವೇ ಫ್ರಾಂಚೈಸಿಗಳಿಗೆ ಹೊಸ ಚಿಂತೆ ಶುರುವಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತ್ರಿಮೂರ್ತಿಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್ವುಡ್ ಮುಂಬರುವ ಐಪಿಎಲ್ ಆವೃತ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯುವ ಸಾಧ್ಯತೆಯಿದೆ. ರಾಷ್ಟ್ರೀಯ ತಂಡದ ಜವಾಬ್ದಾರಿ ಹಾಗೂ ತೀವ್ರ ಕೆಲಸದ ಒತ್ತಡ ನಿರ್ವಹಣೆಯ ಕಾರಣದಿಂದಾಗಿ ಈ ಮೂವರೂ ಆಟಗಾರರು ಐಪಿಎಲ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದಲ್ಲಿರುವ ಟ್ರಾವಿಸ್ ಹೆಡ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ಕೂಡ ಐಪಿಎಲ್ನ ದ್ವಿತೀಯಾರ್ಧಕ್ಕೆ ಅಲಭ್ಯರಾಗಲಿದ್ದಾರೆ.
ಹೊರಗುಳಿಯಲು ಕಾರಣವೇನು?
2027ರ ವರ್ಷ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಅತ್ಯಂತ ಕಠಿಣ ಹಾಗೂ ಬಿಡುವಿಲ್ಲದ ವೇಳಾಪಟ್ಟಿಯನ್ನು ತಂದಿಟ್ಟಿದೆ. ಜನವರಿಯಿಂದ ಆರಂಭವಾಗಿ ನವೆಂಬರ್‌ವರೆಗೆ ಆಸ್ಟ್ರೇಲಿಯಾ ತಂಡವು ಸತತವಾಗಿ ಐತಿಹಾಸಿಕ ಮತ್ತು ಪ್ರತಿಷ್ಠಿತ ಸರಣಿಗಳನ್ನು ಆಡಬೇಕಾಗಿದೆ.
- ಜನವರಿ – ಫೆಬ್ರವರಿ: ಭಾರತದ ವಿರುದ್ಧ 5 ಪಂದ್ಯಗಳ ಹೈ-ವೋಲ್ಟೇಜ್ ‘ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ’.
- ಮಾರ್ಚ್: ಇಂಗ್ಲೆಂಡ್ ವಿರುದ್ಧ 150ನೇ ವರ್ಷದ ಐತಿಹಾಸಿಕ ಒಂಟಿ ಟೆಸ್ಟ್ ಪಂದ್ಯ.
- ಜೂನ್: ಆಸ್ಟ್ರೇಲಿಯಾ ಅರ್ಹತೆ ಪಡೆದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ ಪಂದ್ಯ.
- ಜೂನ್ – ಜುಲೈ: ಇಂಗ್ಲೆಂಡ್ ವಿರುದ್ಧದ ಅತ್ಯಂತ ಪ್ರತಿಷ್ಠಿತ 5 ಪಂದ್ಯಗಳ ‘ಆ್ಯಶಸ್ ಟೆಸ್ಟ್ ಸರಣಿ.
- ಅಕ್ಟೋಬರ್ – ನವೆಂಬರ್: ಐಸಿಸಿ ಏಕದಿನ ವಿಶ್ವಕಪ್ 2027
ಅಂದರೆ ಜನವರಿಯಿಂದ ಶುರುವಾಗುವ ಆಸ್ಟ್ರೇಲಿಯಾದ ವೇಳಾಪಟ್ಟಿ ನಿಲ್ಲುವುದು ನವೆಂಬರ್ನಲ್ಲಿ. ಇಲ್ಲಿ ಜನವರಿ-ಜುಲೈ ನಡುವೆ ಆಸ್ಟ್ರೇಲಿಯಾ 11 ಪ್ರತಿಷ್ಠಿತ ಟೆಸ್ಟ್ ಪಂದ್ಯಗಳನ್ನಾಡಬೇಕಿದೆ. ಇದರ ನಡುವೆ, ಅಂದರೆ ಮಾರ್ಚ್-ಮೇ ನಡುವೆ ಐಪಿಎಲ್ ನಡೆಯಲಿದೆ.
ಇತ್ತ ಮೇ ಅಂತ್ಯದಲ್ಲಿ ಐಪಿಎಲ್ ಮುಗಿಸಿ ಆಸ್ಟ್ರೇಲಿಯನ್ನರು ಜೂನ್ನಲ್ಲಿ ಟೆಸ್ಟ್ ಸರಣಿಗೆ ತೆರಳುವ ಸಾಧ್ಯತೆಯಿಲ್ಲ. ಹೀಗಾಗಿ ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್ವುಡ್ ಹಾಗೂ ಮಿಚೆಲ್ ಸ್ಟಾರ್ಕ್ನಂತಹ ಪ್ರಮುಖ ವೇಗಿಗಳು ಐಪಿಎಲ್‌ನಿಂದ ಹಿಂದೆ ಸರಿಯುವುದು ಖಚಿತ.
ಇನ್ನು ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್ ಸೇರಿದಂತೆ ಕೆಲ ಆಟಗಾರರು ಐಪಿಎಲ್ನ ಮೊದಲಾರ್ಧದಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಂದರೆ ದ್ವಿತೀಯಾರ್ಧದ ಆರಂಭಕ್ಕೂ ಮುನ್ನ ಈ ಆಟಗಾರರು ಟೆಸ್ಟ್ ತಂಡವನ್ನು ಕೂಡಿಕೊಳ್ಳುವುದು ಖಚಿತ ಎಂದೇ ಹೇಳಬಹುದು.
“ದೇಶಕ್ಕಾಗಿ ಆಡುವ ಟೆಸ್ಟ್ ಪಂದ್ಯಗಳು ಅಥವಾ ಏಕದಿನ ವಿಶ್ವಕಪ್ ಅನ್ನು ನಾವು ಕೈಬಿಡಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ನಾವು ಏನನ್ನಾದರೂ ಒಂದನ್ನು ತ್ಯಾಗ ಮಾಡಲೇಬೇಕಾಗುತ್ತದೆ,” ಎಂದು ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ನೀಡಿರುವ ಹೇಳಿಕೆ, ಅವರು ಐಪಿಎಲ್ ಕೋಟಿಗಳ ಆಫರ್ ಬಿಟ್ಟು ದೇಶದ ಜವಾಬ್ದಾರಿಗೆ ಮೊದಲ ಆದ್ಯತೆ ನೀಡಿರುವುದನ್ನು ಸ್ಪಷ್ಟಪಡಿಸುತ್ತದೆ.
ಇದನ್ನೂ ಓದಿ: ಮೋಸದಾಟದ ಮಾಸ್ಟರ್ ಪ್ಲ್ಯಾನ್: ಖ್ವಾಜಾ ಬಿಚ್ಚಿಟ್ಟ ಆಸ್ಟ್ರೇಲಿಯಾದ ನಗ್ನ ಸತ್ಯ!
ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2027ರ ಸೀಸನ್ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರನ್ನು ನೆಚ್ಚಿಕೊಂಡಿರುವ ಫ್ರಾಂಚೈಸಿಗಳಿಗೆ ಅಕ್ಷರಶಃ ಒಂದು ಅಗ್ನಿಪರೀಕ್ಷೆಯಾಗಲಿದೆ. ಕೋಟಿ ಕೋಟಿ ರೂಪಾಯಿಗಳ ಐಪಿಎಲ್ ಆಫರ್ ಆಕರ್ಷಣೆಯ ನಡುವೆಯೂ, ಆಸೀಸ್ ಆಟಗಾರರು ಆ್ಯಶಸ್ ಸರಣಿ ಮತ್ತು ಏಕದಿನ ವಿಶ್ವಕಪ್‌ನಂತಹ ದೇಶದ ಜವಾಬ್ದಾರಿಗಳಿಗೆ ಮೊದಲ ಆದ್ಯತೆ ನೀಡಿದ್ದಾರೆ. ಕಮಿನ್ಸ್, ಸ್ಟಾರ್ಕ್ ಮತ್ತು ಹೇಝಲ್ವುಡ್ ಅವರಂತಹ ಪ್ರಮುಖ ವೇಗಿಗಳ ಸಂಪೂರ್ಣ ಗೈರುಹಾಜರಿ ಒಂದೆಡೆಯಾದರೆ, ಟ್ರಾವಿಸ್ ಹೆಡ್ ಮತ್ತು ಕ್ಯಾಮರೋನ್ ಗ್ರೀನ್ ಅವರಂತಹ ಮ್ಯಾಚ್ ವಿನ್ನರ್‌ಗಳ ಅಲಭ್ಯತೆಯು ಫ್ರಾಂಚೈಸಿಗಳ ರಣತಂತ್ರಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.




