RR ಮಾರಾಟ ಒಪ್ಪಂದವನ್ನು ರದ್ದುಗೊಳಿಸುವಂತೆ ಬಿಸಿಸಿಐ ಮೊರೆ ಹೋದ ರಾಜ್ ಕುಂದ್ರಾ
Rajasthan Royals Sale Hits Snag: 15,000 ಕೋಟಿ ಮೌಲ್ಯದ ರಾಜಸ್ಥಾನ್ ರಾಯಲ್ಸ್ ಮಾರಾಟಕ್ಕೆ ಮಾಜಿ ಮಾಲೀಕ ರಾಜ್ ಕುಂದ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ 11.7% ಪಾಲನ್ನು ಇತ್ಯರ್ಥಪಡಿಸುವವರೆಗೆ ತಂಡವನ್ನು ಮಾರಾಟ ಮಾಡಬಾರದೆಂದು ಬಿಸಿಸಿಐಗೆ ಪತ್ರ ಬರೆದಿದ್ದಾರೆ. 2013ರ ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ನಿಷೇಧಕ್ಕೊಳಗಾದ ಕುಂದ್ರಾ, ತಮ್ಮ ಕಾನೂನು ಹೋರಾಟ ಮುಗಿಯುವವರೆಗೆ ಈ ಒಪ್ಪಂದವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ, ತಂಡಕ್ಕೆ ಹೊಸ ಸಂಕಷ್ಟ ತಂದೊಡ್ಡಿದ್ದಾರೆ.

15000 ಕೋಟಿ ರೂಗೆ ಮಾರಾಟವಾಗಿ ಐಪಿಎಲ್ (IPL) ಇತಿಹಾಸದಲ್ಲಿ ಎರಡನೇ ಅತಿ ದುಬಾರಿ ತಂಡ ಎಂಬ ದಾಖಲೆ ಬರೆದಿದ್ದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಕ್ಕೆ ಹೊಸ ಸಂಕಷ್ಟವೊಂದು ಎದುರಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ವ್ಯಾಪಾರ ಒಪ್ಪಂದವನ್ನು ಕೂಡಲೇ ರದ್ದುಗೊಳಿಸುವಂತೆ ತಂಡದ ಮಾಜಿ ಮಾಲೀಕ ರಾಜ್ ಕುಂದ್ರಾ (Raj Kundra), ಬಿಸಿಸಿಐ ಬಳಿ ಮನವಿ ಮಾಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲಿರುವ ನನ್ನ 11.7% ಪಾಲನ್ನು ಇತ್ಯರ್ಥಪಡಿಸುವವರೆಗೆ ಫ್ರಾಂಚೈಸಿಯ ಮಾಲೀಕರು ಬದಲಾಗಲು ಸಾಧ್ಯವಿಲ್ಲ. ತಂಡವನ್ನು ಯಾರಿಗೂ ಮಾರಾಟ ಮಾಡಲು ಸಾಧ್ಯವಿಲ್ಲ. ಹೀಗಾಗಿ ಒಪ್ಪಂದವನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿ ರಾಜ್ ಕುಂದ್ರಾ ಈಗ ಬಿಸಿಸಿಐಗೆ ಪತ್ರ ಬರೆದಿದ್ದಾರೆ.
ರಾಜ್ ಕುಂದ್ರಾ ಅವರ ಆರೋಪವೇನು?
ವಾಸ್ತವವಾಗಿ ರಾಜ್ ಕುಂದ್ರಾ 2009 ರಲ್ಲಿ ರಾಜಸ್ಥಾನ್ ರಾಯಲ್ಸ್‌ನಲ್ಲಿ 11.7% ಪಾಲನ್ನು ಖರೀದಿಸಿದ್ದರು. ಆ ಸಮಯದಲ್ಲಿ ಅವರು ತಂಡದ ಮೇಲೆ ಸುಮಾರು 70-75 ಕೋಟಿ ಹೂಡಿಕೆ ಮಾಡಿ ಮಾಲೀಕರ ಪೈಕಿ ಒಬ್ಬರಾಗಿದ್ದರು. ಉಳಿದಂತೆ ಆ ಸಮಯದಲ್ಲಿ, ಸುರೇಶ್ ಚೆಲ್ಲಾರಾಮ್ ಬಳಿ ತಂಡದ 44.2% ಷೇರು ಹೊಂದಿದ್ದರೆ, ಮನೋಜ್ ಬಡಾಲೆ 32.4% ಷೇರು ಹೊಂದಿದ್ದರು. ಆದರೆ 2013 ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡಿದ್ದ ರಾಜ್ ಕುಂದ್ರಾ, ಆ ನಂತರ ತಂಡದಿಂದ ಹೊರಹೋಗಬೇಕಾಯಿತು. ಆದಾಗ್ಯೂ ರಾಜ್ ಕುಂದ್ರಾ ತಂಡದಲ್ಲಿರುವ ತನ್ನ 11.7% ಪಾಲನ್ನು ಪಡೆಯಲು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಕಾನೂನುಬದ್ಧವಾಗಿ, ಇದು ಬಗೆಹರಿಯುವವರೆಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಬೇರೊಬ್ಬರಿಗೆ ಮಾರಾಟ ಮಾಡದಂತೆ ಬಿಸಿಸಿಐಗೆ ಪತ್ರ ಬರೆದಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ದಾಖಲೆ: 15,286 ಕೋಟಿ ರೂ.ಗೆ ಮಾರಾಟವಾಯ್ತು ರಾಜಸ್ಥಾನ ರಾಯಲ್ಸ್!
ರಾಜ್ ಕುಂದ್ರಾಗೆ ಐಪಿಎಲ್ನಿಂದ ನಿಷೇಧ
2013 ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದವು. ಅದರಂತೆ ದೆಹಲಿ ಪೊಲೀಸರ ವಿಚಾರಣೆಯ ಸಮಯದಲ್ಲಿ ರಾಜ್ ಕುಂದ್ರಾ ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸಿರುವುದು ಖಚಿತವಾಗಿತ್ತು. ಇದರ ನಂತರ, ಬಿಸಿಸಿಐ ತಕ್ಷಣವೇ ರಾಜ್ ಕುಂದ್ರಾ ಅವರನ್ನು ಐಪಿಎಲ್ನಿಂದ ಅಮಾನತುಗೊಳಿಸಿತ್ತು. ಇತ್ತ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಇತರ ಮಾಲೀಕರು, ಒಂದು ವೇಳೆ ರಾಜ್ ಕುಂದ್ರಾ ಈ ಪ್ರಕರಣದಲ್ಲಿ ತಪ್ಪಿತಸ್ಥರೆಂಬುದು ಸಾಭೀತಾದರೆ ಅವರ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಅದರಂತೆ ವಿಚಾರಣೆಯ ಬಳಿಕ2015 ರಲ್ಲಿ ಲೋಧಾ ಸಮಿತಿಯು ಕುಂದ್ರಾ ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಇದರ ನಂತರ, ಬಿಸಿಸಿಐ ರಾಜ್ ಕುಂದ್ರಾ ಅವರನ್ನು ಯಾವುದೇ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:07 pm, Thu, 26 March 26
