AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ ಇಂಡಿಯನ್ಸ್​ಗೆ ನ್ಯಾಯ… ಡೆಲ್ಲಿ ಕ್ಯಾಪಿಟಲ್ಸ್​ಗೆ ಅನ್ಯಾಯ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 20ನೇ ಪಂದ್ಯದಲ್ಲಿ ಅಂಪೈರ್ ತೆಗೆದುಕೊಂಡ ನಿರ್ಧಾರವು ಇದೀಗ ಸೋಷಿಯಲ್ ಮೀಡಿಯಾ ಚರ್ಚೆಗೆ ಕಾರಣವಾಗಿದೆ. ಇಂತಹದೊಂದು ಚರ್ಚೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅನ್ಯಾಯವಾಗಿರುವುದು. ಅಂದರೆ ಸಿಎಸ್​ಕೆ ತಂಡಕ್ಕೆ ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳಿಗೆ ವಿಭಿನ್ನ ನಿಯಮಗಳು ಅನ್ವಯವಾಗುತ್ತಾ ಎಂಬುದೇ ಈಗ ದೊಡ್ಡ ಪ್ರಶ್ನೆ.

ಮುಂಬೈ ಇಂಡಿಯನ್ಸ್​ಗೆ ನ್ಯಾಯ... ಡೆಲ್ಲಿ ಕ್ಯಾಪಿಟಲ್ಸ್​ಗೆ ಅನ್ಯಾಯ..!
Hardik Pandya - Tristan Stubbs
ಝಾಹಿರ್ ಯೂಸುಫ್
|

Updated on: Apr 13, 2026 | 12:56 PM

Share

IPL 2026: ಐಪಿಎಲ್ 2026ರ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಓವರ್ ಮಧ್ಯದಲ್ಲಿ ಗ್ಲೌಸ್ ಬದಲಾಯಿಸಿದ್ದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕ್ರಿಕೆಟ್ ಅಭಿಮಾನಿಗಳು ಮತ್ತು ವಿಶ್ಲೇಷಕರು ಅಂಪೈರ್‌ಗಳ ನಿರ್ಧಾರದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ.

ಏನಿದು ಘಟನೆ?

ಆರ್‌ಸಿಬಿ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದಾಗ, ಓವರ್ ಮುಗಿಯುವ ಮೊದಲೇ ಹೊಸ ಗ್ಲೌಸ್ ಬೇಕೆಂದು ಕೇಳಿದರು. ಆರಂಭದಲ್ಲಿ ಅಂಪೈರ್‌ಗಳು ಇದಕ್ಕೆ ಅನುಮತಿ ನೀಡದಿದ್ದರೂ, ನಂತರ ಪಾಂಡ್ಯ ಎರಡನೇ ಬಾರಿ ಮನವಿ ಮಾಡಿದಾಗ ಗ್ಲೌಸ್ ಬದಲಿಸಲು ಅವಕಾಶ ನೀಡಲಾಯಿತು.

ವಿವಾದಕ್ಕೆ ಕಾರಣವೇನು?

ಈ ಘಟನೆಗೆ ಒಂದು ದಿನ ಮೊದಲಷ್ಟೇ (ಏಪ್ರಿಲ್ 11, 2026) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ರಿಸ್ಟನ್ ಸ್ಟಬ್ಸ್ ಅವರಿಗೂ ಇದೇ ರೀತಿ ಗ್ಲೌಸ್ ಬದಲಿಸುವ ಅಗತ್ಯವಿತ್ತು. ಆದರೆ ಅಂಪೈರ್‌ಗಳು “ಓವರ್ ಮಧ್ಯದಲ್ಲಿ ಗ್ಲೌಸ್ ಬದಲಿಸಲು ಅವಕಾಶವಿಲ್ಲ, ಓವರ್ ಮುಗಿಯುವವರೆಗೆ ಕಾಯಿರಿ” ಎಂದು ಕಟ್ಟುನಿಟ್ಟಾಗಿ ನಿರಾಕರಿಸಿದ್ದರು. ಹಾರ್ದಿಕ್ ಪಾಂಡ್ಯ ವಿಷಯದಲ್ಲಿ ಅಂಪೈರ್‌ಗಳು ಮೃದು ಧೋರಣೆ ತಳೆದದ್ದು ತಾರತಮ್ಯದ ಆರೋಪಕ್ಕೆ ನಾಂದಿ ಹಾಡಿದೆ.

ಐಪಿಎಲ್ ನಿಯಮಗಳು ಏನು ಹೇಳುತ್ತವೆ?

ಐಸಿಸಿ ಮತ್ತು ಐಪಿಎಲ್‌ನ ‘ಪ್ಲೇಯಿಂಗ್ ಕಂಡೀಷನ್ಸ್’ ಪ್ರಕಾರ…

  • ಸಮಯ ಉಳಿತಾಯ: ಪಂದ್ಯದ ವೇಗವನ್ನು ಕಾಯ್ದುಕೊಳ್ಳಲು ಬ್ಯಾಟರ್‌ಗಳು ಓವರ್‌ಗಳ ಮಧ್ಯದಲ್ಲಿ ಅಥವಾ ಸ್ಟ್ರಾಟೆಜಿಕ್ ಟೈಮ್ ​ಔಟ್ ಸಮಯದಲ್ಲಿ ಮಾತ್ರ ವಸ್ತುಗಳನ್ನು (ಬ್ಯಾಟ್, ಗ್ಲೌಸ್, ಹೆಲ್ಮೆಟ್ ಇತ್ಯಾದಿ) ಬದಲಾಯಿಸಬೇಕು.
  • ಅಂಪೈರ್ ವಿವೇಚನೆ: ಒಂದು ವೇಳೆ ಬ್ಯಾಟರ್‌ನ ಗ್ಲೌಸ್ ಅಥವಾ ಬ್ಯಾಟ್ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ ಅಥವಾ ಸುರಕ್ಷತೆಯ ದೃಷ್ಟಿಯಿಂದ ತುರ್ತು ಎನಿಸಿದರೆ ಮಾತ್ರ ಓವರ್ ಮಧ್ಯದಲ್ಲಿ ಬದಲಾಯಿಸಲು ಅಂಪೈರ್ ಅನುಮತಿ ನೀಡಬಹುದು.
  • ಅನಗತ್ಯ ವಿಳಂಬ: ಒಂದು ವೇಳೆ ಪಂದ್ಯದ ಮೇಲೆ ಪ್ರಭಾವ ಬೀರಲು ಅಥವಾ ವಿಶ್ರಾಂತಿಗಿಟ್ಟಿಸಿಕೊಳ್ಳಲು ಓವರ್ ಮಧ್ಯದಲ್ಲಿ ಗ್ಲೌಸ್ ಬದಲಿಸುವುದು ಸಮಯ ವ್ಯರ್ಥ ಎಂದು ಪರಿಗಣಿಸಲಾಗುತ್ತದೆ.

ಮುಂಬೈಗೆ ನ್ಯಾಯ: ಡೆಲ್ಲಿಗೆ ಅನ್ಯಾಯ?

ಹಾರ್ದಿಕ್ ಪಾಂಡ್ಯ ಅವರ ಗ್ಲೌಸ್ ಬದಲಾವಣೆಗೆ ಅಂಪೈರ್‌ಗಳು ಅನುಮತಿ ನೀಡಿದ್ದು ಅವರ ವಿವೇಚನೆಗೆ ಬಿಟ್ಟಿದ್ದಾದರೂ, ಸ್ಟಬ್ಸ್ ವಿಷಯದಲ್ಲಿ ತೋರಿದ ಕಟ್ಟುನಿಟ್ಟಿನ ಕ್ರಮ ಇಲ್ಲಿ ಕಂಡುಬಂದಿಲ್ಲ ಎಂಬುದು ಅಭಿಮಾನಿಗಳ ವಾದ.

ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ವಿಪರೀತ ಸೆಕೆಯಿಂದಾಗಿ ಬೆವರುತ್ತಿದ್ದ ಕಾರಣ ತಮ್ಮ ‘ಗ್ಲೌಸ್’ ಬದಲಿಸಲು ಸ್ಟಬ್ಸ್​, ಅಂಪೈರ್ ಬಳಿ ಅನುಮತಿ ಕೇಳಿದ್ದರು. ಆದರೆ, ಆಟ ವಿಳಂಬವಾಗುತ್ತದೆ ಎಂಬ ಕಾರಣ ನೀಡಿ ಅಂಪೈರ್ ಗ್ಲೌಸ್ ಬದಲಾವಣೆಗೆ ನಿರಾಕರಿಸಿದ್ದಾರೆ.

ದುರಾದೃಷ್ಟವಶಾತ್ ಮುಂದಿನ ಎಸೆತದಲ್ಲೇ ಟ್ರಿಸ್ಟನ್ ಸ್ಬಬ್ಸ್ ಔಟಾದರು. ಇತ್ತ ಅಂಪೈರ್ ನಿರ್ಧಾರದಿಂದ ಕುಪಿತಗೊಂಡ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಹಿರಿಯ ಆಟಗಾರ ನಿತೀಶ್ ರಾಣಾ ಮತ್ತು ಬ್ಯಾಟಿಂಗ್ ಕೋಚ್ ವೇಣುಗೋಪಾಲ್ ರಾವ್ ಬೌಂಡರಿ ಲೈನ್‌ ಬಳಿ ಇದ್ದ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು. ಈ ವಾಗ್ವಾದ ಪರಿಣಾಮ ನಿತೀಶ್ ರಾಣಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಯಿತು.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಿಸಿದ RCB

ಒಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿರುವ ಗ್ಲೌಸ್ ಬದಲಾವಣೆ ನಿಯಮವು ಮುಂಬೈ ಇಂಡಿಯನ್ಸ್​ ಪಾಲಿಗೆ ಅನ್ವಯಿಸುವುದಿಲ್ಲವೇ ಎಂಬುದೇ ಈಗ ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆ.

Follow Us