ನ್ಯೂಝಿಲೆಂಡ್ ವಿರುದ್ಧ ಸಿರಾಜ್ ಕಣಕ್ಕಿಳಿಯದಿರಲು ಇದುವೇ ಅಸಲಿ ಕಾರಣ!
ಆಕ್ಲೆಂಡ್‌ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಅಲಭ್ಯತೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಆದರೆ, ಮೊಹಮ್ಮದ್ ಸಿರಾಜ್ ಗೈರುಹಾಜರಿಗೆ ಯಾವುದೇ ಗಾಯದ ಸಮಸ್ಯೆಯಲ್ಲ, ಬದಲಿಗೆ ಪ್ರಯಾಣದ ವೇಳಾಪಟ್ಟಿ ಕಾರಣ ಎಂದು ತಿಳಿದುಬಂದಿದೆ.

ನ್ಯೂಝಿಲೆಂಡ್ ವಿರುದ್ಧ ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಕಣಕ್ಕಿಳಿದಿರಲಿಲ್ಲ. ಇದರ ಬೆನ್ನಲ್ಲೇ ಅವರು ಪಂದ್ಯದಿಂದ ಹೊರಗುಳಿದಿರುವುದರ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದವು. ಆದರೆ, ಸಿರಾಜ್ ಅವರ ಗೈರುಹಾಜರಿಗೆ ಯಾವುದೇ ಗಾಯದ ಸಮಸ್ಯೆ ಕಾರಣವಲ್ಲ, ಬದಲಿಗೆ ಬಿಸಿಸಿಐನ ಕಾರ್ಯದೊತ್ತಡ ನಿರ್ವಹಣೆ ಮತ್ತು ಪ್ರಯಾಣದ ವೇಳಾಪಟ್ಟಿಯೇ ಮುಖ್ಯ ಕಾರಣವಾಗಿದೆ.
ಆಕ್ಲೆಂಡ್‌ಗೆ ತಲುಪದ ಸಿರಾಜ್!
ಮೊಹಮ್ಮದ್ ಸಿರಾಜ್ ಮೊದಲ ಏಕದಿನ ಪಂದ್ಯ ನಡೆದ ಆಕ್ಲೆಂಡ್ ನಗರದಲ್ಲೇ ಇರಲಿಲ್ಲ ಎನ್ನುವುದು ಪ್ರಮುಖ ಅಂಶ. ಭಾರತ ‘ಎ’ ತಂಡದ ಪರವಾಗಿ ನ್ಯೂಝಿಲೆಂಡ್ ‘ಎ’ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಸಿರಾಜ್ ಆಡುತ್ತಿದ್ದರು. ಈ ರೆಡ್-ಬಾಲ್ ಪಂದ್ಯವು ಲಿಂಕನ್‌ನಲ್ಲಿ ಮುಕ್ತಾಯಗೊಂಡ ಬೆನ್ನಲ್ಲೇ, ಆಕ್ಲೆಂಡ್‌ನಲ್ಲಿ ಮೊದಲ ಏಕದಿನ ಪಂದ್ಯ ನಿಗದಿಯಾಗಿದ್ದರಿಂದ ಸಿರಾಜ್ ಅವರಿಗೆ ತಂಡದ ಜೊತೆ ಸೇರಿಕೊಳ್ಳಲು ಅಥವಾ ವಿಶ್ರಾಂತಿ ಪಡೆಯಲು ಕಾಲಾವಕಾಶ ಇರಲಿಲ್ಲ. ಸತತ ಬೌಲಿಂಗ್ ದಣಿವು ಮತ್ತು ಪ್ರಯಾಣದ ಅವಸರವನ್ನು ತಪ್ಪಿಸಲು ಟೀಮ್ ಮ್ಯಾನೇಜ್‌ಮೆಂಟ್ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿತು.
ಮ್ಯಾನೇಜ್‌ಮೆಂಟ್ ಮಾಸ್ಟರ್ ಪ್ಲ್ಯಾನ್:
ಕಾರ್ಯದೊತ್ತಡ ನಿರ್ವಹಣೆ ದೃಷ್ಟಿಯಿಂದ ಮೊಹಮ್ಮದ್ ಸಿರಾಜ್ ಅವರ ದೇಹಸ್ಥಿತಿಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿತ್ತು. ಹೀಗಾಗಿ, ಮೊದಲ ಪಂದ್ಯಕ್ಕೆ ಆಕ್ಲೆಂಡ್‌ಗೆ ಬರುವ ಬದಲು, ನೇರವಾಗಿ ವೆಲ್ಲಿಂಗ್ಟನ್‌ನಲ್ಲಿ ಭಾರತ ತಂಡವನ್ನು ಕೂಡಿ ಕೊಳ್ಳುವಂತೆ ಮ್ಯಾನೇಜ್‌ಮೆಂಟ್ ಅವರಿಗೆ ಸೂಚಿಸಿದೆ. ಅಲ್ಲಿ ಸರಣಿಯ ಎರಡನೇ ಏಕದಿನ ಪಂದ್ಯ ನಡೆಯಲಿದೆ.
ಯುವ ವೇಗಿಗಳ ಭರ್ಜರಿ ಪ್ರದರ್ಶನ:
ಮೊಹಮ್ಮದ್ ಸಿರಾಜ್ ಅಲಭ್ಯತೆಯ ನಡುವೆಯೂ ಭಾರತದ ಯುವ ಬೌಲಿಂಗ್ ಪಡೆ ಮೊದಲ ಪಂದ್ಯದಲ್ಲಿ ಕಮಾಲ್ ಮಾಡಿತು. ಅರ್ಷದೀಪ್ ಸಿಂಗ್ ಮತ್ತು ಗುರ್ನೂರ್ ಬ್ರಾರ್ ಅವರ ಸಾಂಘಿಕ ದಾಳಿಗೆ ತತ್ತರಿಸಿದ ನ್ಯೂಝಿಲೆಂಡ್ ರನ್ ಗಳಿಸಲು ಪರದಾಡಿತು. ಪರಿಣಾಮವಾಗಿ, ಕಿವೀಸ್ ಪಡೆ 185 ರನ್‌ಗಳಿಗೆ ಆಲೌಟ್ ಆಯಿತು. ಇತ್ತ ಮಳೆಯ ಅಡ್ಡಿಯಿಂದಾಗಿ ಡಕ್ವರ್ತ್ ಲೂಯಿಸ್ ನಿಯಮದನ್ವಯ ಭಾರತ ತಂಡಕ್ಕೆ 32 ಓವರ್‌ಗಳಲ್ಲಿ 143 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಈ ಸುಲಭ ಸವಾಲನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 22.4 ಓವರ್‌ಗಳಲ್ಲಿ ಗುರಿ ತಲುಪಿ, 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಇದನ್ನೂ ಓದಿ: ಹಿಂದೆಂದೂ ಕಾಣದ ಟ್ವಿಸ್ಟ್… ಸಣ್ಣ ತಪ್ಪಿನಿಂದ ಪಂದ್ಯದ ಫಲಿತಾಂಶವೇ ಬದಲಾಯ್ತು!
ಇದೀಗ ಟೀಮ್ ಇಂಡಿಯಾ ದ್ವಿತೀಯ ಪಂದ್ಯಕ್ಕಾಗಿ ವೆಲ್ಟಿಂಗ್ಟನ್ಗೆ ಪ್ರಯಾಣಿಸಿದೆ. ಹೆನ್ರಿ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೆ ಸಿರಾಜ್ ಲಭ್ಯರಿರಲಿದ್ದು, ಪ್ಲೇಯಿಂಗ್ ಇಲೆವೆನ್ನಿಂದ ಯಾರು ಹೊರಗುಳಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Published On - 2:03 pm, Thu, 5 November 26




