ಪಿಕಲ್‌ಬಾಲ್ ಪಂದ್ಯಾವಳಿ: ಮೂರು ವಿಭಾಗಗಳಲ್ಲಿ ಫೈನಲ್​ಗೇರಿದ ಭಾರತದ ಅರ್ಮಾನ್ ಭಾಟಿಯಾ

India Masters Pickleball: ಪಿಡಬ್ಲ್ಯುಐ ಇಂಡಿಯಾ ಮಾಸ್ಟರ್ಸ್ ಪಿಕಲ್‌ಬಾಲ್ ಪಂದ್ಯಾವಳಿಯಲ್ಲಿ ಭಾರತದ ಯುವ ಪ್ರತಿಭೆ ಅರ್ಮಾನ್ ಭಾಟಿಯಾ ಅವರು ಮೂರು ವಿಭಾಗಗಳಾದ ಮಿಶ್ರ ಡಬಲ್ಸ್, ಪುರುಷರ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್‌ನಲ್ಲಿ ಫೈನಲ್‌ಗೆ ತಲುಪುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರ ಅಸಾಧಾರಣ ಆಟ ಮತ್ತು ಗೆಲುವುಗಳು ಭಾರತೀಯ ಪಿಕಲ್‌ಬಾಲ್‌ಗೆ ಹೊಸ ಆಯಾಮವನ್ನು ತಂದುಕೊಟ್ಟಿವೆ. ಫೈನಲ್ ಪಂದ್ಯಗಳು ಭಾನುವಾರ ನಡೆಯಲಿವೆ.

ಪಿಕಲ್‌ಬಾಲ್ ಪಂದ್ಯಾವಳಿ: ಮೂರು ವಿಭಾಗಗಳಲ್ಲಿ ಫೈನಲ್​ಗೇರಿದ ಭಾರತದ ಅರ್ಮಾನ್ ಭಾಟಿಯಾ
ಅರ್ಮಾನ್ ಭಾಟಿಯಾ, ರೂಸ್ ವ್ಯಾನ್ ರೀಕ್
Follow us
|

Updated on:Oct 27, 2024 | 3:23 PM

ಪಿಡಬ್ಲ್ಯುಐ ಇಂಡಿಯಾ ಮಾಸ್ಟರ್ಸ್ ಆಯೋಜಿಸಿರುವ ಪಿಕಲ್‌ಬಾಲ್ ಪಂದ್ಯಾವಳಿಯಲ್ಲಿ ಭಾರತದ ಯುವ ಪಿಕಲ್‌ಬಾಲ್ ಆಟಗಾರ ಅರ್ಮಾನ್ ಭಾಟಿಯಾ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದು, ಪಂದ್ಯಾವಳಿಯಲ್ಲಿ ಬರೋಬ್ಬರಿ ಮೂರು ಈವೆಂಟ್​ಗಳಲ್ಲಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅರ್ಮಾನ್ ಭಾಟಿಯಾ ಕ್ರಮವಾಗಿ ಮಿಶ್ರ ಡಬಲ್ಸ್, ಪುರುಷರ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್ ವಿಭಾಗಗಳಲ್ಲಿ ಫೈನಲ್​ ಪ್ರವೇಶಿಸಿದ್ದು ಪ್ರಶಸ್ತಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿದ್ದಾರೆ.

ಸಿಂಗಲ್ಸ್ ವಿಭಾಗದಲ್ಲಿ ಫೈನಲ್

ಸಿಂಗಲ್ಸ್ ವಿಭಾಗದಲ್ಲಿ ಆದಿತ್ಯ ರುಹೇಲಾ ಅವರನ್ನು ಎದುರಿಸಿದ ಅರ್ಮಾನ್ ಭಾಟಿಯಾ ಈ ಪಂದ್ಯವನ್ನು 11-10, 9-11, 11-5ರಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಭಾಟಿಯಾ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ವಿಲ್ಲಿ ಚುಂಗ್ ಅವರನ್ನು 11-4, 11-1 ಸೆಟ್‌ಗಳಿಂದ ಸೋಲಿಸಿ ಫೈನಲ್ ತಲುಪಿದ್ದಾರೆ. ಇದೀಗ ಅರ್ಮಾನ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಡಸ್ಟಿ ಬೋಯರ್ ಅವರನ್ನು ಎದುರಿಸಲಿದ್ದಾರೆ. ಇತ್ತ ಬೋಯರ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಟಾಮ್ ಇವಾನ್ಸ್ ಅವರನ್ನು 11-7, 4-11, 11-8 ಸೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಇದೀಗ ಈ ಇಬ್ಬರ ನಡುವಿನ ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.

ಮಿಶ್ರ ಡಬಲ್ಸ್, ಪುರುಷರ ಡಬಲ್ಸ್​ನಲ್ಲೂ ಫೈನಲಿಸ್ಟ್

ಹಾಗೆಯೇ ಮಿಶ್ರ ಡಬಲ್ಸ್ ವಿಭಾಗದಲ್ಲೂ ಫೈನಲ್ ಪ್ರವೇಶಿಸಿರುವ ಅರ್ಮಾನ್ ಭಾಟಿಯಾ ತಮ್ಮ ಜೊತೆಗಾತಿ ನೆದರ್ಲೆಂಡ್ಸ್‌ನ ರೂಸ್ ವ್ಯಾನ್ ರೀಕ್ ಅವರೊಂದಿಗೆ ಇಂದು ನಡೆಯಲ್ಲಿರುವ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜಾರ್ಜ್ ವಾಲ್ ಮತ್ತು ಡ್ಯಾನಿ ಟೌನ್‌ಸೆಂಡ್ ಜೋಡಿಯನ್ನು ಎದುರಿಸಲಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜೋಡಿಯಾದ ಕೈಟ್ಲಿನ್ ಹಾರ್ಟ್ ಮತ್ತು ಮಿಚೆಲ್ ಹಾರ್ಗ್ರೀವ್ಸ್ ಅವರನ್ನು ನೇರ ಸೆಟ್​ಗಳಿಂದ ಮಣಿಸಿದ್ದ ಭಾಟಿಯಾ ಹಾಗೂ ವ್ಯಾನ್​ರಿಕ್ ಜೋಡಿ, ಆ ಬಳಿಕ ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾದ ಜೋಡಿಯಾದ ವಿಶಾಲ್ ಮಸಂದ್ ಮತ್ತು ಸಾರಾ ಬರ್ ಅವರನ್ನು 11-5, 11-1 ಸೆಟ್​ಗಳಿಂದ ಮಣಿಸಿ ಫೈನಲ್​ಗೆ ಪ್ರವೇಶ ಪಡೆದಿದೆ.

ಪಿಕಲ್‌ಬಾಲ್ ಎಂದರೇನು?

ಪಿಕಲ್‌ಬಾಲ್ ಆಟ, ಟೆನಿಸ್ ಮತ್ತು ಬ್ಯಾಡ್ಮಿಂಟನ್‌ನ ಮಿಶ್ರ ರೂಪವಾಗಿದೆ. ಈ ಆಟವನ್ನು ಸಣ್ಣ ಸಣ್ಣ ರಂಧ್ರಗಳಿರುವ ಪ್ಲಾಸ್ಟಿಕ್ ಬಾಲ್ ಮತ್ತು ರಾಕೆಟ್‌ನ ಸಹಾಯದಿಂದ ಆಡಲಾಗುತ್ತದೆ. ಹಾಗೆಯೇ ಈ ಆಟವನ್ನು 44*20 ಚದರ ಅಡಿಗಳ ಅಂಕಣದಲ್ಲಿ ಆಡಲಾಗುತ್ತದೆ. ಈ ಆಟದಲ್ಲಿ ಟೆನಿಸ್​ನಂತೆ ಸಿಂಗಲ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್​ ಕೂಡ ಇರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Sun, 27 October 24