ಟೊಕಿಯೋ ಒಲಂಪಿಕ್ಸ್ 2020 : ಎರಡನೇ ಅತಿ ದೊಡ್ಡ ದೇಶ ಭಾರತದ ಪದಕ ಪಟ್ಟಿ ಮಾತ್ರ ಬಹಳ ಚಿಕ್ಕದು!
ಒಲಂಪಿಕ್ಸ್ನಲ್ಲಿ ಭಾರತದ ಪ್ರದರ್ಶನದ ವಿಷಯಕ್ಕೆ ಬಂದರೆ ಸುಮಾರು 140 ಕೋಟಿ ಜನಸಂಖ್ಯೆವುಳ್ಳ ದೇಶದ ದಾಖಲೆ ನಿರಾಶಾದಾಯಕವಾಗಿದೆ. ಸುಮಾರು ಒಂದೂ-ಕಾಲು ಶತಮಾನದಿಂದ ಈ ಕ್ರೀಡಾಕೂಟದಲ್ಲಿ ಬಾಗವಹಿಸುತ್ತಿರುವ ಭಾರತ ಇದುವರೆಗೆ ಕೇವಲ 28 ಪದಕಗಳನ್ನು ಮಾತ್ರ ಗೆದ್ದಿದೆ.
ಕಳೆದೊಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಟೊಕಿಯೋ ಒಲಂಪಿಕ್ಸ್ 2020 ಕ್ರೀಡಾಕೂಟಕ್ಕೆ ಶುಕ್ರವಾರ ವಿದ್ಯುಕ್ತ ಚಾಲನೆ ಸಿಕ್ಕಿದೆ. ಒಂದು ಜಮಾನಾ ಇತ್ತು, ಕ್ರೀಡೆಯಲ್ಲಿ ಗೆಲ್ಲುವುದು-ಸೋಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಅಂತ ಹೇಳುತ್ತಿದ್ದ ಕಾಲ. ಆದರೆ ಈಗ ಕಾಲ ಬದಲಾಗಿದೆ, ಕೇವಲ ಪಾರ್ಟಿಸಿಪೇಷನ್ಗೆ ಅಂತ ಯಾವ ದೇಶವೂ ತನ್ನ ಅಥ್ಲೀಟ್ಗಳನ್ನು ಕ್ರೀಡಾಕೂಟಗಳಿಗೆ ಕಳಿಸುವುದಿಲ್ಲ. ಆದರೆ ಒಲಂಪಿಕ್ಸ್ ವಿಷಯಕ್ಕೆ ಬಂದರೆ ಈ ಉಕ್ತಿಗೆ ಇನ್ನೂ ಮಾನ್ಯತೆ ಇದೆ ಅಂತೆನಿಸುತ್ತದೆ. ಯಾಕೆಂದರೆ, ಒಲಂಪಿಕ್ಸ್ನಲ್ಲಿ ಬಾಗವಹಿಸುವ ಅಥ್ಲೀಟ್ನೊಬ್ಬ ಪದಕ ಗೆಲ್ಲಲಿ ಬಿಡಲಿ; ಆದರೆ, ತನ್ನ ಉಳಿದ ಬದುಕಿನುದ್ದಕ್ಕೂ ಅವನು ಒಲಂಪಿಯನ್ ಅನಿಸಿಕೊಳ್ಳುತ್ತಾನೆ! ಅದೇನೇ ಇರಲಿ, ಪ್ರತಿ ಕ್ರೀಡಾಪಟುವಿನ ಕನಸು ಮತ್ತು ಮಹತ್ತಾಕಾಂಕ್ಷೆ ಒಲಂಪಿಕ್ಸ್ನಲ್ಲಿ ಬಾಗವಹಿಸುವುದಾಗಿರುತ್ತದೆ.
2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಂಪಿಕ್ಸ್ ಕೊವಿಡ್-19 ಪಿಡುಗಿನಿಂದಾಗಿ ಒಂದು ವರ್ಷ ಮುಂದೂಡಲ್ಲಪಟ್ಟು ಈಗ ನಡೆಯುತ್ತಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ, ಈ ಸಲದ ಕ್ರೀಟಾಕೂಟ ಒಲಂಪಿಕ್ಸ್ ಇತಿಹಾಸದಲ್ಲೇ ಮೊದಲಬಾರಿಗೆ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸದರಿ ಒಲಂಪಿಕ್ಸ್ ಟೋಕಿಯೊ ನಗರವಲ್ಲದೆ, ಫುಕಿಶಿಮಾ, ಮಿಯಾಗಿ ಮತ್ತು ಶಿಜಿವೊಕಾ ಪಟ್ಟಣಗಳಲ್ಲಿರುವ ಸ್ಟೇಡಿಯಂಗಳಲ್ಲೂ ನಡೆಯಲಿವೆ. ಆಯೋಜಕರ ಪ್ರಕಾರ ಮಿಯಾಗಿ ಮತ್ತು ಶಿಜಿವೊಕಾಗಳಲ್ಲಿ ಕಡಿಮೆ ಸಂಖ್ಯೆಯ ಪ್ರೇಕ್ಷಕರಿಗೆ ಅನುಮತಿ ನೀಡುವ ಸಾಧ್ಯತೆಯಿದೆ.
ಹಾಗೆ ನೋಡಿದರೆ ಒಲಂಪಿಕ್ಸ್ ,ಟೋಕಿಯೊದಲ್ಲಿ ಇದೇ ಮೊದಲ ಬಾರಿಗೆ ಏನೂ ನಡೆಯುತ್ತಿಲ್ಲ. ಸುಮಾರು 57 ವರ್ಷಗಳ ಹಿಂದೆ ಅಂದರೆ 1964ರಲ್ಲಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತ್ಯುನ್ನತ ಕೂಟವನ್ನು ಟೋಕಿಯೊದಲ್ಲಿ ಆಯೋಜಿಸಲಾಗಿತ್ತು. ಆಗಿನ ಒಲಂಪಿಕ್ಸ್ ಯಾವುದೇ ಅಡೆತೆಗಳಿಲ್ಲದೆ ಸಾಂಗವಾಗಿ ನಡೆದಿತ್ತು. ಆದರೆ ಬಾರಿಯದನ್ನು ನಡೆಸಲು, ಜಪಾನ್ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಒಂದು ವರ್ಷ ವಿಳಂಬಗೊಂಡಿದ್ದಂತೂ ನಿಜ, ಆದರೆ, ಕೊನೆ ಗಳಿಗೆವರೆಗೆ ಕ್ರೀಡಾಕೂಟವನ್ನು ರದ್ದು ಮಾಡಬೇಕೆಂದು ಅಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದವು.
ಕಳೆದ ಕೆಲ ದಿನಗಳಿಂದ ಜಪಾನ್ನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೆ, ಒಲಂಪಿಕ್ ಗ್ರಾಮದಲ್ಲೂ ಕೆಲ ದೇಶಗಳ ಅಥ್ಲೀಟ್ಗಳು ಸೋಂಕಿಗೀಡಾಗಿರುವ ವರದಿಗಳು ಬಂದಿವೆ. ಲಭ್ಯವಾಗಿರುವ ಮೂಲಗಳ ಪ್ರಕಾರ ಅಥ್ಲೀಟ್, ಅಧಿಕಾರಿ ಮತ್ತು ಸ್ವಯಂ ಸೇವಕರು ಸೇರಿದಂತೆ ಒಟ್ಟು 70 ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಬೆಳವಣಿಗೆಯ ನಂತರವೇ ಉಳಿದೆಲ್ಲ ಅಥ್ಲೀಟ್ಗಳ ಪಿಸಿಆರ್-ಟೆಸ್ಟ್ ಪ್ರತಿದಿನ ಮಾಡಲಾಗುತ್ತಿದೆ.
ಒಲಂಪಿಕ್ಸ್ನಲ್ಲಿ ಭಾರತದ ಪ್ರದರ್ಶನದ ವಿಷಯಕ್ಕೆ ಬಂದರೆ ಸುಮಾರು 140 ಕೋಟಿ ಜನಸಂಖ್ಯೆವುಳ್ಳ ದೇಶದ ದಾಖಲೆ ನಿರಾಶಾದಾಯಕವಾಗಿದೆ. ಸುಮಾರು ಒಂದೂ-ಕಾಲು ಶತಮಾನದಿಂದ ಈ ಕ್ರೀಡಾಕೂಟದಲ್ಲಿ ಬಾಗವಹಿಸುತ್ತಿರುವ ಭಾರತ ಇದುವರೆಗೆ ಕೇವಲ 28 ಪದಕಗಳನ್ನು ಮಾತ್ರ ಗೆದ್ದಿದೆ. ಇದರಲ್ಲಿ ಹೆಚ್ಚಿನವು ಹಾಕಿಯಲ್ಲಿ ಬಂದಿವೆ. ಈ ಕ್ರೀಡೆಯಲ್ಲ ಭಾರತ ಪಾರಮ್ಯ ಮೆರೆದಿದ್ದು ಸುಳ್ಳಲ್ಲ. 1928 ರಿಂದ 1980 ರವರೆಗೆ ಭಾರತ 8 ಬಾರಿ ಸ್ವರ್ಣ, ಒಮ್ಮೆ ಬೆಳ್ಳಿ ಮತ್ತು ಎರಡು ಬಾರಿ ಕಂಚಿನ ಪದಕ ಗೆದ್ದಿದೆ. ಆದರೆ 1980 ರ ಮಾಸ್ಕೋ ಒಲಂಪಿಕ್ಸ್ ನಂತರ ಹಾಕಿಯಲ್ಲಿ ಭಾರತಕ್ಕೆ ಪದಕಗಳು ಸಿಕ್ಕಿಲ್ಲ. ಮೊದಲೆಲ್ಲ ನೇರವಾಗಿ ಒಲಂಪಿಕ್ಸ್ಗೆ ಅರ್ಹತೆ ಗಿಟ್ಟಿಸುತ್ತಿದ್ದ ಭಾರತ ಈಗ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಅರ್ಹತೆ ಪಡೆಯುವ ಹಂತಕ್ಕಿಳಿದಿದೆ.
ಅಥ್ಲೆಟಿಕ್ಸ್ನಲ್ಲಿ; ಇತ್ತೀಚಿಗೆ ನಿಧನರಾದ ಮಿಲ್ಕಾ ಸಿಂಗ್ 1960 ರ ರೋಮ್ ಒಲಂಪಿಕ್ಸ್ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರಾದರೂ ಕೂದಲೆಳೆಯ ಅಂತರದಿಂದ ಅದನ್ನು ತಪ್ಪಿಸಿಕೊಂಡರು. ಅದಾದ ಮೇಲೆ ಏಷ್ಯನ್ ಕ್ರೀಡೆಗಳಲ್ಲಿ ಪದಕಗಳ ಕೊಳ್ಳೆ ಹೊಡೆಯುತ್ತಿದ್ದ ಪಿಟಿ ಉಷಾ ಸಹ 1984 ರಲ್ಲಿ ಪದಕ ಗೆದ್ದು ತರುವ ನಿರೀಕ್ಷೆ ಹುಟ್ಟಿಸಿದ್ದರು. ಆಕೆಯೂ ಸ್ವಲ್ಪ ಅಂತರದಲ್ಲಿ ತಪ್ಪಿಸಿಕೊಂಡರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತ ಬೇರೆ ಕ್ರೀಡೆಗಳಲ್ಲಿ ಪದಕಗಳನ್ನು ಗೆಲ್ಲುತ್ತಿದೆ. ಕುಸ್ತಿ, ವೇಟ್-ಲಿಫ್ಟಿಂಗ್, ಶೂಟಿಂಗ್, ಬಾಕ್ಸಿಂಗ್, ಟೆನ್ನಿಸ್ ಮತ್ತು ಬಾಡ್ಮಿಂಟನ್ ಕ್ರೀಡೆಗಳಲ್ಲಿ ಭಾರತಕ್ಕೆ ಪದಕಗಳು ಲಭ್ಯವಾಗಿವೆ. 1900 ರಿಂದ ಒಲಂಪಿಕ್ಸ್ನಲ್ಲಿ ಬಾಗವಹಿಸುತ್ತಿರುವ ಭಾರತದ ಅತ್ಯುತ್ತಮ ಪ್ರದರ್ಶನ 2012 ರ ಲಂಡನ್ ಗೇಮ್ಸ್ಗಳಲ್ಲಿ ಕಂಡುಬಂತು. ಆಗ ಭಾರತ 6 ಪದಕಗಳೊಂದಿಗೆ ಸ್ವದೇಶಕ್ಕೆ ಮರಳಿತ್ತು.
ನಾವೆಲ್ಲ ಗಮನಿಸುತ್ತಾ ಬಂದಿರುವ ಹಾಗೆ ಆಮೇರಿಕ, ರಷ್ಯಾ (ಮೊದಲು ಯುಎಸ್ಎಸ್ಆರ್) ಮತ್ತು ಪಾಶ್ಚಾತ್ಯ ರಾಷ್ಟ್ರಗಳು ಒಲಂಪಿಕ್ಸ್ ಪದಕಗಳನ್ನು ಲೂಟಿ ಮಾಡುತ್ತಿದ್ದವು ಈಗಲೂ ಮಾಡುತ್ತಿವೆ. ಆದರೆ ಈಗ ಚೀನಾ ಕ್ರೀಡೆಯಲ್ಲೂ ಸೂಪರ್ ಪವರ್ ಆಗಿ ಬೆಳೆದಿದೆ. ಬೇರೆ ಏಷ್ಯನ್ ದೇಶಗಳು ಜಪಾನ್, ದಕ್ಷಿಣ ಕೊರಿಯ ಸಹ ಈ ಕ್ರೀಡಾಕೂಟಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಪದಕ ಗೆಲ್ಲುತ್ತಿವೆ.
ಟೊಕಿಯೋನಲ್ಲಿ ಭಾರತ ಶೂಟಿಂಗ್, ಭಾರ-ಎತ್ತುವಿಕೆ, ಕುಸ್ತಿ ಈವೆಂಟ್ಗಳಲ್ಲಿ ಪದಕ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ವೈಯಕ್ತಿಕ ಸ್ಪರ್ಧೆಗಳು-ಬ್ಯಾಡ್ಮಿಂಟನ್ನಲ್ಲಿ ಪಿ ಇ ಸಿಂಧೂ, ಮತ್ತು ಬಾಕ್ಸಿಂಗ್ನಲ್ಲಿ ಮೇರಿ ಕೋಮ್ ಮೇಲೆ ಅಪಾರ ಭರವಸೆ ಇಟ್ಟುಕೊಳ್ಳಲಾಗಿದೆ. ಹಾಕಿಯಲ್ಲಿ ಭಾರತಕ್ಕೆ ಈ ಬಾರಿ ವಿಮೋಚನೆ ಸಿಗಲಿದೆಯೋ ಎನ್ನುವುದನ್ನು ಕಾದು ನೋಡಬೇಕು.