ಅಮೆರಿಕದಲ್ಲಿ ಮುದ್ರಣಲೋಕದ ದೊರೆಯೆನಿಸಿಕೊಂಡಿದ್ದ ವ್ಯಕ್ತಿಯ ಮೊಮ್ಮಗಳು ದರೋಡೆಕೋರಳಾದ ರೋಚಕ ಕತೆಯಿದು!
ಜೈಲಿಂದ ಹೊರಬಂದ ಬಳಿಕ ಪ್ಯಾಟಿ ಜಾನ್ ವಾಟರ್ಸ್ ನ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದಳು. ಅಮೆರಿಕದಲ್ಲಿ ಪಾಪ್ ಸಂಸ್ಕೃತಿ ವೇಗಪಡೆದುಕೊಳ್ಳಲು ಪ್ಯಾಟಿ ನೀಡಿದ ಕೊಡುಗೆ ದೊಡ್ಡದು ಅಂತ ಹೇಳಲಾಗುತ್ತದೆ.
ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ಇಂದು ನಿಮಗೆ ಅಷ್ಟೇನೂ ಭಯಾನಕವಲ್ಲದ ಅದರೆ 70 ರ ದಶಕದ ಮಧ್ಯಭಾಗದಲ್ಲಿ ಅಮೆರಿಕನ್ನರ ಕುತೂಹಲ ಕೆರಳಿಸಿದ್ದ ಪ್ರಕರಣದ ಬಗ್ಗೆ ಹೇಳುತ್ತಿದ್ದೇವೆ. ಈ ಪ್ರಕರಣ ರೋಚಕವೂ ಹೌದು. ಯಾಕೆಂದರೆ, ಅದರ ನಾಯಕಿ ಸಾಮಾನ್ಯ ಯುವತಿಯಾಗಿರಲಿಲ್ಲ. ಅವಳು ಅಮೆರಿಕ ಮುದ್ರಣಲೋಕದ ದೊರೆಯೆನಿಕೊಂಡಿದ್ದ ವಿಲಿಯಂ ರಾಂಡಾಲ್ಫ್ ಹರ್ಸ್ಟ್ (William Randolph Hearst) ಮೊಮ್ಮಗಳು ಪ್ಯಾಟಿ ಹರ್ಸ್ಟ್ (Patty Hearst)!
ಉತ್ತರ ಕ್ಯಾಲಿಫೋರ್ನಿಯಾದ ಬರ್ಕ್ಲೀ (Berkeley) ನಗರದ ಫ್ಲ್ಯಾಟೊಂದರಲ್ಲಿ ವಾಸವಾಗಿದ್ದ ಪ್ಯಾಟಿ ಫೆಬ್ರುವರಿ 4, 1974 ರಂದು ತನ್ನ ಮನೆಯಿಂದಲೇ ಅಪಹರಣಕ್ಕೊಳಗಾಗುತ್ತಾಳೆ. ಆಗ ಅಮೆರಿಕದಲ್ಲಿ ಕಟ್ಟಾ ಎಡಪಂಥೀಯ ಗುಂಪು ಎನಿಸಿಕೊಂಡಿದ್ದ ಸಿಂಬಯೋನೀಸ್ ಲಿಬರೇಷನ್ ಆರ್ಮಿ (ಎಸ್ ಎಲ್ ಎ) ಅಪಹರಣದ ಹೊರೆ ಹೊತ್ತುಕೊಳ್ಳುತ್ತದೆ. ಗುಂಪಿನ ಸದಸ್ಯರು ಕ್ರಾಂತಿಕಾರಿಗಳೆಂದು ಗುರುತಿಸಿಕೊಳ್ಳುತ್ತಿದ್ದರು ಮತ್ತು ಜನರಲ್ಲಿ ಗುಂಪಿನ ಬಗ್ಗೆ ವಿಪರೀತ ಭಯವಿತ್ತು.
ಎಸ್ ಎಲ್ ಎ ಸದಸ್ಯರು ಅಪರಾಧ ಕೃತ್ಯ ನಡೆಸುತ್ತಿದ್ದರು!
ಎಸ್ ಎಲ್ ಎ ಸದಸ್ಯರು ತಮ್ಮ ಸಂಸ್ಥೆಯ ನಿಯಮಾವಳಿಗಳಿಗೆ ಬದ್ಧರಾಗಿದ್ದುಕೊಂಡೇ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದರು. ಮೇಲೆ ಹೇಳಿದಂತೆ ಪ್ಯಾಟಿಯ ಅಪಹರಣ ಫೆಬ್ರುವರಿ ಮೊದಲ ವಾರದಲ್ಲಿ ನಡೆದಿತ್ತು. ಅದಾದ ಎರಡು ತಿಂಗಳು ನಂತರ; ನಿಖರವಾಗಿ ಹೇಳಬೇಕೆಂದರೆ ಏಪ್ರಿಲ್ 15, 1974 ರಂದು ಎಸ್ ಎಲ್ ಎ ಸದಸ್ಯರು ಸ್ಯಾನ್ ಪ್ರ್ಯಾನ್ಸಿಸ್ಕೊ ನಗರದಲ್ಲಿದ್ದ ಹೈಬರ್ನಿಯ ಬ್ಯಾಂಕ್ ದರೋಡೆ ನಡೆಸುತ್ತದೆ. ಅಂದಹಾಗೆ, ಕೈಯಲ್ಲಿ ಪಿಸ್ಟಲ್ ಝಳಪಳಿಸುತ್ತಾ ದರೋಡೆಯ ನೇತೃತ್ವವಹಿಸಿದ್ದು ಯಾರು ಗೊತ್ತಾ? ಪ್ಯಾಟಿ ಹರ್ಸ್ಟ್! ಮುದ್ರಣ ಲೋಕದ ದೊರೆ ಮತ್ತು ಆಗರ್ಭ ಶ್ರೀಮಂತನ ಮೊಮ್ಮಗಳು ಒಬ್ಬ ದರೋಡೆಕೋರಳು!!
ಇದಾದ ಕೆಲವೇ ದಿನಗಳ ನಂತರ ಎಸ್ ಎಲ್ ಎ ವಿಡಿಯೋವೊಂದನ್ನು ರಿಲೀಸ್ ಮಾಡಿ ಪ್ಯಾಟಿ ಗುಂಪಿನ ಸದಸ್ಯೆಯಾಗಿದ್ದಾಳೆ ಮತ್ತು ಅವಳ ಹೆಸರು ಈಗ ‘ತಾನಿಯಾ’ ಅಂತ ಬದಲಾಗಿದೆ ಅಂತ ಹೇಳುತ್ತದೆ.
ಸಿರಿವಂತ ಕುಟುಂಬದ ಯುವತಿ ದರೋಡೆಕೋರಳು!
ಒಂದು ಸಾಫಿಸ್ಟಿಕೇಟೆಡ್ ಕುಟುಂಬ ವಿದ್ಯಾವಂತ ತರುಣಿ ಕೇವಲ ಎರಡು ತಿಂಗಳ ಅವಧಿಯಲ್ಲಿ ಮಾರ್ಪಡುವುದು ಸಾಧ್ಯವೇ? ಅಮೆರಿಕದ ಜನ ಹಾಗೆ ಯೋಚಿಸಲಾರಂಭಿಸಿದ್ದರು. ಎಸ್ ಎಲ್ ಎ ಗುಂಪಿನ ಕ್ರೌರ್ಯತೆಗೆ ಹೆದರಿ ಅವಳು ಕೈಯಲ್ಲಿ ಗನ್ ಹಿಡಿದು ದರೋಡೆ ಕೃತ್ಯದಲ್ಲಿ ಭಾಗಿಯಾದಳೆ? ಅಥವಾ ಅವಳ ಮೇಲೆ ಸ್ಟಾಕ್ ಹೋಮ್ ಸಿಂಡ್ರೋಮ್ (ಕಳ್ಳರು ಮತ್ತು ಅಪಹರಣಕಾರರ ಜೊತೆ ಇದ್ದು ಅವರು ಮಾಡುತ್ತಿರುವ ಅಪರಾಧ ಕೃತ್ಯಗಳಲ್ಲಿ ತಪ್ಪೇನೂ ಇಲ್ಲ ಎಂಬ ಭಾವನೆ ತಳೆಯುವುದು) ಪ್ರಭಾವ ಬೀರಿತ್ತೇ? ಜನ ಗೊಂದಲಕ್ಕೆ ಬಿದ್ದಿದ್ದರು.
ಮುಂದೆ ಕೆಲವಾರಗಳ ನಂತರ ಪೊಲೀಸರು ಪ್ಯಾಟಿ ಮತ್ತು ಬ್ಯಾಂಕ್ ದರೋಡೆಯಲ್ಲಿ ಭಾಗವಹಿಸಿದ್ದವರನ್ನು ಸೆರೆಹಿಡಿದರು. ನ್ಯಾಯಾಲಯದಲ್ಲಿ ಬಹಳ ದಿನಗಳವರೆಗೆ ವಿಚಾರಣೆ ನಡೆಯಿತು. ಅಂತಿಮವಾಗಿ ಕೋರ್ಟ್ ದರೋಡೆ ಪ್ರಕರಣದಲ್ಲಿ (ಬ್ಯಾಂಕ್ ನೊಳಗೆ ಇಬ್ಬರ ಮೇಲೆ ಗುಂಡು ಹಾರಿಸಲಾಗಿತ್ತು) ಪ್ಯಾಟಿಗೆ 35 ವರ್ಷಗಳ ಶಿಕ್ಷೆ ವಿಧಿಸಿತು. ಕೆಲವೇ ದಿನಗಳ ನಂತರ ಅವಳ ಶಿಕ್ಷೆಯನ್ನು ಕೇವಲ 7 ವರ್ಷಗಳಿಗೆ ತಗ್ಗಿಸಲಾಯಿತು.
ಯುಎಸ್ ಅಧ್ಯಕ್ಷರುಗಳ ಕೃಪಾಕಟಾಕ್ಷ
ಪ್ಯಾಟಿ ಜಾಮೀನಿಗಾಗಿ ಮನವಿ ಸಲ್ಲಿಸಿ ಜೈಲು ಮತ್ತು ಕೋರ್ಟ್ ನಡುವೆ ಅಲೆದಾಡುತ್ತಿದ್ದಳು. ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ ಅವರಿಗೂ ಪ್ಯಾಟಿ ಮನವಿ ಸಲ್ಲಸಿದ್ದಳು. ಅವರಿಗೆ ಪ್ಯಾಟಿಯ ಮೇಲೆ ಅದ್ಯಾಕೆ ಕರುಣೆ ಹುಟ್ಟಿತೋ? 7 ವರ್ಷಗಳ ಶಿಕ್ಷೆಯನ್ನು 22 ತಿಂಗಳುಗಳಿಗೆ ತಗ್ಗಿಸಿದರು. 2001ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಪ್ಯಾಟಿಗೆ ಕ್ಷಮಾದಾನವನ್ನು ನೀಡಿದ್ದರು.
ಜೈಲಿಂದ ಹೊರಬಂದ ಬಳಿಕ ಪ್ಯಾಟಿ ಜಾನ್ ವಾಟರ್ಸ್ ನ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದಳು. ಅಮೆರಿಕದಲ್ಲಿ ಪಾಪ್ ಸಂಸ್ಕೃತಿ ವೇಗಪಡೆದುಕೊಳ್ಳಲು ಪ್ಯಾಟಿ ನೀಡಿದ ಕೊಡುಗೆ ದೊಡ್ಡದು ಅಂತ ಹೇಳಲಾಗುತ್ತದೆ.
ಒತ್ತಡಕ್ಕೆ ಮಣಿದು ದರೋಡೆ?
ಪ್ಯಾಟಿ ಹರ್ಸ್ಟ್ ಳ ಆತ್ಮಚರಿತ್ರೆ ಎವ್ರಿ ಸೀಕ್ರೆಟ್ ಥಿಂಗ್ 1981ರಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ಅವಳು ಎಸ್ ಎಲ್ ಎ ಸದಸ್ಯರ ಒತ್ತಡಕ್ಕೆ ಮಣಿದು ಬ್ಯಾಂಕ್ ದರೋಡೆಯಲ್ಲಿ ಪಾಲ್ಗೊಳ್ಳಬೇಕಾಯಿತು ಅಂತ ಹೇಳಿದ್ದಾಳೆ. ಆದರೆ, ನ್ಯೂ ಯಾರ್ಕರ್ ಪತ್ರಿಕೆಯ ಅಂಕಣಕಾರ ಮತ್ತು ಸಿಎನ್ ಎನ್ ನ ಕಾನೂನು ವಿಶ್ಲೇಷಕ ಜೆಫ್ರಿ ಟೂಬಿನ್ ಅವರು 2016 ರಲ್ಲಿ ಬರೆದ ಅಮೆರಿಕನ್ ಹೇರೆಸ್ಸ್: ದಿ ವೈಲ್ಡ್ ಸಾಗಾ ಆಫ್ ಕಿಡ್ನ್ಯಾಪಿಂಗ್, ಕ್ರೈಮ್ಸ್ ಅಂಡ್ ಟ್ರಯಲ್ ಆಫ್ ಪ್ಯಾಟಿ ಹರ್ಸ್ಟ್ ಪುಸ್ತಕದಲ್ಲಿ ಪ್ಯಾಟಿ ಹೇಳಿದ್ದಕ್ಕೆ ತದ್ವಿರುದ್ಧವಾದ ಅಂಶಗಳನ್ನು ಉಲ್ಲೇಖಿಸಿದ್ದಾರೆ.