ಉಕ್ರೇನ್ ಯುದ್ಧದ ನಡುವೆ ರಷ್ಯಾಕ್ಕೆ ಭೇಟಿ ನೀಡಿದ ಭಾರತದ ವಿದೇಶಾಂಗ ವ್ಯವಹಾರ ಸಚಿವ ಎಸ್ ಜೈಶಂಕರ್
ವಿದೇಶಾಂಗ ವ್ಯವಹಾರಗಳ ಸಚಿವರ ಭೇಟಿ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಹಲವು ವಿಚಾರಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.
ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧ (Russia Ukraine War) ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಒಮ್ಮೆ ರಷ್ಯಾ ಮತ್ತೊಮ್ಮೆ ಉಕ್ರೇನ್ ಕೈ ಮೇಲಾಗುತ್ತಿದೆ. ಭಾರತವು ಯುದ್ಧ ನಿಲ್ಲಿಸಲು ತನ್ನದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ಮುಂದುವರಿಸಿದೆ. ಈ ನಡುವೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (S Jaishankar) ಎರಡು ದಿನಗಳ ಭೇಟಿಗೆಂದು ರಷ್ಯಾಕ್ಕೆ ಭೇಟಿ ನೀಡಿದ್ದು, ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್ (Russian Foreign Minister Sergey Lavrov) ಅವರನ್ನು ಭೇಟಿಯಾಗಲಿದ್ದಾರೆ. ಇದು ಎರಡೂ ದೇಶಗಳ ನಡುವೆ ನಡೆಯುತ್ತಿರುವ ಉನ್ನತ ಮಟ್ಟದ ಮಾತುಕತೆಯ ಮುಂದುವರಿದ ಭಾಗವಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವರ ಭೇಟಿ ಸಂದರ್ಭದಲ್ಲಿ ಎರಡೂ ದೇಶಗಳ ನಡುವೆ ಹಲವು ವಿಚಾರಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಹಲವು ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆಯೂ ಇಬ್ಬರೂ ಸಚಿವರು ಚರ್ಚೆ ನಡೆಸಲಿದ್ದಾರೆ. ಜೈಶಂಕರ್ ಅವರು ಜುಲೈ 2021ರಂದು ಕೊನೆಯ ಬಾರಿಗೆ ರಷ್ಯಾಕ್ಕೆ ಭೇಟಿ ನೀಡಿದ್ದರು. ನಂತರ ಏಪ್ರಿಲ್ 2022ರಲ್ಲಿ ರಷ್ಯಾದ ವಿದೇಶಾಂಗ ವ್ಯವಹಾರ ಸಚಿವರು ದೆಹಲಿಗೆ ಭೇಟಿ ನೀಡಿದ್ದರು. ಆಗಷ್ಟೇ ಉಕ್ರೇನ್ ಯುದ್ಧದ ಬಿಸಿ ಜಗತ್ತಿಗೆ ತಾಗುತ್ತಿತ್ತು.
ಜೈಶಂಕರ್ ಮಾಸ್ಕೋ ಭೇಟಿಗೂ ಮೊದಲು ಪ್ರತಿಕ್ರಿಯಿಸಿದ್ದ ರಷ್ಯಾ ವಿದೇಶಾಂಗ ಸಚಿವಾಲಯ, ಭಾರತ ಮತ್ತು ರಷ್ಯಾ ದೇಶಗಳು ವಿಶ್ವದಲ್ಲಿ ಸಮಾನತೆ ಹಾಗೂ ಭ್ರಾತೃತ್ವ ಇರಬೇಕೆಂದು ಪ್ರತಿಪಾದಿಸುತ್ತವೆ ಎಂದು ಹೇಳಿತ್ತು. ‘ವಿಶ್ವದಲ್ಲಿ ತಮ್ಮ ಇಚ್ಛೆಯೇ ನಡೆಯಬೇಕು, ತಮ್ಮ ನೀತಿಗೆ ಎಲ್ಲರೂ ತಲೆಬಾಗಬೇಕು ಎನ್ನುವ ಕೆಲ ದೇಶಗಳ ವಾದವನ್ನು ಭಾರತ ಮತ್ತು ರಷ್ಯಾ ಒಪ್ಪುವುದಿಲ್ಲ’ ಎಂದು ರಷ್ಯಾ ವಿದೇಶಾಂಗ ವ್ಯವಹಾರಗಳ ಇಲಾಖೆಯ ಹೇಳಿಕೆಯು ತಿಳಿಸಿತ್ತು.
ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಗಳು ಅತ್ಯಗತ್ಯವಾಗಿವೆ. ‘ದ್ವಿಪಕ್ಷೀಯ ಮಾತುಕತೆ ಮೂಲಕ ಜಾಗತಿಕ ಆರ್ಥಿಕತೆ, ಹಣಕಾಸು, ಇಂಧನ, ಸೇನಾ ತಾಂತ್ರಿಕತೆ, ಮಾನವೀಯ, ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರಗಳ ಕ್ಷೇತ್ರದಲ್ಲಿ ಸಹಕಾರಕ್ಕೆ ಹೊಸ ವೇಗ ಸಿಗಲಿದೆ’ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ಹೇಳಿಕೆಯು ತಿಳಿಸಿದೆ. ಲ್ಯಾವ್ರೊವ್ ಮತ್ತು ಜಯಶಂಕರ್ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಹೇಗೆ ಎರಡೂ ದೇಶಗಳು ಪರಸ್ಪರ ಸಹಕಾರದೊಂದಿಗೆ ಮುನ್ನಡೆಯಬಹುದು ಎಂಬ ಬಗ್ಗೆಯೂ ತಮ್ಮ ಮಾತುಕತೆಯ ವೇಳೆ ಚರ್ಚಿಸಲಿದ್ದಾರೆ.
‘ವ್ಯಾಪಾರ ಮತ್ತು ಹೂಡಿಕೆ, ಸಾರಿಗೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ವಹಿವಾಟುಗಳನ್ನು ತಮ್ಮದೇ ಕರೆನ್ಸಿಗಳಲ್ಲಿ ನಡೆಸಲು ಅವಕಾಶ ಮಾಡಿಕೊಡುವ ಬಗ್ಗೆಯೂ ದ್ವಿಪಕ್ಷೀಯ ಮಾತುಕತೆಗಳಲ್ಲಿ ಚರ್ಚೆ ನಡೆಯಲಿದೆ. ಮುಖ್ಯವಾಗಿ ರಷ್ಯಾದ ಪೂರ್ವದಲ್ಲಿರುವ ಆರ್ಟಿಕ್ ಶೆಲ್ಫ್ ಪ್ರದೇಶದಲ್ಲಿ ಭಾರತದ ಚಟುವಟಿಕೆಗಳ ಬಗ್ಗೆಯೂ ಇಬ್ಬರೂ ಸಚಿವರ ನಡುವೆ ಚರ್ಚೆ ನಡೆಯಲಿದೆ’ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯು ತಿಳಿಸಿದೆ.
ವಿಶ್ವಸಂಸ್ಥೆ (United Nationa – UN), ಶಾಂಘೈ ಸಹಕಾರ ಒಕ್ಕೂಟ (Shanghai Cooperation Organisation – SCO), 20 ದೇಶಗಳ ಒಕ್ಕೂಟ (Group of Twenty – G20) ಮತ್ತು ಆರ್ಐಸಿ (Russia, India, China – RIC) ಒಕ್ಕೂಟಗಳ ಬಗ್ಗೆಯೂ ಎರಡೂ ದೇಶಗಳ ನಡುವೆ ಚರ್ಚೆ ನಡೆಯಲಿದೆ.
ರಕ್ಷಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಭಾರತ ಮತ್ತು ರಷ್ಯಾ ನಡುವೆ ಬಹುಕಾಲದಿಂದ ಬಾಂಧವ್ಯವಿದೆ. ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಭಾರತವು ಈವರೆಗೆ ಬಹಿರಂಗವಾಗಿ ಖಂಡಿಸಿಲ್ಲ. ಆದರೆ ವಿಶ್ವಸಂಸ್ಥೆಯ ಹಲವು ವೇದಿಕೆಗಳಲ್ಲಿ ಭಾರತವು ರಷ್ಯಾ-ಉಕ್ರೇನ್ ನಡುವೆ ಶಾಂತಿ ನೆಲೆಸಬೇಕು ಎಂದು ಒತ್ತಾಯಿಸಿದೆ. ಇದೀಗ ಎರಡೂ ದೇಶಗಳ ನಡುವೆ ಭಾರತವೇ ಮಧ್ಯಸ್ಥಿಕೆ ವಹಿಸಬೇಕು ಎಂಬ ಮಾತುಗಳು ಅಂತರರಾಷ್ಟ್ರೀಯ ಸಮುದಾಯದಲ್ಲಿ ಕೇಳಿ ಬರುತ್ತಿದೆ.
Published On - 7:27 am, Tue, 8 November 22