ಯುಎಇಗೆ ಆಗಮಿಸಿದ ಪ್ರಧಾನಿ ಮೋದಿಗೆ ರಾಯಲ್ ಅಪ್ಪುಗೆ : ಉಭಯ ನಾಯಕರ ನಡುವೆ ಮಹತ್ವದ ಒಪ್ಪಂದ
ಪ್ರಧಾನಿ ಮೋದಿ ಅವರು ಇಂದು ಯುಎಇಗೆ ಭೇಟಿ ನೀಡಿದ್ದು, ಆತ್ಮೀಯ ಅಪ್ಪುಗೆ ನೀಡಿ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸ್ವಾಗತ ನೀಡಿದರು. ಇನ್ನು ಮೋದಿಗೆ ಈ ಸಂದರ್ಭದಲ್ಲಿ ಅಲ್ಲಿನ ಸೈನ್ಯ ಕೂಡ ಮಹತ್ವ ಗೌರವನ್ನು ನೀಡಿದೆ. ಈ ಭೇಟಿಯ ನಂತರ ಇಬ್ಬರು ನಾಯಕರು ಕೂಡ ಅನೇಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಫೆ.13) ಯುಎಇಗೆ ಭೇಟಿ ನೀಡಿದ್ದಾರೆ, ಮೋದಿ ಅವರನ್ನು ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸ್ವಾಗತಿಸಿದ್ದಾರೆ, ಈ ವೇಳೆ ಇಬ್ಬರು ಕೂಡ ಆತ್ಮೀಯ ಅಪ್ಪುಗೆಯನ್ನು ಹಂಚಿಕೊಂಡಿದ್ದಾರೆ. ಎರಡು ದಿನಗಳ ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಲಿದ್ದಾರೆ. ಇನ್ನು ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಸೈನ್ಯ ಮಹತ್ವದ ಗೌರವವನ್ನು ನೀಡಿದೆ. ಇಬ್ಬರು ನಾಯಕರು ಉಭಯ ಕುಶಲೋಪರಿಯನ್ನು ನಡೆಸಿದ್ದು, ಈ ಸಮಯದಲ್ಲಿ ಮೋದಿ ಅವರು ಅಬುಧಾಬಿಯಲ್ಲಿ ಹಿಂದೂ ದೇವಾಲಯದ ನಿರ್ಮಾಣಕ್ಕಾಗಿ ಅವಕಾಶ ನೀಡಿದಕ್ಕೆ ಯುಎಇ ಅಧ್ಯಕ್ಷರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಿಮ್ಮ ಬೆಂಬಲವಿಲ್ಲದೆ ಇಲ್ಲಿ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ದೇವಾಲಯದ ನಿರ್ಮಾಣವು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ಮೋದಿ ಅವರು ಈ ವೇಳೆ ಅಬುಧಾಬಿ ನಗರದಲ್ಲಿ ಯುಪಿಐ ರುಪೇ ಕಾರ್ಡ್ ಸೇವೆಯನ್ನು ಪರಿಚಯಿಸಿದರು. ಇದರ ಜತೆಗೆ ಅನೇಕ ರಾಜತಾಂತ್ರಿಕ ವಿಚಾರಗಳ ಬಗ್ಗೆ ಹಾಗೂ ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವದ ಕುರಿತು ಮಾತುಕತೆ ನಡೆಸಿದ್ದಾರೆ. ಹಿಂದೂ ದೇವಾಲಯದ ಅಭಿವೃದ್ಧಿ ಕೆಲಸದ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಇದರ ನಡುವೆ ಇಬ್ಬರು ನಾಯಕರು ಇಂಧನ, ಬಂದರುಗಳು, ಡಿಜಿಟಲ್ ಮೂಲಸೌಕರ್ಯ, ರೈಲ್ವೆ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವುದು ಪ್ರಮುಖವಾಗಿದೆ ಎಂದು ಹೇಳಿದ್ದಾರೆ. ಭಾರತ-ಯುಎಇ ಇನ್ನಷ್ಟು ಹೆಚ್ಚಿಸಬೇಕಿದೆ, ಅದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದರು. ಕಳೆದ ಒಂಬತ್ತು ವರ್ಷಗಳಲ್ಲಿ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಆಹಾರ ಮತ್ತು ಇಂಧನ ಭದ್ರತೆ ಮತ್ತು ಶಿಕ್ಷಣದಂತಹ ವೈವಿಧ್ಯಮಯ ವಲಯಗಳಲ್ಲಿ ಯುಎಇಯೊಂದಿಗಿನ ನಮ್ಮ ಸಹಕಾರವು ಬಹುಪಟ್ಟು ಬೆಳೆದಿದೆ. ನಮ್ಮ ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಪರ್ಕವು ಹಿಂದೆಂದಿಗಿಂತಲೂ ಬಲವಾಗಿದೆ ಎಂದರು.
#WATCH | Abu Dhabi, UAE: Prime Minister Narendra Modi and President of UAE Sheikh Mohamed bin Zayed Al Nahyan, share a hug. PM Modi was also accorded Guard of Honour upon his arrival. pic.twitter.com/MSLhuTEv8d
— ANI (@ANI) February 13, 2024
ಉಭಯ ನಾಯಕರ ನಡುವಿನ ಒಪ್ಪಂದ:
1. ದ್ವಿಪಕ್ಷೀಯ ಹೂಡಿಕೆ ಒಪ್ಪಂದ: ಈ ಒಪ್ಪಂದವು ಎರಡೂ ದೇಶಗಳಲ್ಲಿ ಹೂಡಿಕೆಗಳನ್ನು ಮತ್ತಷ್ಟು ಉತ್ತೇಜಿಸಲಿದೆ. ಭಾರತವು ಯುಎಇಯೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಮತ್ತು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ಎರಡಕ್ಕೂ ಸಹಿ ಹಾಕಿದೆ.
2. ವಿದ್ಯುತ್ ಅಂತರ್ಸಂಪರ್ಕ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಸಹಕಾರ ಒಪ್ಪಂದ: ಇದು ಇಂಧನ ಭದ್ರತೆ ಮತ್ತು ಇಂಧನ ವ್ಯಾಪಾರ ಸೇರಿದಂತೆ ಇಂಧನ ಕ್ಷೇತ್ರದಲ್ಲಿ ಸಹಯೋಗದ ಹೊಸ ಕ್ಷೇತ್ರಗಳನ್ನು ತೆರೆಯುತ್ತದೆ.
3. ಭಾರತ ಮತ್ತು ಯುಎಇ ನಡುವಿನ ಅಂತರಸರ್ಕಾರಿ ಚೌಕಟ್ಟಿನ ಒಪ್ಪಂದ: ಈ ಒಪ್ಪಂದವು ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ. ಈ ಹಿಂದೆ ಈ ಬಗ್ಗೆ ಒಪ್ಪಂದವನ್ನು ಉಭಯ ರಾಷ್ಟ್ರಗಳು ಮಾಡಿಕೊಂಡಿದೆ. ಇದೀಗ ಇದಕ್ಕೆ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ. ಇದರ ಮೂಲಕ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಭಾರತ ಮತ್ತು ಯುಎಇ ಕೆಲಸ ಮಾಡಲಿದೆ.
4. ಡಿಜಿಟಲ್ ಮೂಲಸೌಕರ್ಯ ಯೋಜನೆಗಳಲ್ಲಿ ಸಹಕಾರ ಒಪ್ಪಂದ: ಇದು ಡಿಜಿಟಲ್ ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಸಹಕಾರ ಸೇರಿದಂತೆ ತಾಂತ್ರಿಕ ಜ್ಞಾನ, ಕೌಶಲ್ಯ ಮತ್ತು ತಾಂತ್ರಿಕ ಪರಿಣತಿಗಳನ್ನು ಹಂಚಿಕೊಳ್ಳಲು ಈ ಒಪ್ಪಂದವನ್ನು ಮಾಡಿಕೊಂಡಿದೆ.
5. ಎರಡು ದೇಶಗಳ ರಾಷ್ಟ್ರೀಯ ದಾಖಲೆಗಳ ಮತ್ತು ವಸ್ತುಗಳ ರಕ್ಷಣೆ ಒಪ್ಪಂದ: ಈ ಒಪ್ಪಂದವು ಉಭಯ ದೇಶಗಳ ಮೂಲ ದಾಖಲೆ, ವಸ್ತುಗಳನ್ನು ಮರುಸ್ಥಾಪನೆ ಮತ್ತು ಸಂರಕ್ಷಣೆ ಮಾಡಲು ಸಹಕಾರ ನೀಡುವುದು.
6. ಪರಂಪರೆ ಮತ್ತು ವಸ್ತುಸಂಗ್ರಹಾಲಯಗಳ ಕ್ಷೇತ್ರದಲ್ಲಿ ಸಹಕಾರ: ಗುಜರಾತ್‌ನ ಲೋಥಾಲ್‌ನಲ್ಲಿರುವ ಮಾರಿಟೈಮ್ ಹೆರಿಟೇಜ್ ಕಾಂಪ್ಲೆಕ್ಸ್ಗಳನ್ನು ಗುರಿಯಾಗಿಸಿಕೊಂಡು ಮಾಡಿರುವ ಒಪ್ಪಂದವಾಗಿದೆ.
7. ತ್ವರಿತ ಪಾವತಿ ಪ್ಲಾಟ್‌ಫಾರ್ಮ್‌ಗಳ ಪರಸ್ಪರ ವಿನಿಮಯ ಒಪ್ಪಂದ – UPI (ಭಾರತ) ಮತ್ತು AANI (ಯುಎಇ): ಇದು ಎರಡು ದೇಶಗಳ ನಡುವಿನ ಗಡಿಯಾಚೆಗಿನ ವಹಿವಾಟುಗಳನ್ನು ಸುಗಮಗೊಳಿಸುತ್ತದೆ. ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ ಅವರು ಅಬುಧಾಬಿ ಭೇಟಿಯ ಸಂದರ್ಭದಲ್ಲಿ ಇಂಟರ್‌ಲಿಂಕಿಂಗ್ ಪಾವತಿ ಮತ್ತು ಮೆಸೇಜಿಂಗ್ ಸಿಸ್ಟಮ್‌ಗಳ ಒಪ್ಪಂದಕ್ಕೆ ಸಹಿ ಹಾಕಿದರು, ಇದರ ಮುಂದುವರಿದ ಭಾಗವಾಗಿ ಅದನ್ನು ಅನುಷ್ಠಾನ ಮಾಡಲು ಒಂದು ಒಪ್ಪಂದವನ್ನು ಮಾಡಲಾಗಿದೆ.
8. ದೇಶೀಯ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ವಿನಿಮಯ: ಜಯವಾನ್ (ಯುಎಇ) ಜೊತೆಗೆ ರುಪೇ (ಭಾರತ): ಇದು ಆರ್ಥಿಕ ವಲಯದ ಸಹಕಾರವನ್ನು ನಿರ್ಮಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇದು ಯುಎಇಯಾದ್ಯಂತ ರುಪೇಯ ಸಾರ್ವತ್ರಿಕ ಸ್ವೀಕಾರವನ್ನು ಹೆಚ್ಚಿಸಲಿದೆ.
ದೇವಾಲಯಕ್ಕೆ ಭೂಮಿ ದಾನ ಮಾಡಿದ ಯುಎಇ ಸರ್ಕಾರ
ಯುಎಇಯು ದುಬೈನಲ್ಲಿ ಮೂರು ಇತರ ಹಿಂದೂ ದೇವಾಲಯಗಳನ್ನು ಹೊಂದಿದೆ. ಕಲ್ಲಿನ ವಾಸ್ತುಶಿಲ್ಪದೊಂದಿಗೆ ದೊಡ್ಡ ಪ್ರದೇಶದಲ್ಲಿ ನಿರ್ಮಾಣವಾಗಿರುವ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ದೇವಾಲಯವು ಗಲ್ಫ್ನಲ್ಲಿ ಎಲ್ಲಕ್ಕಿಂತ ದೊಡ್ಡದಾಗಿದೆ. ಈ ದೇವಾಲಯ ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ನಡುವೆ ನಿರ್ಮಾಣವಾಗಿದೆ. ಎರಡು ಕಡೆಯ ಜನರು ಕೂಡ ಈ ದೇವಾಲಯಕ್ಕೆ ಭೇಟಿ ನೀಡುವಂತೆ ಎಲ್ಲ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಲಾಗಿದೆ. ಈ ದೇವಾಲಯವು ಅಬುಧಾಬಿಯಲ್ಲಿ ಸುಮಾರು 27 ಎಕರೆ ಭೂಮಿಯಲ್ಲಿ ನಿರ್ಮಾಣವಾಗಿದೆ ಮತ್ತು ಇದರ ಕೆಲಸವನ್ನು 2019 ಪ್ರಾರಂಭಿಸಲಾಗಿತ್ತು.
Published On - 6:18 pm, Tue, 13 February 24