Nissan Magnite: ಹೊಸ ನವೀಕರಣದೊಂದಿಗೆ ಬಿಡುಗಡೆಯಾದ ನಿಸ್ಸಾನ್ ಮ್ಯಾಗ್ನೈಟ್
ನಿಸ್ಸಾನ್ ಇಂಡಿಯಾ ಕಂಪನಿಯು ಹೊಸದಾಗಿ ಜಾರಿಗೆ ಬಂದಿರುವ ಆರ್ ಡಿಇ ಮಾನದಂಡಗಳೊಂದಿಗೆ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್ ಯುವಿ ಮಾದರಿಯನ್ನ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ನವೀಕೃತ ಎಂಜಿನ್ ಜೊತೆಗೆ ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿದೆ.
ಭಾರತದಲ್ಲಿ ಆರ್ ಡಿಇ(Real Driving Emissions) ಮಾನದಂಡ ಜಾರಿ ಪರಿಣಾಮ ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದೆ. ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳಿಂದಾಗಿ ನಿಸ್ಸಾನ್(Nissan) ಕಂಪನಿಯ ಕೂಡಾ ಮ್ಯಾಗ್ನೈಟ್(magnite) ಕಾರಿನಲ್ಲಿ ಮಹತ್ವದ ಬದಲಾವಣೆ ಪರಿಚಯಿಸಿದೆ. ಜೊತೆಗೆ ಹೊಸ ಆವೃತ್ತಿಯು ನವೀಕರಿಸಿದ ಎಂಜಿನ್ ಜೊತೆಗೆ ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿದ್ದು, ಹೊಸ ಆವೃತ್ತಿಯ ಮತ್ತಷ್ಟು ಮಾಹಿತಿ ಇಲ್ಲಿದೆ.
ಹೆಚ್ಚುತ್ತಿರುವ ವಾಹನಗಳ ಮಾಲಿನ್ಯ ಪ್ರಮಾಣ ತಗ್ಗಿಸಲು ಕೇಂದ್ರ ಸರ್ಕಾರವು ಹೊಸ ವಾಹನಗಳಿಗೆ ರಿಯಲ್ ಡ್ರೈವಿಂಗ್ ಎಮಿಷನ್ ಜಾರಿಗೆ ತಂದಿದೆ. ಹೊಸ ನಿಯಮ ಜಾರಿಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಹಲವು ಕಾರು ಮಾದರಿಗಳು ಎಂಜಿನ್ ನವೀಕರಣ ಪಡೆದುಕೊಂಡಿದ್ದು, ಇವು ಈ ಹಿಂದಿಗಿಂತಲೂ ಹೆಚ್ಚು ಸ್ಮಾರ್ಟ್ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಇದರೊಂದಿಗೆ ನಿಸ್ಸಾನ್ ಇಂಡಿಯಾ ಕಂಪನಿಯು ಕೂಡಾ ತನ್ನ ಜನಪ್ರಿಯ ಕಾರು ಮಾದರಿಯಾದ ಮ್ಯಾಗ್ನೈಟ್ ಕಾರಿನಲ್ಲಿ ಮಹತ್ವದ ಬದಲಾವಣೆ ಪರಿಚಯಿಸಿದೆ.
ಇದನ್ನೂ ಓದಿ: ಜಾಝ್, ಡಬ್ಲ್ಯೂಆರ್-ವಿ ಮತ್ತು ಸಿಟಿ ಕಾರುಗಳ ಮಾರಾಟ ಸ್ಥಗಿತಗೊಳಿಸಿದ ಹೋಂಡಾ
ಹೊಸ ಕಾರುಗಳ ಮಾರಾಟದಲ್ಲಿ ಸದ್ಯ ನಿಸ್ಸಾನ್ ಇಂಡಿಯಾ ಕಂಪನಿಯು ಮ್ಯಾಗ್ನೈಟ್ ಕಾರು ಮಾದರಿಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಬದಲಾವಣೆಯು ಮತ್ತಷ್ಟು ಬೇಡಿಕೆ ತಂದುಕೊಡುವ ನೀರಿಕ್ಷೆಗಳಿವೆ. ಹೊಸ ಕಾರನ್ನ ಎಪ್ರಿಲ್ 1ರಿಂದ ಜಾರಿಗೆ ಬಂದಿರುವ ಎರಡನೇ ಹಂತದ ಭಾರತ್ ಸ್ಟೆಜ್ ಸಿಕ್ಸ್ ಮಾನದಂಡಗಳಿಗೆ ಅನುಗುಣವಾಗಿ ಉನ್ನತೀಕರಿಸಲಾಗಿದ್ದು, ಇದರಲ್ಲಿ ಮಾಲಿನ್ಯ ಉತ್ಪಾದನಾ ಪ್ರಮಾಣವು ಸಾಕಷ್ಟು ಸುಧಾರಿಸಿದೆ. ಜೊತೆಗೆ ಹೊಸ ಕಾರಿನ ಇಂಧನ ದಕ್ಷತೆ ಪ್ರಮಾಣ ಈ ಹಿಂದಿನ ಮಾದರಿಗಿಂತಲೂ ಹೆಚ್ಚು ಸುಧಾರಿತವಾಗಿದ್ದು, ಇದು ಇ20 ಎಥೆನಾಲ್ ಸಂಯೋಜನೆಯನ್ನ ಬೆಂಬಲಿಸುತ್ತದೆ.
ಮಾಗ್ನೈಟ್ ಎಸ್‍ಯುವಿಯಲ್ಲಿ ಸದ್ಯ ಗ್ರಾಹಕರ ಬೇಡಿಕೆಯೆಂತೆ ನಿಸ್ಸಾನ್ ಕಂಪನಿಯು ಒನ್ ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮತ್ತು ಒನ್ ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನ ನೀಡುತ್ತಿದೆ. ಇದರಲ್ಲಿ ಎನ್ಎ ಪೆಟ್ರೋಲ್ ಎಂಜಿನ್ ಮಾದರಿಯು 70 ಹಾರ್ಸ್ ಪವರ್ ಉತ್ಪಾದಿಸಿದ್ದಲ್ಲಿ ಟರ್ಬೊ ಪೆಟ್ರೋಲ್ ಮಾದರಿಯು 100 ಹಾರ್ಸ್ ಪವರ್ ಉತ್ಪಾದಿಸಲಿದ್ದು, ಮೈಲೇಜ್ ಪ್ರಮಾಣದಲ್ಲೂ ಗಮನಸೆಳೆಯುತ್ತದೆ.
ಇದನ್ನೂ ಓದಿ: ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳಿವು..
ಇನ್ನು ಹೊಸ ಮ್ಯಾಗ್ನೈಟ್ ಕಾರು ಮಾದರಿಯು ಸುಧಾರಿತ ಎಂಜಿನ್ ನವೀಕರಣ ಮಾತ್ರವಲ್ಲದೇ ಸುರಕ್ಷಾ ಫೀಚರ್ಸ್ ನಲ್ಲೂ ಬದಲಾವಣೆಗೊಂಡಿದೆ. ಹೊಸ ಕಾರಿನಲ್ಲಿ ಈ ಬಾರಿ ನಿಸ್ಸಾನ್ ಕಂಪನಿಯು ಟೈರ್ ಪ್ರೆಶರ್ ಮಾನಿಟರ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ. ಹೀಗಾಗಿ ಹೊಸ ನವೀಕರಣದ ನಂತರ ಮ್ಯಾಗ್ನೈಟ್ ಕಾರಿನ ಬೆಲೆಯಲ್ಲಿ ತುಸು ಹೆಚ್ಚಳವಾಗಿದ್ದು, ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ಗರಿಷ್ಠ ರೂ 8 ಸಾವಿರದಷ್ಟು ದುಬಾರಿಯಾಗಿದೆ. ಹೀಗಾಗಿ ಹೊಸ ಕಾರು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 6 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಹೊಂದಿರುವ ಹೈ ಎಂಡ್ ಮಾದರಿಯು ರೂ. 11.02 ಲಕ್ಷ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದೆ.
Published On - 8:11 pm, Sat, 8 April 23