Adani Bonds: ಹೂಡಿಕೆದಾರರ ವಿಶ್ವಾಸ ಗಳಿಸಲು ಅದಾನಿ ಹರಸಾಹಸ; ಡಾಲರ್ ಸಾಲಪತ್ರಗಳ ಮರುಖರೀದಿಗೆ ಹೆಜ್ಜೆ; ಅದಾನಿ ನಡೆಯ ಮರ್ಮವೇನು?
Adani Ports Tries To Buyback Its 130 Million USD Bonds: ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ (ಎಪಿಎಸ್ಇಝಡ್) ಸಂಸ್ಥೆ 2024 ಜುಲೈನಲ್ಲಿ ಮೆಚ್ಯೂರ್ ಆಗುವ 650 ಮಿಲಿಯನ್ ಡಾಲರ್ ಮೌಲ್ಯದ ಡೆಟ್ ಬಾಂಡ್ಗಳಲ್ಲಿ 130 ಮಿಲಿಯನ್ ಡಾಲರ್ ಮೊತ್ತದ ಬಾಂಡ್ಗಳನ್ನು ಮುಂಚಿತವಾಗಿ ಖರೀದಿಸಲು ಟೆಂಡರ್ ಕರೆದಿದೆ.
ಮುಂಬೈ: ಹಿಂಡನ್ವರ್ಗ್ ರಿಸರ್ಚ್ ಸಂಸ್ಥೆಯ ಸ್ಫೋಟಕ ವರದಿ ಬಿಡುಗಡೆ ಆದ ಬಳಿಕ ತಮ್ಮ ಗ್ರೂಪ್ ಕಂಪನಿಗಳಿಗೆ ಆದ ಹಿನ್ನಡೆಯನ್ನು ತಗ್ಗಿಸಲು ಮತ್ತು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಲು ಅದಾನಿ ಗ್ರೂಪ್ ಇದೀಗ ತನ್ನ ಡಾಲರ್ ಬಾಂಡ್ಗಳನ್ನು (Dollar Denominated Bonds) ಖರೀದಿಸಲು ಮುಂದಾಗಿದೆ. ಅದಾನಿ ಗ್ರೂಪ್ಗೆ ಸೇರಿದ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ (APSEZ) ಸಂಸ್ಥೆ 130 ಮಿಲಿಯನ್ ಡಾಲರ್ (ಸುಮಾರು 1,000 ಕೋಟಿ ರೂ) ಮೊತ್ತದ ತನ್ನ ಸಾಲಪತ್ರಗಳನ್ನು (Debt Bonds) ಮುಂಚಿತವಾಗಿಯೇ ಖರೀದಿಸಲು ಮುಂದಾಗಿದೆ. ಏಪ್ರಿಲ್ 24ರಂದು ಸ್ಟಾಕ್ಸ್ ಎಕ್ಸ್ಚೇಂಜ್ಗೆ ಮಾಡಿದ ಫೈಲಿಂಗ್ನಲ್ಲಿ ಈ ವಿಚಾರವನ್ನು ಈ ಕಂಪನಿ ತಿಳಿಸಿದೆ. 2024ರ ಜುಲೈನಲ್ಲಿ ಮೆಚ್ಯೂರ್ ಆಗಲಿರುವ 750 ಮಿಲಿಯನ್ ಡಾಲರ್ (ಸುಮಾರು 6,100 ಕೋಟಿ ರೂ) ಮೊತ್ತದ ಡಾಲರ್ ಸಾಲಪತ್ರಗಳಲ್ಲಿ ಮೊದಲ ಹಂತವಾಗಿ 130 ಮಿಲಿಯನ್ ಡಾಲರ್ ಮೌಲ್ಯದ ಡಾಲರ್ ಬಾಂಡ್ಗಳನ್ನು ಎಪಿಎಸ್ಇಝಡ್ ಖರೀದಿಸುತ್ತಿದೆ. ಅದಕ್ಕಾಗಿ ಟೆಂಡರ್ ಕರೆದಿದೆ.
ಅದಾನಿ ಗ್ರೂಪ್ನ ಈ ಕಂಪನಿ ಈ ಹಿಂದೆ ಅಮೆರಿಕದಲ್ಲಿ ಹೂಡಿಕೆ ಸಂಗ್ರಹಿಸಲು ವಿವಿಧ ಡಾಲರ್ ಬಾಂಡ್ (ಡಾಲರ್ ಮೌಲ್ಯದ ಸಾಲ ಪತ್ರ) ವಿತರಿಸಿತ್ತು. ವಿವಿಧ ಹಂತಗಳಲ್ಲಿ ವಿತರಿಸಿದ ಈ ಡಾಲರ್ ಸಾಲಪತ್ರಗಳು ವಿವಿಧ ಅವಧಿಯಲ್ಲಿ ಮೆಚ್ಯೂರ್ ಆಗುತ್ತಿವೆ. 2024 ಜುಲೈನಲ್ಲಿ 650 ಮಿಲಿಯನ್ ಡಾಲರ್ ಮೌಲ್ಯದ ಬಾಂಡ್ಗಳು ಮೆಚ್ಯೂರ್ ಆಗಲಿವೆ. ಈಗ ಅದಾನಿ ಗ್ರೂಪ್ ಕಂಪನಿಗೆ ಹಿಂಡನ್ಬರ್ಗ್ ವರದಿಯ ಕಳಂಕ ಮೆತ್ತಿಕೊಂಡಿರುವುದರಿಂದ ಈ ಡಾಲರ್ ಬಾಂಡ್ ಹೊಂದಿರುವ ಹೂಡಿಕೆದಾರರಿಗೆ ತಳಮಳ ಇರುವುದು ಸಹಜ. ಈ ಅತಂಕವನ್ನು ದೂರ ಮಾಡಲು ಅದಾನಿ ಕಂಪನಿ ತಾನು ವಿತರಿಸಿದ್ದ ಸಾಲಪತ್ರಗಳನ್ನು ಮರುಖರೀದಿ ಮಾಡಲು ಮುಂದಾಗಿದೆ. ಇದರೊಂದಿಗೆ ತನ್ನ ಕೆಲ ಸಾಲವನ್ನು ತೀರಿಸಲು ಹೊರಟಿದೆ.
ಈ ಬಾಂಡ್ಗಳು ಮೆಚ್ಯೂರ್ ಆಗಲು ಇನ್ನೂ ಒಂದು ವರ್ಷ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ 4 ತ್ರೈಮಾಸಿಕ ಅವಧಿಯಲ್ಲಿ ತಲಾ 130 ಮಿಲಿಯನ್ ಡಾಲರ್ ಮೌಲ್ಯದಷ್ಟು ಡಾಲರ್ ಬಾಂಡ್ಗಳನ್ನು ಮರುಖರೀದಿಸುವ ಯೋಜನೆ ಹಾಕಿಕೊಂಡಿದೆ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಕಂಪನಿ.
ಅದಾನಿ ಗ್ರೂಪ್ನಿಂದ ಡಾಲರ್ ಬಾಂಡ್ಗಳ ಮರುಖರೀದಿಯಿಂದ ಏನು ಉಪಯೋಗ?
ಈ ವರ್ಷದ ಜನವರಿ 24ರಂದು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಅದಾನಿ ಗ್ರೂಪ್ ವಿರುದ್ಧ ವರದಿ ಬಿಡುಗಡೆ ಮಾಡಿತ್ತು. ಅದಾನಿ ಗ್ರೂಪ್ನಿಂದ ಷೇರುಪೇಟೆಯಲ್ಲಿ ಅವ್ಯವಹಾರ ಆಗಿದೆ. ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಲಾಗಿದೆ ಎಂಬಿತ್ಯಾದಿ ಹಲವು ಗುರುತರ ಆರೋಪಗಳನ್ನು ಈ ವರದಿಯಲ್ಲಿ ಮಾಡಲಾಗಿತ್ತು.
ಕೆಲವೇ ವರ್ಷಗಳಲ್ಲಿ ಭಾರೀ ಕ್ಷಿಪ್ರವಾಗಿ ವ್ಯವಹಾರ ವಿಸ್ತರಿಸಿದ್ದ ಅದಾನಿ ಗ್ರೂಪ್ನ ವ್ಯಾವಹಾರಿಕ ನೈತಿಕತೆ ಉತ್ತಮವಾಗಿಲ್ಲ. ಕಂಪನಿಯ ಷೇರುಮೌಲ್ಯ ಕೃತಕವಾಗಿ ಉಬ್ಬುವಂತೆ ನೋಡಿಕೊಳ್ಳಲಾಗಿದೆ ಎಂದು ಹಿಂಡನ್ಬರ್ಗ್ ಆರೋಪಗಳ ಸುರಿಮಳೆಯನ್ನೇ ಮಾಡಿತ್ತು.
ಇದನ್ನೂ ಓದಿ: Green Bond: ಗ್ರೀನ್ ಬಾಂಡ್ ಎಂದರೇನು? ಇದರ ಜನಪ್ರಿಯತೆ ಹೆಚ್ಚುತ್ತಿರುವುದೇಕೆ? ಇದರಿಂದ ಏನು ಅನುಕೂಲ?
ಇದಾದ ಬಳಿಕ ಅದಾನಿ ಗ್ರೂಪ್ನ ವಿವಿಧ ಕಂಪನಿಗಳ ಷೇರುಗಳು ಭಾರೀ ಕುಸಿತಕ್ಕೊಳಗಾದವು. ವಿಶ್ವದ ಎರಡನೇ ಅತಿ ಶ್ರೀಮಂತ ಎನಿಸಿದ್ದ ಗೌತಮ್ ಅದಾನಿ 30ಕ್ಕಿಂತ ಕೆಳಗೆ ಕುಸಿದರು. ಅದಕ್ಕಿಂತ ಹೆಚ್ಚಾಗಿ ಅವರ ಕಂಪನಿಗಳ ವಿಶ್ವಾಸಾರ್ಹತೆ ಬಗ್ಗೆ ದಟ್ಟ ಅನುಮಾನಗಳೆದ್ದವು. ಅದಾನಿ ಗ್ರೂಪ್ ಭಾರೀ ದೊಡ್ಡ ಸಾಲದ ಸುಳಿಯಲ್ಲಿದೆ. ಯಾವಾಗ ಬೇಕಾದರೂ ದಿವಾಳಿಯಾಗಬಹುದು ಎನ್ನುವಂತಹ ಸುದ್ದಿಗಳು ರಾರಾಜಿಸಿದವು. ಈ ಹಿನ್ನೆಲೆಯಲ್ಲಿ ಸಂಸ್ಥೆ ಬಗ್ಗೆ ಜನರಿಗಿರುವ ದಿಗಿಲನ್ನು ದೂರ ಮಾಡಲು, ಹಾಗೂ ಸಂಸ್ಥೆ ಬಳಿ ಹಣದ ಹರಿವು ಬಹಳಷ್ಟಿದೆ ಎಂದು ತೋರ್ಪಡಿಸಲು ಸಾಲಪತ್ರಗಳ ಮರುಖರೀದಿಸುವ ಹೆಜ್ಜೆಗಳನ್ನು ಅದಾನಿ ಗ್ರೂಪ್ ಇಟ್ಟಿರುವುದು ತಿಳಿದುಬಂದಿದೆ.
ಈ ಡಾಲರ್ ಬಾಂಡ್ಗಳ ಮರುಖರೀದಿಗಾಗಿ ಬಾರ್ಕ್ಲೇಸ್ ಬ್ಯಾಂಕ್, ಡಿಬಿಎಸ್ ಬ್ಯಾಂಕ್, ಎಮಿರೇಟ್ಸ್ ಎನ್ಬಿಡಿ ಬ್ಯಾಂಕ್, ಫಸ್ಟ್ ಅಬುಧಾಬಿ ಬ್ಯಾಂಕ್, ಪಿಜೆಎಸ್ಸಿ, ಎಸ್ಎಂಬಿಸಿ ನಿಕ್ಕೋ ಸೆಕ್ಯೂರಿಟೀಸ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ಗಳನ್ನು ಡೀಲರ್ ಮ್ಯಾನೇಜರ್ಗಳಾಗಿ ಇರಿಸಲಾಗಿದೆ.
ಈ 130 ಮಿಲಿಯನ್ ಡಾಲರ್ ಮೌಲ್ಯದ ಸಾಲಪತ್ರಗಳ ಖರೀದಿ ಆದ ಬಳಿಕ 2024ರ ಜುಲೈಗೆ ಬಾಕಿ ಉಳಿಯುವ ಬಾಂಡ್ಗಳ ಮೊತ್ತ 520 ಮಿಲಿಯನ್ ಡಾಲರ್ನಷ್ಟಿರುತ್ತದೆ ಎನ್ನಲಾಗಿದೆ. ಮುಂದಿನ ನಾಲ್ಕು ತ್ರೈಮಾಸಿಕದಲ್ಲಿ ಅಷ್ಟೂ ಡಾಲರ್ ಬಾಂಡ್ಗಳನ್ನು ಅದಾನಿ ಕಂಪನಿ ಖರೀದಿಸಿ, ಒಂದಷ್ಟು ಋಣದಿಂದ ಮುಕ್ತಗೊಳ್ಳಲಿದೆ.