ಬೆಂಗಳೂರು ಐಐಎಂನ ಪಿಜಿಪಿ ಎಂಬಿಎ ಪ್ರೋಗ್ರಾಮ್ ಭಾರತದ ನಂಬರ್ ಒನ್ ಮ್ಯಾನೇಜ್ಮೆಂಟ್ ಕೋರ್ಸ್; ವಿಶ್ವದ ಟಾಪ್-25ಯಲ್ಲಿ ಐಐಎಂಬಿ
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯ ಸ್ನಾತಕೋತ್ತರ ಕೋರ್ಸ್ವೊಂದು ವಿಶ್ವದ ಅಗ್ರಗಣ್ಯ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ಗಳ ಸಾಲಿನಲ್ಲಿದೆ. ಫೈನಾನ್ಷಿಯಲ್ ಟೈಮ್ಸ್ನ ಎಂಐಎಂ 2026 ಶ್ರೇಯಾಂಕ ಪಟ್ಟಿಯಲ್ಲಿ ಐಐಎಂಬಿಯ ಪಿಜಿಪಿ 21ನೇ ಸ್ಥಾನ ಪಡೆದಿದೆ. ಇತರ ಐಐಎಂ ಸಂಸ್ಥೆಗಳು, ಎಸ್ಪಿ ಜೈನ್ ಇನ್ಸ್ಟಿಟ್ಯೂಟ್, ಇಂಡಿಯನ್ ಬ್ಯುಸಿನೆಸ್ ಸ್ಕೂಲ್ ಕೂಡ ಟಾಪ್-100 ಪಟ್ಟಿಯಲ್ಲಿವೆ.

ಬೆಂಗಳೂರು, ಸೆಪ್ಟೆಂಬರ್ 8: ಫೈನಾನ್ಷಿಯಲ್ ಟೈಮ್ಸ್ ಪ್ರಕಟಿಸಿರುವ ‘ಮಾಸ್ಟರ್ಸ್ ಇನ್ ಮ್ಯಾನೇಜ್‌ಮೆಂಟ್’ (FT MiM) 2026ರ ಜಾಗತಿಕ ಶ್ರೇಯಾಂಕದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIMB) ತನ್ನ ಸ್ನಾತಕೋತ್ತರ ಮ್ಯಾನೇಜ್‌ಮೆಂಟ್ ಕೋರ್ಸ್ (PGP) ಮೂಲಕ ಜಾಗತಿಕವಾಗಿ 21ನೇ ಸ್ಥಾನಕ್ಕೆ ಜಿಗಿದಿದೆ. ಇದರೊಂದಿಗೆ ಭಾರತೀಯ ಬಿಸಿನೆಸ್ ಸ್ಕೂಲ್‌ಗಳಲ್ಲಿ ತನ್ನ ಪ್ರಥಮ ಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಅಗ್ರ 25 ಜಾಗತಿಕ ಸಂಸ್ಥೆಗಳ ಪಟ್ಟಿಯಲ್ಲಿ ಜಾಗ ಪಡೆದ ಭಾರತದ ಏಕೈಕ ಸಂಸ್ಥೆಯಾಗಿ ಹೊರಹೊಮ್ಮಿದೆ.
2024ರಲ್ಲಿ 41ನೇ ಸ್ಥಾನದಲ್ಲಿದ್ದ ಬೆಂಗಳೂರಿನ ಐಐಎಂ ಶಿಕ್ಷಣ ಸಂಸ್ಥೆಯು ಬಹಳ ಕ್ಷಿಪ್ರವಾಗಿ ಮೇಲೇರುತ್ತಿದೆ. 2025ರಲ್ಲಿ 28ನೇ ಸ್ಥಾನ, ಮತ್ತು ಈಗ 21ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದೆ. ವಿಶ್ವದ ಅತ್ಯುತ್ತಮ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಬಲವಾದ ಹಿಡಿತ ಸಾಧಿಸಿದೆ.
ಇದನ್ನೂ ಓದಿ: ಭಾರತದ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ಗೆ ಬ್ರಿಟನ್ ಮಾನ್ಯತೆ; ಭಾರತೀಯ ರಫ್ತುದಾರರಿಗೆ ಅನುಕೂಲ
ಐಐಎಂಬಿ ಜಿಗಿತಕ್ಕೆ ಪ್ರಮುಖ ಕಾರಣಗಳು
- ವೃತ್ತಿಜೀವನ ಮತ್ತು ವೇತನದ ಯಶಸ್ಸು: ವಿದ್ಯಾರ್ಥಿಗಳ ವೃತ್ತಿಜೀವನದ ಬೆಳವಣಿಗೆ (Career Progress), ಉತ್ತಮ ವೇತನ ಶ್ರೇಣಿ ಹಾಗೂ ಕಾಲೇಜಿನ ‘ಕೆರಿಯರ್ ಸರ್ವೀಸಸ್’ (Careers Service Rank 8ನೇ ಸ್ಥಾನಕ್ಕೆ ಜಿಗಿತ) ನಂತಹ ಕ್ಷೇತ್ರಗಳಲ್ಲಿ ದಾಖಲಿಸಿದ ಗಮನಾರ್ಹ ಸಾಧನೆ ಈ ಜಿಗಿತಕ್ಕೆ ಕಾರಣವಾಗಿದೆ.
- ಹಳೆಯ ವಿದ್ಯಾರ್ಥಿಗಳ ಜಾಲ: ಹಳೆಯ ವಿದ್ಯಾರ್ಥಿಗಳ ಜಾಲದ (Alumni Network) ಶ್ರೇಯಾಂಕದಲ್ಲಿ ಐಐಎಂ ಬೆಂಗಳೂರು ಜಾಗತಿಕವಾಗಿ 19ನೇ ಸ್ಥಾನಕ್ಕೆ ಏರಿದ್ದು, ಈ ವಿಭಾಗದ ಮೌಲ್ಯಮಾಪನವು ಒಟ್ಟು ಶ್ರೇಯಾಂಕದಲ್ಲಿ ಶೇ. 56ರಷ್ಟು ಪ್ರಮುಖ ಪಾತ್ರ ವಹಿಸಿದೆ.
- ವೈವಿಧ್ಯತೆ ಮತ್ತು ಸುಸ್ಥಿರತೆ: ಆಡಳಿತ ಮಂಡಳಿಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ. 44ಕ್ಕೆ ಹೆಚ್ಚಿಸಿರುವುದು ಹಾಗೂ ಸುಸ್ಥಿರ ಅಭಿವೃದ್ಧಿಗೆ (ESG Net Zero) ನೀಡಿದ ಆದ್ಯತೆಯು ಶ್ರೇಯಾಂಕ ಸುಧಾರಣೆಗೆ ನೆರವಾಗಿದೆ.
ಈ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ಹಿರಿಯ ನಿರ್ದೇಶಕ ಪ್ರೊ. ಯು. ದಿನೇಶ್ ಕುಮಾರ್, ಜಾಗತಿಕ ಮಟ್ಟದ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಾವೀನ್ಯ ಪಠ್ಯಕ್ರಮಕ್ಕೆ ಸಿಕ್ಕ ಪ್ರತಿಫಲ ಇದಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೇಶದ ಪ್ರಗತಿ ಅಳೆಯಲು ಜಿಡಿಪಿ ಸಾಲದು; ವಿಶ್ವಸಂಸ್ಥೆ ಬೆಂಬಲಿತ ತಜ್ಞರಿಂದ 31 ಸೂಚಕಗಳ ಬಳಕೆಗೆ ಶಿಫಾರಸು
MiM ಟಾಪ್-100 ಶ್ರೇಯಾಂಕ ಪಟ್ಟಿಯಲ್ಲಿ ಇರುವ ಭಾರತೀಯ ಶಿಕ್ಷಣ ಸಂಸ್ಥೆಗಳು
- ಐಐಎಂ ಬೆಂಗಳೂರು
- ಎಸ್ಪಿ ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್
- ಐಐಎಂ ಅಹ್ಮದಾಬಾದ್
- ಐಐಎಂ ಕಲ್ಕತ್ತಾ
- ಐಐಎಂ ಲಕ್ನೋ
- ಐಐಎಂ ಕೋಳಿಕೋಡ್
- ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




