ಮೊದಲ ಕ್ವಾರ್ಟರ್ನಲ್ಲಿ ಭಾರತದ ಜಿಡಿಪಿ ಶೇ. 6.7ರಷ್ಟು ವೃದ್ಧಿ; ಅಧಿಕೃತ ದತ್ತಾಂಶ ಪ್ರಕಟ
India GDP growth for Q1: 2024ರ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಭಾರತದ ಆರ್ಥಿಕತೆ ಶೇ. 6.7ರಷ್ಟು ಮಾತ್ರವೇ ಬೆಳೆದಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಆಗಸ್ಟ್ 30ರಂದು ಅಧಿಕೃತ ದತ್ತಾಂಶ ಬಿಡುಗಡೆ ಮಾಡಿದೆ. ಅದರ ಪ್ರಕಾರ ಉಕ್ಕು, ಗಣಿ ಇತ್ಯಾದಿ ಆರ್ಥಿಕತೆಯ ಪ್ರಮುಖ ಎಂಟು ವಲಯಗಳಿರುವ ಗುಂಪಿನ ಸರಾಸರಿ ಬೆಳವಣಿಗೆ ಶೇ. 6.1ಕ್ಕೆ ಸೀಮಿತಗೊಂಡಿದೆ.
ನವದೆಹಲಿ, ಆಗಸ್ಟ್ 30: ಭಾರತದ ಆರ್ಥಿಕತೆ ಕಳೆದ ಬಾರಿಯ ತ್ರೈಮಾಸಿಕ ಅವಧಿಯಲ್ಲಿ (2024ರ ಏಪ್ರಿಲ್ನಿಂದ ಜೂನ್ನ ಕ್ವಾರ್ಟರ್) ಶೇ. 6.7ರಷ್ಟು ಬೆಳೆದಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಇದ್ದ ಜಿಡಿಪಿಗೆ ಹೋಲಿಕೆ ಮಾಡಲಾಗಿರುವ ದರ. 2023ರ ಜೂನ್ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 8.2ರಷ್ಟು ಬೆಳೆದಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಬೆಳವಣಿಗೆ ಕಡಿಮೆ ಇದೆ. ಹಿಂದಿನ ಕ್ವಾರ್ಟರ್ನಲ್ಲಿ, ಅಂದರೆ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಜಿಡಿಪಿ ಶೇ. 7.8ರಷ್ಟು ಹೆಚ್ಚಾಗಿತ್ತು. ಚುನಾವಣೆಯ ವರ್ಷವಾದ್ದರಿಂದ ಸರ್ಕಾರದಿಂದ ಸರಿಯಾದ ಪ್ರಮಾಣದಲ್ಲಿ ಬಂಡವಾಳ ವೆಚ್ಚ ಸಾಧ್ಯವಾಗಿರಲಿಲ್ಲ. ಹೀಗಾಗಿ, ಜೂನ್ ಕ್ವಾರ್ಟರ್ನಲ್ಲಿ ಜಿಡಿಪಿ ಸಾಧಾರಣವಾಗಿ ಬೆಳೆದಿರಬಹುದು ಎಂದು ಆರ್ಥಿಕ ತಜ್ಞರೂ ಕೂಡ ನಿರೀಕ್ಷಿಸಿದ್ದರು.
ಇಂದು ಶುಕ್ರವಾರ ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ನಿಂದ ಬಿಡುಗಡೆ ಆದ ದತ್ತಾಂಶದ ಪ್ರಕಾರ ಈ ಆರ್ಥಿಕ ವರ್ಷದ ಮೊದಲ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 6.7ರಷ್ಟು ಬೆಳೆದಿರುವ ಜೊತೆಗೆ, ಜಿವಿಎ ಕೂಡ ಶೇ 6.8ರಷ್ಟು ಹೆಚ್ಚಾಗಿರಬಹುದು ಎಂದು ಅಂದಾಜಿಸಿದೆ. ಜಿವಿಎ ಅಥವಾ ಗ್ರಾಸ್ ವ್ಯಾಲ್ಯೂ ಆ್ಯಡಡ್ ಎಂಬುದು ಜಿಡಿಪಿ ಮೈನಸ್ ನಿವ್ವಳ ಉತ್ಪನ್ನ ತೆರಿಗೆಯ ಮೊತ್ತವಾಗಿರುತ್ತದೆ.
ಶೇ. 6.7ರ ಜಿಡಿಪಿ ದರವು ಕಳೆದ ಐದು ಕ್ವಾರ್ಟರ್ಗಳಲ್ಲೇ ದಾಖಲಾದ ಅತ್ಯಂತ ಕಡಿಮೆ ಬೆಳವಣಿಗೆ ಎನಿಸಿದೆ. ಕಳೆದ ಹಣಕಾಸು ವರ್ಷದ ನಾಲ್ಕೂ ಕ್ವಾರ್ಟರ್ಗಳಲ್ಲಿ ಜಿಡಿಪಿ ಶೇ. 7ಕ್ಕಿಂತ ಹೆಚ್ಚೇ ಇತ್ತು. ಎಂಟು ಪ್ರಮುಖ ವಲಯಗಳೆನ್ನಲಾದ ಕೋರ್ ಸೆಕ್ಟರ್ನ ಸರಾಸರಿ ಬೆಳವಣಿಗೆ ಶೇ. 6.1 ಮಾತ್ರವೇ ಇದೆ.
ದೇಶದಲ್ಲಿ ಹೂಡಿಕೆ ಚಟುವಟಿಕೆಗೆ ಸೂಚಕವಾಗಿರುವ ಗ್ರಾಸ್ ಫಿಕ್ಸೆಡ್ ಕ್ಯಾಪಿಟಲ್ ಫಾರ್ಮೇಶನ್ (ಜಿಎಫ್ಸಿಎಫ್) ಈ ತ್ರೈಮಾಸಿಕದಲ್ಲಿ 15.24 ಲಕ್ಷ ಕೋಟಿ ರೂಗೆ ಏರಿದೆ. ಕಳೆದ ವರ್ಷದ ಕ್ವಾರ್ಟರ್ಗೆ ಹೋಲಿಸಿದರೆ ಜಿಎಫ್ಸಿಎಫ್ನಲ್ಲಿ ಶೇ 7.5ರಷ್ಟು ಏರಿಕೆ ಆಗಿದೆ.
ಇದನ್ನೂ ಓದಿ: ಭಾರತದ ಜಿಡಿಪಿ 2024ರಲ್ಲಿ ಶೇ. 6.8 ಅಲ್ಲ, ಶೇ. 7.2ರಷ್ಟು ಬೆಳೆಯಬಹುದು: ನಿರೀಕ್ಷೆ ಹೆಚ್ಚಿಸಿದ ಮೂಡೀಸ್
ಇನ್ನು, ಪ್ರೈವೇಟ್ ಕನ್ಸಂಪ್ಷನ್ ವೆಚ್ಚ (ಪಿಎಫ್ಸಿಇ) ಶೇ. 7.4ರಷ್ಟು ಹೆಚ್ಚಳಗೊಂಡು 24.56 ಲಕ್ಷ ಕೋಟಿ ರೂಗೆ ಏರಿದೆ. ಸರ್ಕಾರದ ಕನ್ಸಂಪ್ಷನ್ ವೆಚ್ಚ ಕೇವಲ 4.14 ಲಕ್ಷ ಕೋಟಿ ರೂ ಇದೆ. ಇದರಲ್ಲಿ ಶೇ. 0.24ರಷ್ಟು ಇಳಿಮುಖ ಆಗಿದೆ. ಮೊದಲೇ ಹೇಳಿದಂತೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಇದ್ದ ಕಾರಣ ಸರ್ಕಾರ ವಿವಿಧ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಆಗಿರಲಿಲ್ಲ. ಇದರಿಂದ ಒಟ್ಟಾರೆ ಜಿಡಿಪಿ ಬೆಳವಣಿಗೆ ಸರಿಯಾಗಿ ಆಗಿರಲಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ