India Post Payment Bank: ಐಪಿಪಿಬಿಯ ಉಳಿತಾಯ ಖಾತೆ ಮೇಲೆ ಬಡ್ಡಿ ದರ, ಮನೆ ಬಾಗಿಲಿಗೆ ಬ್ಯಾಂಕಿಂಗ್ ಶುಲ್ಕ ಪರಿಷ್ಕರಣೆ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆದಾರರಿಗೆ ಜುಲೈ 1ನೇ ತಾರೀಕಿನಿಂದಲೇ ಅನ್ವಯ ಆಗುವಂತೆ ಉಳಿತಾಯ ಖಾತೆ ಮೇಲಿನ ಬಡ್ಡಿ ದರ ಕಡಿಮೆ ಆಗಿದೆ. ಆಗಸ್ಟ್ 1, 2021ರಿಂದ ಅನ್ವಯಿಸುವಂತೆ ಮನೆಬಾಗಿಲಿನ ಬ್ಯಾಂಕಿಂಗ್ ಸೇವೆಗಳಿಗೆ ಮೊತ್ತ ಪರಿಷ್ಕರಣೆ ಆಗಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (India Post Payments Bank) ಖಾತೆದಾರರು ಈಗ ತಮ್ಮ ಉಳಿತಾಯ ಖಾತೆಯಲ್ಲಿನ ಬಾಕಿ ಮೇಲೆ ಕಡಿಮೆ ಬಡ್ಡಿಯನ್ನು ಪಡೆಯುತ್ತಿದ್ದು, ಇನ್ನು ಮುಂದೆ ಮನೆಬಾಗಿಲಿನ ಬ್ಯಾಂಕಿಂಗ್ ಸೇವೆಗಳಿಗೆ ಮೊತ್ತವನ್ನು ಪಾವತಿಸ ಬೇಕಾಗುತ್ತದೆ. ಐಪಿಪಿಬಿಯಿಂದ ಮನೆ ಬಾಗಿಲಿನ ಬ್ಯಾಂಕಿಂಗ್ ಸೇವಾ ಶುಲ್ಕಗಳು ಹಾಗೂ ಎಲ್ಲ ಬಗೆಯ ಸೇವಿಂಗ್ಸ್ ಅಕೌಂಟ್ಸ್ಗಳ ಬಡ್ಡಿ ದರವನ್ನು ಸಹ ಪರಿಷ್ಕರಿಸಲಾಗಿದೆ. ಆಗಸ್ಟ್ 1, 2021ರಿಂದ ಅನ್ವಯಿಸುವಂತೆ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮನೆ ಬಾಗಿಲಿನ ಬ್ಯಾಂಕಿಂಗ್ ಶುಲ್ಕಗಳು ಪರಿಷ್ಕರಣೆ ಮಾಡಿದೆ. ಸದ್ಯಕ್ಕೆ ಈ ರೀತಿಯ ಮನೆ ಬಾಗಿಲಿನ ಬ್ಯಾಂಕಿಂಗ್ ಸೇವೆಗಳಿಗೆ ಯಾವುದೇ ಶುಲ್ಕ ಇಲ್ಲ. ಆದರೆ ಆಗಸ್ಟ್ 1ನೇ ತಾರೀಕಿನಿಂದ ಗ್ರಾಹಕರ ಪ್ರತಿ ಮನವಿಗೆ ಐಪಿಪಿಬಿಯ ಮನೆ ಬಾಗಿಲಿನ ಬ್ಯಾಂಕಿಂಗ್ ಸೇವೆಗೆ ರೂ. 20 ಶುಲ್ಕ ತಗುಲುತ್ತದೆ. ಜುಲೈ 1ನೇ ತಾರೀಕಿನಿಂದಲೇ ಅನ್ವಯ ಆಗುವಂತೆ ಉಳಿತಾಯ ಖಾತೆ ಮೇಲಿನ ಬಡ್ಡಿ ದರ ಕಡಿಮೆ ಆಗಿದೆ. ಆದರೆ ಅದು ಖಾತೆಯ ಬ್ಯಾಲೆನ್ಸ್ ಮೇಲೆ ಆಧಾರವಾಗಿರುತ್ತದೆ.
ಸದ್ಯಕ್ಕೆ 1 ಲಕ್ಷ ರೂಪಾಯಿ ತನಕದ ಬ್ಯಾಲೆನ್ಸ್ಗೆ ವಾರ್ಷಿಕ ಶೇ 2.75ರಷ್ಟು ಬಡ್ಡಿ ಬರುತ್ತಿತ್ತು. ಜುಲೈ 1, 2021ರಂದ ಅನ್ವಯ ಆಗುವಂತೆ ಅದನ್ನು ಶೇ 2.50ಕ್ಕೆ ಪರಿಷ್ಕರಿಸಲಾಗಿದೆ. 1 ಲಕ್ಷ ರೂಪಾಯಿ ಮೇಲ್ಪಟ್ಟಂತೆ ರೂ. 2 ಲಕ್ಷದ ತನಕ ಬ್ಯಾಲೆನ್ಸ್ಗೆ ಬಡ್ಡಿ ದರದಲ್ಲಿ ಯಾವ ಬದಲಾವಣೆಯೂ ಇಲ್ಲ. ಅವರಿಗೆ ವಾರ್ಷಿಕ ಬಡ್ಡಿ ದರ ಶೇ 2.75 ಮುಂದುವರಿಇಯುತ್ತದೆ. ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಐಪಿಪಿಬಿ ಎಂಬುದು ಪೇಮೆಂಟ್ ಬ್ಯಾಂಕ್. ಇದರಲ್ಲಿ ಗ್ರಾಹಕರು ದಿನದ ಕೊನೆಗೆ ಇಟ್ಟುಕೊಳ್ಳಬಹುದಾದ ಗರಿಷ್ಠ ಬ್ಯಾಲೆನ್ಸ್ ಅಂದರೆ 2 ಲಕ್ಷ ರೂಪಾಯಿ. ಈ ಹಿಂದೆ 1 ಲಕ್ಷ ರೂ. ಇದ್ದ ಮೊತ್ತದ ಮಿತಿಯನ್ನು 2 ಲಕ್ಷಕ್ಕೆ ಏರಿಸಲಾಗಿದೆ. ಆ ಎರಡು ಲಕ್ಷ ರೂಪಾಯಿ ಮೇಲ್ಪಟ್ಟ ಮೊತ್ತ ಬಾಕಿ ಇದ್ದಲ್ಲಿ, ಅದು ಜೋಡಣೆ ಆಗಿರುವಂಥ ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ಗೆ ಹೋಗುತ್ತದೆ. ಅದಕ್ಕೆ ಸದ್ಯ ವಾರ್ಷಿಕ ಶೇಕಡಾ 4ರಷ್ಟು ಬಡ್ಡಿ ಬರುತ್ತಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವಿಂಗ್ಸ್ ಅಕೌಂಟ್ನ ವಿಶಿಷ್ಟ ಲಕ್ಷಣ ಏನೆಂದರೆ, ಅದರ ಬ್ಯಾಂಕಿಂಗ್ ವಿಥ್ ಕ್ಯೂಆರ್ ಕಾರ್ಡ್ ಅವಕಾಶ. ಈ ಕ್ಯೂಆರ್ ಕಾರ್ಡ್ ಇದ್ದಲ್ಲಿ ಗ್ರಾಹಕರು ಖಾತೆ ಸಂಖ್ಯೆಯನ್ನೋ ಅಥವಾ ಯಾವುದೇ ಪಾಸ್ವರ್ಡ್ ನೆನಪಿಟ್ಟುಕೊಂಡು ಬ್ಯಾಂಕಿಂಗ್ ಚಟುವಟಿಕೆ ನಡೆಸಬೇಕು ಅಂತೇನೂ ಇಲ್ಲ. ಖಾತೆದಾರರ ಬಯೋಮೆಟ್ರಿಕ್ಸ್ ಬಳಸಿಕೊಂಡು, ದೃಢೀಕರಣ ಮಾಡಬಹುದು. NEFT, IMPS, RTGS ರೀತಿಯ ಹಣ ವರ್ಗಾವಣೆಗಳನ್ನು ಐಪಿಪಿಬಿ ಖಾತೆ ಮೂಲಕ ಮಾಡಬಹುದು.
ಇದನ್ನೂ ಓದಿ: SBIದಿಂದ ಎಟಿಎಂ ನಗದು ವಿಥ್ಡ್ರಾ, ಚೆಕ್ ಬುಕ್ ನಿಯಮಾವಳಿ, ಶುಲ್ಕಗಳ ಬದಲಾವಣೆ ಮುಂದಿನ ತಿಂಗಳಿಂದ
(India Post Payments Bank (IPPB) revised savings bank account interest and door step banking service charges)