ಇರಾನ್‌ನ ಛಾಬಹರ್-ಜಾಹೆದನ್ ರೈಲು ಮಾರ್ಗ ಪೂರ್ಣ: ಮಧ್ಯ ಏಷ್ಯನ್ ಪ್ರದೇಶಗಳಿಗೆ ಹೋಗಲು ಭಾರತಕ್ಕೆ ಸಿಕ್ಕಿದೆ ರಹದಾರಿ
ಇರಾನ್ ತನ್ನ ಮಹತ್ವದ 730 ಕಿಲೋಮೀಟರ್ ಉದ್ದದ ಚಾಬಹಾರ್-ಜಾಹೆದಾನ್ ರೈಲು ಮಾರ್ಗ ಯೋಜನೆಯನ್ನು ಪೂರ್ಣಗೊಳಿಸಿದೆ. ಪಾಕಿಸ್ತಾನವನ್ನು ಬೈಪಾಸ್ ಮಾಡಿ ಭಾರತವು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ದೇಶಗಳೊಂದಿಗೆ ನೇರ ವ್ಯಾಪಾರ ಸಂಬಂಧ ಹೊಂದಲು ಈ ಮಾರ್ಗ ನೆರವಾಗಲಿದೆ. ಮುಂದಿನ ಹಂತದಲ್ಲಿ 800 ಕಿಮೀ ಉದ್ದ ಮಾರ್ಗ ವಿಸ್ತರಣೆಯಾಗಲಿದ್ದು, ತುರ್ಕ್ಮೆನಿಸ್ತಾನದ ಗಡಿ ಸಮೀಪದ ಪ್ರದೇಶದವರೆಗೂ ಲಿಂಕ್ ಇರುತ್ತದೆ.

ನವದೆಹಲಿ, ಸೆಪ್ಟೆಂಬರ್ 29: ಭಾರತಕ್ಕೆ ಬಹಳ ಮಹತ್ವ ಎನಿಸುವ ಬೆಳವಣಿಗೆಯೊಂದರಲ್ಲಿ ಇರಾನ್ ಸರ್ಕಾರವು ಚಾಬಹಾರ್-ಜಾಹೆದಾನ್ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿರುವ ಸಂಗತಿಯನ್ನು ಘೋಷಿಸಿದೆ. 730 ಕಿಮೀ ಉದ್ದದ ಈ ರೈಲು ಮಾರ್ಗ ಭಾರತದ ಜಾಗತಿಕ ವ್ಯಾಪಾರ ಮತ್ತು ಆರ್ಥಿಕ ಕಾರ್ಯತಂತ್ರಕ್ಕೆ ದೊಡ್ಡ ಬಲ ನೀಡಬಲ್ಲುದು. ಅಂತಿಮ ಹಂತದ ಸುರಕ್ಷಾತಾ ಪರಿಶೀಲನೆಗಳು ನಡೆಯುತ್ತಿದ್ದು ಮುಂದಿನ 3-4 ತಿಂಗಳಲ್ಲಿ ಈ ರೈಲು ಮಾರ್ಗವು ಸಾರ್ವಜನಿಕ ಬಳಕೆ ಮತ್ತು ಸರಕು ಸಾಗಣೆ ಸೇವೆ ಮುಕ್ತಗೊಳ್ಳಲಿದೆ.
ಇರಾನ್ ದೇಶೀಯ ಎಂಜಿನಿಯರ್‌ಗಳಿಂದ ನಿರ್ಮಾಣಗೊಂಡ ಈ 730 ಕಿ.ಮೀ ರೈಲು ಮಾರ್ಗವು ಸಂಕೀರ್ಣ ಭೌಗೋಳಿಕ ಭೂಪ್ರದೇಶ ಹಾದುಹೋಗುತ್ತದೆ. ಈ ಮಾರ್ಗದಲ್ಲಿ ಒಟ್ಟು 33 ರೈಲ್ವೇ ಸ್ಟೇಷನ್‌ಗಳು, 39 ಸುರಂಗಗಳು (Tunnels) ಹಾಗೂ 201 ಸೇತುವೆಗಳನ್ನು ನಿರ್ಮಿಸಲಾಗಿದೆ. ಜಾಹೆದಾನ್ ಪ್ರದೇಶವು ಅಫ್ಗಾನಿಸ್ತಾನ್, ಪಾಕಿಸ್ತಾನ್ ಮತ್ತು ಇರಾನ್ ಗಡಿ ಸೇರುವ ಭಾಗದ ಸಮೀಪ ಇದೆ. ಮುಂದಿನ ಹಂತದಲ್ಲಿ ತುರ್ಕ್ಮೆನಿಸ್ತಾನದ ಗಡಿಭಾಗದ ಸಮೀಪ ಇರುವ ಸೆರಾಕ್ಸ್ವರೆಗೆ 800 ಕಿಮೀ ಉದ್ದದ ರೈಲು ಮಾರ್ಗ ನಿರ್ಮಿಸುವ ಯೋಜನೆ ಇದೆ. ಇದು ನೆರವಾದರೆ ಮಧ್ಯ ಏಷ್ಯನ್ ರಾಷ್ಟ್ರಗಳಿಗೆ ಚಾಬಹಾರ್ ಪೋರ್ಟ್ ತಲುಪುವ ದಾರಿ ಮತ್ತಷ್ಟು ಸುಗಮಗೊಳ್ಳುತ್ತದೆ.
ಇದನ್ನೂ ಓದಿ: ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಸ್ಟೀಲ್ ಫ್ಯಾಕ್ಟರಿ; ಇದು ನಿರ್ಮಿಸುತ್ತಿರೋದು ಭಾರತೀಯ ಕಂಪನಿ
ಭಾರತಕ್ಕೆ ಅನುಕೂಲ ಮಾಡಿಕೊಡಲಿದೆ ಈ ರೈಲು ಮಾರ್ಗ
ಮಧ್ಯ ಏಷ್ಯನ್ ಪ್ರದೇಶಗಳು, ಅಫ್ಗಾನಿಸ್ತಾನ ಮತ್ತು ರಷ್ಯಾದ ಕೆಲ ಭಾಗಗಳನ್ನು ತಲುಪಲು ಭಾರತಕ್ಕೆ ಈ ರೈಲು ಮಾರ್ಗ ಸಹಾಯವಾಗಲಿದೆ. ಆ ಪ್ರದೇಶಗಳಿಗೆ ಹೋಗಲು ಭಾರತಕ್ಕೆ ಪಾಕಿಸ್ತಾನ ತಡೆಯಾಗಿತ್ತು. ಈಗ ಆ ತಡೆ ಇರುವುದಿಲ್ಲ. ಅರೇಬಿಯನ್ ಸಮುದ್ರದ ಮೂಲಕ ಇರಾನ್‌ನ ಚಾಬಹಾರ್ ಬಂದರು ತಲುಪಿ, ಅಲ್ಲಿಂದ ಜಾಹೆದಾನ್ವರೆಗೆ ರೈಲು ಮಾರ್ಗವನ್ನು ಬಳಸಿ ಒಳ ಹೋಗಬಹುದು. ಅಲ್ಲಿಂದ ಅಫ್ಗಾನಿಸ್ತಾನ, ಮಧ್ಯ ಏಷ್ಯಾ ಹಾಗೂ ರಷ್ಯಾಕ್ಕೆ ಸರಕುಗಳನ್ನು ಪೂರೈಸಲು ಭಾರತಕ್ಕೆ ಹೆಚ್ಚು ಸುಲಭವಾಗಲಿದೆ.
ಚಾಬಹಾರ್ ಬಂದರಿಗೆ ಬಲ
ಇರಾನ್‌ನ ದಕ್ಷಿಣ-ಪೂರ್ವ ಕರಾವಳಿಯಲ್ಲಿರುವ ಚಾಬಹಾರ್ ಬಂದರಿನ ಶಹೀದ್ ಬೆಹೆಷ್ಟಿ ಟರ್ಮಿನಲ್ ಅಭಿವೃದ್ಧಿ ಮತ್ತು ಕಾರ್ಯಾಚರಣೆಯಲ್ಲಿ ಭಾರತವು ಭಾರಿ ಹೂಡಿಕೆ ಮಾಡಿದೆ. ಈ ಹೊಸ ರೈಲು ಮಾರ್ಗವು ಚಾಬಹಾರ್ ಬಂದರನ್ನು ಇರಾನ್‌ನ ರಾಷ್ಟ್ರೀಯ ರೈಲ್ವೆ ಜಾಲದೊಂದಿಗೆ ನೇರವಾಗಿ ಜೋಡಿಸುತ್ತದೆ.
ಇದನ್ನೂ ಓದಿ: ಬಾಂಗ್ಲಾದೇಶಕ್ಕೆ ಅಣು ಇಂಧನ ಸಾಗಿಸುತ್ತಿದ್ದ ರಷ್ಯಾ ವಿಮಾನಕ್ಕೆ ವಾಯುಮಾರ್ಗ ಬಂದ್ ಮಾಡಿದ ಪಾಕಿಸ್ತಾನ
ಈ ಯೋಜನೆ ಪೂರ್ಣಗೊಂಡಿರುವುದು ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಪಥದ (INSTC) ಜಾಲವನ್ನು ಬಲಪಡಿಸಲಿದ್ದು, ಭಾರತದಿಂದ ಯೂರೋಪ್ ಮತ್ತು ಯುರೇಷಿಯಾ ರಾಷ್ಟ್ರಗಳಿಗೆ ಸರಕು ಸಾಗಣೆ ವೆಚ್ಚ ಮತ್ತು ಸಮಯವನ್ನು ಗಮನಾರ್ಹವಾಗಿ ತಗ್ಗಿಸಲಿದೆ.
ಭಾರತ, ಇರಾನ್ ಮತ್ತು ಮಧ್ಯ ಏಷ್ಯಾದ ಗಡಿ ಆವೃತ (Landlocked) ದೇಶಗಳ ನಡುವೆ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಬಲಪಡಿಸುವಲ್ಲಿ ಈ ರೈಲು ಮಾರ್ಗವು ಪ್ರಮುಖ ಮೈಲಿಗಲ್ಲಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




