‘ಮೇಕ್ ಇನ್ ಇಂಡಿಯಾ’ಗೆ 12 ವರ್ಷ: ಮ್ಯಾನುಫ್ಯಾಕ್ಚರಿಂಗ್ ಪ್ರಯಾಣದಲ್ಲಿ ಭಾರತ ಕಂಡ ಯಶಸ್ಸು, ಭವಿಷ್ಯದ ಕನಸು
ಪ್ರಧಾನಿ ಮೋದಿಯವರ 'ಮೇಕ್ ಇನ್ ಇಂಡಿಯಾ' ಅಭಿಯಾನವು 12 ವರ್ಷಗಳನ್ನು ಪೂರೈಸಿದೆ. ಈ ಯೋಜನೆ ಭಾರತವನ್ನು ಜಾಗತಿಕ ಉತ್ಪಾದನಾ ಮತ್ತು ನಾವೀನ್ಯತಾ ಕೇಂದ್ರವನ್ನಾಗಿ ಪರಿವರ್ತಿಸಿದೆ. ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ರಕ್ಷಣಾ ಮತ್ತು ಫಾರ್ಮಾ ವಲಯಗಳಲ್ಲಿ ಗಣನೀಯ ಪ್ರಗತಿ, 843 ಬಿಲಿಯನ್ ಡಾಲರ್ FDI ಹರಿವು, PLI ಯೋಜನೆಗಳಿಂದ ಬೃಹತ್ ಹೂಡಿಕೆ ಮತ್ತು 14 ಲಕ್ಷ ಉದ್ಯೋಗ ಸೃಷ್ಟಿ ಇದರ ಪ್ರಮುಖ ಸಾಧನೆಗಳು.

ನವದೆಹಲಿ, ಸೆಪ್ಟೆಂಬರ್ 25: ಹನ್ನೆರಡು ವರ್ಷದ ಹಿಂದೆ ಇದೇ ದಿನ, ಅಂದರೆ, 2014ರ ಸೆ. 25 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಚಾಲನೆ ನೀಡಲ್ಪಟ್ಟ ‘ಮೇಕ್ ಇನ್ ಇಂಡಿಯಾ’ (Make in India) ಅಭಿಯಾನವು ಯಶಸ್ವಿಯಾಗಿ ಮುನ್ನಡೆಯುತ್ತಿದೆ. 12 ವಸಂತಗಳನ್ನು ಪೂರೈಸಿರುವ ಈ ಯೋಜನೆ ಭಾರತವನ್ನು ಜಾಗತಿಕ ಉತ್ಪಾದನೆ, ವಿನ್ಯಾಸ ಮತ್ತು ನಾವೀನ್ಯತೆಯ ಕೇಂದ್ರವನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಇಂದು ಎಲೆಕ್ಟ್ರಾನಿಕ್ಸ್, ವಾಹನ, ರಕ್ಷಣೆ, ಫಾರ್ಮಾ ಮತ್ತು ರೈಲ್ವೆ ಸೇರಿದಂತೆ ಹಲವು ವಲಯಗಳಲ್ಲಿ ಬೃಹತ್ ಬದಲಾವಣೆ ತಂದಿದೆ.
ಈ 12 ವರ್ಷಗಳ ಪಯಣದ ಪ್ರಮುಖ ಸಾಧನೆಗಳು, ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು, ಹೂಡಿಕೆಗಳು, ಭವಿಷ್ಯದ ನೀತಿಗಳು ಇತ್ಯಾದಿ ವಿವರ ಇಲ್ಲಿ ನಿರೀಕ್ಷಿಸಿ…
ಮ್ಯಾನುಫ್ಯಾಕ್ಚರಿಂಗ್ನಲ್ಲಿ ಪ್ರಮುಖ ವಲಯಗಳ ಭಾರಿ ಪ್ರಗತಿ
- ಎಲೆಕ್ಟ್ರಾನಿಕ್ಸ್ ಉತ್ಪಾದನೆ: 2014-15 ರಲ್ಲಿ 1.9 ಲಕ್ಷ ಕೋಟಿ ರೂ ಇದ್ದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 2025-26 ರ ವೇಳೆಗೆ ಸುಮಾರು 13.11 ಲಕ್ಷ ಕೋಟಿ ರೂಗೆ ಏರಿಕೆಯಾಗಿದೆ. ಇದರಲ್ಲಿ ಮೊಬೈಲ್ ಫೋನ್ ಉತ್ಪಾದನೆ 18,000 ಕೋಟಿ ರೂನಿಂದ 6.27 ಲಕ್ಷ ಕೋಟಿ ರೂಗೆ (ಸುಮಾರು 33 ಪಟ್ಟು) ಜಿಗಿತ ಕಂಡಿದೆ.
- ಆಟೋಮೊಬೈಲ್ ವಲಯ: 2024-25 ರಲ್ಲಿ ವಾಹನಗಳ ಉತ್ಪಾದನೆಯು 31.03 ಮಿಲಿಯನ್ ಯೂನಿಟ್ ತಲುಪಿದ್ದು, 2014-15 ಕ್ಕೆ ಹೋಲಿಸಿದರೆ ಶೇ. 33 ರಷ್ಟು ಹೆಚ್ಚಳವಾಗಿದೆ.
- ರಕ್ಷಣಾ ಉತ್ಪಾದನೆ: ದೇಶೀಯ ರಕ್ಷಣಾ ಉತ್ಪಾದನೆಯು 2014-15 ರಲ್ಲಿದ್ದ 46,429 ಕೋಟಿ ರೂನಿಂದ 2025-26 ರಲ್ಲಿ ಸಾರ್ವಕಾಲಿಕ ದಾಖಲೆಯ 1.78 ಲಕ್ಷ ಕೋಟಿ ರೂಗೆ ಏರಿಕೆಯಾಗಿದೆ.
- ಫಾರ್ಮಾಸ್ಯುಟಿಕಲ್ಸ್: ಭಾರತದ ಔಷಧೋತ್ಪಾದನೆ ಉದ್ಯಮವು ಪ್ರಮಾಣ (Volume) ಆಧಾರದಲ್ಲಿ ವಿಶ್ವದಲ್ಲೇ 3 ನೇ ಸ್ಥಾನದಲ್ಲಿದ್ದು, 2024-25 ರಲ್ಲಿ 4,71,898 ಕೋಟಿ ರೂ ವಹಿವಾಟು ನಡೆಸಿದೆ.
ಇದನ್ನೂ ಓದಿ: ವಿಶ್ವದ ಅಗ್ರಮಾನ್ಯ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿ ಬೆಳೆಯಲು ಪಣತೊಟ್ಟ ಭಾರತದ ಡಿಕ್ಸನ್ ಟೆಕ್ನಾಲಜೀಸ್
ಎಫ್‌ಡಿಐ ಮತ್ತು ಹೂಡಿಕೆಗಳ ಹರಿವು
2014-15 ರಿಂದ 2025-26 ರ ನಡುವೆ ಒಟ್ಟು 843 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ (FDI) ಭಾರತಕ್ಕೆ ಹರಿದುಬಂದಿದೆ. ಇದು ಹಿಂದಿನ 12 ವರ್ಷಗಳ ಅವಧಿಗಿಂತ ಶೇ. 169 ರಷ್ಟು ಹೆಚ್ಚಳವಾಗಿದೆ.
ಪಿಎಲ್‌ಐ ಯೋಜನೆಗಳು ಜೂನ್ 2026 ರ ವೇಳೆಗೆ 2.40 ಲಕ್ಷ ಕೋಟಿ ರೂ ಹೂಡಿಕೆಯನ್ನು ಆಕರ್ಷಿಸಿದ್ದು, 22.66 ಲಕ್ಷ ಕೋಟಿ ರೂ ಮೌಲ್ಯದ ಉತ್ಪಾದನೆ ಮತ್ತು ಮಾರಾಟವನ್ನು ಸಾಧಿಸಿವೆ. ಈ ಯೋಜನೆಗಳಿಂದ 15.20 ಲಕ್ಷ ಕೋಟಿ ರೂ ರಫ್ತು ಸಾಧನೆಯಾಗಿದ್ದು, 14 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ.
ಸೌಲಭ್ಯ ಮತ್ತು ಸುಲಭ ಆಡಳಿತ
ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ (NSWS) ರೂಪಿಸಲಾಗಿದೆ. 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 327 ಕ್ಕೂ ಹೆಚ್ಚು ಕೇಂದ್ರ ಮತ್ತು 3,452 ರಾಜ್ಯ ಮಟ್ಟದ ಅನುಮತಿಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತಿದ್ದು, 5.69 lakh ಗೂ ಹೆಚ್ಚು ಉದ್ಯಮಗಳು ಇದರಲ್ಲಿ ನೋಂದಾಯಿಸಿಕೊಂಡಿವೆ.
ಇಂಡಿಯನ್ ಇಂಡಸ್ಟ್ರಿಯಲ್ ಲ್ಯಾಂಡ್ ಬ್ಯಾಂಕ್: ಜಿಐಎಸ್ (GIS) ತಂತ್ರಜ್ಞಾನ ಆಧಾರಿತ ಈ ವ್ಯವಸ್ಥೆಯಡಿ 2026 ರ ಮೇ ವೇಳೆಗೆ 6.98 ಲಕ್ಷ ಹೆಕ್ಟೇರ್ ವಿಸ್ತೀರ್ಣದ 4,220 ಕೈಗಾರಿಕಾ ಪಾರ್ಕ್‌ಗಳನ್ನು ಮ್ಯಾಪ್ ಮಾಡಲಾಗಿದೆ.
ಇದನ್ನೂ ಓದಿ: ಭಾರತದ ಮೂಲಸೌಕರ್ಯ ಕ್ರಾಂತಿ; ಸೇತುವೆ, ಸುರಂಗ, ಎಕ್ಸ್ಪ್ರೆಸ್ವೇಗಳಿಂದ ಮಿಂಚಿನ ಸಂಚಾರ; ಪ್ರಯಾಣ ಅವಧಿ ಗಣನೀಯವಾಗಿ ಇಳಿಕೆ
ಹೊಸ ನೀತಿಗಳು ಮತ್ತು ಭವಿಷ್ಯದ ಯೋಜನೆಗಳು
ಸೆಮಿಕಾನ್ 2.0: ದ್ವಿತೀಯ ಹಂತದ ಸೆಮಿಕಂಡಕ್ಟರ್ ಯೋಜನೆಗೆ 1,27,500 ಕೋಟಿ ರೂ ಅನುದಾನದೊಂದಿಗೆ 2026ರ ಜುಲೈನಲ್ಲಿ ಅನುಮೋದನೆ ನೀಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಸೆಮಿಕಾನ್ ಕಾರ್ಯಕ್ರಮ ನಡೆದು ಬಹಳ ಒಳ್ಳೆಯ ಸ್ಪಂದನೆ ಪಡೆದಿದ್ದು ನೆನಪಿರಬಹುದು. ದೇಶದಲ್ಲಿ ಸೆಮಿಕಂಡಕ್ಟರ್ ವಿನ್ಯಾಸ, ಉತ್ಪಾದನೆ ಮತ್ತು ಸಂಶೋಧನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದು ನೆರವಾಗುವ ನಿರೀಕ್ಷೆ ಇದೆ.
ಮೊಬೈಲ್ ಫೋನ್ ಸ್ಕೀಮ್: 62,500 ಕೋಟಿ ರೂ ವೆಚ್ಚದಲ್ಲಿ ಮೊಬೈಲ್ ಪೂರೈಕೆ ಸರಪಳಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಯೋಜನೆಗೆ ಅನುಮೋದನೆ ದೊರೆತಿದೆ.
ಭವ್ಯ ಯೋಜನೆ (BHAVYA Scheme): 33,660 ಕೋಟಿ ರೂ ವೆಚ್ಚದಲ್ಲಿ 100 ಹೂಡಿಕೆ ಸ್ನೇಹಿ ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆ.
‘ಕಡಿಮೆ ಸರ್ಕಾರ, ಗರಿಷ್ಠ ಆಡಳಿತ’ (Minimum Government, Maximum Governance) ತತ್ವದೊಂದಿಗೆ ಸಾಗಿಬಂದ ‘ಮೇಕ್ ಇನ್ ಇಂಡಿಯಾ’, ಭಾರತವನ್ನು ಕೇವಲ ಉತ್ಪನ್ನಗಳ ಜೋಡಣೆ ಮಾಡುವ ದೇಶವನ್ನಾಗಿ ಮಾಡದೆ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕನನ್ನಾಗಿ ರೂಪಿಸುತ್ತಿದೆ ಎಂಬುದು ಅನೇಕ ತಜ್ಞರ ಅನಿಸಿಕೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




