ಎಸ್​ಐಪಿ ಪ್ಲಾನ್​ಗಳಿಗೆ ಮುಗಿಬೀಳುತ್ತಿರುವ ಜನರು; ನವೆಂಬರ್​ನಲ್ಲಿ ದಾಖಲೆಯ 17,000 ಕೋಟಿ ರೂ ಹೂಡಿಕೆ

Mutual Fund SIP: ಭಾರತದಲ್ಲಿ ಮ್ಯೂಚುವಲ್ ಫಂಡ್​ಗಳ ಎಸ್​ಐಪಿ ಮೂಲಕ ನವೆಂಬರ್​ನಲ್ಲಿ 17,073 ಕೋಟಿ ರೂ ಹೂಡಿಕೆ ಆಗಿದೆ. ಇದು ಒಂದು ತಿಂಗಳ ಗರಿಷ್ಠ ಎಸ್​ಐಪಿ. ನವೆಂಬರ್​ನಲ್ಲಿ ಎಸ್​ಐಪಿ ಖಾತೆಗಳ ಸಂಖ್ಯೆ ಗರಿಷ್ಠ 7.44 ಕೋಟಿ ಸಂಖ್ಯೆ ದಾಟಿದೆ. ಮ್ಯುಚುವಲ್ ಫಂಡ್ ಎಸ್​ಐಪಿಗಳಲ್ಲಿ ಆಗಿರುವ ಒಟ್ಟಾರೆ ಹೂಡಿಕೆ 9 ಲಕ್ಷ ಕೋಟಿ ರೂಗಿಂತ ಹೆಚ್ಚಿದೆ.

ಎಸ್​ಐಪಿ ಪ್ಲಾನ್​ಗಳಿಗೆ ಮುಗಿಬೀಳುತ್ತಿರುವ ಜನರು; ನವೆಂಬರ್​ನಲ್ಲಿ ದಾಖಲೆಯ 17,000 ಕೋಟಿ ರೂ ಹೂಡಿಕೆ
ಎಸ್​ಐಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 08, 2023 | 5:44 PM

ನವದೆಹಲಿ, ಡಿಸೆಂಬರ್ 8: ಭಾರತದ ಈಕ್ವಿಟಿ ಮ್ಯುಚುವಲ್ ಫಂಡ್​ಗಳಲ್ಲಿನ ಹೂಡಿಕೆ ನವೆಂಬರ್ ತಿಂಗಳಲ್ಲಿ ಶೇ. 20ಕ್ಕೂ ಹೆಚ್ಚು ಪ್ರಮಾಣದಲ್ಲಿ ಕಡಿಮೆ ಆಗಿದೆ. ಆದರೆ, ಅದೇ ವೇಳೆ, ಮ್ಯೂಚುವಲ್ ಫಂಡ್​ಗಳಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಅಥವಾ ಎಸ್​ಐಪಿಗಳ (SIP- systematic investment plan) ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಎಎಂಎಫ್​ಐ (ಅಸೋಸಿಯೇಶನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ) ಡಿಸೆಂಬರ್ 8ರಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಅಕ್ಟೋಬರ್​ನಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್​ಗಳ ಮೇಲೆ 19,957 ಕೋಟಿ ರೂನಷ್ಟು ಹರಿದುಬಂದಿದ್ದ ಹೂಡಿಕೆ ನವೆಂಬರ್​ನಲ್ಲಿ 15,536 ಕೋಟಿ ರೂಗೆ ಇಳಿಕೆ ಆಗಿದೆ. ಇನ್ನು, ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ಗಳಲ್ಲಿನ ಹೂಡಿಕೆ ಅಕ್ಟೋಬರ್​ನಲ್ಲಿ 16,928 ಕೋಟಿ ರೂ ಇದ್ದದ್ದು ನವೆಂಬರ್​ನಲ್ಲಿ 17,073 ಕೋಟಿ ರೂಗೆ ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಎಸ್​ಐಪಿ ಹೂಡಿಕೆಗಳು ಒಂದು ತಿಂಗಳಲ್ಲಿ 17,000 ಕೋಟಿ ರೂ ಮಟ್ಟ ಮುಟ್ಟಿದ್ದು.

ಇನ್ನು ಎಸ್​ಐಪಿ ಸ್ಕೀಮ್​ಗೆ ತೆರೆಯಲಾದ ಖಾತೆಗಳ ಸಂಖ್ಯೆ ನವೆಂಬರ್​​ನಲ್ಲಿ 7.44 ಕೋಟಿ ರೂ ಮುಟ್ಟಿದೆ. ಇವು ಎಸ್​ಐಪಿಯ ಸಕ್ರಿಯ ಅಕೌಂಟ್​ಗಳು. ಇದು ಸಾರ್ವಕಾಲಿಕ ಗರಿಷ್ಠ ಸಂಖ್ಯೆಯಾಗಿದೆ. ಅಕ್ಟೋಬರ್​ನಲ್ಲಿ 7.30 ಕೋಟಿ ಎಸ್​ಐಪಿ ಖಾತೆಗಳಿದ್ದವು. ಅಂದರೆ ಹೆಚ್ಚೂಕಡಿಮೆ 15 ಲಕ್ಷದಷ್ಟು ಹೊಸ ಖಾತೆಗಳು ಒಂದು ತಿಂಗಳಲ್ಲಿ ರಚನೆ ಆಗಿವೆ.

ಇದನ್ನೂ ಓದಿ: ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಎಂಸಿಎಲ್​ಆರ್ ದರ ಪರಿಷ್ಕಾರ; ಲೋನ್ ಇಎಂಐ ಹೆಚ್ಚಳ ಸಾಧ್ಯತೆ

ಒಟ್ಟಾರೆ ಎಸ್​ಐಪಿಯಲ್ಲಿ ಆಗಿರುವ ಹೂಡಿಕೆ ನವೆಂಬರ್​ನಲ್ಲಿ 9.31 ಲಕ್ಷ ಕೋಟಿ ರೂ ಇದೆ. ಅಕ್ಟೋಬರ್​ನಲ್ಲಿ 8.59 ಲಕ್ಷಕೋಟಿ ರೂ ಇತ್ತು.

ಎಸ್​ಐಪಿಗಳು ಜನಪ್ರಿಯವಾಗುತ್ತಿರುವುದು ಯಾಕೆ?

ನಿಯಮಿತ ಆದಾಯ ಇರುವಾಗ ಲಂಪ್ಸಮ್ ಆಗಿ ಹೂಡಿಕೆ ಮಾಡುವ ಬದಲು ನಿಯಮಿತವಾಗಿ ಹೂಡಿಕೆ ಮಾಡುವುದು ಹೆಚ್ಚು ಉಪಯುಕ್ತ ಎನಿಸುತ್ತದೆ. ಹೀಗಾಗಿ, ಹೆಚ್ಚಿನ ಜನರು ಹಣ ಕ್ರೋಢೀಕರಿಸಿ ಒಟ್ಟಿಗೆ ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವ ಬದಲು ಪ್ರತೀ ತಿಂಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸಬಹುದಾದ ಎಸ್​ಐಪಿಗಳಿಗೆ ಆದ್ಯತೆ ಕೊಡುತ್ತಿದ್ದಾರೆ.

ಇದನ್ನೂ ಓದಿ: ಒಟಿಪಿ ಇಲ್ಲದೇ ಯುಪಿಐ ಆಟೊ ಪೇಮೆಂಟ್; ಮಿತಿ 1 ಲಕ್ಷ ರೂಗೆ ಏರಿಕೆ: ಆರ್​ಬಿಐ ಪ್ರಕಟಣೆ

ಒಂದು ಮ್ಯುಚುವಲ್ ಫಂಡ್ ಶೇ. 12ರ ವಾರ್ಷಿಕ ದರದಲ್ಲಿ ರಿಟರ್ನ್ ಕೊಡುತ್ತದೆ ಎಂದಿಟ್ಟುಕೊಳ್ಳಿ. ನೀವು ಅದರ ಎಸ್​ಐಪಿಯಲ್ಲಿ ತಿಂಗಳಿಗೆ 10,000 ರೂನಂತೆ 20 ವರ್ಷ ಹೂಡಿಕೆ ಮಾಡಿದರೆ ನಿಮ್ಮ ಹಣ 1 ಕೋಟಿ ರೂ ಆಗುತ್ತದೆ. ಹೀಗಾಗಿ, ಎಸ್​ಐಪಿಗಳು ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ