AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಮೀರುತ್ತಿರುವ ಹಣದುಬ್ಬರ; ಆರ್​ಬಿಐ ತುರ್ತಾಗಿ ಬಡ್ಡಿದರ ಏರಿಸಬಹುದು: ಯೂನಿಯನ್ ಬ್ಯಾಂಕ್ ವರದಿ

ಆರ್​ಬಿಐ ತನ್ನ ನಿಯಮಿತ ಸಭೆವರೆಗೂ ಕಾಯದೆ ತುರ್ತಾಗಿ ಬಡ್ಡಿದರ ಏರಿಸಬಹುದು ಎಂದು ಯೂನಿಯನ್ ಬ್ಯಾಂಕ್ ರಿಸರ್ಚ್ ರಿಪೋರ್ಟ್ ಅಂದಾಜಿಸಿದೆ. ಅಕ್ಟೋಬರ್​ನಲ್ಲಿ ಎಂಪಿಸಿ ಸಭೆ ನಡೆದಿತ್ತು. ಡಿಸೆಂಬರ್​ನಲ್ಲಿ ಮುಂದಿನ ಸಭೆ ಇದೆ. ಅದಕ್ಕೂ ಮುನ್ನವೇ ಹೆಚ್ಚುವರಿ ಸಭೆ ನಡೆಸಬಹುದು ಎನ್ನಲಾಗಿದೆ. ಸಗಟು ಮಾರಾಟ ದರ ಆಧಾರಿತ ಹಣದುಬ್ಬರ ಶೇ. 11ಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಹೋಗಿದ್ದು ಆರ್​ಬಿಐನಿಂದ ತುರ್ತು ಕ್ರಮ ಮಾಡಿಸಬಹುದು.

ಕೈಮೀರುತ್ತಿರುವ ಹಣದುಬ್ಬರ; ಆರ್​ಬಿಐ ತುರ್ತಾಗಿ ಬಡ್ಡಿದರ ಏರಿಸಬಹುದು: ಯೂನಿಯನ್ ಬ್ಯಾಂಕ್ ವರದಿ
ಆರ್​ಬಿಐImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 16, 2026 | 6:45 PM

Share

ಮುಂಬೈ, ಅಕ್ಟೋಬರ್ 16: ಹಣದುಬ್ಬರ ನಿರೀಕ್ಷೆಮೀರಿ ಹೆಚ್ಚಿನ ಮಟ್ಟಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಆರ್​ಬಿಐ ತುರ್ತು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಯೂನಿಯನ್ ಬ್ಯಾಂಕ್​ನ ರಿಸರ್ಚ್ ವರದಿಯೊಂದು ಅಂದಾಜಿಸಿದೆ. ಈ ವರದಿ ಪ್ರಕಾರ, ಮುಂದಿನ ದ್ವೈಮಾಸಿಕ ಎಂಪಿಸಿ ಸಭೆಗೆ ಮುನ್ನವೇ ಮಧ್ಯಂತರ ಕ್ರಮವಾಗಿ ರೆಪೋ ದರ ಏರಿಸಬಹುದು. ಸೆಪ್ಟೆಂಬರ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ. 5.54ಕ್ಕೆ ಏರಿದೆ. ಸಗಟು ದರ ಹಣದುಬ್ಬರ ಶೇ. 11.39ಕ್ಕೆ ಏರಿರುವುದು ಆರ್​ಬಿಐಗೆ ತುರ್ತು ಕ್ರಮ ತೆಗೆದುಕೊಳ್ಳುವಂತೆ ಮಾಡಬಹುದು.

ಆಗಸ್ಟ್ ತಿಂಗಳಲ್ಲಿ ಹೋಲ್​ಸೇಲ್ ಹಣದುಬ್ಬರ ಶೇ. 9.92 ಇತ್ತು. ಸೆಪ್ಟೆಂಬರ್​ನಲ್ಲಿ ಇದು ಶೇ. 10.60ಕ್ಕೆ ಏರಬಹುದು ಎಂದು ಯೂನಿಯನ್ ಬ್ಯಾಂಕ್ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ಅಂದಾಜು ಮಾಡಿದ್ದವು. ಆದರೆ, ಎಲ್ಲರ ಎಣಿಕೆ ಮೀರಿ ಹಣದುಬ್ಬರ ಶೇ. 11.39ಕ್ಕೆ ಏರಿದೆ.

ಇದನ್ನೂ ಓದಿ: ಈ ಬಾರಿ ನೊಬೆಲ್ ಪ್ರಶಸ್ತಿ ಪಡೆದ ಇಬ್ಬರು ಆರ್ಥಿಕತಜ್ಞರು ರೂಪಿಸಿದ ಎಕನಾಮಿಕ್ ಮಾಡಲ್​ಗಳು ಎಷ್ಟು ಉಪಯುಕ್ತ ನೋಡಿ…

ಈ ಹಿನ್ನೆಲೆಯಲ್ಲಿ ಆರ್​ಬಿಐ ಎಂಪಿಸಿ ತನ್ನ ಡಿಸೆಂಬರ್ ತಿಂಗಳ ಸಭೆಯಲ್ಲಿ 50 ಮೂಲಾಂಕಗಳಷ್ಟು ರೆಪೋ ದರ ಏರಿಸಬಹುದು. ಅದಕ್ಕೂ ಮುನ್ನ ಹೆಚ್ಚುವರಿ ಸಭೆ ನಡೆಸಿ ಮಧ್ಯಂತರವಾಗಿ ಬಡ್ಡಿದರ ಏರಿಸಬಹುದು ಎಂದು ಯೂನಿಯನ್ ಬ್ಯಾಂಕ್ ರಿಸರ್ಚ್ ವರದಿ ಅಭಿಪ್ರಾಯಪಟ್ಟಿದೆ.

ಈ ತಿಂಗಳು ನಡೆದ ಆರ್​ಬಿಐ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು 25 ಮೂಲಾಂಕಗಳಷ್ಟು ಏರಿಸಲಾಗಿದೆ. ಶೇ. 5.25 ಇದ್ದ ರೆಪೋ ದರವನ್ನು ಶೇ. 5.50ಕ್ಕೆ ಏರಿಸಿತು. ಯೂನಿಯನ್ ಬ್ಯಾಂಕ್ ವರದಿ ಪ್ರಕಾರ, ಡಿಸೆಂಬರ್​ನಲ್ಲಿ 50 ಮೂಲಾಂಕಗಳಷ್ಟು ಏರಿಸಿ, ಬಡ್ಡಿದರವನ್ನು ಶೇ. 6ಕ್ಕೆ ತರಬಹುದು. ನವೆಂಬರ್​ನಲ್ಲೂ ಪರಿಷ್ಕರಣೆ ಆದರೆ ಬಡ್ಡಿದರ ಶೇ. 6.25ಕ್ಕೆ ಹೋಗಿ ನಿಲ್ಲಬಹುದು.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಹಣದುಬ್ಬರ ದರ ಶೇ. 5.54ಕ್ಕೆ ಏರಿಕೆ; ಆಹಾರ ಬೆಲೆ ಏರಿಕೆಯ ಪಾತ್ರವೇ ಹೆಚ್ಚು

ಅಕ್ಟೋಬರ್ ತಿಂಗಳ ಆರ್​ಬಿಐ ಎಂಪಿಸಿ ಸಭೆಯಲ್ಲೂ ಮುಂದಿನ ದಿನಗಳಲ್ಲಿ ರೆಪೋ ದರ ಏರಿಸುವ ಸಾಧ್ಯತೆಯ ಸುಳಿವನ್ನು ನೀಡಲಾಗಿದೆ. ಬಡ್ಡಿದರ ಇಳಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗಿದೆ. ಅಗತ್ಯ ಬಿದ್ದರೆ ಬಡ್ಡಿದರ ಏರಿಸಲು ಆರ್​ಬಿಐ ಸಿದ್ಧವಿದೆ ಎಂಬ ಸಂದೇಶವನ್ನು ರವಾನಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More