ಸಿಲ್ವರ್ ಇಟಿಎಫ್ಗಳು ವರ್ಷದಲ್ಲಿ ಶೇ. 98 ಏರಿಕೆ; ಆದರೂ ಶೇ. 56 ಹೂಡಿಕೆದಾರರು ನಷ್ಟದಲ್ಲಿ; ಇಲ್ಲಿದೆ ಕಾರಣ
ಒಂದು ವರ್ಷದಲ್ಲಿ ಸಿಲ್ವರ್ ಇಟಿಎಫ್ ಶೇ. 98ರಷ್ಟು ಬೆಳೆದಿದೆ. ಆದರೆ, ಡಿಎಸ್ಪಿಯ ಇತ್ತೀಚಿನ ನೇತ್ರಾ ವರದಿ ಪ್ರಕಾರ ಈ ವರ್ಷ ಸಿಲ್ವರ್ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಿದವರಲ್ಲಿ ಶೇ. 56 ಮಂದಿ ನಷ್ಟ ಅನುಭವಿಸಿದ್ದಾರೆ. ಮಾರುಕಟ್ಟೆ ಗರಿಷ್ಠ ಮಟ್ಟ ಮುಟ್ಟಿದಾಗ ಹೂಡಿಕೆ ಮಾಡಿದವರಿಗೆ ನಷ್ಟ ಆಗಿದೆಯಾ? ಇಟಿಎಫ್ ಆಗಲೀ, ಷೇರು ಆಗಲೀ, ಮ್ಯೂಚುವಲ್ ಫಂಡ್ ಆಗಲೀ ದೀರ್ಘಕಾಲೀನ ಹೂಡಿಕೆಗೆ ಯಾಕೆ ಸೂಕ್ತವಾಗಿರುತ್ತವೆ ಎಂಬುದಕ್ಕೆ ಇದೇ ಕಾರಣ.

ನವದೆಹಲಿ, ಸೆಪ್ಟೆಂಬರ್ 25: ಕಳೆದ ಒಂದು ವರ್ಷದಲ್ಲಿ ಸಿಲ್ವರ್ ಇಟಿಎಫ್ (ETF – Exchange Traded Funds) ಶೇ. 98 ರಷ್ಟು ಭರ್ಜರಿ ರಿಟರ್ನ್ಸ್ (ಆದಾಯ) ನೀಡಿದೆ. ಆದರೂ ಕೂಡ ಕಳೆದ ಒಂದು ಒಂದು ವರ್ಷದಲ್ಲಿ ಇದರಲ್ಲಿ ಹೂಡಿಕೆ ಮಾಡಿರುವ ಶೇ. 56 ರಷ್ಟು ಮಂದಿಯ ಹಣ ನಷ್ಟದಲ್ಲಿದೆಯಂತೆ. ಈ ಅಂಕಿ ಅಂಶವು ಡಿಎಸ್ಪಿ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ಇದೆ. ಈ ವೈರುಧ್ಯಕ್ಕೆ ಪ್ರಮುಖ ಕಾರಣಗಳು ಮತ್ತು ವಿವರಗಳು ಕುತೂಹಲ ಮೂಡಿಸುತ್ತವೆ. ಹೂಡಿಕೆ ಬಗ್ಗೆ ಇದು ಒಂದು ಪ್ರಮುಖ ಪಾಠ ಕೂಡ ಕಲಿಸುತ್ತದೆ.
ಕಳೆದ ಒಂದು ವರ್ಷದಲ್ಲಿ ಸಿಲ್ವರ್ ಇಟಿಎಫ್ ಹೂಡಿಕೆದಾರರು ನಷ್ಟ ಅನುಭವಿಸಿದ್ದು ಯಾಕೆ ಎಂಬ ಬಗ್ಗೆ ಕೆಲ ಕಾರಣಗಳು ಈ ಕೆಳಕಂಡಂತಿವೆ:
1. ತಡವಾಗಿ ಮಾರುಕಟ್ಟೆಗೆ ಪ್ರವೇಶಿಸಿದ ಹೂಡಿಕೆದಾರರು
ಬೆಳ್ಳಿ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದನ್ನು ನೋಡಿ, ಹೆಚ್ಚಿನ ಹೂಡಿಕೆದಾರರು ಮಾರುಕಟ್ಟೆ ಈಗಾಗಲೇ ಗರಿಷ್ಠ ಮಟ್ಟದಲ್ಲಿದ್ದಾಗ (Peak Levels) ಹೆಚ್ಚಿನ ಹಣವನ್ನು ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಿರಬಹುದು. ಇದನ್ನು ಫೋಮೋ (FOMO – Fear Of Missing Out) ಎನ್ನುತ್ತಾರೆ. ಷೇರುಗಳು, ಮ್ಯೂಚುವಲ್ ಫಂಡ್ ಇತ್ಯಾದಿ ಹಲವು ಹೂಡಿಕೆಗಳಲ್ಲೂ ಬಹಳ ಜನರಿಗೆ ಈ ಫೋಮೋ ಪ್ರವೃತ್ತಿ ಇರುವುದನ್ನು ಕಾಣಬಹುದು.
ಇದನ್ನೂ ಓದಿ: ಎಟಿಎಂನಿಂದ ಹಣ ಬಂದಿಲ್ಲ, ಆದರೆ ಅಕೌಂಟ್ನಿಂದ ಹಣ ಕಡಿತವಾಗಿದೆಯಾ? ಆರ್ಬಿಐ ನಿಯಮಗಳನ್ನು ತಿಳಿದಿರಿ
ಸಿಲ್ವರ್ ಇಟಿಎಫ್ ಏರಿಕೆಯಾಗುವ ಆರಂಭದಲ್ಲೇ ಕಡಿಮೆ ಬೆಲೆಯಲ್ಲಿ ಹೂಡಿಕೆ ಮಾಡಿದವರು 98% ಲಾಭ ಗಳಿಸಿದ್ದರೆ, ಇತ್ತೀಚೆಗೆ ಗರಿಷ್ಠ ಬೆಲೆಯಲ್ಲಿ ಹೂಡಿಕೆ ಮಾಡಿದವರು ಮಾರುಕಟ್ಟೆಯ ಇತ್ತೀಚಿನ ಅಲ್ಪಾವಧಿ ತಿದ್ದುಪಡಿಗಳಿಂದಾಗಿ (Correction) ನಷ್ಟ ಅನುಭವಿಸುತ್ತಿದ್ದಾರೆ.
2. ಬೆಳ್ಳಿ ಮಾರುಕಟ್ಟೆಯ ಚಂಚಲತೆ
ಬಂಗಾರಕ್ಕೆ ಹೋಲಿಸಿದರೆ ಬೆಳ್ಳಿಯ ಬೆಲೆಯು ಬಹಳ ಹೆಚ್ಚು ಚಂಚಲವಾಗಿರುತ್ತದೆ (Volatile). ಕೇವಲ ಆಭರಣ ಮತ್ತು ಹೂಡಿಕೆಯಷ್ಟೇ ಅಲ್ಲದೆ, ಶೇ. 50 ಕ್ಕೂ ಹೆಚ್ಚು ಬೆಳ್ಳಿಯು ನವೀಕರಿಸಬಹುದಾದ ಇಂಧನ (Solar Panels), ಎಲೆಕ್ಟ್ರಾನಿಕ್ಸ್, ಮತ್ತು ಆಟೋಮೊಬೈಲ್ ವಲಯಗಳಲ್ಲಿ ಕೈಗಾರಿಕಾ ಬಳಕೆಗೆ (Industrial Use) ಒಳಪಡುತ್ತದೆ. ಹೀಗಾಗಿ, ಜಾಗತಿಕ ಕೈಗಾರಿಕಾ ಬೇಡಿಕೆಯಲ್ಲಿನ ಏರಿಳಿತಗಳು ಬೆಳ್ಳಿಯ ಬೆಲೆಯ ಮೇಲೆ ತಕ್ಷಣದ ಪರಿಣಾಮ ಬೀರುತ್ತವೆ.
3. ‘ಲ್ಯಂಪ್-ಸಮ್’ ಹೂಡಿಕೆಯಿಂದಾದ ತಪ್ಪು
ಹೆಚ್ಚಿನ ಹೂಡಿಕೆದಾರರು ಹಂತ-ಹಂತವಾಗಿ (SIP ಮಾದರಿಯಲ್ಲಿ) ಹೂಡಿಕೆ ಮಾಡುವ ಬದಲು, ಬೆಲೆ ಏರಿಕೆಯಾದಾಗ ಒಂದೇ ಬಾರಿಗೆ ದೊಡ್ಡ ಮಟ್ಟದ ಮೊತ್ತವನ್ನು (Lump-sum) ಹೂಡಿಕೆ ಮಾಡಿದ್ದು ಈ ನಷ್ಟಕ್ಕೆ ಮುಖ್ಯ ಕಾರಣವಾಗಿದೆ.
ನಷ್ಟ ತಪ್ಪಿಸಲು ಹೇಗೆ ಹೂಡಿಕೆ ಮಾಡಬೇಕು?
- ಹಂತ-ಹಂತದ ಹೂಡಿಕೆ (Rupee Cost Averaging): ಬೆಳ್ಳಿಯಂತಹ ಹೆಚ್ಚು ಚಂಚಲತೆಯಿರುವ ಕಮೊಡಿಟಿಗಳಲ್ಲಿ ಹೂಡಿಕೆ ಮಾಡುವಾಗ ಒಂದೇ ಬಾರಿಗೆ ಹೂಡಿಕೆ ಮಾಡದೆ SIP ಅಥವಾ ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡುವುದು ಸೂಕ್ತ.
- ಪೋರ್ಟ್‌ಫೋಲಿಯೋ ವೈವಿಧ್ಯತೆ (Asset Allocation): ನಿಮ್ಮ ಒಟ್ಟು ಹೂಡಿಕೆ ಪಟ್ಟಿಯಲ್ಲಿ ಬೆಳ್ಳಿಯ ಪಾಲು ಶೇ. 5 ರಿಂದ 10 ಕ್ಕಿಂತ ಹೆಚ್ಚಿರಬಾರದು ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.
- ದೀರ್ಘಾವಧಿ ಹೂಡಿಕೆ: ಬೆಳ್ಳಿ ಮಾತ್ರವಲ್ಲ, ಶೇರು, ಚಿನ್ನ ಇತ್ಯಾದಿಯಲ್ಲಿ ಹೂಡಿಕೆ ಮಾಡುವಾಗ ದೀರ್ಘಾವಧಿ ದೃಷ್ಟಿಕೋನ ಇರಲಿ. ಒಂದು ವರ್ಷ, ಎರಡು ವರ್ಷಕ್ಕೆ ಹೂಡಿಕೆ ಮಾಡುವುದು ದೊಡ್ಡ ರಿಸ್ಕ್. ಮಾರುಕಟ್ಟೆ ಬಿದ್ದಾಗ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ, ಐದು ವರ್ಷ ಮೇಲ್ಪಟ್ಟ ಅವಧಿಯವರೆಗೆ ಹೂಡಿಕೆ ಮಾಡುವುದು ಲಾಭದಾಯಕ ಎನಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




