ಷೇರುಬಜಾರು ಅಲುಗಾಟ; ಸೆನ್ಸೆಕ್ಸ್, ನಿಫ್ಟಿ ಕುಸಿತ; ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ಹಿನ್ನಡೆ; ಈ ಕುಸಿತಕ್ಕೆ ಪ್ರಮುಖ ಕಾರಣಗಳಿವು
ಸೆಪ್ಟೆಂಬರ್ 28, ಸೋಮವಾರದಂದು ಭಾರತದ ಷೇರುಪೇಟೆ ಗಮನಾರ್ಹವಾಗಿ ಹಿನ್ನಡೆ ಕಂಡಿದೆ. ಬಿಎಸ್ಇ ಮತ್ತು ಎನ್ಎಸ್ಇ ಕೇಂದ್ರಗಳ ಹೆಚ್ಚಿನ ಸೂಚ್ಯಂಕಗಳು ಕುಸಿತ ಕಂಡಿವೆ. ಸರಾಸರಿಯಾಗಿ ಮಾರುಕಟ್ಟೆಯು ಶೇ. 1.5ರಿಂದ 2ರಷ್ಟು ಕುಸಿತ ಕಂಡಿದೆ. ಈ ಒಂದು ದಿನದ ವಹಿವಾಟಿನಲ್ಲಿ ಹೂಡಿಕೆದಾರರು 8.92 ಲಕ್ಷ ಕೋಟಿ ರೂನಷ್ಟು ನಷ್ಟ ಕಂಡಿದ್ದಾರೆ. ಈ ಕುಸಿತಕ್ಕೆ ಏನು ಕಾರಣ ಎನ್ನುವ ವಿವರ ಇಲ್ಲಿದೆ.

ನವದೆಹಲಿ, ಸೆಪ್ಟೆಂಬರ್ 28: ಷೇರು ಮಾರುಕಟ್ಟೆ ಭಾರೀ ಕುಸಿತದೊಂದಿಗೆ ಈ ವಾರವನ್ನು ಆರಂಭಿಸಿದೆ. ಇಂದು ಸೋಮವಾರದ ವಹಿವಾಟಿನಲ್ಲಿ ಭಾರತೀಯ ಮಾರುಕಟ್ಟೆಯ ಬಹುತೇಕ ಎಲ್ಲಾ ಸೂಚ್ಯಂಕಗಳೂ ಕೆಂಪು ಬಣ್ಣಕ್ಕೆ ತಿರುಗಿವೆ. ನಿಫ್ಟಿ50 ಸೂಚ್ಯಂಕ 360 ಅಂಕಗಳನ್ನು ಕಳೆದುಕೊಂಡು 22,780 ಮಟ್ಟಕ್ಕೆ ಇಳಿದಿದೆ. ಬಿಎಸ್ಇಯ ಸೆನ್ಸೆಕ್ಸ್ ಸೂಚ್ಯಂಕ ಒಂದೇ ದಿನ 1,124 ಅಂಕ ಕಳೆದುಕೊಂಡು 72,771 ರ ಮಟ್ಟಕ್ಕೆ ಇಳಿದಿದೆ. ಬಿಎಸ್ಇ ಮತ್ತು ಎನ್ಎಸ್ಇಯಲ್ಲಿರುವ ಬಹುತೇಕ ಎಲ್ಲಾ ಇಂಡೆಕ್ಸ್ಗಳೂ ಇಳಿಕೆ ಕಂಡಿರುವುದು ಗಮನಾರ್ಹ.
ಐಟಿ, ಫಾರ್ಮಾ ಸೇರಿ ಬೆರಳೆಣಿಕೆಯ ಸೆಕ್ಟರ್ಗಳಷ್ಟೇ ಶೇ. 1ಕ್ಕಿಂತ ಕಡಿಮೆ ಕುಸಿತ ಕಂಡಿರುವುದು. ಹೆಚ್ಚಿನ ಸೆಕ್ಟರ್ಗಳ ಸೂಚ್ಯಂಕಗಳು ಹೆಚ್ಚು ಕುಸಿತ ಕಂಡಿವೆ. ಸೋಮವಾರದ ವಹಿವಾಟಿನಲ್ಲಿ ಹೂಡಿಕೆದಾರರಿಗೆ ಆಗಿರುವ ನಷ್ಟ ಒಟ್ಟಾರೆ 8.92 ಲಕ್ಷ ಕೋಟಿ ರೂ ಎನ್ನಲಾಗಿದೆ. ಬಿಎಸ್ಇ ಮತ್ತು ಎನ್ಎಸ್ಇಯ ಎಲ್ಲಾ ಲಿಸ್ಟೆಡ್ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ 474 ಲಕ್ಷ ಕೋಟಿ ರೂಗೆ ಇಳಿದಿದೆ.
ಇದನ್ನೂ ಓದಿ: ಪಿಎಂ ಆವಾಸ್ ಯೋಜನೆ; ಸ್ವಂತ ಸೂರು ಇಲ್ಲದವರಿಗೆ ಒಂದು ಆಶಾಕಿರಣ; ಸರ್ಕಾರದ ನೆರವು ಬಳಸಿ
ಷೇರುಪೇಟೆ ಕುಸಿಯಲು ಪ್ರಮುಖ ಕಾರಣಗಳು
- ಇರಾನ್ ಅಮೆರಿಕ ಯುದ್ಧ: ಏಳು ದಿನ ಕದನವಿರಾಮ ಘೋಷಿಸುವ ಮತ್ತು ಹಾರ್ಮುಜ್ ಜಲಸಂಧಿ ಮತ್ತೆ ತೆರೆಯುವುದಾಗಿ ಇರಾನ್ ದೇಶ ಮಾಡಿದ ಪ್ರಸ್ತಾಪವನ್ನು ಅಮೆರಿಕ ತಿರಸ್ಕರಿಸಿದೆ. ಇದರೊಂದಿಗೆ ಯುದ್ಧ ತಾತ್ಕಾಲಿಕವಾಗಿಯಾದರೂ ನಿಲ್ಲುವ ಆಶಯ ಇಲ್ಲದಂತಾಗಿದೆ. ಇದು ಮಾರುಕಟ್ಟೆಯ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.
- ತೈಲ ಬೆಲೆ ಏರಿಕೆ: ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಮತ್ತಷ್ಟು ಏರಿದೆ. ಜೆಪಿ ಮಾರ್ಗನ್ನಂತಹ ಸಂಸ್ಥೆಗಳೂ ಕೂಡ ತೈಲ ಬೆಲೆ ಎತ್ತ ಹೋಗಬಹುದು ಎಂದು ಊಹಿಸಲೂ ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಇದು ಹೂಡಿಕೆದಾರರನ್ನು ವಿಚಲಿತಗೊಳಿಸಿರಬಹುದು.
- ಅಮೆರಿಕನ್ ಬಾಂಡ್ಗಳ ಯೀಲ್ಡ್: ಅಮೆರಿಕದ ವಿವಿಧ ಬಾಂಡ್ಗಳ ಯೀಲ್ಡ್ ಹೊಸ ದಾಖಲೆ ಮಟ್ಟಕ್ಕೆ ಏರುತ್ತಿದೆ. 10 ವರ್ಷದ ಟ್ರೆಶರಿ ನೋಟಿನ ಯೀಲ್ಡ್ ಶೇ. 5.2ಕ್ಕೆ ಏರಿದೆ. ಕಳೆದ 22 ವರ್ಷದಲ್ಲೇ ಇದು ಗರಿಷ್ಠ ಯೀಲ್ಡ್ ಮಟ್ಟ. 30 ವರ್ಷದ ಬಾಂಡ್ನ ಯೀಲ್ಡ್ ಶೇ. 5.5ಕ್ಕೆ ಏರಿದೆ. ಬಾಂಡ್ ಯೀಲ್ಡ್ ಹೆಚ್ಚಿದಷ್ಟೂ ಹೂಡಿಕೆದಾರರು ಡೆಟ್ ಮಾರುಕಟ್ಟೆಯತ್ತ ಮುಖ ಮಾಡುತ್ತಾರೆ. ಇದು ಈಕ್ವಿಟಿ ಮಾರುಕಟ್ಟೆಯಿಂದ ಹೂಡಿಕೆ ಹೊರಹೋಗಲು ಕಾರಣವಾಗಿದೆ.
- ರುಪಾಯಿ ಮೌಲ್ಯ ಕುಸಿತ: ಅಮೆರಿಕನ್ ಡಾಲರ್ ಎದುರು ರುಪಾಯಿ ಮೌಲ್ಯದ ಕುಸಿತ ನಿರಂತರವಾಗಿ ನಡೆದಿದೆ. ಇಂದು ಬೆಳಗ್ಗೆ ರುಪಾಯಿ 14 ಪೈಸೆ ಕುಸಿದಿದೆ. ಪ್ರಸಕ್ತ ಒಂದು ಡಾಲರ್ಗೆ ರುಪಾಯಿ ಮೌಲ್ಯ 96ರ ಮೇಲಕ್ಕೆ ಕುಸಿದಿದೆ. ಇದು ಮಾರುಕಟ್ಟೆ ಹಿನ್ನಡೆಗೆ ಕಾರಣಗಳಲ್ಲಿ ಒಂದು.
- ಎಫ್ಐಐಗಳ ಹೊರಹರಿವು: ವಿದೇಶೀ ಸಾಂಸ್ಥಿ ಹೂಡಿಕೆದಾರರು ಭಾರತದ ಈಕ್ವಿಟಿ ಮಾರುಕಟ್ಟೆಯಿಂದ ಹೊರಹೋಗುವುದು ಮುಂದುವರಿದಿದೆ. ಶುಕ್ರವಾರ ಸಾವಿರಾರು ಕೋಟಿ ರೂ ಮೊತ್ತದ ಹೊರಹರಿವು ಆಗಿತ್ತು. ಇದೇ ಟ್ರೆಂಡ್ ಸೋಮವಾರವೂ ಮುಂದುವರಿದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




