Tech Utility: ಮೊಬೈಲ್ ಡಿಸ್ಪ್ಲೇ ಮೇಲೆ ಹಸಿರು ಗೆರೆ ಕಾಣಿಸಿದರೆ ಏನು ಮಾಡಬೇಕು?, ನಾವೇ ಸರಿಪಡಿಸಬಹುದೇ?
ಮೊಬೈಲ್ ಡಿಸ್ಪ್ಲೇ ಮೇಲೆ ಇದ್ದಕ್ಕಿದ್ದಂತೆ ಹಸಿರು ಗೆರೆ ಕಾಣಿಸಿಕೊಂಡಿದೆಯೇ? ಫೋನ್ ಕೆಳಗೆ ಬೀಳುವುದು, ಡಿಸ್ಪ್ಲೇ ಹಾನಿ ಅಥವಾ ತಾಂತ್ರಿಕ ದೋಷ ಇದಕ್ಕೆ ಕಾರಣವಾಗಿರಬಹುದು. ರೀಸ್ಟಾರ್ಟ್ ಅಥವಾ ಸಾಫ್ಟ್ವೇರ್ ಅಪ್ಡೇಟ್ನಿಂದ ಸಮಸ್ಯೆ ಸರಿಯಾಗುತ್ತದೆಯೇ? ಮನೆಯಲ್ಲೇ ಇದನ್ನು ಸರಿಪಡಿಸಲು ಸಾಧ್ಯವೇ? ಹಸಿರು ಗೆರೆ ಕಾಣಿಸಿಕೊಂಡಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಯಿರಿ.

ಮುಖ್ಯಾಂಶಗಳು
- ಮೊಬೈಲ್ ಡಿಸ್ಪ್ಲೇ ಮೇಲೆ ಹಸಿರು ಗೆರೆ ಕಾಣಿಸಿಕೊಳ್ಳುವುದೇಕೆ?
- ಗ್ರೀನ್ ಲೈನ್ ಸಮಸ್ಯೆಯನ್ನು ಮನೆಯಲ್ಲೇ ಸರಿಪಡಿಸಲು ಸಾಧ್ಯವೇ?
- ಹಸಿರು ಗೆರೆ ಕಾಣಿಸಿದಾಗ ಡಿಸ್ಪ್ಲೇ ಬದಲಾಯಿಸುವುದು ಅನಿವಾರ್ಯವೇ?
ಮೊಬೈಲ್ ಡಿಸ್ಪ್ಲೇಯಲ್ಲಿ ಲಕ್ಷಾಂತರ ಸಣ್ಣ ಪಿಕ್ಸೆಲ್ಗಳಿರುತ್ತವೆ. ಇವು ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳ ಸಂಯೋಜನೆಯ ಮೂಲಕ ವಿವಿಧ ಬಣ್ಣಗಳನ್ನು ಪ್ರದರ್ಶಿಸುತ್ತವೆ. ಪರದೆಯಲ್ಲಿನ ಒಂದು ಸಾಲಿನ ಪಿಕ್ಸೆಲ್ಗಳಿಗೆ ವಿದ್ಯುತ್ ಪೂರೈಸುವ ವ್ಯವಸ್ಥೆಯಲ್ಲಿ ದೋಷ ಉಂಟಾದರೆ, ಆ ಸಾಲಿನಲ್ಲಿರುವ ಪಿಕ್ಸೆಲ್ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ಪರದೆಯ ಮೇಲೆ ಹಸಿರು ಅಥವಾ ಬೇರೆ ಬಣ್ಣದ ಲಂಬ ಗೆರೆ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ OLED ಮತ್ತು AMOLED ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ಫೋನ್ಗಳಲ್ಲಿ ಇಂತಹ ಸಮಸ್ಯೆ ಹೆಚ್ಚು.
ಸ್ಮಾರ್ಟ್ಫೋನ್ ಡಿಸ್ಪ್ಲೇಯಲ್ಲಿ ಹಸಿರು ಗೆರೆ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳೇನು?
- ಫೋನ್ ಕೆಳಗೆ ಬೀಳುವುದು: ಮೊಬೈಲ್ ಕೈಯಿಂದ ಜಾರಿ ಬಿದ್ದಾಗ ಹೊರಭಾಗದಲ್ಲಿ ಯಾವುದೇ ಬಿರುಕು ಕಾಣಿಸದಿದ್ದರೂ ಒಳಗಿನ ಡಿಸ್ಪ್ಲೇ ಪ್ಯಾನೆಲ್ಗೆ ಹಾನಿಯಾಗಿರಬಹುದು. ಇದರಿಂದ ಕೆಲವು ದಿನಗಳ ನಂತರ ಹಸಿರು ಗೆರೆ ಕಾಣಿಸಿಕೊಳ್ಳಬಹುದು.
- ಒತ್ತಡ ಬೀಳುವುದು: ಮೊಬೈಲ್ ಅನ್ನು ಬಿಗಿಯಾದ ಜೇಬಿನಲ್ಲಿ ಇಡುವುದು, ಅದರ ಮೇಲೆ ಕುಳಿತುಕೊಳ್ಳುವುದು ಅಥವಾ ಭಾರವಾದ ವಸ್ತುವಿನ ಕೆಳಗೆ ಇಡುವುದರಿಂದ ಡಿಸ್ಪ್ಲೇಗೆ ಒತ್ತಡ ಬೀಳುತ್ತದೆ. ಇದರಿಂದ ಒಳಗಿನ ಸೂಕ್ಷ್ಮ ಸಂಪರ್ಕ ವ್ಯವಸ್ಥೆ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ.
- ನೀರು ಅಥವಾ ತೇವಾಂಶ: ಮೊಬೈಲ್ ಒಳಗೆ ನೀರು ಅಥವಾ ತೇವಾಂಶ ಪ್ರವೇಶಿಸಿದರೆ ಡಿಸ್ಪ್ಲೇ ಕನೆಕ್ಟರ್ ಮತ್ತು ಸರ್ಕ್ಯೂಟ್ಗಳಲ್ಲಿ ತೊಂದರೆ ಉಂಟಾಗುತ್ತದೆ.
- ಡಿಸ್ಪ್ಲೇಯಲ್ಲಿನ ತಾಂತ್ರಿಕ ದೋಷ: ಕೆಲವು ಸಂದರ್ಭಗಳಲ್ಲಿ ಯಾವುದೇ ಭೌತಿಕ ಹಾನಿಯಾಗದಿದ್ದರೂ ಡಿಸ್ಪ್ಲೇ ಪ್ಯಾನೆಲ್ ಅಥವಾ ಅದರ ಸಂಪರ್ಕ ವ್ಯವಸ್ಥೆಯಲ್ಲಿ ದೋಷ ಉಂಟಾಗಬಹುದು.
- ಸಾಫ್ಟ್ವೇರ್ ಅಪ್ಡೇಟ್: ಕೆಲವೊಮ್ಮೆ ಸಾಫ್ಟ್ವೇರ್ ಅಪ್ಡೇಟ್ ನಂತರ ಹಸಿರು ಗೆರೆ ಕಾಣಿಸಿಕೊಂಡಿರುವ ವರದಿಗಳಿವೆ. ಆದರೆ ಇಂತಹ ಸಂದರ್ಭದಲ್ಲಿ ಇದಕ್ಕೆ ಸಾಫ್ಟ್ವೇರ್ವೇ ನೇರ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಡಿಸ್ಪ್ಲೇಯಲ್ಲಿರುವ ಹಾರ್ಡ್ವೇರ್ ದೋಷವೂ ಇದಕ್ಕೆ ಕಾರಣವಾಗಿರಬಹುದು.
ಹಸಿರು ಗೆರೆ ಕಾಣಿಸಿಕೊಂಡರೆ ನಾವೇ ಸರಿಪಡಿಸಬಹುದೇ?
ಹಸಿರು ಗೆರೆ ಕಾಣಿಸಿಕೊಂಡ ತಕ್ಷಣ ಡಿಸ್ಪ್ಲೇ ಬದಲಾಯಿಸಬೇಕು ಎಂದೇನಿಲ್ಲ. ಮೊದಲು ಕೆಲವು ಸರಳ ಕ್ರಮಗಳನ್ನು ಪ್ರಯತ್ನಿಸಬಹುದು.
ಫೋನ್ ರೀಸ್ಟಾರ್ಟ್ ಮಾಡಿ: ಮೊದಲು ಮೊಬೈಲ್ ಅನ್ನು ಒಮ್ಮೆ ಸ್ವಿಚ್ ಆಫ್ ಮಾಡಿ ಮತ್ತೆ ಆನ್ ಮಾಡಿ. ಕೆಲವೊಮ್ಮೆ ತಾತ್ಕಾಲಿಕ ಸಾಫ್ಟ್ವೇರ್ ದೋಷದಿಂದ ಪರದೆಯಲ್ಲಿ ಅಸಹಜ ಬಣ್ಣಗಳು ಕಾಣಿಸಿಕೊಳ್ಳಬಹುದು. ರೀಸ್ಟಾರ್ಟ್ ಮಾಡಿದ ನಂತರವೂ ಗೆರೆ ಹಾಗೆಯೇ ಇದ್ದರೆ ಅದು ಹಾರ್ಡ್ವೇರ್ ಸಮಸ್ಯೆಯಾಗಿರುವ ಸಾಧ್ಯತೆ ಹೆಚ್ಚು.
ಸಾಫ್ಟ್ವೇರ್ ಅಪ್ಡೇಟ್ ಪರಿಶೀಲಿಸಿ: ಫೋನ್ನ ಸೆಟ್ಟಿಂಗ್ಗಳಿಗೆ ಹೋಗಿ ಹೊಸ ಸಾಫ್ಟ್ವೇರ್ ಅಪ್ಡೇಟ್ ಲಭ್ಯವಿದೆಯೇ ಎಂದು ಪರಿಶೀಲಿಸಿ. ತಯಾರಕರು ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಅಪ್ಡೇಟ್ ಬಿಡುಗಡೆ ಮಾಡಿದ್ದರೆ ಅದನ್ನು ಇನ್ಸ್ಟಾಲ್ ಮಾಡಬಹುದು.
ಸ್ಕ್ರೀನ್ಶಾಟ್ ತೆಗೆದು ಪರಿಶೀಲಿಸಿ: ಹಸಿರು ಗೆರೆ ಕಾಣಿಸುತ್ತಿರುವಾಗ ಸ್ಕ್ರೀನ್ಶಾಟ್ ತೆಗೆದುಕೊಳ್ಳಿ. ನಂತರ ಆ ಸ್ಕ್ರೀನ್ಶಾಟ್ ಅನ್ನು ಬೇರೆ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ತೆರೆದು ನೋಡಿ. ಅಲ್ಲಿ ಹಸಿರು ಗೆರೆ ಕಾಣಿಸದಿದ್ದರೆ, ನಿಮ್ಮ ಮೊಬೈಲ್ನ ಡಿಸ್ಪ್ಲೇ ಅಥವಾ ಅದರ ಸಂಪರ್ಕ ವ್ಯವಸ್ಥೆಯಲ್ಲಿ ಸಮಸ್ಯೆ ಇರುವ ಸಾಧ್ಯತೆ ಹೆಚ್ಚಿದೆ.
ಸೇಫ್ ಮೋಡ್ನಲ್ಲಿ ಪರಿಶೀಲಿಸಿ: ಕೆಲವು ಆ್ಯಪ್ಗಳಿಂದ ಉಂಟಾಗುವ ಸಾಫ್ಟ್ವೇರ್ ಸಮಸ್ಯೆಗಳನ್ನು ಪತ್ತೆಹಚ್ಚಲು ಆಂಡ್ರಾಯ್ಡ್ ಫೋನ್ ಅನ್ನು Safe Modeನಲ್ಲಿ ಆರಂಭಿಸಬಹುದು. ಈ ಮೋಡ್ನಲ್ಲಿಯೂ ಹಸಿರು ಗೆರೆ ಕಾಣಿಸಿಕೊಂಡರೆ ಹಾರ್ಡ್ವೇರ್ ಸಮಸ್ಯೆಯಾಗಿರುವ ಸಾಧ್ಯತೆ ಇದೆ.
ಡಿಸ್ಪ್ಲೇ ಬದಲಾಯಿಸುವುದು ಅನಿವಾರ್ಯವೇ?
ರೀಸ್ಟಾರ್ಟ್, ಸಾಫ್ಟ್ವೇರ್ ಅಪ್ಡೇಟ್ ಸೇರಿದಂತೆ ಸರಳ ಕ್ರಮಗಳನ್ನು ಪ್ರಯತ್ನಿಸಿದರೂ ಹಸಿರು ಗೆರೆ ಮಾಯವಾಗದಿದ್ದರೆ ಅಧಿಕೃತ ಸರ್ವಿಸ್ ಸೆಂಟರ್ಗೆ ಭೇಟಿ ನೀಡುವುದು ಉತ್ತಮ. ಕೆಲವು ಸಂದರ್ಭಗಳಲ್ಲಿ ಕನೆಕ್ಟರ್ ಅಥವಾ ಸಂಪರ್ಕ ವ್ಯವಸ್ಥೆಯ ದೋಷವನ್ನು ಸರಿಪಡಿಸುವುದರಿಂದ ಸಮಸ್ಯೆ ಬಗೆಹರಿಯಬಹುದು. ಆದರೆ ಡಿಸ್ಪ್ಲೇ ಪ್ಯಾನೆಲ್ ಹಾನಿಯಾಗಿದ್ದರೆ ಅದನ್ನು ಬದಲಾಯಿಸಬೇಕಾಗಬಹುದು.
ಹಸಿರು ಗೆರೆ ಕಾಣಿಸಿಕೊಂಡಾಗ ಈ ತಪ್ಪುಗಳನ್ನು ಮಾಡಬೇಡಿ
ಹಸಿರು ಗೆರೆ ಮಾಯವಾಗಲಿ ಎಂದು ಪರದೆಯನ್ನು ಬಲವಾಗಿ ಒತ್ತುವುದು ಅಥವಾ ಉಜ್ಜುವುದು ಬೇಡ. ಇದರಿಂದ ಡಿಸ್ಪ್ಲೇಗೆ ಮತ್ತಷ್ಟು ಹಾನಿಯಾಗಬಹುದು. ಇಂಟರ್ನೆಟ್ನಲ್ಲಿ ಕಾಣಿಸುವ ಕೆಲವು ವಿಡಿಯೊಗಳಲ್ಲಿ ಹೀಟ್ ಗನ್ ಅಥವಾ ಹೇರ್ ಡ್ರೈಯರ್ ಬಳಸಿ ಗೆರೆ ಸರಿಪಡಿಸುವ ವಿಧಾನಗಳನ್ನು ತೋರಿಸಲಾಗುತ್ತದೆ. ಆದರೆ ಇಂತಹ ಪ್ರಯೋಗಗಳನ್ನು ಮನೆಯಲ್ಲೇ ಮಾಡುವುದು ಅಪಾಯಕಾರಿ. ಅತಿಯಾದ ಬಿಸಿಯಿಂದ ಡಿಸ್ಪ್ಲೇ ಮತ್ತು ಬ್ಯಾಟರಿಗೆ ಹಾನಿಯಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




